varthabharthi


ಮುಂಬೈ ಮಾತು

ನಗರದಲ್ಲೀಗ ಚುನಾವಣಾ ಬಿಸಿ: ರೋಡ್ ಶೋ-ಆರೋಪ -ಪ್ರತ್ಯಾರೋಪ

ವಾರ್ತಾ ಭಾರತಿ : 21 Feb, 2017
ಶ್ರೀನಿವಾಸ್ ಜೋಕಟ್ಟೆ

ದೇಶದ ಅತೀ ಶ್ರೀಮಂತ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಮುಂಬೈ ಮನಪಾದಲ್ಲಿ ಈಗ ಚುನಾವಣಾ ಬಿಸಿ. ಎಲ್ಲೆಲ್ಲೂ ರೋಡ್ ಶೋ - ಸಭಾ ಕಾರ್ಯಕ್ರಮ, ಪರಸ್ಪರರ ಮೇಲೆ ಆರೋಪ, ಪ್ರತ್ಯಾರೋಪ ಹೊರಿಸುವ ದೃಶ್ಯಗಳೇ ಕಂಡು ಬರುತ್ತಿವೆ. ತೀರಾ ಕೆಟ್ಟ ರೀತಿಯಲ್ಲಿ ಶಿವಸೇನೆ - ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಆಡಳಿತದಲ್ಲಿದ್ದ ಶಿವಸೇನೆ - ಬಿಜೆಪಿಯವರು ಈಗ ಮಹಾನಗರ ಪಾಲಿಕೆಯ ಭ್ರಷ್ಟಾಚಾರಕ್ಕೆ ತಾವು ಜವಾಬ್ಧ್ದಾರಿ ಅಲ್ಲವೆಂದು ಪಲಾಯನದ ಮಾತುಗಳನ್ನಾಡುತ್ತಿದ್ದಾರೆ. ಈ ಬಾರಿ ಜಲ ಸಂಕಟ, ಸಾರಿಗೆ ಅವ್ಯವಸ್ಥೆ, ತ್ಯಾಜ್ಯ ವಿಲೇವಾರಿಯ ಸಂಕಷ್ಟ, ಜೋಪಡಿಗಳಿಗೆ ಭದ್ರತೆ... ಇವೆಲ್ಲ ಪ್ರಮುಖ ವಿಷಯಗಳಾಗಿದ್ದು ‘‘ನಾವು ಬಗೆ ಹರಿಸುತ್ತೇವೆ’’ ಎಂದು ಮತ್ತೆ ಅವೇ ಪಕ್ಷಗಳು ಮತದಾರರಿಗೆ ಭರವಸೆಯನ್ನು ನೀಡುತ್ತಿವೆ. ಮಹಾನಗರ ಪಾಲಿಕೆಯಲ್ಲಿ ಪಾರದರ್ಶಿತ್ವದ ವಿಷಯ ಎತ್ತಿರುವ ಬಿಜೆಪಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ‘‘ಕಳೆದ ಏಳು ವರ್ಷಗಳಿಂದ ಮನಪಾದಲ್ಲಿ ಇಂಟರ್ನಲ್ ಆಡಿಟ್ ನಡೆದಿಲ್ಲ. ಸ್ಟ್ಯಾಂಡಿಂಗ್ ಕಮಿಟಿ ಆಡಿಟ್‌ಗೆ ಮಂಜೂರು ನೀಡುತ್ತಿಲ್ಲ. ಹೀಗಿರುವಾಗ ಪಾರದರ್ಶಿತ್ವ ಹೇಗೆ ಕಂಡು ಬರಲು ಸಾಧ್ಯ?’’ ಎಂಬ ಗುಟ್ಟು ಹೊರಹಾಕಿದ್ದಾರೆ.

ಮುಂಬೈ ಮನಪಾ ಆಡಳಿತದಲ್ಲಿ ರಸ್ತೆ ಹಗರಣ, ನಾಲೆ ಹಗರಣ, ತ್ಯಾಜ್ಯ ವಿಲೇವಾರಿಯಲ್ಲಿ ಭ್ರಷ್ಟಾಚಾರ... ಇತ್ಯಾದಿಗಳಿಂದಾಗಿ ಜನತೆಯ ಹಣದ ದುರುಪಯೋಗವಾಗಿದೆ. ಒಂದು ವೇಳೆ ಆಡಿಟ್ ಮಾಡಿಸಿದರೂ ಹಲವು ಅಧಿಕಾರಿಗಳು ಈಗ ಸೇವಾ ನಿವೃತ್ತರಾಗಿದ್ದಾರೆ. ಅನೇಕ ನಗರ ಸೇವಕರು ಬದಲಾಗಿದ್ದಾರೆ. ಇವರನ್ನು ಹೇಗೆ ಜವಾಬ್ದಾರಿ ಮಾಡುವುದಕ್ಕೆ ಸಾಧ್ಯವಿದೆ? ಎಂಬ ಅನುಮಾನವನ್ನು ಮುಂದಿಟ್ಟಿದ್ದಾರೆ. ದೇಶದ ಈ ಅತೀ ಶ್ರೀಮಂತ ಮುಂಬೈ ಮಹಾನಗರ ಪಾಲಿಕೆಯಲ್ಲಿ ಅನೇಕ ನಗರ ಸೇವಕರ ಆಸ್ತಿಪಾಸ್ತಿ ಕಳೆದ ಐದು ವರ್ಷಗಳಲ್ಲಿ ಹಲವು ಪಟ್ಟು ವೃದ್ಧಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಇಷ್ಟೊಂದು ತೀವ್ರಗತಿಯಲ್ಲಿ ಆದಾಯ ಹೇಗೆ ವೃದ್ಧಿಯಾಯಿತು? ಜನತೆ ಇದೀಗ ಈ ನಗರ ಸೇವಕರ ಮುಂದೆ ಒಂದು ಪ್ರಶ್ನೆ ಇಟ್ಟಿದ್ದಾರೆ -‘‘ಇಷ್ಟು ಶೀಘ್ರ ಆಸ್ತಿಪಾಸ್ತಿ ಹೆಚ್ಚಲು ಯಾವ ಫಾರ್ಮುಲಾ ನೀವು ಬಳಸಿದ್ದೀರಾ? ಅದನ್ನು ನಮಗೂ ಕೂಡಾ ಹೇಳಿಕೊಡಿ’’ ಎನ್ನುತ್ತಿದ್ದಾರೆ.

ಮುಂಬೈ ಮಹಾನಗರ ಪಾಲಿಕೆಯ ಸ್ಟ್ಯಾಂಡಿಂಗ್ ಕಮಿಟಿ ಇದೀಗ ಚರ್ಚೆಗೆ ವಸ್ತುವಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ವಿಲಾಸ್ ರಾವ್ ದೇಶ್‌ಮುಖ್ ಅವರು ಹಿಂದೊಮ್ಮೆ ಸ್ಟಾಂಡಿಂಗ್ ಕಮಿಟಿಯನ್ನು ‘ಅಂಡರ್ ಸ್ಟ್ಯಾಂಡಿಂಗ್ ಕಮಿಟಿ’ ಎಂದೂ ಕರೆದದ್ದಿದೆ. ‘‘ಆಡಳಿತ ಮತ್ತು ವಿಪಕ್ಷದವರು ಇಬ್ಬರೂ ಒಟ್ಟುಸೇರಿ ಒಂದೇ ತಟ್ಟೆಯಲ್ಲಿ ಕಬಳಿಸುತ್ತಿದ್ದಾರೆ’’ ಎಂದು ದೇಶ್‌ಮುಖ್ ವ್ಯಂಗ್ಯವಾಗಿ ಹೇಳಿದ್ದಿದೆ. ಅಂದರೆ ಈ ವಿಷಯದಲ್ಲಿ ಮುಖ್ಯಮಂತ್ರಿ ಕೂಡಾ ಏನೂ ಮಾಡುವುದಕ್ಕೆ ಅಸಾಧ್ಯರು! ಮುಂಬೈ ಮನಪಾದ ನಗರ ಸೇವಕರಿಗೆ ಪ್ರತೀ ತಿಂಗಳು ಸಿಗುವ ವೇತನ ಕೇವಲ ಹತ್ತು ಸಾವಿರ ರೂಪಾಯಿ ಮಾತ್ರ. ಮಾಸಿಕ ಭತ್ತೆಯ ರೂಪದಲ್ಲಿ ರೂ. 1,250 ರೂಪಾಯಿ ಸಿಗುವುದು. ಮನಪಾ ಮುಖ್ಯಾಲಯದ ಬೈಠಕ್ ಗಳಲ್ಲಿ ಭಾಗವಹಿಸಿದರೆ ಬೈಠಕ್ ಭತ್ತೆ ನೂರ ಐವತ್ತು ರೂಪಾಯಿ. ನಗರ ಸೇವಕರಿಗೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಸಿಗುತ್ತದೆ. ಆದರೆ ಮನಪಾ ಚುನಾವಣೆಯ ಘೋಷಣೆ ನಂತರ ಮೊಬೈಲ್ ವಾಪಸ್ ಪಡೆಯಲಾಗಿದೆ. ಹೀಗಿರುವಾಗ ಈ ನಗರ ಸೇವಕರ ಆಸ್ತಿಪಾಸ್ತಿ ಇಷ್ಟೊಂದು ವೃದ್ಧಿಯಾಗಿರುವುದು ಯಾವ ಫಾರ್ಮುಲಾದಿಂದ? ಮುಂಬೈ ಮಹಾನಗರ ಪಾಲಿಕೆಯ ಒಟ್ಟು ಬಜೆಟ್ 2016-17ರಲ್ಲಿ 37,047.49 ಕೋಟಿ ರೂಪಾಯಿ. ಇಷ್ಟೊಂದು ದೊಡ್ಡ ಮೊತ್ತದ ಬಜೆಟ್‌ನಲ್ಲಿ ಸ್ಟ್ಯಾಂಡಿಂಗ್ ಕಮಿಟಿಯು ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿಯ ಟೆಂಡರ್ ಮಂಜೂರು ಮಾಡಿದೆ. ಈ ಸಮಿತಿಯಲ್ಲಿ 26 ಸದಸ್ಯರಿರುತ್ತಾರೆ. ಕಳೆದ 20 ವರ್ಷಗಳಲ್ಲಿ ಈ ಕಮಿಟಿಯ ಮೇಲೆ ಶಿವಸೇನೆ - ಬಿಜೆಪಿಯದ್ದೇ ಕಾರುಬಾರು. ಸ್ಟ್ಯಾಂಡಿಂಗ್ ಕಮಿಟಿಯ ಅಧ್ಯಕ್ಷತೆ ಹೆಚ್ಚಾಗಿ ಶಿವಸೇನೆಯ ಬಳಿಯೇ ಇತ್ತು. ಈಗ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಬಿಜೆಪಿಯ ಫಡ್ನವೀಸ್ ನಡುವೆ ಮಾತಿನ ಯುದ್ಧ ವಿಪರೀತ ಹಂತಕ್ಕೆ ತಲುಪುತ್ತಿದೆ. ಪ್ರಧಾನಿಯವರು ನೋಟು ರದ್ದತಿಯನ್ನು ಮಾಡಿದ ನಂತರ ಶಿವಸೇನೆ ಮತ್ತು ಉದ್ಧವ್ ಠಾಕ್ರೆಯವರ ಎಷ್ಟು ಕಪ್ಪು ಹಣ ಮುಳುಗಿತು? ಎಷ್ಟು ನಷ್ಟವಾಯಿತು? ಎಂದು ಮುಖ್ಯಮಂತ್ರಿ ಕೆಣಕುತ್ತಿದ್ದಾರೆ. ಅತ್ತ ಬಿಜೆಪಿಯು ಎನ್.ಸಿ.ಪಿ.ಯ ‘ಬಿ ಟೀಮ್’ ಎಂದು ಉದ್ಧವ್ ವ್ಯಂಗ್ಯವಾಡುತ್ತಿದ್ದಾರೆ.

‘‘ಶಿವಸೇನೆಗಿರುವ ಆತ್ಮ ವಿಶ್ವಾಸ ಬಿಜೆಪಿ ಕಾರ್ಯಕರ್ತರಲ್ಲಿಲ್ಲ. ಅಷ್ಟೇ ಏಕೆ ಮುಖ್ಯಮಂತ್ರಿಯ ಬಳಿಯೂ ಇಲ್ಲ. ನಾವು ಹೋರ್ಡಿಂಗ್‌ಗಳಲ್ಲಿ ನಮ್ಮ ಕೆಲಸ ಕಾರ್ಯಗಳನ್ನು ಹೇಳಿದ್ದೇವೆ. ಆದರೆ ಬಿಜೆಪಿ ಮೆಟ್ರೋ ಬಗ್ಗೆ ಹೇಳುತ್ತಿದೆ. ಮೆಟ್ರೋದ ಕೆಲಸ ಕಾಂಗ್ರೆಸ್ ಮಾಡಿದ್ದು, ಬಿಜೆಪಿ ಅಲ್ಲ. ನೋಟು ರದ್ದತಿಯ ಸಂಕಷ್ಟದ ಫಲಿತಾಂಶವನ್ನು ಬಿಜೆಪಿ ಫೆಬ್ರವರಿ 23ರಂದು ಅನುಭವಿಸಲಿದೆ’’ ಎಂದು ಉದ್ಧವ್ ಹೇಳುತ್ತಿದ್ದಾರೆ.

ಇತ್ತ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಬಳಸುತ್ತಿರುವುದಕ್ಕೆ ಶಿವಸೇನೆಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಹಾಗೂ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಲು ಶಿವಸೇನೆಯ ಸಂಸದ ಅನಿಲ್ ದೇಸಾಯಿ ಆಗ್ರಹಿಸಿದ್ದಾರೆ.

ವಿವಿಧ ಪಕ್ಷಗಳು ಮತ್ತೊಬ್ಬರ ಮೇಲೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದರೆ ಇನ್ನು ಕೆಲವು ಅಭ್ಯರ್ಥಿಗಳು ತಂತ್ರ-ಮಂತ್ರದ ಮೊರೆ ಹೋಗಿದ್ದಾರೆ. ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ಕೆಲವರು ಹೋಮ ಹವನದಲ್ಲಿ ನಿರತರಾಗಿದ್ದಾರೆ. ಪ್ರಚಾರ ಕಾರ್ಯದಲ್ಲಿ ಇಳಿಯುವ ಮೊದಲು ಶುಭ ಮುಹೂರ್ತ ನೋಡಿ ರಸ್ತೆಗೆ ಇಳಿದಿದ್ದಾರೆ! ಹಗಲಲ್ಲಿ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರೆ ರಾತ್ರಿಗೆ ಬಾಬಾಗಳ ಬಳಿ ತೆರಳಿ ತಂತ್ರ-ಮಂತ್ರ - ಹೋಮ ಹವನ ಮಾಡಿಸಿಕೊಳ್ಳುತ್ತಿದ್ದಾರೆ.

ಈ ಬಾರಿ ಮತದಾನ ಮಾಡುವಂತೆ ಜನರನ್ನು ಜಾಗೃತಗೊಳಿಸಲು ಹಲವು ರೀತಿಯ ಪ್ರಚಾರಗಳೂ ನಡೆಯುತ್ತಿವೆ. ಅಧಿಕ ಸಂಖ್ಯೆಯಲ್ಲಿ ಜನ ಮತ ಹಾಕಲು ಮತಗಟ್ಟೆಗೆ ಬರುವಂತೆ ಮನಪಾ ಆಡಳಿತವು ಜಾಗೃತ ಅಭಿಯಾನವನ್ನು ನಡೆಸುತ್ತಿದೆ. ಜೊತೆಗೆ ಕೆಲವು ಸಾಮಾಜಿಕ ಸಂಸ್ಥೆಗಳು, ಎನ್.ಜಿ.ಒ.ಗಳ ವತಿಯಿಂದಲೂ ಮತದಾರರನ್ನು ಜಾಗೃತ ಗೊಳಿಸಲಾಗುತ್ತಿದೆ. ಇದಕ್ಕಾಗಿ ರ್ಯಾಲಿಗಳನ್ನೂ ಆಯೋಜಿಸಲಾಗುತ್ತಿದೆ. ‘ಒ ಮೈ ಡಾಗ್’ ಎಂಬ ಸಂಸ್ಥೆಯು ಅಂಧೇರಿಯಲ್ಲಿ ಶ್ವಾನಗಳನ್ನು ಹಿಡಿದು ರ್ಯಾಲಿ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ‘‘ನಮ್ಮನ್ನು ಪ್ರೀತಿಸುವ ಆಡಳಿತವನ್ನು ತನ್ನಿರಿ’’ ಎಂಬ ಸ್ಲೋಗನ್ ಹಿಡಿದುಕೊಂಡು ಎಚ್ಚರಿಸುತ್ತಿದ್ದಾರೆ. ‘‘ನಮಗೆ ಮತಹಾಕಲು ಇಲ್ಲ, ಆದರೆ ನೀವು ಖಂಡಿತಾ ಮತ ಹಾಕಲು ಹೋಗಿ’’ ಎಂದು ಸಾಕು ಶ್ವಾನಗಳು ಬೋರ್ಡ್ ಹಿಡಿದಿವೆ. ಇನ್ನೊಂದೆಡೆ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಎಸೋಸಿಯೇಶನ್ (‘ಆಹಾರ್’) ಮುಂಬೈ ಮನಪಾದ ಚುನಾವಣೆಯಲ್ಲಿ ನಾಗರಿಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತನ್ನ ಸದಸ್ಯ ರೆಸ್ಟೋರೆಂಟ್‌ಗಳಲ್ಲಿ ಶೇ. 5ರಿಂದ 20ರ ತನಕ ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದೆ.

ಶಿವಸೇನೆಯು ಹಿಂದಿ ಭಾಷೆಯ (ಉತ್ತರ ಭಾರತೀಯರ) ಮತದಾರರನ್ನು ಸೆಳೆಯಲು ವಿವಿಧ ತಂತ್ರ ಬಳಸಿದೆ. ‘‘ಹಿಂದಿ ಭಾಷಿಕರಲ್ಲಿ ಶಿವಸೇನೆಗೆ ಮತಗಳ ಸಂಬಂಧ ಅಲ್ಲ, ಅದು ರಕ್ತ ಸಂಬಂಧ’’ ಎನ್ನುತ್ತಿವೆ. ಉತ್ತರ ಪ್ರದೇಶದ ಯುವನಾಯಕ ಮತ್ತು ಯುಪಿಯ ಶಿವಸೇನಾ ಪ್ರಭಾರಿ ಆಗಿರುವ ಅರುಣ್ ಪಾಠಕ್‌ರನ್ನು ಮುಂಬೈಯಲ್ಲಿ ಶಿವಸೇನೆಯ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ಕಾಗಿ ವಿಶೇಷ ರೂಪದಿಂದ ಮುಂಬೈಗೆ ಕರೆಸಿಕೊಳ್ಳಲಾಗಿದೆ.

ಕಾಂಗ್ರೆಸ್ ತನ್ನ ಮನಪಾ ಚುನಾವಣಾ ಪ್ರಚಾರಕ್ಕಾಗಿ ನಟಿ ನಗ್ಮಾರನ್ನು ‘ಸ್ಟಾರ್ ಪ್ರಚಾರಕಿ’ ಎಂಬಂತೆ ಬಿಂಬಿಸುತ್ತಿದೆ. ರೋಡ್ ಶೋ, ಜನಸಭೆಯ ಮೂಲಕ ಅವರು ಕಾಂಗ್ರೆಸ್‌ಗೆ ಮತಗಳನ್ನು ನೀಡಲು ವಿನಂತಿಸುತ್ತಿದ್ದಾರೆ.

ಮುಂಬೈ ಮನಪಾ ಚುನಾವಣೆಯಲ್ಲೀಗ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಧನಬಲದ ಜೊತೆಗೆ ಬಾಹುಬಲವನ್ನು ಬಳಸಿಕೊಳ್ಳುತ್ತಿರುವ ದೃಶ್ಯಗಳೂ ಕಂಡು ಬರುತ್ತಿವೆ. ಶಿವಸೇನೆಯ ಮಹಿಳಾ ಕಾರ್ಯಕರ್ತರನ್ನು ಸೀರೆ ವಿತರಿಸುವಾಗ ಬಂಧಿಸಲಾಗಿದೆ. ಮುಂಬೈಗೆ ತರುತ್ತಿದ್ದ ವಿದೇಶಿ ಶರಾಬು ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ. ಶಿವಸೇನೆ - ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ದೃಶ್ಯಗಳೂ ವರದಿಯಾಗುತ್ತಿವೆ. ಚುನಾವಣಾ ಪ್ರಚಾರಕಾರ್ಯದಲ್ಲಿ ಬಾಡಿಗೆ ಕಾರ್ಯಕರ್ತರು ಅನಿವಾರ್ಯ. ಇವರಿಗೆ ಪ್ರತೀದಿನ ಇನ್ನೂರರಿಂದ ನಾಲ್ಕು ನೂರು ರೂಪಾಯಿ ಮತ್ತು ಊಟ-ತಿಂಡಿ ನೀಡಲಾಗುತ್ತದೆ. ಆದರೆ ಹನ್ನೆರಡು ಗಂಟೆ ಡ್ಯೂಟಿ ಮಾಡಬೇಕಾಗಿದೆ.
ಮುಂಬೈ ಮನಪಾದಲ್ಲಿ 227 ವಾರ್ಡ್‌ಗಳಿದ್ದು 2,271 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಿವಸೇನೆ - ಬಿಜೆಪಿಯ ನೌಟಂಕಿ
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರೂಪಮ್ ಅವರು ಹೇಳುವಂತೆ - ‘‘ಶಿವಸೇನೆ ಮತ್ತು ಬಿಜೆಪಿ ಪರಸ್ಪರರು ಬೈಗುಳ ಹರಿಸುತ್ತ ಹಫ್ತಾಖೋರ -ಗೂಂಡಾಗಳ ಪಾರ್ಟಿ ಇತ್ಯಾದಿ ಹೇಳುತ್ತಾರೆ. ಆದರೆ ಜೊತೆಯಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಸರಕಾರ ನಡೆಸುತ್ತಿದ್ದಾರೆ. ಶಿವಸೇನೆ ಮತ್ತು ಬಿಜೆಪಿ ಮುಖ್ಯ ಸಮಸ್ಯೆಗಳನ್ನು ಬದಿಗಿರಿಸಿ ಮುಖ್ಯ ವಿಷಯದಿಂದ ಜನರ ಗಮನವನ್ನು ಬೇರೆಡೆ ಹರಿಸುವುದಕ್ಕೆ ನೌಟಂಕಿ ಆಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಮನಪಾದಲ್ಲಿನ ಹಗರಣಗಳ ಜವಾಬ್ದಾರಿ ನೇತಾರರ ತನಿಖೆಯನ್ನು ನಡೆಸಲಾಗುತ್ತದೆ’’ ಎನ್ನುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)