ಎರಡು ಕಣ್ಣುಗಳು ಸಾಲದು: ಒಳಗಣ್ಣಿನಿಂದ ನೋಡಿದ ಸಿನೆಮಾ
ಈ ಹೊತ್ತಿನ ಹೊತ್ತಿಗೆ
ಒಂದು ಸಿನೆಮಾವನ್ನು ನಮ್ಮದಾಗಿಸಲು ಎರಡು ಕಣ್ಣು ಸಾಲದು. ಒಳ್ಳೆಯ ಸಿನೆಮಾಗಳು ನಾವು ಏನನ್ನು ನೋಡುತ್ತೇವೆಯೋ ಅದಷ್ಟನ್ನೇ ಹೇಳುವುದಿಲ್ಲ. ಅದಕ್ಕಾಗಿಯೇ ನಮ್ಮಾಳಗಿನ ಮೂರನೆಯ ಕಣ್ಣು ತೆರೆದುಕೊಂಡಾಗ, ಸಿನೆಮಾಕ್ಕೆ ಒಬ್ಬ ಒಳ್ಳೆಯ ವೀಕ್ಷಕ ದಕ್ಕುತ್ತಾನೆ. ವಿ. ಎನ್. ಲಕ್ಷ್ಮೀನಾರಾಯಣ ರಾವ್ ಅವರ ‘ಎರಡು ಕಣ್ಣು ಸಾಲದು’ ಕೃತಿ ಮೂಡಿ ಬಂದಿರುವುದು ಈ ಹಿನ್ನೆಲೆಯಲ್ಲಿ. ಸಿನೆಮಾ ರಸಗ್ರಹಣ ಸಂದರ್ಭದಲ್ಲಿ ವೀಕ್ಷಕನ ಹೊಣೆಗಾರಿಕೆಯನ್ನು ನೆನಪಿಸಿಕೊಡುವ ಪುಟ್ಟ ಕೃತಿ ಇದು. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಸಿನೆಮಾ ರಸಗ್ರಹಣದ ಕುರಿತು ಅರಿವು ಮೂಡಿಸುವ ಮೂರು ಬರಹಗಳಿವೆ ಮತ್ತು ಆ ಮೂಲಕ ಸಿನೆಮಾವನ್ನು ನೋಡಿ, ಕಟ್ಟಿಕೊಟ್ಟ ವಿಶ್ಲೇಷಣೆ, ವಿಮರ್ಶೆ ಎರಡನೆ ಭಾಗದಲ್ಲಿವೆ. ಮುನ್ನುಡಿಯಲ್ಲಿ ಹೇಳುವಂತೆ, ಮೊದಲ ಭಾಗದಲ್ಲಿರುವ ಮೂರು ಲೇಖನಗಳು ಒಂದು ಸೃಜನಶೀಲ ಮಾಧ್ಯಮದ ಆಳ ಅಗಲ ಮತ್ತು ಮಿತಿಯನ್ನು ವಿವರಿಸಲು ಪ್ರಯತ್ನಿಸುತ್ತದೆ. ಈ ಮಾಧ್ಯಮಕ್ಕಿರುವ ದೈತ್ಯ ಶಕ್ತಿಯನ್ನು ಹೇಳುತ್ತಲೇ ಸಂಯಮ ಮೀರಿದರೆ ಆಗಬಹುದಾದ ಅನಾಹುತ, ದುರಂತಗಳ ಬಗ್ಗೆ ಎಚ್ಚರಿಕೆಯನ್ನೂ ಈ ಭಾಗ ನೀಡುತ್ತದೆ.
‘ಸಿನೆಮಾ ಭಾಷೆ’, ‘ಎರಡು ಕಣ್ಣು ಸಾಲದು’, ‘ಸಿನೆಮಾಂತರಂಗ’ ಮೊದಲ ಭಾಗದಲ್ಲಿರುವ ಈ ಮೂರು ಲೇಖನಗಳು ನಮಗೆ ಸಿನೆಮಾವನ್ನು ನೋಡುವ ಕ್ರಮವನ್ನು ಕಲಿಸಿಕೊಡುತ್ತದೆ. ಸಿನೆಮಾ ವ್ಯವಹಾರವಾದಾಗ, ಹಣ ಮಾಡುವ ದಂಧೆಯಾದಾಗ, ತನ್ನ ಸೃಜಶೀಲ ಸೂಕ್ಷ್ಮತೆಗಳನ್ನು ಬದಿಗಿಟ್ಟು ತಾಂತ್ರಿಕತೆಯ ವೈಭವೀಕರಣವಾದಾಗ ಆ ಮಾಧ್ಯಮ ಹೇಗೆ ಸಮಾಜಕ್ಕೆ ಸಮಸ್ಯೆಯಾಗಬಲ್ಲದು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ. ‘‘ಸಿನೆಮಾದ ಅರ್ಥ, ಸೂಕ್ಷ್ಮಗಳ ಬಗ್ಗೆ ಏನೂ ಅರಿಯದ ಸಿನೆಮಾ ತಂತ್ರಜ್ಞರು ಅಧಿಕಾರಯುತವಾಗಿ ಕೊಡುವ ತೀರ್ಮಾನಗಳು, ಅನೇಕ ವೇಳೆ ಸಿನೆಮಾ ಮತ್ತು ಸಹೃದಯರ ದಾರಿತಪ್ಪಿಸುತ್ತವೆ’’ ಎಂದು ತಮ್ಮ ಬರಹದಲ್ಲಿ ಅಭಿಪ್ರಾಯಪಡುತ್ತಾರೆ. ಇಲ್ಲಿ ತಮ್ಮ ಮಾತುಗಳಿಗೆ ಸಮರ್ಥನೆಯಾಗಿ ತಾವು ನೋಡಿದ ಚಿತ್ರಗಳನ್ನು ಉದಾಹರಣೆಯಾಗಿ ನೀಡುತ್ತಾ ವಿವರಿಸುವುದರಿಂದ, ಬರಹ ನಮ್ಮನ್ನು ಆತ್ಮೀಯವಾಗಿ ಒಳಗೊಳ್ಳತೊಡಗುತ್ತದೆ ಮತ್ತು ನಾವು ಈ ಹಿಂದೆ ನೋಡಿದ ಸಿನೆಮಾವನ್ನು ಮತ್ತೊಮ್ಮೆ ಹೊಸದಾಗಿ ನೋಡಿ ಗ್ರಹಿಸುವುದಕ್ಕೆ ಒತ್ತಾಯವನ್ನು ಮಾಡುತ್ತದೆ. ಚಿಂತನ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿ ಒಟ್ಟು ಪುಟಗಳು 152. ಕೃತಿಯ ಮುಖಬೆಲೆ 110 ರೂಪಾಯಿ. ಆಸಕ್ತರು 99022 49150 ಸಂಖ್ಯೆಯನ್ನು ಸಂಪರ್ಕಿಸಬಹುದು.