ರಾಜ್ಯದಲ್ಲಿ ಆಹಾರ ಉತ್ಪಾದನೆ ಭಾರೀ ಕುಸಿತ
ಜಾನುವಾರು ಸಾಕಣೆಯ ಮೇಲೆ ದುಷ್ಪರಿಣಾಮ
ಬೆಂಗಳೂರು, ಫೆ.26: ರಾಜ್ಯದಲ್ಲಿ 40 ಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದ್ದು, ಇದರಿಂದ ಜಾನುವಾರುಗಳ ಮೇವಿನ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಬೇಸಿಗೆಯಲ್ಲಿ ಜಾನುವಾರುಗಳ ರಕ್ಷಣೆ ರೈತಾಪಿ ವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ. ಈಗ ಪರ್ಯಾಯ ಮಾರ್ಗಗಳ ಮೂಲಕ ಜಾನುವಾರುಗಳ ನಿರ್ವಹಣೆಯೊಂದೇ ಏಕೈಕ ಮಾರ್ಗ ಎನ್ನುತ್ತಾರೆ ತಜ್ಞರು.
ಕಳೆದ ನಾಲ್ಕು ದಶಕಗಳಲ್ಲೇ ಕಂಡರಿಯದ ದಯನೀಯ ಪರಿಸ್ಥಿತಿ ಎದುರಾಗಿದ್ದು, ಭತ್ತ, ರಾಗಿ, ಜೋಳ, ಹುರುಳಿ ಮತ್ತಿತರ ಬೆಳೆಗಳ ಉತ್ಪಾದನೆ ಕುಸಿತವಾಗಿದೆ. ಇದರಿಂದ ಒಣ ಹುಲ್ಲು ಕಡಿಮೆಯಾಗಿದೆ. ಹೊರ ರಾಜ್ಯಗಳಿಂದಲೂ ಮೇವು ದೊರೆಯದಂತಹ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ಜಾನುವಾರುಗಳ ಸಂರಕ್ಷಣೆಗೆ ಪರ್ಯಾಯ ಮಾರ್ಗದ ಅಗತ್ಯವಿದೆ. ವಿಜ್ಞಾನಿಗಳ ಮಾರ್ಗದರ್ಶನದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳ ರಕ್ಷಣೆಗೆ ವಿಶೇಷ ಗಮನಹರಿಸಬೇಕು ಎಂದು ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ತಜ್ಞರು ಸಲಹೆ ನೀಡಿದ್ದಾರೆ.
ದೇಶದ ಹಲವೆಡೆ ಉತ್ತಮ ಮಳೆಯಾಗಿದೆ. ಈ ಬಾರಿ 225 ದಶಲಕ್ಷ ಟನ್ ಆಹಾರ ಧಾನ್ಯ ಬೆಳೆಯುವ ಗುರಿ ಹೊಂದಲಾಗಿತ್ತಾದರೂ ಗುರಿ ಮೀರಿ 270 ದಶಲಕ್ಷ ಟನ್ ಉತ್ಪಾದನೆಯಾಗುವ ಅಂದಾಜಿದೆ. ಬೇರೆ ರಾಜ್ಯಗಳಲ್ಲಿ ಈ ಬಾರಿ ಮೇವಿಗೆ ಅಷ್ಟಾಗಿ ತೊಂದರೆ ಎದುರಾಗಿಲ್ಲ. ಆದರೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇದೆ. ಹೀಗಾಗಿ ಜಾನುವಾರುಗಳನ್ನು ಎರಡರಿಂದ ಮೂರು ತಿಂಗಳ ಕಾಲ ನಿರ್ವಹಣೆ ಮಾಡಬೇಕಾಗಿದೆ.
ಹೀಗಾಗಿ ಜಾನುವಾರುಗಳನ್ನು ಉತ್ಪಾದಕ, ಅನುತ್ಪಾದಕ ಎಂದು ವಿಂಗಡಿಸಿ ಮಿತ ಮತ್ತು ಪಥ್ಯಾಹಾರ ನೀಡುವ ಮೂಲಕ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳಬೇಕು. ಕೃಷಿಕರಿಗೆ ಜೀವಾಳವಾಗಿರುವ ಪಶು ಸಂಪತ್ತನ್ನು, ಅದರಲ್ಲೂ ಪ್ರಮುಖವಾಗಿ ಕರು ಹಾಕಿರುವ, ಹಾಲು ಕರೆಯುವ ಹಸುಗಳನ್ನು ನಿರ್ವಹಣೆ ಮಾಡುವ ಅಗತ್ಯವಿದೆ. ಅನುತ್ಪಾದಕ ಜಾನುವಾರುಗಳ ಬಗ್ಗೆ ಅಷ್ಟಾಗಿ ಗಮನಹರಿಸುವ ಅಗತ್ಯವಿಲ್ಲ. ಅವೆಲ್ಲಾ ಹೇಗೋ ಬದುಕಿಕೊಳ್ಳುತ್ತವೆ ಎನ್ನುತ್ತಾರೆ ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ತಜ್ಞರು.
ಗರಿಷ್ಠ 300 ಕೆ.ಜಿ. ತೂಕವಿರುವ ಕರು ಹಾಕಿದ ಹಸು ದಿನಕ್ಕೆ 10 ಲೀಟರ್ ಹಾಲು ಕೊಡುತ್ತದೆ. ಇಂತಹ ಹಸುವಿಗೆ ದಿನಕ್ಕೆ ಕನಿಷ್ಠ 7.5 ಕೆ.ಜಿ.ಯಷ್ಟು ಆಹಾರ ನೀಡಬೇಕಾಗುತ್ತದೆ. ಕಡಿಮೆ ಆಹಾರ ನೀಡಿದರೆ ಹಾಲಿನ ಉತ್ಪಾದನೆ ಕುಸಿತವಾಗಬಹುದು. ಆದರೆ ನಿರ್ವಹಣೆ ಮಾಡಲು ತೊಂದರೆ ಇಲ್ಲ.
ಜಾನುವಾರುಗಳನ್ನು ಸಾಕಲು ಅಜೋಲ ಎನ್ನುವ ಆಹಾರ ಬೇಸಿಗೆಯಲ್ಲಿ ಸೂಕ್ತವಾಗಿದೆ. ನೀರಿನ ಮೇಲೆ ಮೂರು ವಾರಗಳಲ್ಲಿ ಬೆಳೆಯುವ ಈ ಹಸಿರು ಹುಲ್ಲು ಹೆಚ್ಚು ಪೌಷ್ಠಿಕತೆ ಹೊಂದಿದ್ದು, ಪುಷ್ಠಿ ನೀಡುತ್ತದೆ. ಸಣ್ಣ ಸಣ್ಣ ತೊಟ್ಟಿಗಳಲ್ಲಿ ಬೆಳೆದು ಇದನ್ನು ಜಾನುವಾರುಗಳಿಗೆ ನೀಡಬಹುದಾಗಿದೆ.
ಅಡಿಕೆ ಹಾಳೆಯನ್ನು ಕೊಚ್ಚಿ, ಬೂಸದ ರೂಪದಲ್ಲಿ ಸಿದ್ಧಪಡಿಸಿ ಜಾನುವಾರುಗಳಿಗೆ ನೀಡಬಹುದಾಗಿದೆ. ಪುಡಿ ಮಾಡಿದ ಅಡಿಕೆ ಹಾಳೆಯನ್ನು ಸಮತೋಲನ ಆಹಾರದ ಜತೆಗೆ ಮಿಶ್ರಣ ಮಾಡಿ ಸಂಪೂರ್ಣ ಆಹಾರದ ರೂಪದಲ್ಲಿ ನೀಡಬಹುದಾಗಿದೆ. ಜಾನುವಾರುಗಳಿಗೆ ಒಣ ಮೇವಾಗಿ ಅಡಿಕೆ ಹಾಳೆಯನ್ನು ನೀಡಬಹುದಾಗಿದೆ. ಇದರ ಜತೆಗೆ ಸೋಗೆ ನಾರು ಬಳಕೆಯಿಂದ ಹೆಚ್ಚಿನ ಪೌಷ್ಠಿಕತೆ ದೊರೆಯುತ್ತದೆ.
ಒಣ ಮೇವಾದ ಭತ್ತ, ರಾಗಿ, ಜೋಳ, ಗೋಧಿ ಹುಲ್ಲು ಗಾತ್ರದಲ್ಲಿ ಹೆಚ್ಚಿರುವುದರಿಂದ ದೂರದ ಪ್ರದೇಶಗಳಿಗೆ ಸಾಗಾಣಿಕೆ ಕಷ್ಟಕರವಾಗಿದ್ದು, ವೆಚ್ಚ ಕೂಡ ಅಧಿಕವಾಗಿದೆ. ಹೀಗಾಗಿ ಒಣಹುಲ್ಲನ್ನು ಒಂದೆರಡು ಇಂಚು ತುಂಡು ಮಾಡಿ ಅಚ್ಚು ಯಂತ್ರಗಳ ನೆರವಿನಿಂದ ಒಣ ಹುಲ್ಲಿನ ಅಚ್ಚು ತಯಾರಿಸುವ ತಂತ್ರಜ್ಞಾನ ಸಿದ್ಧವಾಗಿದೆ. ಈ ವಿಧಾನದಿಂದ ಹುಲ್ಲಿನ ಗಾತ್ರವನ್ನು 6-7 ಪಟ್ಟು ಕಡಿಮೆಗೊಳಿಸಿ ಅಚ್ಚಿನ ರೂಪದಲ್ಲಿ ಪ್ಯಾಕೇಜಿಂಗ್ ಸಾಮಾಗ್ರಿಯಿಂದ ಸುತ್ತಿ ಸಂಗ್ರಹಿಸಿಡಬಹುದು. ಈ ವಿಧಾನದಲ್ಲಿ ಒಣಹುಲ್ಲಿನ ಜೊತೆಗೆ, ಆಹಾರ ಮಿಶ್ರಣ, ಖನಿಜ ಮಿಶ್ರಣ, ಜಂತು ನಿವಾರಕ ಔಷಧಿಗಳು ಹಾಗೂ ಯಾವುದೇ ಪೂರಕ ಅಂಶಗಳನ್ನು ಮಿಶ್ರ ಮಾಡಿ, ಅಚ್ಚು ತಯಾರಿಸಬಹುದು. ಈ ತಂತ್ರಜ್ಞಾನದಿಂದ ಒಣಮೇವನ್ನು ಸಾಗಿಸುವ ಸಾಗಣೆ ವೆಚ್ಚ ಕಡಿಮೆಯಾಗಲಿದೆ. ನಿರ್ದಿಷ್ಟವಾಗಿ ಬರಗಾಲದ ಈ ತಂತ್ರಜ್ಞಾನ ವರದಾನವಾಗಿದೆ. ಇದರ ಜತೆಗೆ ಅನಾನಸ್ ಎಲೆ, ಹಣ್ಣಿನ ಸಿಪ್ಪೆ ಮತ್ತಿತರ ವಸ್ತುಗಳನ್ನು ಜಾನುವಾರುಗಳಿಗೆ ನೀಡಬಹುದಾಗಿದೆ. ಇವೆಲ್ಲವೂ ಹೆಚ್ಚು ಪೌಷ್ಠಿತಕತೆ ಹೊಂದಿದೆ ಎನ್ನುತ್ತಾರೆ ತಜ್ಞರು.
ಸಮಗ್ರ ಪಶು ಆಹಾರ ಉತ್ಪಾದನೆ ತಂತ್ರಜ್ಞಾನವನ್ನು ಕಳೆದ 2005ರಲ್ಲೇ ಕರ್ನಾಟಕ ಹಾಲು ಮಹಾ ಮಂಡಳಿಗೆ ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ ಹಸ್ತಾಂತರಿಸಿದ್ದು, ನಿರಂತರವಾಗಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ ಎನ್ನುತ್ತಾರೆ ವಿಜ್ಞಾನಿಗಳು.
ಬೆಳ್ಳುಳ್ಳಿ ಚೂರು ಅಥವಾ ಪುಡಿಯನ್ನು ಕೋಳಿಗಳ ಆಹಾರದಲ್ಲಿ ಶೇ.1ರಷ್ಟು ಮಿಶ್ರಣ ಮಾಡಿ ತಿನ್ನಿಸುವುದರಿಂದ ಮೊಟ್ಟೆಯ ಉತ್ಪಾದನೆಯಲ್ಲಿ ಶೇ 1-2ರಷ್ಟು ಹೆಚ್ಚಳವಾಗುತ್ತದೆ. ವಿಶೇಷವೆಂದರೆ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಲಿದೆ. ಬೆಳ್ಳುಳ್ಳಿಯ ಬಳಕೆಯಿಂದ ಆರೋಗ್ಯ ಕೂಡ ಉತ್ತಮವಾಗಲಿದ್ದು, ಕೋಳಿಗಳಲ್ಲಿ ಒತ್ತಡದ ಬೇನೆಯ ನಿರ್ವಹಣೆಗೆ ಅನೂಕೂಲಕರ ಹಾಗೂ ಮೊಟ್ಟೆ ಇಡುವ ಅವಧಿ ಕೂಡ ಮಂದುವರಿಯುವ ಸಾಧ್ಯತೆ ಇದೆ ಎನ್ನುವ ಹೊಸ ಅವಿಷ್ಕಾರವನ್ನು ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ತಜ್ಞರು ಮಾಡಿದ್ದಾರೆ.
ಬೇಸಿಗೆಯಲ್ಲಿ ಜಾನುವಾರುಗಳ ರಕ್ಷಣೆಗೆ ಉಪ ಆಹಾರವಾಗಿ ಅಜೋಲ ಬೆಳೆಯುವುದು ಅತ್ಯಂತ ಸುಲಭ ಮಾರ್ಗವಾಗಿದೆ. 2-3 ವಾರಗಳಲ್ಲಿ ತೊಟ್ಟಿಯ ತುಂಬಾ ಅಜೋಲ್ಲಾದ ಬೆಳೆಯಲು ಅವಕಾಶವಿದೆ. ಪ್ರತಿದಿನವೂ ಅಜೋಲ್ಲಾದ ಕೊಯ್ಲು ಮಾಡಬಹುದು. ಅಜೋಲ್ಲಾವನ್ನು ಹಸಿಯಾಗಿ ಅಥವಾ ಒಣಗಿಸಿ ಪಶುಗಳಿಗೆ ತಿನ್ನಿಸಬಹುದು. ಅಜೋಲ್ಲಾದ ರುಚಿಗೆ ಒಗ್ಗಿ ಕೊಳ್ಳಲು ಜಾನುವಾರುಗಳಿಗೆ ಸ್ವಲ್ಪ ಕಾಲಾವಕಾಶ ಬೇಕು.
ಡಾ: ರಾಘವೇಂದ್ರ ಭಟ್ಟ, ನಿರ್ದೇಶಕರು, ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ.