ವಾಟ್ಸ್ಆಪ್ ಹೊಸ ಸ್ಟೇಟಸ್ ಫೀಚರ್ ಈಗ ಆಕರ್ಷಕ
ನೀವು ಫೋಟೋ ಅಥವಾ ವೀಡಿಯೋ ಸ್ಟೇಟಸ್ ಅಪ್ ಲೋಡ್ ಮಾಡಬಹುದು
ನ್ಯೂಯಾರ್ಕ್, ಫೆ.24: ವಾಟ್ಸ್ಆಪ್ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಗಳಿಗೆ ಕಾಣುವಂತೆ ಫೋಟೋಗಳು ಹಾಗೂ ವೀಡಿಯೋಗಳನ್ನು ತಮ್ಮ ಸ್ಟೇಟಸ್‌ನಲ್ಲೇ ಅಪ್ ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಹೊಸ ವಾಟ್ಸ್ಆಪ್ ಫೀಚರ್ ಇದೀಗ ಎಲ್ಲಾ ವಾಟ್ಸ್ಆಪ್ ಬಳಕೆದಾರರಿಗೆ ಲಭ್ಯವಿದೆ. ಈ ಫೀಚರ್ ಆಂಡ್ರಾಯ್ಡ್, ಐಒಎಸ್ ಹಾಗೂ ವಿಂಡೋಸ್ ಸ್ಮಾರ್ಟ್ ಫೋನುಗಳಲ್ಲಿ ಲಭ್ಯವಿದೆ. ಈ ಫೀಚರನ್ನು ಯಾರು ಕೂಡ ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಪ್ ಡೇಟ್ ಮಾಡಬೇಕಿಲ್ಲ, ಅದು ಆ್ಯಪ್ ನಲ್ಲೇ ಲಭ್ಯವಿದೆ.
ಐಒಎಸ್ ಗಳಲ್ಲಿ ಸ್ಟೇಟಸ್ ಸ್ಕ್ರೀನಿನ ಎಡ ತುದಿಯಲ್ಲಿ ತನ್ನದೇ ಆದ ಟ್ಯಾಬ್ ಇದೆ. ಅದರ ನಂತರ ಕಾಲ್ಸ್, ನಂತರ ನಡುವೆ ಕ್ಯಾಮರಾ, ನಂತರ ಚ್ಯಾಟ್ ಹಾಗೂ ಸೆಟ್ಟಿಂಗ್ ಗಳಿವೆ. ಆಂಡ್ರಾಯ್ಡ್ ಫೋನುಗಳಲ್ಲಿ ಕ್ಯಾಮೆರಾ, ಚ್ಯಾಟ್ಸ್ ಸ್ಟೇಟಸ್ ನಂತರ ಕಾಲ್- ಈ ಕ್ರಮಾಂಕದಲ್ಲಿ ಟ್ಯಾಬ್ ಗಳಿರುತ್ತವೆ.
ಕೇವಲ ಟೆಕ್ಸ್ಟ್ ಗಳನ್ನು ತಮ್ಮ ಸ್ಟೇಟಸ್ ನಲ್ಲಿ ಹಾಕುವುದಕ್ಕಿಂತ ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಗಳಿಗೆ ತಮಗಿಷ್ಟವಾದ ಫೋಟೋ ಅಥವಾ ವೀಡಿಯೊ ತೋರಿಸಬಹುದು. ಆದರೆ ಇವುಗಳು ಕೇವಲ 24 ಗಂಟೆಗಳ ತನಕ ಮಾತ್ರ ಲಭ್ಯವಿದ್ದು ನಂತರ ಕಾಣಿಸುವುದಿಲ್ಲ.
ಈ ಫೀಚರನ್ನು ಉಪಯೋಗಿಸುವ ಬಗೆ ಹೀಗಿದೆ. ಮೊದಲು ಸ್ಟೇಟಸ್ ಟ್ಯಾಬ್ ಗೆ ಹೋಗಿ, ಅಲ್ಲಿ ಪ್ಲಸ್ ಚಿಹ್ನೆಯೊಂದಿಗಿರುವ ತುಂಡು ವೃತ್ತಕ್ಕೆ ಟ್ಯಾಪ್ ಮಾಡಿ, ಆಗ ಕ್ಯಾಮೆರಾ ತೆರೆಯುತ್ತದೆ ನಂತರ ಅದನ್ನು ಒತ್ತಿ ಹಿಡಿದು ವೀಡಿಯೊ ತೆಗೆಯಿರಿ. ಇದನ್ನು ವೀಡಿಯೊ ಆಗಿ ಇಲ್ಲವೇ ಜಿಐಎಫ್ ಆಗಿ ಎಡಿಟ್ ಮಾಡಬಹುದು. ಇಲ್ಲವೇ ಕೇವಲ ಫೋಟೋ ತೆಗೆದು ಅದನ್ನು ಸ್ಟೇಟಸ್ ಗೆ ಸೆಂಡ್ ಮಾಡಿ.
ನಿಮ್ಮ ಸ್ಟೇಟಸ್ ಅಪ್ ಡೇಟ್ ಯಾರು ನೋಡಬಹುದು ಹಾಗೂ ನೋಡಬಾರದೆಂದು ನೀವು ಕಂಟ್ರೋಲ್ ಮಾಡಬಹುದು. ಸ್ಕ್ರೀನಿನ ಮೇಲಿನ ಬಲ ತುದಿಯಲ್ಲಿ ಆಪ್ಶನ್ಸ್ ಇವೆ. ಅದರಲ್ಲಿ ಸ್ಟೇಟಸ್ ಅಪ್‌ಡೇಟ್ ಅನ್ನು ಯಾರ ಜತೆ ಶೇರ್ ಮಾಡಬೇಕು ಎಂಬುದರ ಬಗ್ಗೆ ಬಳಕೆದಾರರು ನಿರ್ಧರಿಸಬಹುದು.
ಒಬ್ಬರ ಸ್ಟೇಟಸ್ ಅಪ್ ಡೇಟ್ ಗೆ ರಿಪ್ಲೈ ಮಾಡುವ ಆಪ್ಶನ್ ಕೂಡ ಇದೆ. ನಿಮ್ಮ ಕಾಂಟ್ಯಾಕ್ಟ್ ಗಳು ಕಾಣಿಸುವಲ್ಲಿ ನೀಲಿ ವೃತ್ತಗಳಿದ್ದರೆ ಅವರ ಸ್ಟೇಟಸ್ ಅಪ್ ಡೇಟ್ ಇದೆಯೆಂದು ಅರ್ಥ.