‘ಪುರಾಣದ ರೂಪಕಗಳು’ : ನಡುದಾರಿಯ ಆಯ್ಕೆ
ಕೃತಿ ಪರಿಚಯ
ಪುರಾಣ ರೂಪಕಗಳನ್ನು ಮುರಿದು ಕಟ್ಟುವ ಕೆಲಸಗಳನ್ನು ಈ ಹಿಂದೆ ಹಲವು ಲೇಖಕರು, ವಿಮರ್ಶಕರು ಮಾಡಿದ್ದಾರೆ. ಕುವೆಂಪು ಅವರು ತಮ್ಮ ಮಹಾಕಾವ್ಯದಲ್ಲಿ ಮತ್ತು ನಾಟಕಗಳಲ್ಲಿ ಇದನ್ನು ಮಾಡಿ ಟೀಕೆಗಳನ್ನೂ ಎದುರಿಸಿದ್ದರು. ಅದಾಗಲೇ ಮರಾಠಿಯಲ್ಲಿ ಇರಾವತಿ ಕರ್ವೆ ಅವರ ‘ಯುಗಾಂತ’ ಮಹಾಭಾರತದ ಹಲವು ಒಳನೋಟಗಳನ್ನು ಸಮಾಜಕ್ಕೆ ತೆರೆದಿಟ್ಟಿತ್ತು.
ಪೋಲಂಕಿಯವರ ‘ಸೀತಾಯಣ’ ಕೃತಿ, ರಾಮಾಯಣ ಪಾತ್ರಗಳ ಮನೋ ವಿಶ್ಲೇಷಣೆ ನಡೆಸಿದ ಅಪರೂಪದ ಕೃತಿ. 80ರ ದಶಕದಲ್ಲಿ ಇದು ಬೆಂಕಿಯ ಅಲೆಯನ್ನೇ ಎಬ್ಬಿಸಿತ್ತು. ಪುರಾಣಗಳ ಅವಲೋಕನಕ್ಕೆ ಈ ಕೃತಿ ಹೊಸ ಆಯಾಮವನ್ನೇ ನೀಡಿತು. ಇತ್ತೀಚಿನ ದಿನಗಳಲ್ಲಿ ಪುರಾಣ ಪಾತ್ರಗಳನ್ನು ವಿಶ್ಲೇಷಣೆ ಮಾಡಲು ಹೋಗಿ ಮೈ ಸುಟ್ಟುಕೊಂಡವರಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಒಬ್ಬರು. ‘ಢುಂಢಿ’ ಕೃತಿ ಮಾರುಕಟ್ಟೆಗೆ ಬರಲಿಲ್ಲವಾದರೂ, ಇಂದಿಗೂ ಮಾಸ್ಟರ್ ಅವರು ಆ ಹೆಸರಿನಲ್ಲೇ ಖ್ಯಾತರಾಗಿದ್ದಾರೆ.
ಗಣಪತಿಯ ಪಾತ್ರವಿಶ್ಲೇಷಣೆಯನ್ನು ಹೊಂದಿದ ಕೃತಿ ಇದು. ಆದರೆ ತೀವ್ರ ಪ್ರತಿರೋಧ ಬಂದ ಕಾರಣ ಆ ಕೃತಿ ನಿಷೇಧಕ್ಕೊಳಗಾಯಿತು. ಆದರೆ ಈ ಪುರಾಣಗಳ ರೂಪಕಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಾ, ತಮ್ಮ ಬರಹವನ್ನು ಯೋಗೇಶ್ ಅವರು ಮುಂದುವರಿಸುತ್ತಾ ಬಂದರು.
ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಟ್ಟುಗಳಲ್ಲಿ ಅವುಗಳನ್ನು ವಿಶ್ಲೇಷಿಸಿದರು. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಇದು ಧಾರಾವಾಹಿಯಾಗಿ ಬಂತು. ಇದೀಗ ‘ಪುರಾಣದ ರೂಪಕಗಳು’ ಎಂಬ ಹೆಸರಿನಲ್ಲಿ ಈ ಕೃತಿಯನ್ನು ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಪ್ರಕಟಿಸಿದೆ.
ಸುಮಾರು 200 ಪುಟಗಳ ಈ ಕೃತಿಯಲ್ಲಿ ಪುರಾಣ, ಇತಿಹಾಸ ಮತ್ತು ವಾಸ್ತವ ಮುಖಾಮುಖಿಯಾಗುತ್ತವೆ. ಪುರಾಣದ ಮಿತಿಯನ್ನು ಹೇಳುತ್ತಲೇ, ಅದರೊಂದಿಗೆ ಈ ನೆಲದ ಇತಿಹಾಸ ಹೇಗೆ ರೂಪಕಗಳ ಮೂಲಕ ಒಳಗೊಂಡಿದೆ ಎನ್ನುವುದನ್ನು ಅವರು ಸರಳವಾಗಿ ವಿಶ್ಲೇಷಿಸುತ್ತಾರೆ.
ಒಂದು ರೀತಿಯಲ್ಲಿ ರೂಪಕಗಳನ್ನು ಒಡೆದು ಅದರಲ್ಲಿರುವ ವಾಸ್ತವಗಳನ್ನು ತೆರೆದು ಕೊಡುತ್ತಾರೆ ಮತ್ತು ಜೊಳ್ಳುಗಳನ್ನು ಬೇರ್ಪಡಿಸಿ ಅದರ ಹಿಂದಿರುವ ಹುನ್ನಾರಗಳನ್ನು ಬಹಿರಂಗಪಡಿಸುತ್ತಾರೆ. ವಿನಾಯಕ, ಸಮುದ್ರ ಮಥನ, ವಿಜಯದಶಮಿ ಹಬ್ಬ, ಕೃಷ್ಣನೂ ಒಬ್ಬ ಅಸುರ, ಶಿಷ್ಟ ಆರ್ಯರು, ಅನಾರ್ಯ ಅಸುರರು, ಸನಾತನವಲ್ಲದ ಹಿಂದೂಧರ್ಮ, ಸರಸ್ವತಿ-ಅವಳ ಸ್ಥಿತಿಗತಿ ಹೀಗೆ....ಅತ್ಯಂತ ವಿವಾದಾತ್ಮಕ ವಸ್ತುಗಳನ್ನು ಇಟ್ಟುಕೊಂಡು ಅವರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಒಂದು ರೀತಿಯಲ್ಲಿ ಇಲ್ಲಿ ಪುರಾಣಗಳ ನೇರ ತಿರಸ್ಕಾರ ಇಲ್ಲ. ಹಾಗೆಯೇ ಕಣ್ಣು ಮುಚ್ಚಿ ಅವರು ಒಪ್ಪಿಕೊಂಡೂ ಇಲ್ಲ. ಎರಡರ ನಡುವಿನ ದಾರಿಯಲ್ಲಿ ಅವರು ಸಾಗಿದ್ದಾರೆ. ಗತ ಮತ್ತು ವರ್ತಮಾನಗಳ ನಡುವಿನ ತುಕ್ಕು ಹಿಡಿದ ಕೊಂಡಿಯ ಗಟ್ಟಿತನವನ್ನು ಅವರು ನಿಕಷಕ್ಕೆ ಒಡ್ಡಿದ್ದಾರೆ.
ಕೃತಿಯ ಮುಖ ಬೆಲೆ 150 ರೂಪಾಯಿ. ಕೃತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 88806 60347.