ಪಿಣರಾಯಿ ಭೇಟಿ ವಿರೋಧಿಸುವ ಮೂಲಕ ನಾರಾಯಣ ಗುರುಗಳಿಗೆ ಅಗೌರವ
ಕಲ್ಲು ತೂರಲು ಹೊರಟವರಿಗೆ ಒಪ್ಪಿಗೆ ಇದೆ ಎಂದಾದರೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ರೀತಿಯಲ್ಲಿಯೇ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕಕ್ಕೆ ಅವರು ಒತ್ತಾಯಿಸಲಿ. ಅವರು ನಾರಾಯಣ ಗುರುಗಳ ಸಿದ್ಧಾಂತವನ್ನು ಒಪ್ಪದೆ ಇದ್ದರೆ, ತಮ್ಮ ಕೈಗೆ ಕೊಟ್ಟ ಕಲ್ಲುಗಳನ್ನು ಅವರ ಕೈಗೆ ವಾಪಸು ಕೊಟ್ಟು ಹೂವು ಹಿಡಿದುಕೊಂಡು ಬಂದು ನಾರಾಯಣ ಗುರು ಅನುಯಾಯಿಯಾಗಿರುವ ಪಿಣರಾಯಿ ವಿಜಯನ್ ಅವರನ್ನು ಸ್ವಾಗತಿಸಲು ಸಾಲಲ್ಲಿ ನಿಲ್ಲಿ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಯನ್ನು ವಿರೋಧಿಸಿ ಬಂದ್‌ಗೆ ಕರೆಕೊಟ್ಟಿರುವುದು ನಾರಾಯಣ ಗುರುಗಳ ಚಿಂತನೆಗಳಿಗೆ ವ್ಯಕ್ತಪಡಿಸಿರುವ ಅಗೌರವ ಎಂದೇ ನಾನು ನಂಬಿದ್ದೇನೆ.
ಬಸವಣ್ಣ, ಬಾಬಾಸಾಹೇಬ್ ಅಂಬೇಡ್ಕರ್, ನಾರಾಯಣ ಗುರು ಮೊದಲಾದ ಸಮಾಜ ಸುಧಾರಕರ ಸೈದ್ಧಾಂತಿಕ ಅನುಯಾಯಿಗಳೆನಿಸಿಕೊಂಡ ಯಾರೂ ಕೂಡಾ ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಯಾವುದೇ ಪಕ್ಷದ ಅನುಯಾಯಿಗಳಾಗಲು ಸಾಧ್ಯವೇ ಇಲ್ಲ ಎಂದು ನನ್ನ ನಂಬಿಕೆ. ಇಷ್ಟು ಮಾತ್ರವಲ್ಲ ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸುವ ಪಕ್ಷಗಳ ಜತೆ ನಿರ್ಣಾಯಕ ಸಂದರ್ಭಗಳಲ್ಲಿ ಕೈಜೋಡಿಸುವುದು ಕರ್ತವ್ಯವೂ ಕೂಡಾ ಹೌದು.
ಈ ಹಿನ್ನೆಲೆಯಲ್ಲಿ ಹಿಂದೆ ಜಾತಿ ಬಗ್ಗೆ ಒಂದಷ್ಟು ಗೊಂದಲ ವಿಟ್ಟುಕೊಂಡಿದ್ದರೂ ಈಗ ಅದರಿಂದ ಹೊರಬಂದು ಸ್ಪಷ್ಟತೆಯನ್ನು ಪಡೆದುಕೊಳ್ಳುತ್ತಿರುವ ಮತ್ತು ವರ್ಣಾಶ್ರಮ ವ್ಯವಸ್ಥೆಗೆ ವಿರುದ್ಧವಾಗಿರುವ ಮಾರ್ಕ್ಸ್ ವಾದಿಗಳಿಗೆ ನನ್ನ ಬೆಂಬಲ ಇದೆ.
ಈ ಕಾರಣಕ್ಕಾಗಿಯೇ ಪಿಣರಾಯಿ ವಿಜಯನ್ ಮಂಗಳೂರು ಭೇಟಿಯನ್ನು ವಿರೋಧಿಸುತ್ತಿರುವವರ ವಿರುದ್ಧ ಕಾಂಗ್ರೆಸಿಗರು, ಕಮ್ಯುನಿಸ್ಟರು, ಅಂಬೇಡ್ಕರ್ ವಾದಿಗಳು, ಸಮಾಜವಾದಿಗಳು ತಮ್ಮೆಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಒಂದೇ ದನಿಯಲ್ಲಿ ಮಾತನಾಡಬೇಕಾಗಿದೆ.
ಪಿಣರಾಯಿ ವಿಜಯನ್ ಮಂಗಳೂರು ಭೇಟಿಯನ್ನು ಬೆಂಬಲಿಸಲು ಅನೇಕ ಕಾರಣಗಳಿವೆ. ಕೇರಳದ ಕಮ್ಯುನಿಸ್ಟ್ ಚಳವಳಿ ನಾರಾಯಣ ಗುರು ಚಳವಳಿಯ ವಿಸ್ತರಣೆಯೆಂದೇ ನಾನು ನಂಬಿದವನು. ಅದೇ ರೀತಿ ಅಲ್ಲಿನ ಕಾಂಗ್ರೆಸ್ ಪಕ್ಷ ಕೂಡಾ ನಾರಾಯಣ ಗುರು ಸಿದ್ಧಾಂತಗಳನ್ನು ತಮ್ಮ ಪಕ್ಷದ ಸಿದ್ಧಾಂತದ ಜತೆ ಮೇಳೈಸಿಕೊಂಡು ರಾಜಕೀಯ ಮಾಡುತ್ತಾ ಬಂದಿರುವುದು ಕೂಡಾ ನಿಜ. ಇದಕ್ಕೆ ಬೇಕಾದ ಪುರಾವೆಗಳನ್ನು ನೀಡುವುದು ಅಸಾಧ್ಯವೇನಲ್ಲ.
ನಾರಾಯಣ ಗುರು ಚಳವಳಿ ಮೂಲಭೂತವಾಗಿ ಪ್ರಾರಂಭವಾಗಿದ್ದು ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಎನ್ನುವುದು ನಮಗೆಲ್ಲ ತಿಳಿದಿರುವ ಸಂಗತಿ. ಕೊನೆಯ ದಿನಗಳಲ್ಲಿ ತಮ್ಮ ಚಳವಳಿ ರಾಜಕೀಯದ ಮಾರ್ಗ ಹಿಡಿದು ಅಡ್ಡಾದಿಡ್ಡಿಯಾಗಿ ಸಾಗುತ್ತಿರುವುದನ್ನು ಕಂಡಾಗ ಗುರುಗಳು ನೊಂದುಕೊಂಡದ್ದೂ ಇದೆ.
ಆದರೆ ನಾರಾಯಣ ಗುರು ಚಳವಳಿಯ ಸೇನಾನಿಗಳಲ್ಲಿ ಗುರುಗಳ ಅತ್ಯಂತ ಪ್ರೀತಿಯ ಶಿಷ್ಯ ಸಹೋದರ ಅಯ್ಯಪ್ಪನ್ ಮತ್ತು ದಾಮೋದರನ್, ಸುಕುಮಾರನ್ ಮೊದಲಾದ ಮಾರ್ಕ್ಸ್‌ವಾದಿಗಳು ಮತ್ತು ಸಿ.ಕೇಶವನ್, ಟಿ.ಕೆ.ಮಾಧವನ್ ಮತ್ತು ಆರ್.ಶಂಕರ್ ಮೊದಲಾದ ಕಾಂಗ್ರೆಸಿಗರಿದ್ದರು. ಆದರೆ ಆರೆಸ್ಸೆಸ್ ಸಿದ್ಧಾಂತದಿಂದ ಪ್ರೇರಿತರಾದ ಒಂದು ನರಪಿಳ್ಳೆ ಕೂಡಾ ಆ ಗುಂಪಲ್ಲಿ ಇರಲಿಲ್ಲ ಎನ್ನುವುದು ಗಮನಾರ್ಹ.
ಗುರುಗಳ ನಿಧನದ ನಂತರ ಅವರು ಮುನ್ನಡೆಸಿದ್ದ ಸಾಮಾಜಿಕ ಚಳವಳಿಯ ವಾರಸುದಾರಿಕೆ ಪಡೆಯಲು ಕೇರಳದಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ನಡುವೆ ಪ್ರಾರಂಭವಾದ ರಾಜಕೀಯ ಪೈಪೋಟಿಗೆ ಇತಿಹಾಸ ಸಾಕ್ಷಿಯಾಗಿದೆ. ಅದು ಈಗಲೂ ಮುಂದುವರಿದಿದೆ.
ವಿಪರ್ಯಾಸವೆಂದರೆ ನಾರಾಯಣ ಗುರು ಸ್ಥಾಪಿಸಿದ್ದ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ’ (ಎಸ್‌ಎನ್‌ಡಿಪಿ) ಚಳವಳಿಯಿಂದ ಜಾಗೃತರಾಗಿದ್ದ ಕೇರಳದ ತಳಸಮುದಾಯದ ಭೂಹೀನ ಕಾರ್ಮಿಕರು, ಗೇಣಿದಾರರು, ಶೇಂದಿ ತೆಗೆಯುವವರು, ಪ್ಲಾಂಟೇಷನ್ ಕಾರ್ಮಿಕರು, ಗೇರುಬೀಜ ಕಾರ್ಖಾನೆ ಕಾರ್ಮಿಕರು ಕಮ್ಯುನಿಸ್ಟ್ ಪಕ್ಷದ ಕಡೆ ಆಕರ್ಷಿತರಾಗಿದ್ದರು. ಇದಕ್ಕೆ ಮುಖ್ಯಕಾರಣ ಈ ಜನವರ್ಗವನ್ನು ಸಂಘಟಿಸುತ್ತಿದ್ದ ಎಡಪಂಥೀಯ ಕಾರ್ಮಿಕ ಸಂಘಟನೆಗಳು
ಇದೇ ವೇಳೆ ಕಮ್ಯುನಿಸ್ಟ್ ಪಕ್ಷದ ನಾಯಕತ್ವ ಮಾತ್ರ ಈಳವ, ಪುಲಯ, ಪರವರ ಕೈಗೆ ಬರಲಿಲ್ಲ, ಅದು ನಂಬೂದಿರಿ, ನಾಯರ್‌ಗಳ ಕೈಯಲ್ಲಿಯೇ ಭದ್ರವಾಗಿತ್ತು. ಈ ಕಾರಣದಿಂದಾಗಿಯೇ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದ ಕೆ.ಆರ್.ಗೌರಿ ಪಕ್ಷ ತ್ಯಜಿಸಬೇಕಾಯಿತು.
ಆದರೆ ಕಾಂಗ್ರೆಸ್ ಪಕ್ಷ ಈಳವರಿಗೆ ನಾಯಕತ್ವ ನೀಡಿದ ಕಾರಣದಿಂದಾಗಿ ಸಿ.ಕೇಶವನ್ ಎಂಬ ಈಳವ ನಾಯಕ ತಿರುವಾಂಕೂರು-ಕೊಚ್ಚಿನ್ ಸಂಸ್ಥಾನದ ಮೊದಲ ಮುಖ್ಯಮಂತ್ರಿ ಯಾದರು (1951-52). ಎಸ್‌ಎನ್‌ಡಿಪಿ ಸ್ಥಾಪಕರಲ್ಲೊಬ್ಬರಾದ ಪದ್ಮನಾಭ ಪಲ್ಪುಅವರ ಅನುಯಾಯಿಯಾಗಿದ್ದ ಸಿ.ಕೇಶವನ್ ಎಂತಹ ಪ್ರಗತಿಪರ ರಾಜಕೀಯ ನಾಯಕರೆಂದರೆ ಶಬರಿಮಲೆ ದೇವಸ್ಥಾನಕ್ಕೆ ಬೆಂಕಿ ಬಿದ್ದಿದ್ದಾಗ ‘‘ಈ ದೇವಸ್ಥಾನಗಳನ್ನು ಸುಟ್ಟುಹಾಕಿ ದರೆ ಮೂಢನಂಬಿಕೆಗಳು ನಾಶವಾಗುತ್ತವೆ’’ ಎಂದು ಹೇಳಿದ್ದರು. ಆ ಹೇಳಿಕೆ ನೀಡಿದ್ದಾಗ ಕೇಶವನ್ ತಿರುವಾಂಕೂರು-ಕೊಚ್ಚಿನ್ ಸಂಸ್ಥಾನದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. (ಇಂತಹ ಹೇಳಿಕೆಯನ್ನು ಇಂದಿನ ದಿನ ಯಾವುದಾದರೂ ನಾಯಕ ನೀಡಿದರೆ ಏನಾಗಬಹುದೆಂು ಊಹಿಸಿಕೊಳ್ಳಲು ಭಯವಾಗುತ್ತದೆ).
1962ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಮತ್ತೊಬ್ಬ ಈಳವ ನಾಯಕ ಆರ್.ಶಂಕರ್ ಎರಡು ವರ್ಷಗಳ ಕಾಲ (1962-64) ಕೇರಳದ ಮುಖ್ಯಮಂತ್ರಿಯಾದರು. ಅದರ ನಂತರ ಎಡ ಪಕ್ಷಗಳಿಂದ ಎಂಟು ಮಂದಿ ಮತ್ತು ಕಾಂಗ್ರೆಸ್ ಪಕ್ಷದಿಂದ ಹತ್ತು ಮಂದಿ ಮುಖ್ಯಮಂತ್ರಿಗಳಾದರೂ ಜನಸಂಖ್ಯೆಯಲ್ಲಿ ನಿರ್ಣಾಯಕರಾಗಿರುವ ಈಳವರಲ್ಲಿ ಯಾರೂ ಮುಖ್ಯಮಂತ್ರಿಯಾಗಿರಲಿಲ್ಲ.
ಅಷ್ಟು ಹೊತ್ತಿಗೆ ಕಮ್ಯುನಿಸ್ಟರು ಕೊನೆಗೂ ಜಾತಿ ಕುರುಡುತನದಿಂದ ಹೊರಬಂದು ಜಾತಿ ವಾಸ್ತವದ ನೆಲೆಗಟ್ಟಿನಲ್ಲಿ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪ್ರಾರಂಭ ಮಾಡಿದ್ದರು. ಈ ಬದಲಾವಣೆಯ ಗಾಳಿಯಿಂದಾಗಿಯೇ ಪಿಣರಾಯಿ ಗುರು ಅಚ್ಯುತಾನಂದನ್ 2006ರಲ್ಲಿ ಮುಖ್ಯಮಂತ್ರಿಯಾದರು. ಈಗ ಪಿಣರಾಯಿ ಅವರೇ ಮುಖ್ಯಮಂತ್ರಿ ಗಾದಿಗೇರಿದ್ದಾರೆ.
ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಮೇಲೆ ಕಲ್ಲು ಎಸೆಯಲು ಹೊರಟವರು ಮೊದಲು ತಮ್ಮ ಕೈಗೆ ಕಲ್ಲು ಕೊಟ್ಟವರನ್ನು ‘’ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿದ ನಾರಾಯಣ ಗುರುಗಳ ತತ್ವಕ್ಕೆ ಪಿಣರಾಯಿ ವಿಜಯನ್ ಮತ್ತು ಅವರ ಪಕ್ಷಕ್ಕೆ ಒಪ್ಪಿಗೆ ಇದೆ. ನಿಮಗೆ ಮತ್ತು ನೀವು ಒಪ್ಪಿಕೊಂಡಿರುವ ಪಕ್ಷಕ್ಕೆ ಒಪ್ಪಿಗೆ ಇದೆಯೇ?’’ ಎಂಬ ಒಂದೇ ಒಂದು ಪ್ರಶ್ನೆ ಕೇಳಬೇಕಾಗಿದೆ.
ಕಲ್ಲು ತೂರಲು ಹೊರಟವರಿಗೆ ಒಪ್ಪಿಗೆ ಇದೆ ಎಂದಾದರೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ರೀತಿಯಲ್ಲಿಯೇ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರ ನೇಮಕಕ್ಕೆ ಅವರು ಒತ್ತಾಯಿಸಲಿ. ಅವರು ನಾರಾಯಣ ಗುರುಗಳ ಸಿದ್ಧಾಂತವನ್ನು ಒಪ್ಪದೆ ಇದ್ದರೆ, ತಮ್ಮ ಕೈಗೆ ಕೊಟ್ಟ ಕಲ್ಲುಗಳನ್ನು ಅವರ ಕೈಗೆ ವಾಪಸು ಕೊಟ್ಟು ಹೂವು ಹಿಡಿದುಕೊಂಡು ಬಂದು ನಾರಾಯಣ ಗುರು ಅನುಯಾಯಿಯಾಗಿರುವ ಪಿಣರಾಯಿ ವಿಜಯನ್ ಅವರನ್ನು ಸ್ವಾಗತಿಸಲು ಸಾಲಲ್ಲಿ ನಿಲ್ಲಿ.
ಕೊನೆಯಲ್ಲಿ ನನ್ನ ಹಿತೈಷಿಗಳಾದ ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ ಬಿ.ಜನಾರ್ದನ ಪೂಜಾರಿ ಅವರಲ್ಲಿ ಸವಿನಯ ವಿನಂತಿ. ನೀವು ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಶೃಂಗೇರಿ ಮಠದ ಸ್ಥಾಮಿಗಳನ್ನು ಕರೆತಂದು ಉದ್ಘಾಟನೆ ಮಾಡಿಸಿದಿರಿ, ಕಳೆದ ಚುನಾವಣೆಯ ಕಾಲದಲ್ಲಿ ನಾರಾಯಣ ಗುರುಗಳ ಚಿಂತನೆಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಎಂಬ ಕೋಮುವಾದಿ ನಾಯಕನನ್ನು ಕುದ್ರೋಳಿಗೆ ಕರೆದುಕೊಂಡು ಬಂದು ಅಪ್ಪಿಕೊಂಡಿರಿ.
ಆದರೆ ಪ್ರೀತಿಯ ಪೂಜಾರಿಯವರೇ, ನಿಜವಾಗಿ ಕುದ್ರೋಳಿಗೆ ಬರಮಾಡಿಕೊಳ್ಳಬೇಕಾಗಿರುವುದು ವರ್ಣಾಶ್ರಮ ವ್ಯವಸ್ಥೆಯ ಪ್ರತಿಪಾದಕರಾದ ಶೃಂಗೇರಿ ಮಠದ ಸ್ವಾಮಿಗಳು ಇಲ್ಲವೇ ಪ್ರಭಾಕರ ಭಟ್ಟರನ್ನಲ್ಲ, ನಾರಾಯಣ ಗುರುಗಳ ತತ್ವಗಳನ್ನು ರಾಜಕೀಯ ಅಧಿಕಾರದ ಮೂಲಕ ಅನುಷ್ಠಾನಕ್ಕೆ ತಂದು ಕೇರಳವನ್ನು ಸಾಕ್ಷರತೆಯಲ್ಲಿ, ಉದ್ಯಮಶೀಲತೆಯಲ್ಲಿ, ಪ್ರಗತಿಪರ ಧೋರಣೆಯಲ್ಲಿ ಮುಂಚೂಣಿ ಸ್ಥಾನದಲ್ಲಿ ತಂದು ನಿಲ್ಲಿಸಿರುವ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು. ಸಾಧ್ಯವಾದರೆ ದಯವಿಟ್ಟು ಆ ಕೆಲಸವನ್ನು ಮಾಡಿ. ಅದನ್ನು ಮಾಡಿದರೆ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾನೇ ಬಂದು ನಿಮ್ಮ ಪಾಮುಟ್ಟಿ ನಮಸ್ಕಾರ ಮಾಡುತ್ತೇನೆ.
ಈ ಮೂಲಕ ಮಂಗಳೂರಿಗೆ ಆಗಮಿಸುತ್ತಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನನ್ನದೊಂದು ಸಣ್ಣ ಸ್ವಾಗತ.