ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆಕೋಮುವಿಷದ ಜ್ವಾಲೆ
ಕಳೆದ ಮೂರು ದಶಕಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆ ಹೆಚ್ಚುತ್ತಿದ್ದು, ಇದನ್ನು ತಡೆಯುವುದು ಅಸಾಧ್ಯ ಎಂಬ ವಾತಾವರಣ ಸೃಷ್ಟಿಯಾಗಿದೆ. ಬಲಪಂಥೀಯ ರಾಷ್ಟ್ರೀಯವಾದ ಇಂದು ಕಲಾತ್ಮಕ ಸ್ವಾತಂತ್ರ್ಯವನ್ನು ನಿಯಂತ್ರಿಸುತ್ತಿದೆ. ಕೇಸರಿ ರಾಜಕೀಯ ಪ್ರಬಲವಾಗುತ್ತಿರುವುದರಿಂದ ಇಂಥ ಶಕ್ತಿಗಳ ರೆಕ್ಕೆ ಬಲಿಯುತ್ತಿದೆ. ಚಿತ್ರ ನಿರ್ಮಾಪಕರು ಇಂಥ ಗುಂಪುಗಳ ದಾಂಧಲೆ ತೀವ್ರವಾಗುತ್ತಿರುವುದನ್ನು ಮನಗಂಡಿದ್ದಾರೆ. ಮೌಲ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿರಬೇಕಾದ ರಾಜಕೀಯ ವ್ಯವಸ್ಥೆ, ಮೂಕಪ್ರೇಕ್ಷಕನಾಗುತ್ತಿದೆ.
ಪದ್ಮಾವತಿ ಚಿತ್ರದ ಚಿತ್ರೀಕರಣ ಮಾಡುತ್ತಿದ್ದ ಚಿತ್ರಘಟಕದ ಮೇಲೆ ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ದಾಳಿ ನಡೆಯಿತು. ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿ ಹಾಗೂ ರಜಪೂತ ರಾಜಕುಮಾರಿ ಪದ್ಮಾವತಿ ನಡುವಿನ ಕನಸಿನ ಸರಣಿಯನ್ನು ಈ ಚಿತ್ರ ಒಳಗೊಂಡಿದೆ ಎನ್ನುವ ಅಂಶ ಈ ದಾಳಿಗೆ ಮೂಲಪ್ರೇರಣೆ. ರಜಪೂತ ಗೌರವವನ್ನು ಸಂರಕ್ಷಿಸುವ ಸಂಘಟನೆ ಎಂದು ಪ್ರತಿಪಾದಿಸಿಕೊಂಡಿರುವ ಕರ್ನಿಸೇನಾ ಈ ದಾಳಿ ಸಂಘಟಿಸಿದೆ. ಕುತೂಹಲದ ಅಂಶವೆಂದರೆ ಈ ಚಿತ್ರ ಇನ್ನೂ ಚಿತ್ರೀಕರಣ ಹಂತದಲ್ಲಿದ್ದು, ಕರ್ನಿಸೇನಾಗೆ ಈ ಚಲನಚಿತ್ರದ ಚಿತ್ರಕಥೆ ಕೂಡಾ ಲಭ್ಯವಾಗಿಲ್ಲ.
ಕನಸಿನ ಸರಣಿಯ ಬಗೆಗಿನ ವದಂತಿಯನ್ನು ನಂಬಿಯೇ ಚಿತ್ರತಂಡದ ಮೇಲೆ ದಾಳಿ ನಡೆಸಲಾಗಿದೆ. ರಾಜ್ಯದ ಯಾವ ಮುಖಂಡರೂ ಈ ದಾಳಿಯನ್ನು ಕನಿಷ್ಠ ಖಂಡಿಸುವ ಸೌಜನ್ಯವನ್ನೂ ತೋರದೆ ಸುಮ್ಮನಿರುವುದು ನಿಜಕ್ಕೂ ಅಚ್ಚರಿ. ಸಂಜಯ್‌ಲೀಲಾ ಬನ್ಸಾಲ್ ಕೂಡಾ ಚಿತ್ರ ಘಟಕವನ್ನು ಮುಚ್ಚಿ ರಾಜಸ್ಥಾನದಲ್ಲಿ ಶೂಟಿಂಗ್ ಮಾಡದಿರಲು ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ದೇಶದ ಯಾವುದೇ ಭಾಗದಲ್ಲಿ ಶೂಟಿಂಗ್ ಮಾಡದಂತೆ ಬಿಜೆಪಿ- ವಿಎಚ್‌ಪಿ ಮುಖಂಡರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ಕರ್ನಿಸೇನಾ ಈ ಹಿಂದೆ, ಮತ್ತೊಬ್ಬ ರಜಪೂತ ರಾಜಕುಮಾರಿಯ ಚಿತ್ರಣವನ್ನು ಒಳಗೊಂಡ ‘ಜೋಧಾ ಅಕ್ಬರ್’ ಚಿತ್ರವನ್ನು ಪ್ರದರ್ಶಿಸಿದ ಚಿತ್ರುಂದಿರಗಳನ್ನು ದ್ವಂಸ ಮಾಡಿತ್ತು.
ಅಲ್ಲಾವುದ್ದೀನ್ ಖಿಲ್ಜಿ- ಪದ್ಮಾವತಿ ಕಥಾನಕ ಒಂದು ಧಾರಾವಾಹಿಯ ಆಯ್ದರೂಪ. ಅನಧಿಕೃತ ಮೂಲಗಳ ಪ್ರಕಾರ, ಖಿಲ್ಜಿಯ ವಾಸ್ತವ ಚಿತ್ರಣ ಇದರಲ್ಲಿದೆ. ಆತನ ಬಗ್ಗೆ ಇರುವ ಕಥೆಯೂ ಸತ್ಯ. ಆದರೆ ಪದ್ಮಾವತಿ ಬಗೆಗಿನ ಹಾಗೂ ಆಕೆಯ ಆತ್ಮಾರ್ಪಣೆ ಕುರಿತ ಜನಪ್ರಿಯ ವರ್ಣನೆಯು ಖಿಲ್ಜಿ ಆಡಳಿತದ ಎರಡು ದಶಕಗಳ ಬಳಿಕ ಅಂದರೆ 16ನೆ ಶತಮಾನದಲ್ಲಿ ಸೂಫಿ ಸಂತ ಮಲಿಕ್ ಮುಹಮ್ಮದ್ ಜಾಯಸಿ ಬರೆದ ಕಾದಂಬರಿಯನ್ನು ಆಧರಿಸಿದೆ. ರಾಜಕುಮಾರಿ ಪದ್ಮಾವತಿ ಬಗೆಗಿನ ವಿವರಣೆಯು ಚಿತ್ತೂರಿನ ರಾಜ ರತನ್ ಸಿಂಗ್ ಹಾಗೂ ಕಾಲ್ಪನಿಕ ಸಿಂಹಳ ದ್ವೀಪದ ರಾಜಕುಮಾರಿ ಪದ್ಮಾವತಿಯ ಪ್ರೇಮ ಕಥಾನಕವನ್ನು ಬಣ್ಣಿಸುತ್ತದೆ.
ಪದ್ಮಾವತಿಯ ಗಿಳಿ ಹೀರಾಮನ್‌ನಿಂದ ಆಕೆಯ ಚೆಲುವಿನ ವಿವರಣೆಯನ್ನು ರತನ್ ಸಿಂಗ್ ಪಡೆಯುತ್ತಾನೆ; ರತನ್ ಸಿಂಗ್ ರಾಜಕುಮಾರಿಯ ಮನವೊಲಿಸಿ ಪ್ರೇಮಿಗಳು ಒಂದಾಗುತ್ತಾರೆ. ಈ ಕಾದಂಬರಿಯ ಕಥೆಯ ಅನ್ವಯ, ರಾಘವ ಪಂಡಿತ್ ಎಂಬಾತನಿಂದ ದ್ರೋಹಕ್ಕೆ ಒಳಗಾಗುವ ರತನ್ ಸಿಂಗ್ ಮೇಲೆ ಕುಂಭಲ್ನೇರ್ ಅರಸ ದಾಳಿ ಮಾಡಿ ರತನ್ ಸಿಂಗ್‌ನನ್ನು ಕೊಲ್ಲುತ್ತಾನೆ. ಕುಂಭಲ್ನೇರ್ ರಾಜನ ಕಣ್ಣು ಕೂಡಾ ಪದ್ಮಾವತಿ ಮೇಲೆ ಬೀಳುತ್ತದೆ.
ಈ ಮಧ್ಯೆ ರಾಜಕುಮಾರಿಯ ಸೌಂದರ್ಯವನ್ನು ನೋಡಿದ್ದ ಖಿಲ್ಜಿ ಕೂಡಾ ರತನ್ ಸಿಂಗ್‌ನ ಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತಾನೆ. ಪದ್ಮಾವತಿ ಇತರ ಮಹಿಳೆಯರ ಜತೆ ಸೇರಿ ಸಾಮೂಹಿಕ ಸಹಗಮನ ಮಾಡುವುದನ್ನು ಕಾಣುತ್ತಾನೆ. ಈ ಅಮರಪ್ರೇಮದ ಕಥಾನಕವನ್ನು ಬರೆದ ಸೂಫಿ ಬರಹಗಾರ, ಪರಿಣಾಮದ ಅರಿವು ಇಲ್ಲದೆ ಅಧಿಕಾರ ಚಲಾಯಿಸುವ ಮಾನವ ಆತ್ಮದ ಉಪಮೆಯಾಗಿ ರಚಿಸಿದ್ದಾರೆ.
ಕಾಲಕ್ರಮೇಣ ಈ ಕಥೆಯನ್ನು, ಪದ್ಮಾವತಿ ಎಂದರೆ ರಜಪೂತ ಗೌರವದ ಸಂಕೇತ ಹಾಗೂ ಖಿಲ್ಜಿ ಎಂದರೆ ದುರಾಸೆಯ ಇಸ್ಲಾಮಿಕ್ ದಾಳಿಕೋರ ಎಂಬ ಮಟ್ಟಕ್ಕೆ ಇಳಿಸಲಾಗಿದೆ. ಈ ಸಮುದಾಯ ಹಿಂದಿನ ಘಟನಾವಳಿಗಳನ್ನು ಅರಿತುಕೊಂಡ ವಿಧಾನ ಪ್ರಸ್ತುತ ರಾಜಕೀಯ ಚಿತ್ರಣದ ದಟ್ಟ ಪ್ರಭಾವಕ್ಕೆ ಒಳಗಾಗಿದೆ. ಈ ಕಥಾನಕವು ಇತಿಹಾಸದ ಕೋಮು ದೃಷ್ಟಿಯ ಸುತ್ತ ಸುತ್ತುತ್ತದೆ; ರಾಜರು ಇಲ್ಲಿ ತಮ್ಮ ಧರ್ಮದ ವಾಹಕರಾಗಿ ಬಿಂಬಿತರಾಗಿದ್ದಾರೆ. ಅಧಿಕಾರದ ಎಲ್ಲ ರಾಜರ ಪ್ರಧಾನ ಉದ್ದೇಶ ಎಂಬ ಅಂಶವನ್ನು ಈ ಇತಿಹಾಸದ ದೃಷ್ಟಿಕೋನದಲ್ಲಿ ಅಲ್ಲಗಳೆಯಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದು ಕಾಲಕ್ರಮೇಣ ಬೆಳೆದು ಬಂದ ಕೋಮು ನೆನಪಿನ ಘಟನಾವಳಿಯಾಗಿ ಬಿಂಬಿತವಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ರಜಪೂತ ರಾಜರನ್ನು ಶೂರರಾಗಿ ಬಿಂಬಿಸುವುದು.
ಇದರಂತೆ ಮುಸ್ಲಿಂ ಆಡಳಿತಗಾರರ ಮೇಲೆ ಇವರ ಶೌರ್ಯವನ್ನು ಪ್ರದರ್ಶಿಸಿ, ತಮ್ಮ ಮಹಿಳೆಯರ ಗೌರವ ಸಂರಕ್ಷಿಸಿದಂತೆ ಚಿತ್ರಿಸಲಾಗುತ್ತಿದೆ. ಮುಸ್ಲಿಂ ರಾಜರಿಂದ ಅಪವಿತ್ರಗೊಳ್ಳುವ ಬದಲಾಗಿ ಮಹಿಳೆಯರು ಸಹಗಮನ ಮಾಡಿಕೊಳ್ಳುವಂತೆ ವರ್ಣಿಸಲಾಗಿದೆ. ಈ ಬಣ್ಣನೆಯು ವಾಸ್ತವಕ್ಕೆ ವಿರುದ್ಧವಾಗಿದ್ದು, ವಾಸ್ತವವಾಗಿ ರಜಪೂತರು ಹಾಗೂ ಮೊಘಲ್ ದೊರೆಗಳ ನಡುವೆ ರಾಜಕೀಯ ಮೈತ್ರಿ ಏರ್ಪಟ್ಟು, ರಜಪೂತ ಪುತ್ರಿಯರು ಮುಸ್ಲಿಂ-ಮೊಘಲ್ ರಾಜರನ್ನು ವಿವಾಹವಾಗುತ್ತಿದ್ದರು.
ಕೆಲ ವರ್ಷಗಳ ಹಿಂದೆ ‘ಜೋಧಾ ಅಕ್ಬರ್’ ಚಿತ್ರದ ವಿರುದ್ಧ ದಾಂಧಲೆ ನಡೆಸಲಾಯಿತು. ಈ ಚಿತ್ರ ಕೂಡಾ ಮುಸ್ಲಿಂ ರಾಜ ಹಾಗೂ ಹಿಂದೂ ರಾಜಕುಮಾರಿಯ ಕಥಾನಕವನ್ನು ಒಳಗೊಂಡಿತ್ತು. ಹಿಂದಿನ ಘಟನಾವಳಿಗಳನ್ನು ಕಾದಂಬರಿಯಲ್ಲಿ ವರ್ಣರಂಜಿತವಾಗಿ ವಿವರಿಸಲಾಗಿದೆ. ವಾಸ್ತವವಾಗಿ ಭಾರತ ಉಪಖಂಡದಲ್ಲಿ ಮೊಘಲ್ ಅರಸರು ತಮ್ಮ ಸಾಮ್ರಾಜ್ಯ ವಿಸ್ತರಿಸುವ ಸಲುವಾಗಿ ಯುದ್ಧ ಹಾಗೂ ಮೈತ್ರಿ ಹೀಗೆ ಎರಡೂ ವಿಧಾನವನ್ನು ಅನುಸರಿಸಿದ್ದರು. ಅಕ್ಬರ್ ಹಾಗೂ ರಾಣಾ ಪ್ರತಾಪ್ ಪರಸ್ಪರ ಯುದ್ಧ ಮಾಡಿದ್ದರು. ಆದರೆ ಬಳಿಕ ರಾಣಾ ಪ್ರತಾಪನ ಮಗ ಅಮರ್ ಸಿಂಗ್, ಅಕ್ಬರ್‌ನ ಮಗ ಜಹಾಂಗೀರ್ ಜತೆ ಮೈತ್ರಿ ಮಾಡಿಕೊಂಡಿದ್ದ. ಮೊಘಲ್ ಆಡಳಿತದಲ್ಲಿ ರಜಪೂತ ಅರಸರಿಗೆ ವಿಶೇಷ ಸ್ಥಾನಮಾನ ಇತ್ತು. ಮೊಘಲ್- ರಜಪೂತ ಸಮನ್ವಯವು ಮಧ್ಯಮಾವಧಿ ಕಾಲಘಟ್ಟದ ಸಾಮಾಜಿಕ ಹಾಗೂ ರಾಜಕೀಯ ಮಟ್ಟದ ಮಹತ್ವದ ಅಂಶವಾಗಿದೆ.
ರಜಪೂತ ರಾಜಕುಮಾರಿಯರನ್ನು ಎರಡು ವಿಧದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಒಂದು ಪ್ರಭಾವಿ ಹಾಗೂ ಹಿಡಿತ ಇರುವ ರಾಣಿಯರು ಎಂದು ಬಿಂಬಿಸಲಾಗಿದ್ದು, ಈ ಭಾವನೆ ಜನಮಾನಸದಲ್ಲಿ ದಟ್ಟವಾಗಿದೆ. ಇದು ಸಹಗಮನವನ್ನು ವೈಭವೀಕರಿಸುವ ಮೂಲಕ ಸಮುದಾಯದ ಗೌರವವನ್ನು ರಕ್ಷಿಸುವ ಪ್ರಯತ್ನವಾಗಿದೆ. ಎರಡನೆಯದಾಗಿ ಅಧಿಕಾರದ ಸುತ್ತ ಇರುವ ರಾಜವಂಶಗಳ ಕುಟುಂಬಗಳ ನಡುವೆ ಅಂತರ್ ವಿವಾಹ. ಹಾಲಿ ಇರುವ ಪಿತೃಪ್ರಧಾನ ಭಾವನೆಯಂತೆ ಸಮುದಾಯದ ಸೋಲನ್ನು ಒಪ್ಪಿಕೊಳ್ಳುವ ವಿಧಾನವಾಗಿ ಮಗಳಂದಿರನ್ನು ನೀಡುವುದು; ಈ ವರ್ಣನೆಯು ನೆನಪಿನಂಗಳದಿಂದ ಮರೆಯಾಗಿದೆ. ಇದರ ಬದಲಾಗಿ ಅತ್ಮಾಹುತಿಯ ಹಣೆಪಟ್ಟಿಯನ್ನು ಇವರಿಗೆ ಕಟ್ಟಲಾಗಿದೆ. ‘ಜೋಧಾ ಅಕ್ಬರ್’ ಚಿತ್ರದಲ್ಲಿ, ಎರಡು ಆಡಳಿತ ವಂಶಗಳ ರಾಜಕೀಯ ಒಪ್ಪಂದದ ಅನ್ವಯ ರಜಪೂತ ರಾಜಕುಮಾರಿ ಮೊಘಲ್ ರಾಜನನ್ನು ವಿವಾಹವಾಗುವ ಚಿತ್ರಣವಿದೆ.
ಇಂಥ ನೆನಪುಗಳನ್ನು ಜನಮಾನಸದಿಂದ ಅಳಿಸಿಹಾಕುವ ಪ್ರಯತ್ನ ನಡೆಯುತ್ತಿದ್ದು, ಇದು ಸಮುದಾಯದ ಗೌರವಕ್ಕೆ ಧಕ್ಕೆ ಎಂಬ ರೀತಿಯಲ್ಲಿ ಕಾಣಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೋಧಾ ಅಕ್ಬರ್ ಚಿತ್ರದ ಬಗ್ಗೆ ಅಸಹನೆ ಕಟ್ಟೆಯೊಡೆದಿತ್ತು.
‘ಪದ್ಮಾವತಿ’ ಚಿತ್ರತಂಡದ ಮೇಲಿನ ದಾಳಿಯೊಂದಿಗೆ ಇಂಥ ಮನೋಭಾವ ಮತ್ತೊಂದು ಹೆಜ್ಜೆ ಮುಂದುವರಿದಂತಾಗಿದೆ. ‘ಸಮುದಾಯದ ಗೌರವದ ಸಂರಕ್ಷಕರು’ ಕೇವಲ ವದಂತಿಯ ಆಧಾರದಲ್ಲೇ ದಾಳಿ ಮಾಡಿದ್ದಾರೆ. ಚಿತ್ರ ನಿರ್ದೇಶಕನ ಮನಸ್ಸಿನಲ್ಲಿ ವಾಸ್ತವವಾಗಿ ಏನಿದೆ ಎಂಬುದು ತಿಳಿದಿಲ್ಲ. ಆದರೆ ಒಬ್ಬ ಮುಸ್ಲಿಂ ವ್ಯಕ್ತಿ ಹಾಗೂ ಹಿಂದೂ ಹುಡುಗಿಯ ಕನಸಿನ ದೃಶ್ಯಾವಳಿ, ಕರ್ನಿಸೇನಾದಂಥ ಮನಸ್ಸುಗಳ ಅಸಹನೆಗೆ ಕಾರಣವಾಗಿದೆ. ಕಳೆದ ಮೂರು ದಶಕಗಳಿಂದ ಇಂಥ ಮನೋಪ್ರವೃತ್ತಿ ಹೆಚ್ಚುತ್ತಿದ್ದು, ಕಾಲಕ್ರಮೇಣ ಇದನ್ನು ತಡೆಯುವುದು ಅಸಾಧ್ಯ ಎಂಬ ವಾತಾವರಣ ಸೃಷ್ಟಿಯಾಗಿದೆ. ಬಲಪಂಥೀಯ ರಾಷ್ಟ್ರೀಯವಾದ ಇಂದು ಕಲಾತ್ಮಕ ಸ್ವಾತಂತ್ರ್ಯವನ್ನು ನಿಯಂತ್ರಿಸುತ್ತಿದೆ.
ಕೇಸರಿ ರಾಜಕೀಯ ಪ್ರಬಲವಾಗುತ್ತಿರುವುದರಿಂದ ಇಂಥ ಶಕ್ತಿಗಳ ರೆಕ್ಕೆ ಬಲಿಯುತ್ತಿದೆ. ಚಿತ್ರ ನಿರ್ಮಾಪಕರು ಇಂಥ ಗುಂಪುಗಳ ದಾಂಧಲೆ ತೀವ್ರವಾಗುತ್ತಿರುವುದನ್ನು ಮನಗಂಡಿದ್ದಾರೆ. ಮೌಲ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿರಬೇಕಾದ ರಾಜಕೀಯ ವ್ಯವಸ್ಥೆ, ಮೂಕಪ್ರೇಕ್ಷಕನಾಗುತ್ತಿದೆ. ಈ ಕೇಸರಿ ಸಿದ್ಧಾಂತದಲ್ಲಿ ಇತಿಹಾಸದ ವೈವಿಧ್ಯಮಯ ಅಭಿವ್ಯಕ್ತಿಗೆ ಅವಕಾಶ ಇಲ್ಲ; ಕಲಾವಿದರ ಸೃಜನಾತ್ಮಕ ಸ್ವಾತಂತ್ರ್ಯಕ್ಕೂ ಸ್ಥಾನ ಇಲ್ಲ. ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಪದೇ ಪದೇ ದೇಶ ಸೋಲುತ್ತಿದೆ.