ಹುತಾತ್ಮ ವೆಂಕಟನಿಗೆ ಸ್ಮಾರಕವೇಕಿಲ್ಲ?
ಧಾರಾವಾಹಿ-9
‘‘ಹುತಾತ್ಮ ವೆಂಕಟನ ಸ್ಮಾರಕವೇನಾದರೂ ನಿಮ್ಮ ಊರಿನಲ್ಲಿ ಇದೆಯೇ?’’ ಅಪ್ಪಯ್ಯ ಏಕಾಏಕಿ ಕೇಳಿದ.
ಸ್ಮಾರಕ! ಅಂತಹದೇನಾದರೂ ತನ್ನ ಊರಿನಲ್ಲಿ ಇದೆಯೇ? ಯೋಚಿಸಿದ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಆತನ ಹೆಸರಿನಲ್ಲಿ ಹಲವು ಸಮಾರಂಭಗಳು ನಡೆದಿದ್ದವು. ಸ್ವಾತಂತ್ರೋತ್ಸವದ ಸಂದರ್ಭದಲ್ಲೂ ಆತನನ್ನು ನೆನೆಯಲಾಗಿತ್ತು. ಆದರೆ ನಿಧಾನಕ್ಕೆ ಆತನನ್ನು ಊರು ಮರೆತೇ ಬಿಟ್ಟಿತ್ತು.
‘‘ಇಲ್ಲ, ಅಂತಹ ಸ್ಮಾರಕ ಯಾವುದೂ ಇಲ್ಲ’’ ಪಪ್ಪು ಹೇಳಿದ.
‘‘ಛೇ! ನಿಮ್ಮ ಊರಿನಲ್ಲಿ ಯೋಧ ಅಂತ ಇದ್ದದ್ದೇ ಆತನೊಬ್ಬ. ಅದೂ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾಗಿರುವ ಯೋಧ. ನಿಮ್ಮ ಊರಿನ ಯಾವುದಾದರೂ ಒಂದು ವೃತ್ತಕ್ಕೆ ಅಥವಾ ಸಭಾಭವನಕ್ಕೆ ಆತನ ಹೆಸರಿಡಬಹುದಿತ್ತಲ್ಲ? ಅಥವಾ ಅವನದೊಂದು ಪ್ರತಿಮೆಯನ್ನು ನಿರ್ಮಿಸಬಹುದಿತ್ತಲ್ಲ?’’ ಅಪ್ಪಯ್ಯ ಕೇಳಿದ.
ಹೌದಲ್ಲ! ಯಾಕೆ ಇಟ್ಟಿಲ್ಲ? ಅದು ಪಪ್ಪುವಿನ ಪ್ರಶ್ನೆಯೂ ಆಗಿತ್ತು. ಗುರೂಜಿಯವರು ಒತ್ತಾಯ ಮಾಡಿದರೆ ಖಂಡಿತವಾಗಿಯೂ ಆತನ ಹೆಸರನ್ನು ಇಡಲೇ ಬೇಕಾಗುತ್ತದೆ.
ಅಪ್ಪಯ್ಯ ಮುಂದುವರಿಸಿದ ‘‘ಕಾರ್ಗಿಲ್ ಯುದ್ಧಲ್ಲಿ ಕೊಡಗಿನ 20ಕ್ಕೂ ಅಧಿಕ ಯೋಧರು ಹುತಾತ್ಮರಾಗಿದ್ದಾರೆ. ಅವರವರ ಊರಿನಲ್ಲಿ ಅವರಿಗೆ ಸ್ಮಾರಕಗಳನ್ನು ಮಾಡಿದ್ದಾರೆ. ಅಂದ ಹಾಗೆ ನನ್ನ ಇಬ್ಬರು ಮಾವಂದಿರು ಸೇನೆಯಲ್ಲಿದ್ದವರು. ಒಬ್ಬರು ನಿವೃತ್ತರಾಗಿದ್ದಾರೆ’’
ಪಪ್ಪು ಅಭಿಮಾನದಿಂದ ಅಪ್ಪಯ್ಯನನ್ನು ನೋಡಿದ. ದೇಶಪ್ರೇಮಿ ಕುಟುಂಬ ಇವನದು. ನಮ್ಮ ಕುಟುಂಬದಲ್ಲಿ ಸೇನೆಗೆ ಸೇರಿದವರು ಯಾರೂ ಇಲ್ಲ ಎನ್ನುವುದು ಅವನ ಗಮನಕ್ಕೆ ಬಂತು.
‘‘ಸೇನೆಗೆ ಸೇರುವುದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಇನ್ನಷ್ಟೇ ಹೇಳಬೇಕು’’ ಪಪ್ಪು ಹೇಳಿದ.
‘‘ಯಾಕೆ ಹೇಳಿಲ್ಲ?’’ ಅಪ್ಪಯ್ಯ ಅಚ್ಚರಿಯಿಂದ ಕೇಳಿದ.
‘‘ಅಪ್ಪ, ಅಮ್ಮನಿಗೆ ನಾನು ಸೇನೆ ಸೇರುವುದು ಇಷ್ಟವಿಲ್ಲ’’ ‘‘ಯಾಕೆ ಇಷ್ಟವಿಲ್ಲ. ಕೊಡಗಿನಲ್ಲಿ ಪ್ರತೀ ಕುಟುಂಬದಲ್ಲಿ ಒಬ್ಬರಾದರೂ ಸೇನೆಯಲ್ಲಿ ಇರುತ್ತಾರೆ. ನಮ್ಮ ಕುಟುಂಬದ ಓರ್ವ ಸೇನೆಯಲ್ಲಿದ್ದರೆ ನಮಗೆಲ್ಲ ಹೆಮ್ಮೆ....’’ ಅಪ್ಪಯ್ಯ ಹೇಳಿದ.
‘‘ಗುರೂಜಿ ಕೂಡ ಅದನ್ನೇ ಹೇಳುತ್ತಾರೆ. ಆದರೆ ಅಪ್ಪನಿಗೆ ಯಾಕೋ ಇಷ್ಟವಿಲ್ಲ’’ ಪಪ್ಪು ಹೇಳಿದ.
ಅಂದು ಮನೆಗೆ ಬಂದ ಪಪ್ಪುವಿನ ಒಳಗೆ ಹತ್ತು ಹಲವು ಪ್ರಶ್ನೆಗಳು ಹೊಯ್ದೆಡುತ್ತಿದ್ದವು.
ಅದರಲ್ಲಿ ಮುಖ್ಯವಾದುದು ‘ನಮ್ಮ ಊರಿನಲ್ಲಿ ವೆಂಕಟನ ಪ್ರತಿಮೆ, ಸ್ಮಾರಕ ಯಾಕಿಲ್ಲ?’ ಯಾರಲ್ಲಾದರೂ ಕೇಳಬೇಕು ಅನ್ನಿಸುತ್ತಿತ್ತು.
ಒಂದು ದಿನ ತಂದೆ ಉತ್ತರ ಪತ್ರಿಕೆ ತಿದ್ದುತ್ತಾ ಕೂತಿದ್ದಾಗ ಪಪ್ಪು ಕೇಳಿದ ‘‘ಅಪ್ಪಾ, ನಮ್ಮ ಊರಿನಲ್ಲಿ ವೆಂಕಟನ ಸ್ಮಾರಕ ಯಾಕಿಲ್ಲ?’’
ಅನಂತ ಭಟ್ಟರು ಪ್ರಶ್ನಾರ್ಹವಾಗಿ ಅವನನ್ನು ನೋಡಿದರು ‘‘ಯಾವ ವೆಂಕಟ?’’
‘‘ಅದೇ ಅಪ್ಪ ಯೋಧ ವೆಂಕಟ?’’
‘‘ಯಾವ ಯೋಧ?’’ ಅನಂತ ಭಟ್ಟರು ಅರ್ಥವಾಗದೆ ಮತ್ತೆ ಕೇಳಿದರು.
‘‘ಅದೇ ಅಪ್ಪ, ಸೇನೆಯಲ್ಲಿ ಇದ್ದರಲ್ಲ ಆ ವೆಂಕಟ, ಾರ್ಗಿಲ್‌ನಲ್ಲಿ....’’ ಪಪ್ಪು ವಿವರಿಸಿದ.
‘‘ಅವನಾ? ಅವನದೆಂತಕ್ಕೆ ಸ್ಮಾರಕ?’’ ಎಂದು ಮತ್ತೆ ತಮ್ಮ ಕೆಲಸ ಮುಂದುವರಿಸಿದರು. ಪಪ್ಪು ಪೆಚ್ಚಾಗಿ ಅಲ್ಲೇ ನಿಂತಿದ್ದ. ತುಸು ಹೊತ್ತಿನ ಬಳಿಕ ಮೇಷ್ಟ್ರೇ ಮಾತನಾಡಿದರು ‘‘ನೋಡು ಪರೀಕ್ಷೆ ಹತ್ತಿರ ಬರ್ತಾ ಇದೆ. ಇಲ್ಲದ್ದಕ್ಕೆಲ್ಲ ತಲೆ ಕೆಡಿಸಬೇಡ. ಮುಂದಿನ ಭವಿಷ್ಯದ ಬಗ್ಗೆ ಯೋಚಿಸು’’
ಇದಾಗಿ ಒಂದೆರಡು ತಿಂಗಳು ಕಳೆದಿದೆ. ಪಿಯುಸಿ ಪರೀಕ್ಷೆ ಬರೆದು ಒಂದು ವಾರವೂ ಆಗಿಲ್ಲ. ಪಪ್ಪುವಿಗೆ ಸಿಪಾಯಿ ಹುದ್ದೆಯ ಕರೆ ಬಂದೇ ಬಿಟ್ಟಿತು.
ಅಂದು ಪಪ್ಪುವಿನ ಮನೆಯಲ್ಲಿ ಸ್ಮಶಾನ ವೌನ.
ಲಕ್ಷ್ಮಮ್ಮ ಒಳಗಿನ ಕೋಣೆಯ ಮಂಚಕ್ಕೆ ಒರಗಿ ಬಿಟ್ಟಿದ್ದರು. ಹೊರಗೆ ಅನಂತಭಟ್ಟರು ತಾವು ಬರೆದ ‘ವೇದ ಗಣಿತ’ದ ಪುಟಗಳನ್ನು ಸುಮ್ಮಗೆ ಬಿಡಿಸುತ್ತಾ ಇದ್ದರು. ಗುರೂಜಿ ಮತ್ತೊಂದು ಕುರ್ಚಿಯಲ್ಲಿ ಆಸೀನರಾಗಿದ್ದರು. ಹೊರಗೆ ಹಿತ್ತಿಲಲ್ಲಿ ತೆಂಗಿನ ಮರವೊಂದಕ್ಕೆ ಒರಗಿ ಪಪ್ಪು ಒಳಗಿನ ಮಾತಿಗೆ ಕಿವಿಯಾಗಿದ್ದ. ಗುರೂಜಿ ಅದಾಗಲೇ ಸಾಕಷ್ಟು ಮಾತನಾಡಿದ್ದರು. ದೇಶಕ್ಕಾಗಿ ಪ್ರಾಣ ಅರ್ಪಿಸಿದ ರಾಣಾಪ್ರತಾಪ ಸಿಂಹನಿಂದ ಹಿಡಿದು ಈ ಪುಟ್ಟ ಪ್ರತಾಪ ಸಿಂಹನವರೆಗೆ. ಪಪ್ಪು ತೆಗೆದುಕೊಂಡ ನಿರ್ಣಯ ಇಡೀ ಊರಿಗೆ ಹೆಮ್ಮೆ ನೀಡುವಂತಹದು ಎನ್ನುವುದನ್ನು ಅನಂತಭಟ್ಟರಿಗೆ ಮವರಿಕೆ ಮಾಡಲು ಯತ್ನಿಸುತ್ತಿದ್ದರು.
‘‘ನಾನಿಲ್ಲಿ ಇಷ್ಟೆಲ್ಲ ಹೇಳುತ್ತಿದ್ದರೆ ನೀವು ನಿಮ್ಮ ಲೆಕ್ಕ ಪುಸ್ತಕದ ಪುಟಗಳನ್ನು ತಿರುವುತ್ತಿದ್ದೀರಲ್ಲ, ಸರಿಯಾ ಮೇಷ್ಟ್ರೇ?’’ ಗುರೂಜಿ ಕೇಳಿದರು.
ಅನಂತಭಟ್ಟರಿಗೆ ಏನು ಹೇಳಬೇಕೆಂದೇ ಅರ್ಥವಾಗುತ್ತಿಲ್ಲ. ಒಂದೆಡೆ ಸೇನೆಗೆ ಸೇರಿಯೇ ಸೇರುತ್ತೇನೆ ಎಂದು ಮಗ ಹಟ ಹಿಡಿದಿದ್ದಾನೆ. ಇತ್ತ ಗುರೂಜಿ ಮಗನನ್ನು ಒಂದೇ ಸಮನೆ ಹೊಗಳುತ್ತಿದ್ದಾರೆ. ನಿಜ. ದೇಶ ಸೇವೆಯೆನ್ನುವುದು ಧರ್ಮ ಸೇವೆಯೂ ಹೌದು. ಆದರೆ ನಮ್ಮದು ಅಪ್ಪಟ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬ. ಸೇನೆಗೂ ನಮಗೂ ಹೊಂದಾಣಿಕೆಯಾಗುವುದಿಲ್ಲ. ಆದರೆ ಗುರೂಜಿ ಬೇರೆಯೇ ಹೇಳುತ್ತಿದ್ದಾರೆ.
‘‘ಕತ್ತಿ ಹಿಡಿಯಬೇಕಾದ ಸಂದರ್ಭದಲ್ಲಿ ಕತ್ತಿ ಹಿಡಿದ ಅದೆಷ್ಟೋ ಬ್ರಾಹ್ಮಣ ಮಹನೀಯರಿದ್ದಾರೆ ಪುರಾಣಗಳಲ್ಲಿ, ಇತಿಹಾಸದಲ್ಲಿ. ಇದೆಲ್ಲ ನಿಮಗೆ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ದೇಶ ಆಪತ್ತಿನಲ್ಲಿದ್ದಾಗ ಮ್ಲೇಚ್ಛರ ವಿರುದ್ಧ ಕ್ಷತ್ರಿಯರನ್ನು ಸಂಘಟಿಸಿದ್ದು ಯಾರಂತೀರಿ? ಇಂದಿನ ದಿನಗಳಲ್ಲಿ ದೇಶಪ್ರೇಮಿಗಳ ಸಂಖ್ಯೆ ಕಡಿಮೆಯಾಗುತ್ತಿರುವಾಗ, ಪಪ್ಪುವಿನಂತಹವರನ್ನು ದೇಶದ ಕರೆಗೆ ಕಳುಹಿಸಿಕೊಡುವುದು ನಮ್ಮ ಧರ್ಮ ಮೇಷ್ಟ್ರೇ’’
ಜೊತೆಗೆ ಪಪ್ಪುವಿನ ತೇಜಸ್ಸು, ಆತನ ಮುಂದಿರುವ ಹೊಣೆಗಾರಿಕೆ ಇವುಗಳನ್ನೆಲ್ಲ ಗುರೂಜಿ ವಿವರಿಸುತ್ತಿದ್ದರೆ ಹಿತ್ತಲಲ್ಲಿದ್ದ ಪ್ರತಾಪ ಅದನ್ನು ಆಸ್ವಾದಿಸುತ್ತಿದ್ದ. ಜಾನಕಿಯೂ ಈಗ ಇರಬೇಕಾಗಿತ್ತು ಅನ್ನಿಸಿತು.
ಸೇನೆಗೆ ಆಯ್ಕೆಯಾಗಿದ್ದೇನೆ ಎನ್ನುವುದು ಖಚಿತವಾದಾಗ ಪಪ್ಪು ಭಾರತಮಾತೆಯನ್ನೂ, ಜಾನಕಿಯನ್ನೂ ಏಕಕಾಲದಲ್ಲಿ ಗೆದ್ದ ಸಂಭ್ರಮದಲ್ಲಿದ್ದ. ಆದರೆ ಆ ಖುಷಿಯನ್ನು ಹಂಚಿಕೊಳ್ಳೋದು ಹೇಗೆ? ಮನೆಯಲ್ಲಿ ತಂದೆಯ ಬಳಿ ಹೇಳುವಂತಿಲ್ಲ. ತಾಯಿಯಂತೂ ರಾದ್ಧಾಂತ ಮಾಡಬಹುದು. ಮಂಗಳೂರಿನಿಂದ ನೇರವಾಗಿ ಗುರೂಜಿ ಶ್ಯಾಮಭಟ್ಟರ ಮನೆಗೆ ಫೋನಾಯಿಸಿದ್ದ.
‘‘ಗುರೂಜಿ...ನಾನು ಪ್ರತಾಪ...ಸೇನೆಗೆ ಆಯ್ಕೆಯಾಗಿದ್ದೇನೆ...’’
ಆ ಕಡೆಯಿಂದ ‘‘ಭಾರತ್ ಮಾತಾಕಿ ಜೈ...’’ ಉದ್ಗಾರ.
‘‘ಪ್ರತಾಪ, ನಾನಿಟ್ಟ ಹೆಸರನ್ನು ಸಾರ್ಥಕಪಡಿಸಿದ್ದೀಯ. ಪ್ರತಾಪ ಸಿಂಹ ಮೊಗಲರ ವಿರುದ್ಧ ಕಾದು ಗೆದ್ದ ಮಹಾ ಯೋಧನ ಹೆಸರು. ವ್ಯರ್ಥವಾಗಲಿಲ್ಲ ನೋಡು...’’
ಪಪ್ಪು ಭಾವುಕನಾಗಿದ್ದ ‘‘ಎಲ್ಲ ನಿಮ್ಮ ಆಶೀರ್ವಾದ ಗುರೂಜಿ...’’
‘‘ಅಭಿನಂದನೆ ಪ್ರತಾಪ. ಅದಿರಲಿ, ಮಾತು ಮಾತಿಗೂ ಗುರೂಜಿ ಗುರೂಜಿ ಎಂದು ಕರೆಯುತ್ತಿದ್ದೀಯ. ಈ ಖುಷಿಗೆ ನನಗೇನು ಗುರುದಕ್ಷಿಣೆ ಕೊಡುತ್ತೀಯ?’’
‘‘ನೀವು ಕೇಳಿದ್ದು ಕೊಡುತ್ತೇನೆ ಗುರೂಜಿ’’ ಪ್ರತಾಪ ಉತ್ತರಿಸಿದ್ದ.
‘‘ಹಾಗಾದರೆ ನನಗೆ ನೂರು ಪಾಕಿಸ್ತಾನಿಯರ ತಲೆಗಳನ್ನು ಕತ್ತರಿಸಿ ತಂದುಕೊಡು’’ ಗುರೂಜಿ ಗಹಗಹಿಸಿ ನಗತೊಡಗಿದ್ದರು.
ಅವನು ಅದನ್ನು ಆಲಿಸಿದ್ದು ದೂರವಾಣಿಯಲ್ಲೇ ಆಗಿದ್ದರೂ, ಅವನ ರೋಮಗಳು ನಿಮಿರಿ ನಿಂತಿದ್ದವು. ಅವನ ಕಿವಿಯ ಬಳಿ ಪಾಂಚಜನ್ಯವನ್ನು ಮೊಳಗಿಸಿದಂತಾಗಿತ್ತು.
ತನಗೆ ತಾನೇ ಪಿಸುಗುಟ್ಟಿದ್ದ ‘‘ಆಯಿತು ಗುರೂಜಿ...ಖಂಡಿತಾ ತಂದುಕೊಡುತ್ತೇನೆ...’’
‘‘ಸಂತೋಷವಾಯಿತು...’’ ಗುರೂಜಿ ಹೇಳಿದ್ದರು.
‘‘ಗುರೂಜಿ...ನನ್ನ ತಂದೆಯನ್ನು ನೀವೇ ಒಪ್ಪಿಸಬೇಕು’’ ಪ್ರತಾಪ ಮನವಿ ಮಾಡಿದ್ದ.
‘‘ಮೇಷ್ಟ್ರು ಒಪ್ಪದೇ ಎಲ್ಲಿಗೆ ಹೋಗುತ್ತಾರೆ? ಅವರಷ್ಟೇ ಅಲ್ಲ ಇಡೀ ಊರು ಹೆಮ್ಮೆ ಪಡಬೇಕಾದ ವಿಷಯ ಇದು. ನೀನು ನನಗೂ ಮಗನಿದ್ದ ಹಾಗೆ. ನಿನ್ನನ್ನು ನನ್ನ ಮಗನಾಗಿ ಪಡೆಯದೇ ಇರುವುದಕ್ಕೆ ನನಗೆ ಹೊಟ್ಟೆಕಿಚ್ಚಾಗುತ್ತದೆ. ನಾಳೆಯೇ ಮನೆಗೆ ಬಂದು ನಿನ್ನ ತಂದೆಯನ್ನು ಒಪ್ಪಿಸುವೆ’’ ಗುರೂಜಿ ಭರವಸೆ ನೀಡಿ ಫೋನು ಇಟ್ಟಿದ್ದರು.
ಅಂತೆಯೇ ಇದೀಗ ಅನಂತಭಟ್ಟರ ಜೊತೆಗೆ ಗುರೂಜಿ ಮಾತನಾಡುತ್ತಿದ್ದರು.
ಮಗನನ್ನು ಗುರೂಜಿ ಹೊಗಳುತ್ತಿದ್ದರೆ ಅನಂತಭಟ್ಟರು ಉಬ್ಬುತ್ತಿದ್ದರು. ಆದರೂ ಎಲ್ಲೋ ಕೆಲವು ಲೆಕ್ಕಗಳು ತಪ್ಪಿದ ಹಾಗೆ ಅನ್ನಿಸುತ್ತಿತ್ತು ಮೇಷ್ಟ್ರಿಗೆ. ಎಲ್ಲಕ್ಕಿಂತ ಮುಖ್ಯವಾಗಿ ಪತ್ನಿಯ ಮುಂದೆ ನಿಲ್ಲುವುದಕ್ಕೆ ಅವರಿಗೆ ಭಯವಾಗುತ್ತಿತ್ತು. ಆಕೆಯನ್ನು ಒಪ್ಪಿಸುವುದು ತೀರಾ ಕಷ್ಟ ಎನ್ನುವುದು ಅವರಿಗೆ ಗೊತ್ತಿತ್ತು.
‘‘ಗುರೂಜಿ...ಅದೇನಿದ್ದರೂ ಅದರ ಜೊತೆ ಒಂದು ಮಾತು ಕೇಳಿ ಹೇಳಿದರೆ ಆಗದೆ...?’’
‘‘ಕೇಳುವುದೆಂತದ್ದು...ಮುಕುಂದರಾಯರ ಮೊಮ್ಮಗಳಲ್ಲವಾ ಆಕೆ? ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ವಂಶ ಆಕೆಯದು...ಹೋರಾಟದ ರಕ್ತ ಆಕೆಯ ಧಮನಿ ಧಮನಿಯಲ್ಲಿ ಹರಿಯುತ್ತಿದೆ....ನಾನು ಪ್ರತಾಪ ಸಿಂಹ ಎಂದು ಹೆಸರಿಟ್ಟಾಗ ತುಂಬಾ ಸಂತೋಷ ಪಟ್ಟದ್ದೇ ಆಕೆ...’’ ಜೋರಾಗಿ ಹೇಳಿದರು. ಒಳಗಿರುವ ಲಕ್ಷ್ಮಮ್ಮರಿಗೆ ಕೇಳುವ ಹಾಗೆ.
‘‘ಸರಿ ಹಾಗಾದರೆ’’ ಎಂದು ಬಿಟ್ಟರು ಲೆಕ್ಕದ ಮೇಷ್ಟ್ರು. ಪಪ್ಪು ಹಿತ್ತಲಲ್ಲಿ ನಿಂತಿದ್ದವನು ಇದೀಗ ಒಳ ಬಂದ.
‘‘ದೇಶದ ವೀರ ಯೋಧನಿಗೆ ಬಾಗಿದ್ದೇನೆ...’’ ಎನ್ನುತ್ತಾ ಗುರೂಜಿ ನಾಟಕೀಯವಾಗಿ ಬಾಗಿದರು.
ಪಪ್ಪು ಸಂಕೋಚದಿಂದ ನಿಂತಿದ್ದ. ಅನಂತಭಟ್ಟರಿಗೆ ಹೆಮ್ಮೆ, ಗಾಬರಿ, ಗೊಂದಲ ಎಲ್ಲ ಒಟ್ಟಾಗಿ ಆಗಿತ್ತು. ಒಳಗೆ ಲಕ್ಷ್ಮಮ್ಮ ಮಾತಿಲ್ಲದೇ ಬಿದ್ದುಕೊಂಡಿದ್ದರು.
ಅಂದು ರಾತ್ರಿ ಅದೇನು ಮಾತನಾಡಿದರೂ ಲ್ಷ್ಮಮ್ಮ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.
‘‘ನೋಡೇ...ಇಷ್ಟು ಸಣ್ಣ ವಯಸ್ಸಲ್ಲೇ ನಮ್ಮ ಮಗ ಅದೆಷ್ಟು ದೊಡ್ಡದನ್ನು ಸಾಧಿಸಿ ತೋರಿಸಿದ...ಇಡೀ ಊರೇ ನಿನ್ನ ಮಗನ ಬಗ್ಗೆ ಮಾತನಾಡುತ್ತಿದೆ’’
ಲಕ್ಷ್ಮಮ್ಮನ ಮುಖದಲ್ಲಿ ಭಾವನೆಗಳೇ ಇರಲಿಲ್ಲ. ಆಕೆ ವೌನವಾಗಿ ತಟ್ಟೆಗೆ ಅನ್ನ ಹಾಕುತ್ತಿದ್ದರು. ‘‘ಯೋಧ ಅಂದರೆ ಅವನಿಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತದೆ ಕಣೇ...ಅವನು ದೇಶದ ಮಗ...ನಮ್ಮ ಹಾಗೆ ನಾಳೆ ಸತ್ತು ಬೂದಿಯಾಗುವವನಲ್ಲ...ಸಾವಿರಾರು ವರ್ಷಗಳವರೆಗೂ ಅವನನ್ನು ದೇಶ ಸ್ಮರಿಸುತ್ತಾ ಇರುತ್ತದೆ...’’
ಲಕ್ಷ್ಮಮ್ಮರಿಂದ ಯಾವುದೇ ಮಾತಿಲ್ಲ.
‘‘ಸರಿ ಹಾಗಾದರೆ...ಅವನು ಸೇನೆಗೆ ಸೇರುವುದು ಬೇಡ ಎಂದು ಗುರೂಜಿಯವರಲ್ಲಿ ಹೇಳಲಾ?’’ ಅನಂತ ಭಟ್ಟರು ಕೇಳಿದರು.
ಆಗಲೂ ಲಕ್ಷ್ಮಮ್ಮ ಪ್ರತಿಕ್ರಿಯಿಸಲಿಲ್ಲ.
‘‘ಅದೂ ಬೇಡ, ಇದೂ ಬೇಡ ಎಂದರೆ ಹೇಗೆ? ನೀನು ಏನಾದರೂ ಮಾತನಾಡಿದರೆ ಅಲ್ಲವಾ ನಿನ್ನ ಮನಸ್ಸಿನೊಳಗೆ ಏನಿದೆ ಎನ್ನುವುದು ಗೊತ್ತಾಗುವುದು’’ ಅನಂತಭಟ್ಟರು ಸಿಟ್ಟು ಬಂದವರಂತೆ ವರ್ತಿಸಿದರು.
ಅಡುಗೆ ಮನೆಯೊಳಗೆ ಹೋದ ಲಕ್ಷ್ಮಮ್ಮ ಕೈಯಿಂದ ತಟ್ಟೆಯೊಂದು ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ದಡಾಲ್ಲನೆ ಸದ್ದು ಮಾಡಿತು. ಅದಕ್ಕೆ ಪ್ರತಿಕ್ರಿಯಿಸುವ ಶಕ್ತಿ ಅನಂತಭಟ್ಟರಿಗೆ ಇರಲಿಲ್ಲ. ರಾತ್ರಿ ಎಲ್ಲ ಕೆಲಸ ಮುಗಿಸಿ ಮಲಗುವ ಸಮಯ. ಅನಂತಭಟ್ಟರು ವೌನವಾಗಿದ್ದರು. ಮಂಚದಲ್ಲಿ ಮೊಣಕಾಲಿಗೆ ಮುಖವೂರಿ ಕೂತಿದ್ದ ಲಕ್ಷ್ಮಮ್ಮ ಇದ್ದಕ್ಕಿದ್ದಂತೆಯೇ ವೌನ ಮುರಿದರು
‘‘ಆದರೂ ಆ ಮಗುವನ್ನು ಕಳುಹಿಸುವುದಕ್ಕೆ ನಿಮಗೆ ಮನಸ್ಸು ಬಂತಲ್ಲ.....ಅಬ್ಬ ಗಂಡಸರೇ...’’ ಎಂದವರೇ ಬಿಕ್ಕಿ ಬಿಕ್ಕಿ ಅಳತೊಡಗಿದರು.
(ಗುರುವಾರದ ಸಂಚಿಕೆಗೆ)