ಹೃದಯದಿಂದ ಹೃದಯಕ್ಕೆ -ಒಂದು ಪಯಣ
ಈ ಹೊತ್ತಿನ ಹೊತ್ತಿಗೆ
ಎಸ್. ಆರ್. ಗೌತಮ್ ಅವರು ಬರೆದಿರುವ ‘‘ನಯಾಗರಕ್ಕೆ ಐನೂರು ಮೈಲಿ’’ ಕೃತಿಯ ಹೆಸರನ್ನು ನೋಡಿದಾಕ್ಷಣ ‘ಇದ್ಯಾವುದೋ ಇನ್ನೊಂದು ಅಮೆರಿಕ ಪ್ರವಾಸ ಕಥನ’ ಎಂದು ಬದಿಗಿಡುವ ಸಾಧ್ಯತೆಯೇ ಹೆಚ್ಚು. ಇದು ಪ್ರವಾಸ ಕಥನವೇನೋ ಹೌದು. ಆದರೆ, ಈ ಪ್ರವಾಸ ಕೇವಲ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಂಬಂಧಿಸಿದ ಪಯಣ ಮಾತ್ರವಲ್ಲ, ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಸಂಬಂಧಿಸಿದ್ದ್ದೂ ಹೌದು. ಒಬ್ಬ ತಂದೆ, ಹೃದಯಕಾಯಿಲೆಗೊಳಗಾಗಿರುವ ಪುಟ್ಟ ಮಗಳನ್ನು ಯಮನ ಬಾಯಿಯಿಂದ ಉಳಿಸುವ ಕತೆಯೂ ಹೌದು. 1981ರಲ್ಲಿ ಮೊದಲ ಮುದ್ರಣಗೊಂಡಿರುವ ಈ ಕೃತಿ ಒಟ್ಟು ನಾಲ್ಕು ಬಾರಿ ಪುನರ್ ಮುದ್ರಣಗೊಂಡಿದೆ. ‘ಹೃದಯದಿಂದ ಹೃದಯಕ್ಕೆ’ ಎಂಬ ಹೆಸರಿನಲ್ಲಿ ಪಠ್ಯ ಪುಸ್ತಕವಾಗಿಯೂ ಈ ಕೃತಿ ಬಳಕೆಯಲ್ಲಿದೆ. ಇದರಿಂದಲೇ, ಈ ಕೃತಿಯ ಮಹತ್ವವನ್ನು ನಾವು ಅರಿತುಕೊಳ್ಳಬಹುದು.
ಮನುಷ್ಯನಿಗೆ ಕಾಯಿಲೆ ಬಂದಾಗಷ್ಟೇ ತನ್ನ ದೇಹದ ಅವಯವಗಳ ಮಹತ್ವ ಗೊತ್ತಾಗುತ್ತದೆ. ಬದುಕಿನಲ್ಲಿ ಮನುಷ್ಯನಿಗೆ ಬರುವ ದೈಹಿಕ ಕಾಯಿಲೆಗಳು ಅನೇಕ ಸಂದರ್ಭಗಳಲ್ಲಿ ಅವನ ಒಳ ಹೊರಗಿನ ಪರಿವರ್ತನೆಗೆ ಕಾರಣವಾಗಿ ಬಿಡುತ್ತದೆ. ತನಗೆ ಆಪ್ತರಾದವರಿಗೆ ಒಂದು ಭಯಾನಕ ಕಾಯಿಲೆ ಎದುರಾದಾಗ ಅದರಿಂದ ಆತ ಅನುಭವಿಸುವ ಸಂಕಟ ಇನ್ನೂ ಹೆಚ್ಚಿನದು. ಪುಟ್ಟ ಮಗು ಹೃದಯದ ಸಮಸ್ಯೆಯಿಂದ ಬಳಲಿ ಸಾವು ಬದುಕಿನ ನಡುವೆ ಒದ್ದಾಡುವಾಗ ಒಬ್ಬ ತಂದೆ ಅದನ್ನು ಸಮಚಿತ್ತದಿಂದ ಸ್ವೀಕರಿಸಿ ಹೇಗೆ ತನ್ನ ಮಗುವನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದನ್ನು ಈ ಕೃತಿ ಹೇಳುತ್ತದೆ. ಎಲ್ಲ ವಾತ್ಸಲ್ಯಮಯಿ ಹೃದಯಿಗಳಿಗೆ ಇಷ್ಟವಾಗಬಹುದಾದ ಕೃತಿ ಇದು. ಲೇಖಕರು ತಮ್ಮ ಮಗಳನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದುಕೊಂಡು ಹೋದದ್ದು ಸುಮಾರು 25 ವರ್ಷಗಳ ಹಿಂದೆ. ಆಗ ದೇಶದಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಇದ್ದ ಪರಿಸ್ಥಿತಿಗೆ ಹೋಲಿಸಿದರೆ, ಹೃದಯ ಕಾಯಿಲೆಗೀಡಾದಾತ ಬದುಕುಳಿಯುವುದು ಕಷ್ಟವೇ ಸರಿ. ಇಂತಹ ಹೊತ್ತಿನಲ್ಲಿ ತನ್ನ ಮಗುವನ್ನು ಉಳಿಸಿಕೊಳ್ಳಲು ತಂದೆ ಅನಿವಾರ್ಯವಾಗಿ ವಿದೇಶದ ವಿಮಾನ ಹತ್ತುತ್ತಾರೆ. ಈ ಸಂದರ್ಭದಲ್ಲಿ ತಂದೆಯೆನಿಸಿಕೊಂಡವನ ನೋವು, ಆತಂಕ, ಎದುರಾಗುವ ಮಾನವೀಯ ಸಂಬಂಧಗಳು, ವೈದ್ಯರ ಹೃದಯವಂತಿಕೆ, ಶುಶ್ರೂಷಕಿಯರ ಮಾನವೀಯತೆ ಎಲ್ಲವನ್ನೂ ಈ ಕೃತಿ ತೆರೆದಿಡುತ್ತದೆ. ಒಂದು ರೀತಿಯಲ್ಲಿ ಇದು ಕೇವಲ ಲೇಖಕನ ಮಗುವಿನ ಹೃದಯಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ಈ ಸಂದರ್ಭದಲ್ಲಿ ಅವರು ಎದುರುಗೊಂಡ ಎಲ್ಲ ಮನುಷ್ಯರ ಹೃದಯಕ್ಕೆ ಸಂಬಂಧಪಟ್ಟ ಬರಹ ಇದು. ಅಂದು ಹೃದಯ ಕಾಯಿಲೆ ಚಿಕಿತ್ಸೆಗೆ ಸಂಬಂಧಿಸಿದಂತೆ ಏನೆಲ್ಲ ಅಡಚಣೆಗಳಿತ್ತೋ, ಅಂತಹ ಅಡಚಣೆ ಈಗ ಇರಲಾರದು. ಆದರೆ ಈಗಲೂ ಒಂದು ಹೃದಯ ಚಿಕಿತ್ಸೆಯ ಸಂದರ್ಭದಲ್ಲಿ ಮನುಷ್ಯ ಎದುರಿಸುವ ಆತಂಕಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಅವರೆಲ್ಲರಿಗೂ ಆತ್ಮವಿಶ್ವಾಸವನ್ನು ನೀಡುವಂತಹ ಕೃತಿ ‘ನಯಾಗರಕ್ಕೆ ಐನೂರು ಮೈಲಿ’ ಕೃತಿ. ಅಂದು ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಪುಟ್ಟ ಪಾಪು ಅನು ಅಥವಾ ಅನುಪಮಾ ಇಂದು ತಮ್ಮ ಗಂಡ ಮಕ್ಕಳ ಜೊತೆಗೆ ಸಂತೋಷದಿಂದಿದ್ದಾರೆ. ನಾಲ್ಕನೆ ಮುದ್ರಣವನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಒಟ್ಟು ಪುಟಗಳು 160. ಕೃತಿಯ ಮುಖಬೆಲೆ 125 ರೂ. ಆಸಕ್ತರು 080- 22392460 ದೂರವಾಣಿಯನ್ನು ಸಂಪರ್ಕಿಸಬಹುದು.