ರಂಗಭೂಮಿಗೆ ವಿಶಾಲ ನೆಲಗಟ್ಟು ಅಗತ್ಯ: ಅಕ್ಷರ ಕೆ.ವಿ.
ಉಡುಪಿ, ಫೆ.19: ಜನರ ಜನರ ಮುಖಾಮುಖಿಯನ್ನಾಗಿಸುವ ರಂಗ ಭೂಮಿಯ ಗುಣವನ್ನು ಉಳಿಸಿಕೊಳ್ಳಬೇಕಾಗಿದೆ. ರಂಗಭೂಮಿಯಲ್ಲಿ ಕ್ರಿಯಾ ಶೀಲತೆಯಿಂದ ಕೆಲಸ ಮಾಡುವವರ ಕೊರತೆ ಇಲ್ಲ. ರಂಗಭೂಮಿ ಮಾಧ್ಯಮ ವನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲಗಟ್ಟಿನಲ್ಲಿ ಸರಿಯಾಗಿ ನಿರ್ಮಾಣ ಮಾಡಿಲ್ಲ. ಆ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ ಎಂದು ಹೆಗ್ಗೋಡು ನೀನಾಸಂನ ಅಕ್ಷರ ಕೆ.ವಿ. ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರವಿವಾರ ನಡೆದ ಮೂರು ದಿನಗಳ ಡಾ.ನಿ.ಮುರಾರಿ ಬಲ್ಲಾಳ್, ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನ 'ಮುರಾರಿ -ಕೆದ್ಲಾಯ ರಂಗೋತ್ಸವ'ದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ನಾವು ಇಂದು ಆತ್ಮಾವಲೋಕನ ಮಾಡಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಸಂಸ್ಕೃತಿಯನ್ನು ನೋಡುವ ಮತ್ತು ಉಪಭೋಗಿಸುವ ಮಟ್ಟಕ್ಕೆ ಬಂದು ತಲುಪಿದ್ದೇವೆ. ಉತ್ತಮ ನಾಟಕದ ಅರ್ಹತೆ ರಂಜನೆ ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನ ಕೆಲಸ ಮಾಡಿ ತೋರಿಸಬೇಕಾಗಿದೆ. ಪ್ರೇಕ್ಷಕರಿಗೆ ಯಾವ ರೀತಿಯ ನಾಟಕ ವನ್ನು ನೀಡಬೇಕೆಂಬ ಹುಡುಕಾಟದಲ್ಲಿ ನಾವು ಇದ್ದೇವೆ ಎಂದರು.
ಇಂದಿನ ಮಾಧ್ಯಮ ನೀಡುತ್ತಿರುವ ಅನಸ್ತೇಸಿಯದಿಂದಾಗಿ ಜನ ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧವೂ ಮಾತನಾಡುತ್ತಿಲ್ಲ. ಸಮೂಹ ಮಾಧ್ಯಮ ಇಂದು ಸಮೂಹ ಸಂಮೋಹಿನಿಯಾಗಿದೆ. ಉತ್ಸವಗಳು ಕೇವಲ ತೋರಿಕೆಯ ಗುರುತುಗಳಾಗಿವೆ. ಉತ್ಸವ ಸಂಸ್ಕೃತಿಯು ತನ್ನ ಸಾಂಸ್ಕೃತಿಕ ಚಹರೆಯನ್ನು ಕಳೆದುಕೊಳ್ಳುತ್ತಿವೆ ಎಂದು ಅವರು ಟೀಕಿಸಿದರು.
ರಂಗಭೂಮಿಯನ್ನು ವಿಶಾಲವಾದ ನೆಲಗಟ್ಟಿನಲ್ಲಿ ನಿರ್ಮಾಣ ಮಾಡಿಲ್ಲ ಎಂಬುದಕ್ಕೆ ಬಹಳ ದೊಡ್ಡ ಉದಾಹರಣೆ ಉಡುಪಿ. ಇಷ್ಟು ವರ್ಷಗಳಾದರೂ ಉಡುಪಿಯಲ್ಲಿಂದು ಒಂದೇ ಒಂದೇ ರಂಗ ಮಂದಿರ ಇಲ್ಲ. ಇದ್ದ ರಂಗ ಮಂದಿರವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಇಲ್ಲ. ಈ ಬಗ್ಗೆ ಉಡುಪಿಯ ವರು ಚಿಂತನೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ನಿಕೇತನ ಮಾತನಾಡಿ, ಮುರಾರಿ ಬಲ್ಲಾಳ್ ಹಾಗೂ ಕೆ.ಎಸ್. ಕೆದ್ಲಾಯರ ಪರಿಸರ ಚಿಂತನೆಯನ್ನು ಮರೆತ ಪರಿಣಾಮ ಇಂದು ಉಡುಪಿ ಜಿಲ್ಲೆ ಕೂಡ ಬರಪೀಡಿತ ಪ್ರದೇಶದ ಸಾಲಿಗೆ ಬಂದು ನಿಲ್ಲುವಂತಾಗಿದೆ ಎಂದು ಖೇಧ ವ್ಯಕ್ತಪಡಿಸಿದರು.
ಲೇಖಕ ವಿವೇಕ್ ಶ್ಯಾನುಭಾಗ್, ವೇದಿಕೆ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ, ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಜೋಶಿ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸಂತೋಷ್ ಬಲ್ಲಾಳ್ ಸ್ವಾಗತಿಸಿದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಕ್ಷರ ಕೆ.ವಿ. ನಿರ್ದೇಶನದ ನೀನಾಸಂ ಹೆಗ್ಗೋಡು ತಂಡದಿಂದ ಱಮಾಲತೀ ಮಾಧವೞನಾಟಕ ಪ್ರದರ್ಶನ ನಡೆಯಿತು.