ಉಡುಪಿ: ಉಪ್ಪು ನೀರಿನ ಸೆಲೆಯಲ್ಲಿ ಕಲ್ಲಂಗಡಿ ಬೆಳೆದ ಯುವ ಕೃಷಿಕ
ಮಟ್ಟುಗುಳ್ಳ ಬೆಳೆಯುವ ಪ್ರದೇಶದಲ್ಲಿ ವಿನೂತನ ಪ್ರಯೋಗ
ಉಡುಪಿ, ಫೆ.21: ಮಟ್ಟು ಗುಳ್ಳ ಖ್ಯಾತಿಯ ಕಡಲ ತಡಿಯ ಪ್ರದೇಶವಾಗಿ ರುವ ಕಟಪಾಡಿ ಸಮೀಪದ ಮಟ್ಟುವಿನಲ್ಲಿ ಯುವ ಕೃಷಿಕ ಯಶೋಧರ ಕೋಟ್ಯಾನ್(32) ವಿನೂತನ ಪ್ರಯೋಗದೊಂದಿಗೆ ಉಪ್ಪು ನೀರಿನ ಸೆಲೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿನ್ನೀರಿನ ಪ್ರದೇಶವಾಗಿರುವ ಮಟ್ಟುವಿನಲ್ಲಿ ಒಂದೆಡೆ ಹೊಳೆ ಇನ್ನೊಂದೆಡೆ ಸಮುದ್ರದಿಂದ ಉಪ್ಪು ನೀರಿನ ಸೆಲೆ ಹೆಚ್ಚಾಗಿದೆ. ಇಲ್ಲಿ ಬಹುತೇಕ ಕೃಷಿ ಕುಟುಂಬಗಳು ಸಾಂಪ್ರದಾಯಿಕ ಬೆಳೆಯಾದ ಮಟ್ಟು ಗುಳ್ಳವನ್ನು ಬೆಳೆಯುತ್ತಾರೆ. ಯಶೋಧರ ಕೋಟ್ಯಾನ್ ಕುಟುಂಬ ಸಹ ಹಲವು ವರ್ಷಗಳಿಂದ ತಮ್ಮ ಮೂರು ಎಕರೆ ಭೂಮಿಯಲ್ಲಿ ಮಟ್ಟುಗುಳ್ಳ ಹಾಗೂ ಭತ್ತದ ಕೃಷಿ ಮಾಡುತ್ತ ಬರುತ್ತಿದೆ.
ಮುಂಬೈಯಲ್ಲಿಯೇ ಹುಟ್ಟಿ ಬೆಳೆದ ಯಶೋಧರ ಕೋಟ್ಯಾನ್ ಅಲ್ಲೇ ಎಸ್ಸೆಸೆಲ್ಸಿವರೆಗೆ ಶಿಕ್ಷಣ ಪಡೆದು ಫ್ಯಾಕ್ಟರಿಯೊಂದರಲ್ಲಿ ದುಡಿಯುತ್ತಿದ್ದರು. ಸುಮಾರು 22ವರ್ಷ ಮುಂಬೈಯಲ್ಲೇ ನೆಲೆಸಿದ್ದ ಅವರು 10 ವರ್ಷಗಳ ಹಿಂದೆ ತನ್ನ ಊರು ಮಟ್ಟುವಿಗೆ ಮರಳಿದ್ದರು. ತಾಯಿ ಸಂಪ ಪೂಜಾರ್ತಿ ಮುನ್ನಡೆಸಿಕೊಂಡು ಬರುತ್ತಿದ್ದ ಭತ್ತ, ಮಟ್ಟು ಗುಳ್ಳ ಹಾಗೂ ತರಕಾರಿ ಕೃಷಿಯಲ್ಲಿ ಇವರು ಕೂಡ ಕೈಜೋಡಿಸಿದರು.
ಕೃಷಿಯಲ್ಲಿ ಹೊಸತನ ಮಾಡಬೇಕೆಂಬ ಹಂಬಲದಲ್ಲಿ ಯಶೋಧರ ಕೃಷಿ, ತೋಟಗಾರಿಕೆ, ಬ್ರಹ್ಮಾವರ ವಿಜ್ಞಾನ ಕೇಂದ್ರಗಳಲ್ಲಿ ಮಾಹಿತಿ ಪಡೆದು ಮಟ್ಟು ಗುಳ್ಳದ ಜೊತೆ ಇತರ ಕೃಷಿಗೆ ಯೋಜನೆ ರೂಪಿಸಿದರು. ಅದರಂತೆ ನಾಲ್ಕು ವರ್ಷಗಳ ಹಿಂದೆ ಇವರು ಪ್ರಯೋಗಾರ್ಥ ಕಲ್ಲಂಗಡಿ ಬೆಳೆಯಲು ಮುಂದಾದರು.
ಉಪ್ಪು ನೀರಿನ ಸೆಲೆಯ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಸುವುದು ಇವರಿಗೆ ದೊಡ್ಡ ಸವಾಲಿನ ಪ್ರಶ್ನೆಯಾಯಿತು. ಇದನ್ನು ಸವಾಲಾಗಿ ಸ್ವೀಕರಿಸಿ ಅದೇ ನೆಲದಲ್ಲಿ ಕಲ್ಲಂಗಡಿ ಬೀಜ ಬಿತ್ತಿ ಸಮೃದ್ಧ ಬೆಳೆ ಪಡೆಯುವಲ್ಲಿ ಯಶಸ್ವಿ ಕೂಡ ಆದರು.
ಒಂದು ಎಕರೆಯಲ್ಲಿ 8 ಟನ್ ಕಲ್ಲಂಗಡಿ:
ಯಶೋಧರ್ ಕೋಟ್ಯಾನ್ ಕುಟುಂಬ ಜೂನ್‌ನಿಂದ ಅಕ್ಟೋಬರ್‌ವರೆಗೆ ತಮ್ಮ ಮೂರು ಎಕರೆ ಭೂಮಿಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ನಂತರ ಅಕ್ಟೋಬರ್‌ನಿಂದ ಜೂನ್‌ವರೆಗೆ ಮಟ್ಟುಗುಳ್ಳುವನ್ನು ಬೆಳೆಸುತ್ತಾರೆ. ಇವರು ಶ್ರೀಪದ್ಧತಿ ಭತ್ತದಲ್ಲೂ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
ಈ ಮಧ್ಯೆ ಡಿಸೆಂಬರ್‌ನಲ್ಲಿ ಒಂದು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೀಜ ಬಿತ್ತುತ್ತಾರೆ. ಇದು ಬೆಳೆಯಲು 50-60ದಿನಗಳು ಬೇಕಾಗುತ್ತವೆ. ಅಂದರೆ ಜನವರಿ ಕೊನೆಯಲ್ಲಿ ಕಲ್ಲಂಗಡಿ ಕಟಾವಿಗೆ ಬರುತ್ತದೆ. ಇದು ಇಂಡೋ ಅಮೆರಿಕನ್ ಮತ್ತು ಥೈವಾನ್ ತಳಿಯ ಕಲ್ಲಂಗಡಿ. ಇವರು ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿವರ್ಷ ಒಂದು ಎಕರೆಯಲ್ಲಿ ಒಟ್ಟು ಎಂಟು ಟನ್ ಕಲ್ಲಂಗಡಿ ಬೆಳೆಯುತ್ತಿದ್ದಾರೆ.
ಕಲ್ಲಂಗಡಿ ಒಟ್ಟು ಮೂರು ಹಂತದಲ್ಲಿ ಕಟಾವಿಗೆ ಬರುತ್ತದೆ. ಒಂದೊಂದು ಕಲ್ಲಂಗಡಿ ಮೂರರಿಂದ 10ಕೆ.ಜಿ.ವರೆಗೆ ತೂಕ ಇರುತ್ತದೆ. ಇವರು ವರ್ಷಕ್ಕೆ 25ಸಾವಿರ ರೂ. ಬಂಡವಾಳ ಹೂಡಿ ಈ ಬೆಳೆಯನ್ನು ಮಾಡುತ್ತಿದ್ದು, ಇದ ರಿಂದ ಸುಮಾರು 1.30ಲಕ್ಷ ರೂ.ವರೆಗೆ ಆದಾಯ ಪಡೆಯುತ್ತಾರೆ. ಕಾರ್ಮಿಕರು ಸೇರಿದಂತೆ ಇತರ ಖರ್ಚುಗಳನ್ನು ಹೊರತು ಪಡಿಸಿ ಕೇವಲ 3 ತಿಂಗಳಲ್ಲಿ 80 ಸಾವಿರ ರೂ. ಲಾಭ ಪಡೆಯುತ್ತಿದ್ದಾರೆ.
ಇವರು ಬೆಳೆದ ಕಲ್ಲಂಗಡಿಗಳನ್ನು ಮಂಗಳೂರು ಹಾಗೂ ಉಡುಪಿಯ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಇವರ ಕಲ್ಲಂಗಡಿಗಳಿಗೆ ಮಾರುಕಟ್ಟೆ ಯಲ್ಲಿ ಒಳ್ಳೆಯ ಬೇಡಿಕೆ ಕೂಡ ಇವೆ. ಕಲ್ಲಂಗಡಿ, ಭತ್ತ, ಮಟ್ಟುಗುಳ್ಳ ಜೊತೆ ಮಿಶ್ರಬೆಳೆ ಸೌತೆ, ಮುಳ್ಳು ಸೌತೆ, ಕುಂಬಳಕಾಯಿಯನ್ನು ಬೆಳೆಸುತ್ತಿದ್ದಾರೆ. ಹೈನುಗಾರಿಕೆ ಮಾಡುತ್ತಿರುವ ಇವರ ಮನೆಯಲ್ಲಿ ಎಂಟು ದನಗಳಿವೆ. ಇದ ಕ್ಕಾಗಿ ಅವರು ತಮ್ಮ ಜಾಗದಲ್ಲಿ ಹೈಬ್ರಿಡ್ ಹುಲ್ಲುಗಳನ್ನು ಬೆಳೆಸಿ ಯಶಸ್ವಿ ಯಾಗಿದ್ದರು.
ಮಾದರಿ ಯುವ ಕೃಷಿಕ:
ಉಪ್ಪು ನೀರಿನ ಸೆಲೆಯಲ್ಲೂ ಕಲ್ಲಂಗಡಿ ಬೆಳೆದು ಯಶಸ್ವಿಯಾಗಿರುವ ಯಶೋಧರ ಕೋಟ್ಯಾನ್ ಅವರ ಪ್ರಯೋಗ ಇದೀಗ ಎಲ್ಲರಿಗೂ ಮಾದರಿ ಯಾಗಿದೆ. ಇದನ್ನು ನೋಡಿ ಮಟ್ಟುವಿನ ನಾಲ್ಕೈದು ಮಂದಿ ಮಟ್ಟುಗುಳ್ಳ ಕೃಷಿಕರು ತಮ್ಮ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯಲು ಮುಂದಾಗಿದ್ದಾರೆ. ಇವರಿಗೆ ಯಶೋಧರ್ ಕೋಟ್ಯಾನ್ ಮಾರ್ಗದರ್ಶನ ನೀಡುತ್ತಿದ್ದಾರೆ.
ಕೃಷಿಯಲ್ಲಿ ಹೊಸತನ ಮಾಡಬೇಕೆಂಬ ಉದ್ದೇಶದಿಂದ ಮುಂಬೈಯ ಉದ್ಯೋಗ ತೊರೆದು ಊರಿಗೆ ಬಂದಿದ್ದೇನೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತಜ್ಞರಿಂದ ಹಾಗೂ ಗೂಗಲ್‌ನಿಂದ ಮಾಹಿತಿಯನ್ನು ಪಡೆದು ಹೊಸ ಹೊಸ ಕೃಷಿ ಪ್ರಯೋಗಕ್ಕೆ ಮುಂದಾಗಿದ್ದೇನೆ. ಇದರಲ್ಲಿ ಕಲ್ಲಂಗಡಿ ಕೃಷಿ ಯಶಸ್ವಿಯಾಗಿದೆ. ತುಂಬಾ ಲಾಭ ಪಡೆಯುವಂತಹ ಈ ಕೃಷಿಯಲ್ಲಿ ಬಹಳಷ್ಟು ಶ್ರಮ ಇದೆ. ಅದಕ್ಕೆ ತಕ್ಕ ಫಲ ನನಗೆ ದೊರೆತಿದೆ.-ಯಶೋಧರ್ ಕೋಟ್ಯಾನ್