ಇನ್ನೂ ತೂಗುಯ್ಯಲೆಯಲ್ಲೇ ಸುಲ್ತಾನ್ ಬತ್ತೇರಿ-ತಣ್ಣೀರುಬಾವಿ ತೂಗುಸೇತುವೆ!
*ಶಿಲಾನ್ಯಾಸಕ್ಕೆ ತುಂಬಿತು 7 ವರ್ಷ * ಹೆಚ್ಚುತ್ತಿದೆ ಅಂದಾಜು ಯೋಜನಾ ಮೊತ್ತ
ಮಂಗಳೂರು, ೆ.19: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ನಗರದ ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ‘ತೂಗು ಸೇತುವೆ’ಗೆ ಶಿಲಾನ್ಯಾಸಗೈದು 7 ವರ್ಷಗಳು ತುಂಬಿದವು. ಆದರೆ ತೂಗುಸೇತುವೆ ಮಾತ್ರ ತೂಗುಯ್ಯಾಲೆಯಲ್ಲೇ ಇದೆ.
2010ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ, ಯೋಗೀಶ್ ಭಟ್ ಶಾಸಕರಾಗಿದ್ದ ವೇಳೆ ತೂಗುಸೇತುವೆ ನಿರ್ಮಾಣಕ್ಕೆ ತರಾತುರಿ ಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದೀಗ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ. ಆದರೆ ಈ ಯೋಜನೆಗೆ ಸಂಬಂಸಿದಂತೆ ಮತ್ತೆ ಮತ್ತೆ ಪ್ರಸ್ತಾವನೆ, ಅಂದಾಜು ಯೋಜನಾ ವೆಚ್ಚ, ಅನುಮೋದನೆ, ಮಂಜೂರಾತಿಗೆ ಪತ್ರ ಇತ್ಯಾದಿ ನಡೆಯುತ್ತಲೇ ಇದೆ. ಇಂದು-ನಾಳೆ ಎಂದು ಅಕಾರಿಗಳು, ಶಾಸಕರು, ಸಚಿವರು ಕಾಲಹರಣ ಮಾಡುತ್ತಿದ್ದರೆ, ಸ್ಥಳೀಯರು ಸರಕಾರದ ಈ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ತೂಗುಸೇತುವೆ ನಿರ್ಮಾಣಕ್ಕೆ 16 ಕೋ.ರೂ. ವೆಚ್ಚದ ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಕಳೆದ ವರ್ಷದ ಜೂನ್‌ನಲ್ಲಿ ಲೋಕೋಪಯೋಗಿ ಇಲಾಖೆಯು ಸರಕಾರದ ಅನುಮೋದನೆಗೆ ಕಳುಹಿಸಿದ್ದರೂ ಇನ್ನೂ ಒಪ್ಪಿಗೆ ದೊರೆತಿಲ್ಲ. ಅಂದರೆ ಸಚಿವ ಸಂಪುಟವು ಮಂಜೂರಾತಿ ನೀಡಿಲ್ಲ. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಒಬ್ಬ ವಿಧಾನ ಪರಿಷತ್ ಮುಖ್ಯಸಚೇತಕರು, ನಿಗಮ-ವಿಧಾನ ಮಂಡಲದ ಸದನ ಸಮಿತಿಯ ಅಧ್ಯಕ್ಷ, ಶಾಸಕರು ಹೀಗೆ ಸರಕಾರದ ಮೇಲೆ ಒತ್ತಡ ಹಾಕುವ ಘಟಾನುಘಟಿಗಳಿದ್ದರೂ ಇಂತಹ ಮಹತ್ವದ ಯೋಜನೆಗಳಿಗೆ ಅನುಮೋದನೆ ಸಿಗದಿರುವುದು ವಿಪರ್ಯಾಸ.
ಯಡಿಯೂರಪ್ಪನವರು ತನ್ನ ಅಕಾರಾವಯ ಕೊನೆ ದಿನಗಳಲ್ಲಿ ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಸಕಾಲಕ್ಕೆ ಹಣ ಬಿಡುಗಡೆ ಮಾಡಿರಲಿಲ್ಲ. ಅಂದರೆ ಯಾವುದೇ ಯೋಜನೆಯ ಕಾಮಗಾರಿ ಆರಂಭಿಸಬೇಕಿದ್ದರೆ ಯೋಜನಾ ಮೊತ್ತದ 3ನೆ ಒಂದು ಭಾಗದಷ್ಟು ಹಣ ಬಿಡುಗಡೆಯಾಗಬೇಕು. ಅಂದರೆ ಆರಂಭದಲ್ಲಿ ಇದರ ಅಂದಾಜು ಮೊತ್ತ 12 ಕೋ.ರೂ. ಹಾಗಾಗಿ ಕಾಮಗಾರಿ ಆರಂಭಿಸಲು 4 ಕೋ.ರೂ. ಬಿಡುಗಡೆಯಾಗಬೇಕಿತ್ತು. ಆ ಬಳಿಕ ಟೆಂಡರ್ ಕರೆಯಬಹುದಾಗಿತ್ತು. ಆದರೆ, ಆ ವೇಳೆ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದು ಕೇವಲ 1 ಕೋ.ರೂ. ಮಾತ್ರ. ಇದರಿಂದ ಟೆಂಡರ್ ಕರೆಯುವ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಅಷ್ಟೇ ಅಲ್ಲದೆ 12 ಕೋ.ರೂ. ಮೊತ್ತದ ಕಾಮಗಾರಿಯನ್ನು ಕೇವಲ 1 ಕೋ.ರೂ.ನಲ್ಲಿ ಕಾಮಗಾರಿ ಆರಂಭಿಸಲು ಆಗದು ಎಂದು ಪ್ರವಾಸೋದ್ಯಮ ಇಲಾಖೆಯು ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯಿತು.
ಈಗ ಇದರ ಯೋಜನಾ ಮೊತ್ತ 16 ಕೋ.ರೂ. ಅಂದರೆ ಸುಮಾರು 5.33 ಕೋ.ರೂ. ಸರಕಾರ ಬಿಡುಗಡೆ ಮಾಡಬೇಕು. ಆದರೆ 2010ಲ್ಲಿ ಬಿಡುಗಡೆಯಾದ ಮೊತ್ತ ಹೊರತು ಕಾಂಗ್ರೆಸ್ ಸರಕಾರ ಚಿಕ್ಕಾಸನ್ನೂ ಬಿಡುಗಡೆ ಮಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ‘ತೂಗುಸೇತುವೆ’ ನಿರ್ಮಾಣಕ್ಕೆ ಆಸಕ್ತಿ ವಹಿಸಿಲ್ಲ.
ಸ್ಥಳೀಯ ಶಾಸಕ ಜೆ.ಆರ್.ಲೋಬೊ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರೂ ಅದಕ್ಕೆ ಜಿಲ್ಲೆಯ ಇತರ ಪ್ರಮುಖ ಜನಪ್ರತಿನಿಗಳಿಂದ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಈ ತೂಗುಸೇತುವೆಯ ಹಳೆಯ ಸ್ವರೂಪವು 5 ಅಡಿ ಅಗಲ ಮತ್ತು ಜಲಮಟ್ಟದಂದ 25 ಅಡಿ ಎತ್ತರದಲ್ಲಿತ್ತು. ಆ ಬಳಿಕ ಅಗಲ 10 ಅಡಿಗೆ ವಿಸ್ತರಣೆಯಾಯಿತು. ಅಲ್ಲದೆ ಇದರ ಉದ್ದ 410 ಮೀ. ಆಗಿದೆ. ಹಾಗಾಗಿ ತೂಗುಸೇತುವೆಯ ವಿನ್ಯಾಸ ಬದಲಾವಣೆಯಾಗಲಿದ್ದು, ಅಂದಾಜು ವೆಚ್ಚದಲ್ಲೂ ಏರಿಕೆಯಾಗಲಿದೆ. ಈ ನಿಟ್ಟಿನಲ್ಲಿ ಹಿರಿಯ ಅಕಾರಿಗಳ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳಾದರೂ ಪ್ರಗತಿ ಮಾತ್ರ ಶೂನ್ಯ.
ಇಲ್ಲಿ ತೂಗುಸೇತುವೆ ನಿರ್ಮಿಸಿದರೆ ಒಳಿತು ಎಂಬವಾದ ಒಂದೆಡೆಯಾದರೆ, ಅದಕ್ಕಿಂತ ಶಾಶ್ವತ ಸೇತುವೆ ನಿರ್ಮಿಸಿದರೆ ಒಳ್ಳೆಯದು ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಅಕಾರಿಗಳು-ಜನಪ್ರನಿಗಳು ಹಾಗೂ ಸ್ಥಳೀಯ ಪ್ರಮುಖರಲ್ಲಿ ಈ ಬಗ್ಗೆ ಗೊಂದಲವಿದೆ.
ಬಿಜೆಪಿಯ ದುರಾಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್ ಸರಕಾರಕ್ಕೆ ಆಡಳಿತ ನಡೆಸಲು ಅವಕಾಶ ನೀಡಿದರು. ಇನ್ನು ಒಂದೂವರೆ ವರ್ಷದಲ್ಲಿ ಮತ್ತೆ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಪ್ರತೀ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಕೊನೆಯ ಕ್ಷಣದಲ್ಲಿ ಅಲ್ಲಲ್ಲಿ ಕಾಟಾಚಾರದ ಶಿಲಾನ್ಯಾಸ ಕಾರ್ಯಕ್ರಮ ನಡೆಸುವುದು ಎಲ್ಲ ಜನಪ್ರತಿನಿಗಳು, ಸರಕಾರಕ್ಕೆ ಮಾಮೂಲಾಗಿದೆ. ಯಾವ ಸರಕಾರ ಬಂದರೂ ಅಭಿವೃದ್ಧಿ ಎಂಬುದು ಮರೀಚಿಕೆ ಯಷ್ಟೆ. ಹಾಗಾಗಿ ಕಾಲಮಿತಿಯೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕಾನೂನುಬದ್ಧವಾಗಿ ಕರಾರುಪತ್ರ ಪಡೆಯುವ ವ್ಯವಸ್ಥೆ ಜಾರಿಯಾಗಬೇಕು.
ಅಲಿಹಸನ್, ಮಾನವ್ ಸಮಾನತಾ ಮಂಚ್‌ನ ಮುಖಂಡರು.