‘ಕಪ್ಪು ಕುದುರೆ’ ಮತ್ತು ‘ಕಪ್ಪು ಕುರಿ’ಗಳು
ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಉತ್ತರ ಪ್ರದೇಶ ಚುನಾವಣೆಯನ್ನು ಗೆಲ್ಲುವ ಕಾರಣಕ್ಕೇ ಇಡೀ ದೇಶದ ನಾಗರಿಕರ ಹಿತಾಸಕ್ತಿಯನ್ನು ಬಲಿಗೊಟ್ಟು ನೋಟು ಅಮಾನ್ಯಗೊಳಿಸಿದರೂ, ರಾಜಕೀಯ ಪಕ್ಷವಾಗಿ ಅದು ತೆಗೆದುಕೊಂಡ ನಿರ್ಧಾರವನ್ನು ಪಕ್ಷದ ಹಿತಾಸಕ್ತಿಯ ನೆಲೆಯಲ್ಲಿ ಅದರ ಟೀಕಾಕಾರರೂ ಒಪ್ಪಲೇಬೇಕಾಗುತ್ತದೆ. ಆದರೆ, ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳು ಪ್ರಭುತ್ವಕ್ಕೆ ಕನ್ನಡಿ ಹಿಡಿಯುವ ಬದಲು ಕೊಡೆ ಹಿಡಿದದ್ದು ಮಾತ್ರ ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡಿರುವ ಘೋರ ದ್ರೋಹವೇ ಸರಿ.
‘‘ನಾವು ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕಿತ್ತು.’’
-ರಾಜನಾಥ್ ಸಿಂಗ್
-ಉಮಾಭಾರತಿ
-ಮುಖ್ತಾರ್ ಅಬ್ಬಾಸ್ ನಖ್ವಿ
ಈ ಹೇಳಿಕೆಗಳು ಪ್ರಕಟವಾಗಿರುವುದು ಉತ್ತರ ಪ್ರದೇಶದಲ್ಲಿ ಮುಕ್ತಾಯವಾದ ಐದನೆಯ ಹಂತದ ಮತದಾನದ ನಂತರ ಎಂಬುದು ಗಮನಾರ್ಹ.
ನಿಮಗೆಲ್ಲ ನೆನಪಿರಬಹುದು: ನವೆಂಬರ್ 8ರಂದು 500 ಹಾಗೂ ರೂ. 1000 ಮುಖಬೆಲೆಯ ನೋಟು ಅಮಾನ್ಯವಾಗುವವರೆಗೆ ಬಹುತೇಕ ಮಾಧ್ಯಮಗಳು ಬಿಎಸ್ಪಿ ಹಾಗೂ ಮಾಯಾವತಿಯೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆಲ್ಲುವ ಕುದುರೆ ಎಂದು ಷರಾ ಬರೆದಿದ್ದವು. ಅಲ್ಲಿನ ವಾಸ್ತವ ಕೂಡಾ ಅಂತಹ ವರದಿಗಳಿಗೆ ಪೂರಕವಾಗಿಯೇ ಇದ್ದವು. ಆದರೆ, ನವೆಂಬರ್ 8ರಂದು ಕಪ್ಪುಹಣ ನಿಯಂತ್ರಣ, ನಕಲಿ ನೋಟುಗಳ ಹಾವಳಿ ನಿರ್ಮೂಲನೆ, ಭಯೋತ್ಪಾದನೆಯ ಮೂಲೋತ್ಪಾಟನೆ ಎಂಬ ತ್ರಿಸೂತ್ರ ಭರವಸೆಯನ್ನು ನೀಡಿ ಪ್ರಧಾನಿ ನರೇಂದ್ರ ಮೋದಿ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ಅಮಾನ್ಯವನ್ನು ರಾತ್ರೋರಾತ್ರಿ ಮಾಡಿದಾಗ ದೇಶವಿಡೀ ದೇಶಪ್ರೇಮದ ಉನ್ಮಾದದಲ್ಲಿ ಮಿಂದೆದ್ದಿತ್ತು. ಮುಖ್ಯವಾಗಿ ನೋಟು ಅಮಾನ್ಯದ ಮುನ್ನಾ ದಿನದವರೆಗೂ ಉತ್ತರ ಪ್ರದೇಶದಲ್ಲಿ ಮೂರನೆಯ ಸ್ಥಾನದಲ್ಲಿದ್ದ ಬಿಜೆಪಿ, ಅದರ ತರುವಾಯ ಏಕಾಏಕಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪಕ್ಷ ಎಂದು ಪ್ರಬಲವಾಗಿ ಪ್ರತಿಪಾದನೆಗೊಳ್ಳತೊಡಗಿತು.
ರೂ. 500 ಮತ್ತು 1000 ನೋಟು ಅಮಾನ್ಯ ಮಾಡಿದ ಕೇವಲ 50 ದಿನಗಳಲ್ಲಿ ದೈನಂದಿನ ಆರ್ಥಿಕ ವಹಿವಾಟನ್ನು ಸಹಜ ಸ್ಥಿತಿಗೆ ತರುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದು ವರ್ತಕರಲ್ಲಿನ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಆದರೆ, ಆ ಉತ್ಸಾಹದ ಜಾಗವನ್ನು ಹತಾಶೆ, ರೋಷ ಆಕ್ರಮಿಸಿಕೊಳ್ಳಲು ಹೆಚ್ಚು ದಿನ ಹಿಡಿಯಲಿಲ್ಲ. ಕಾರಣ: ಅಮಾನ್ಯ ಪ್ರಕ್ರಿಯೆಗೆ ಒಳಗಾಗಿದ್ದದ್ದು ಸಾಮಾನ್ಯ ಮೊತ್ತವಾಗಿರಲಿಲ್ಲ-ಇಡೀ ದೇಶದ ಶೇ. 85ರಷ್ಟು ಆರ್ಥಿಕತೆಯನ್ನು ಆಕ್ರಮಿಸಿದ್ದ ಸುಮಾರು ಹದಿನೈದು ಲಕ್ಷ ಕೋಟಿ ರೂ. ಮೊತ್ತ ಅದಾಗಿತ್ತು!
ನೋಟು ಅಮಾನ್ಯವಾದ ಐವತ್ತು ದಿನಗಳ ನಂತರವೂ ವರ್ತಕರ ಉತ್ಸಾಹ ಅಷ್ಟೇನೂ ಕುಗ್ಗಿರಲಿಲ್ಲ. ಆದರೆ, ಭಾರತದ ಆರ್ಥಿಕತೆ (ಬದಲಿ ನೋಟು ಪೂರೈಕೆ) ಸಹಜ ಸ್ಥಿತಿಗೆ ಬರಲು ಮೇ ತಿಂಗಳವರೆಗೆ ಕಾಯಬೇಕಾಗುತ್ತದೆ ಎಂದು ಖುದ್ದು ಆರ್‌ಬಿಐ ಒಪ್ಪಿಕೊಂಡಾಗ ವರ್ತಕರು ನಿಜಕ್ಕೂ ಹತಾಶರಾದರು; ಒಳಗೊಳಗೇ ಕುದಿಯತೊಡಗಿದರು. ಯಾಕೆಂದರೆ, ಆ ಹೊತ್ತಿಗೆ ಅವರ ವ್ಯಾಪಾರ ವಹಿವಾಟುಗಳು ಶೇ. 50ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ್ದವು. ರೂ. 1000 ನೋಟಿನ ಜಾಗದಲ್ಲಿ ರೂ. 2000 ನೋಟನ್ನು ಪರಿಚಯಿಸಿದ್ದರಿಂದ ಚಿಲ್ಲರೆ ಸಮಸ್ಯೆ ಬಿಕ್ಕಟ್ಟಿನ ಸ್ವರೂಪ ಪಡೆದು ಅದೂ ಕೂಡಾ ವರ್ತಕರನ್ನು ಕಂಗೆಡಿಸಿತ್ತು. ವರ್ತಕರ ಸಿಟ್ಟು ಸ್ಫೋಟಗೊಳ್ಳಲಿದೆ ಎಂಬುದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಆಪ್ತ ಅಮಿತ್ ಶಾ ನಂತರ ಬಡಬಡಾಯಿಸತೊಡಗಿದ್ದು ನಗದುರಹಿತ ಆರ್ಥಿಕ ವಹಿವಾಟನ್ನು. ಇದು ವರ್ತಕರ ಕೋಪವನ್ನು ತಣಿಸುವ ಬದಲು ಮತ್ತಷ್ಟು ತೀವ್ರಗೊಳಿಸಿತು. ಬಿಜೆಪಿಯ ಆಜನ್ಮ ಪೋಷಕರಾದ ವರ್ತಕರು, ಎಂದಿಗೂ ತಮ್ಮ ಬಿಳಿಹಣವನ್ನು ಪಕ್ಷಕ್ಕೆ ದೇಣಿಗೆಯಾಗಿ ನೀಡಿದ ಉದಾಹರಣೆಯೇ ಇಲ್ಲ. ಅಂತಹದರಲ್ಲಿ ಅವರ ಪಕ್ಷವೇ ನಗದುರಹಿತ ಆರ್ಥಿಕ ವಹಿವಾಟಿನ ಜಪ ಮಾಡತೊಡಗಿದಾಗ ವರ್ತಕರು ಸಿಡಿದೇಳುವುದು ಅಸಹಜವೇನಲ್ಲವಲ್ಲ?
ಈ ಸುಳಿವು ಅರಿತ ಕೂಡಲೇ ಕೋಮು ಧ್ರುವೀಕರಣಕ್ಕೆ ಮುಂದಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ, ತಮ್ಮ ಬಹಿರಂಗ ಪ್ರಚಾರ ಸಭೆಗಳಲ್ಲಿ ಗೋರಿ ಮತ್ತು ಸ್ಮಶಾನಗಳ ಪ್ರಸ್ತಾಪ ಮಾಡಿ, ಹಿಂದೂಗಳ ಧ್ರುವೀಕರಣಕ್ಕೆ ಮುಂದಾದರು. ಅದರೊಟ್ಟಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಮಮಂದಿರ ನಿರ್ಮಿಸುವುದಾಗಿ ‘ರಾಮಮಂದಿರವಾದಿ’ಗಳ ಮೂಗಿಗೆ ತುಪ್ಪಸವರಿದರು. ಇದು ಕೊಂಚ ಮಟ್ಟಿಗೆ ಹಿಂದೂ ಮತದಾರರ ಧ್ರುವೀಕರಣಕ್ಕೆ ಕಾರಣವಾಗಿರುವುದೂ ನಿಜ. ಆದರೆ, ಅಲ್ಲಿಯವರೆಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಊಹಿಸಿರದಿದ್ದ ಮತಧ್ರುವೀಕರಣವೊಂದು ಪೂರ್ವ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆದೇ ಹೋಯಿತು. 1990ರಲ್ಲಿ ಬಿಜೆಪಿಯ ಭೀಷ್ಮ ಲಾಲ್‌ಕೃಷ್ಣ ಅಡ್ವಾಣಿ ನಡೆಸಿದ ರಥಯಾತ್ರೆ ಹಾಗೂ ಡಿಸೆಂಬರ್ 6, 1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಘಟನೆಗಳ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಸ್ಲಿಮರಲ್ಲಿ ಅಸುರಕ್ಷಿತ ಭಾವ ಮೂಡದಂತೆ ನೋಡಿಕೊಂಡಿದ್ದದ್ದು ಇಬ್ಬರು: ಜನತಾ ಪರಿವಾರದ ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲೂ ಪ್ರಸಾದ್ ಯಾದವ್. ಅದೇ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಈ ಬಾರಿಯ ಚುನಾವಣೆಯ ಮುಂಚಿನ ದಿನದವರೆಗೂ ಮುಸ್ಲಿಮರು ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ನಿಷ್ಠರಾಗಿದ್ದರೆ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್‌ರನ್ನು ಪ್ರಶ್ನಾತೀತ ನಾಯಕ ಎಂದು ಒಪ್ಪಿಕೊಂಡಿದ್ದಾರೆ.
ಆದರೆ, ಸಮಾಜವಾದಿ ಪಕ್ಷದ ಅಮರ್ ಸಿಂಗ್ ಅವರನ್ನು ಬಳಸಿಕೊಂಡು ಆ ಪಕ್ಷವನ್ನು ಇಬ್ಭಾಗ ಮಾಡಿ, ಆ ಮೂಲಕ ಆಗುವ ಮತವಿಭಜನೆಯ ಆಧಾರದಲ್ಲಿ ಉತ್ತರ ಪ್ರದೇಶದ ಅಧಿಕಾರ ಹಿಡಿಯುವ ಹವಣಿಕೆಯಲ್ಲಿದ್ದ ಬಿಜೆಪಿಗೆ ತಿರುಮಂತ್ರ ನೀಡಿದ್ದು ಅಖಿಲೇಶ್ ಯಾದವ್. ಅಪ್ಪನ ಆಣತಿಯನ್ನೇ ಧಿಕ್ಕರಿಸಿ, ಸಮಾಜವಾದಿ ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಅಖಿಲೇಶ್ ಯಾದವ್, ಅಲ್ಲಿನ ಯುವ ಯಾದವ ಮತದಾರರ ಪಾಲಿನ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದರು. ಅದರ ಬೆನ್ನಿಗೇ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಅಖಿಲೇಶ್, ಬಿಜೆಪಿಯ ಎಲ್ಲ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿ ಅತ್ಯಂತ ಜನಪ್ರಿಯ ಯುವ ನಾಯಕ ಎಂಬ ಹಿರಿಮೆಗೆ ಪಾತ್ರರಾದರು. ಅವರ ರ್ಯಾಲಿಗೆ ಲಕ್ಷಾಂತರ ಜನರು ಸೇರತೊಡಗಿದರು. ಇದು ಪ್ರಾರಂಭಿಕ ಹಂತದಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಮರಳುವ ದಟ್ಟ ಸೂಚನೆಯನ್ನೇ ನೀಡಿತ್ತು.
ಇದರಿಂದ ಕಂಗಾಲಾದ ಬಿಜೆಪಿ, ತನ್ನ ಪ್ರತೀ ರ್ಯಾಲಿಯಲ್ಲೂ ಕೋಮು ಧ್ರುವೀಕರಣದ ಉನ್ಮಾದವನ್ನು ಮತದಾರರಲ್ಲಿ ಪ್ರಚೋದಿಸತೊಡಗಿದಾಗ ಮುಸ್ಲಿಮರು ಬೆಚ್ಚಿಬಿದ್ದರು. ಇದರ ಬೆನ್ನಿಗೇ ಮೊದಲ ಹಂತದ ಮತದಾನ ಶುರುವಾಗುವ ಮುನ್ನಾ ದಿನ ಮೌಲ್ವಿಯೊಬ್ಬರು ಬಿಎಸ್ಪಿ ಪರವಾಗಿ ಮತ ಚಲಾಯಿಸುವಂತೆ ಮುಸ್ಲಿಮರಿಗೆ ಫತ್ವಾ ಹೊರಡಿಸಿದರು. ಈ ಫತ್ವಾವನ್ನು ಮೊದಲ ಹಂತದ ಮತದಾನ ಘಟ್ಟದಲ್ಲಿ ಗಂಭೀರವಾಗಿ ಪರಿಗಣಿಸದ ಚುನಾವಣಾ ಸಮೀಕ್ಷರು, ಐದನೆಯ ಹಂತದ ಮತದಾನ ಮುಕ್ತಾಯದ ಹೊತ್ತಿಗೆ ಮಾಯಾವತಿಯವರನ್ನು ‘ಕಪ್ಪುಕುದುರೆ’ ಎಂದು ಗಂಭೀರವಾಗಿಯೇ ಪ್ರತಿಪಾದಿಸತೊಡಗಿದ್ದಾರೆ. ಈ ಪೈಕಿ ಅತ್ಯಂತ ವಿಶ್ವಾಸಾರ್ಹ ವೆಬ್ ಪೋರ್ಟಲ್‌ಗಳಾದ ‘ಕ್ಯಾರವಾನ್’, ‘ದಿ ವೈರ್’, ‘ಕ್ಯಾಚ್ 15’ಗಳು ‘‘ಮಾಯಾವತಿಯವರನ್ನು ಉದ್ದೇಶಪೂರ್ವಕವಾಗಿ ಉಪೇಕ್ಷಿಸಿರುವ ಮುಖ್ಯವಾಹಿನಿ ಮಾಧ್ಯಮಗಳು ಫಲಿತಾಂಶ ಪ್ರಕಟವಾದ ನಂತರ ಪಶ್ಚಾತ್ತಾಪ ಪಡುವುದು ಅನಿವಾರ್ಯವಾಗಲಿದೆ’’ ಎಂದೇ ಭವಿಷ್ಯ ನುಡಿಯತೊಡಗಿವೆ.
ಮುಖ್ಯವಾಹಿನಿಯ ಮಾಧ್ಯಮಗಳು ಮಾಯಾವತಿಯವರ ಸಾಮರ್ಥ್ಯವನ್ನು ಕಡೆಗಣಿಸಲು ಪ್ರಬಲವಾದ ಕಾರಣವೊಂದಿತ್ತು: ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ರೂ. 500 ಹಾಗೂ ರೂ. 1000 ಮುಖಬೆಲೆಯ ನೋಟುಗಳ ಅಮಾನ್ಯವನ್ನು ಘೋಷಿಸಿದಾಗ ಆ ಕ್ರಮವನ್ನು ಖುದ್ದು ನರೇಂದ್ರ ಮೋದಿಯವರ ಸರಕಾರಕ್ಕಿಂತ ಹೆಚ್ಚು ಸಮರ್ಥಿಸಿಕೊಂಡಿದ್ದು ಮುಖ್ಯವಾಹಿನಿಯ ಮಾಧ್ಯಮಗಳು. ನೋಟು ಅಮಾನ್ಯವನ್ನು ಯಾವುದೇ ಎಗ್ಗಿಲ್ಲದೆ ವೈಭವೀಕರಿಸಿದ್ದ ಅವು, ‘ನೋಟು ರದ್ಧತಿಯನ್ನು ಸಮರ್ಥಿಸುವುದೆಂದರೆ ದೇಶಪ್ರೇಮವನ್ನು ರುಜುವಾತುಪಡಿಸಿದಂತೆ’ ಎಂಬ ಧಾಟಿಯಲ್ಲೇ ಪ್ರಚಾರ ಮಾಡಿದ್ದವು. ಆದರೆ, ಅವು ಈ ಹಂತದಲ್ಲಿ ಅವು ಮರೆತಿದ್ದ ಸಂಗತಿಯೆಂದರೆ, ನೋಟು ಅಮಾನ್ಯದ ನೂರು ದಿನಗಳ ನಂತರ ಪಂಚರಾಜ್ಯ ಚುನಾವಣೆಗಳು ನಡೆಯಲಿವೆ ಎಂಬ ವಾಸ್ತವವನ್ನು.
ಯಾವುದೇ ವರ್ತಕ ಸಮುದಾಯ ಕೇವಲ ಒಂದು ತಿಂಗಳ ಆರ್ಥಿಕ ಹಿಂಜರಿತವನ್ನು ಸಹಿಸಿಕೊಳ್ಳುವುದೇ ಕಷ್ಟ. ಅಂಥದ್ದರಲ್ಲಿ ಸತತ ಮೂರು ತಿಂಗಳ ಕಾಲ ಅಂತಹ ಆರ್ಥಿಕ ಮುಗ್ಗಟ್ಟನ್ನು ಆ ಸಮುದಾಯ ಸಹಿಸಿಕೊಳ್ಳುತ್ತದೆ ಎಂದು ಮುಖ್ಯವಾಹಿನಿಯ ಮಾಧ್ಯಮಗಳು ಭ್ರಮಾಧೀನಕ್ಕೊಳಗಾಗಿದ್ದು ನಿಜಕ್ಕೂ ವಿಕಟ ವ್ಯಂಗ್ಯ. ವರ್ತಕ ಸಮುದಾಯಗಳ ಕಿಚ್ಚಿಗೆ ತುಪ್ಪಸುರಿದಂತೆ ಆಗಿದ್ದು ಕೃಷಿ ಕ್ಷೇತ್ರದಲ್ಲಿ ಉಂಟಾದ ಭೀಕರ ಬಿಕ್ಕಟ್ಟು.
ಭಾರತ ದೇಶದ ಅತೀ ದೊಡ್ಡ ಕೃಷಿ ಆಧಾರಿತ ರಾಜ್ಯಗಳು ಪಂಜಾಬ್ ಮತ್ತು ಉತ್ತರ ಪ್ರದೇಶ. ಇಲ್ಲಿನ ಬಹುತೇಕ ಭೂಮಾಲಕ ವರ್ಗ ಈ ಕ್ಷಣದವರೆಗೂ ಬೆಂಬಲಿಸುತ್ತಾ ಬಂದಿದ್ದೂ ಕೂಡಾ ವರ್ತಕರ ಪಕ್ಷ ಎಂಬ ಕುಖ್ಯಾತಿಯನ್ನು ಹೊಂದಿರುವ ಬಿಜೆಪಿಯನ್ನೇ. ಆದರೆ, ನೋಟು ಅಮಾನ್ಯವಾದ ಬೆನ್ನ ಹಿಂದೆಯೇ ಸೃಷ್ಟಿಯಾದ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಬಹುತೇಕ ಭೂಮಾಲಕ ವರ್ಗ ತನ್ನ ಕೃಷಿ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ತೀವ್ರವಾದ ಆರ್ಥಿಕ ನಷ್ಟವನ್ನೇ ಅನುಭವಿಸಿದವು. ಉತ್ತರ ಪ್ರದೇಶದಲ್ಲಿ ಬಹುಮುಖ್ಯ ಭೂಮಾಲಕ ವರ್ಗವಾಗಿರುವ ಠಾಕೂರ್ ಸಮುದಾಯ ತನ್ನ ಸಾಂಪ್ರದಾಯಿಕ ಪಕ್ಷದಿಂದಲೇ ಇಂತಹ ಕಂಡುಕೇಳರಿಯದ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದ್ದು ಅವರನ್ನು ವ್ಯಗ್ರರನ್ನಾಗಿಸಿದೆ. ಈ ಬಾರಿ ಬಿಜೆಪಿ ತನ್ನ ಗೆಲುವಿಗೆ ನೆಚ್ಚಿಕೊಂಡಿದ್ದು ಬ್ರಾಹ್ಮಣ, ಬನಿಯಾ, ಠಾಕೂರ್ ಹಾಗೂ ಯುವ ಯಾದವ ಮತದಾರರನ್ನೇ. ಈ ಪೈಕಿ ಬನಿಯಾ ಮತ್ತು ಠಾಕೂರ್ ಮತದಾರರು ಬಿಜೆಪಿಯ ಬಗ್ಗೆ ಮುನಿದೆದ್ದಿದ್ದರೆ, ತಮ್ಮ ಸಮುದಾಯದ ಅಸ್ಮಿತೆಯಂತೆ ಕಂಗೊಳಿಸುತ್ತಿರುವ ಅಖಿಲೇಶ್ ಯಾದವ್ ಪರ ಯುವ ಯಾದವ ಮತದಾರರು ಒಗ್ಗಟ್ಟಿನಿಂದ ನಿಂತುಬಿಟ್ಟಿದ್ದಾರೆ.
ಅಂದಮೇಲೆ ಈಗ ಬಿಜೆಪಿಯ ನಿಷ್ಠಾವಂತ ಮತದಾರರಾಗಿ ಉಳಿದಿರುವುದು ಬ್ರಾಹ್ಮಣರು ಹಾಗೂ ಎಲ್ಲ ಕಾಲಕ್ಕೂ ಎಲ್ಲ ಸಮುದಾಯಗಳಲ್ಲೂ ಇರುವ ಚಂಚಲ ಮತದಾರರು ಮಾತ್ರ. ಚುನಾವಣೆಯ ಪ್ರಾರಂಭಿಕ ಘಟ್ಟದಲ್ಲಿ ಎಸ್ಪಿ ವರ್ಸಸ್ ಬಿಜೆಪಿ ಎಂಬಂತೆಯೇ ಬಿಂಬಿತವಾಗಿದ್ದ ಉತ್ತರ ಪ್ರದೇಶದ ಚುನಾವಣೆ, ಮೂರು ಹಂತದ ಮತದಾನ ಮುಕ್ತಾಯಗೊಳ್ಳುವ ವೇಳೆಗೆ ತ್ರಿಕೋನ ಸ್ಪರ್ಧೆ ಎಂಬಂತಾಗಿತ್ತು. ಈಗ ಐದನೆಯ ಹಂತದ ಚುನಾವಣೆಯ ಅಂತ್ಯದ ನಂತರ ‘ಬಿಎಸ್ಪಿ ಕಪ್ಪುಕುದುರೆ’ ಎಂಬಲ್ಲಿಗೆ ಬಂದು ನಿಂತಿದೆ. ಅದಕ್ಕೆ ಕಾರಣ: ಯಾವ ಮಾಧ್ಯಮಗಳ ಸಮೀಕ್ಷೆಯನ್ನೂ ನೆಚ್ಚಿಕೊಳ್ಳದೆ ಚುನಾವಣಾಪೂರ್ವ ದಿನಗಳಿಂದಲೇ ಮಾಯಾವತಿ ಮಾಡಿದ್ದ ‘ಸೋಷಿಯಲ್ ಇಂಜಿನಿಯರಿಂಗ್’. ಮಾಯಾವತಿಯನ್ನು ಉತ್ತರ ಪ್ರದೇಶದ ಚುನಾವಣೆಯಲ್ಲಿ ಹೇಗಾದರೂ ಮಾಡಿ ಹಿಮ್ಮೆಟ್ಟಿಸಬೇಕು ಎಂದೇ ಜಾರಿಯಾಗಿದ್ದ ನೋಟು ಅಮಾನ್ಯ, ಮೂರು ತಿಂಗಳು ಕಳೆಯುವ ಹೊತ್ತಿಗಾಗಲೇ ಮೋದಿ ಮತ್ತು ಬಿಜೆಪಿಯ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಅದೇ ಕಾರಣಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆಯಲ್ಲೇ ಕೋಮು ಧ್ರುವೀಕರಣಕ್ಕೂ ಪ್ರಚೋದನೆ ನೀಡಿದರು. ಇದನ್ನೆಲ್ಲ ನಿರೀಕ್ಷಿಸಿದಂತೆಯೇ ಇದ್ದ ಮಾಯಾವತಿ, ಸದ್ದಿಲ್ಲದೆ ತಮ್ಮ ಪಕ್ಷದಿಂದ ಅತೀ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಚುನಾವಣಾ ಟಿಕೆಟ್ ನೀಡಿ, ತಮ್ಮದೇ ಶೈಲಿಯ ರಣತಂತ್ರವನ್ನೂ ರೂಪಿಸಿಬಿಟ್ಟಿದ್ದರು. ಅದೆಲ್ಲದರ ಫಲಿತಾಂಶ ಈಗ ‘‘ಮುಸ್ಲಿಮರಿಗೆ ನಮ್ಮ ಪಕ್ಷ ಟಿಕೆಟ್ ನೀಡಬೇಕಿತ್ತು’’ ಎಂಬ ಬಿಜೆಪಿಯವರ ಉದ್ಗಾರ ರೂಪದಲ್ಲಿ ಹೊರಬರುತ್ತಿದೆ.
'All is fair in love and war’ ಎಂಬ ನಾಣ್ಣುಡಿಯೊಂದಿದೆ. ಯುದ್ಧದಲ್ಲಿ ಎಲ್ಲ ತಂತ್ರಗಳೂ ಒಪ್ಪಿತವಾದವು ಎಂಬುದು ಈ ನಾಣ್ಣುಡಿಯ ತಾತ್ಪರ್ಯ. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಉತ್ತರ ಪ್ರದೇಶ ಚುನಾವಣೆಯನ್ನು ಗೆಲ್ಲುವ ಕಾರಣಕ್ಕೇ ಇಡೀ ದೇಶದ ನಾಗರಿಕರ ಹಿತಾಸಕ್ತಿಯನ್ನು ಬಲಿಗೊಟ್ಟು ನೋಟು ಅಮಾನ್ಯಗೊಳಿಸಿದರೂ, ರಾಜಕೀಯ ಪಕ್ಷವಾಗಿ ಅದು ತೆಗೆದುಕೊಂಡ ನಿರ್ಧಾರವನ್ನು ಪಕ್ಷದ ಹಿತಾಸಕ್ತಿಯ ನೆಲೆಯಲ್ಲಿ ಅದರ ಟೀಕಾಕಾರರೂ ಒಪ್ಪಲೇಬೇಕಾಗುತ್ತದೆ. ಆದರೆ, ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳು ಪ್ರಭುತ್ವಕ್ಕೆ ಕನ್ನಡಿ ಹಿಡಿಯುವ ಬದಲು ಕೊಡೆ ಹಿಡಿದದ್ದು ಮಾತ್ರ ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡಿರುವ ಘೋರ ದ್ರೋಹವೇ ಸರಿ. ಅದೇ ಕಾರಣಕ್ಕೆ ಇಡೀ ವಿಶ್ವದಲ್ಲಿ ಅತ್ಯಂತ ಭ್ರಷ್ಟಗೊಂಡಿರುವ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಪೈಕಿ ಭಾರತೀಯ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಗಳು ಮೊದಲ ಸ್ಥಾನದಲ್ಲಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು ಮಾತ್ರವಲ್ಲ ಆತ್ಮನಿರೀಕ್ಷಣೆಯ ಹೊತ್ತೂ ಕೂಡಾ.
ಕೊನೆಯ ಮಾತು: ಒಂದು ವೇಳೆ ಬಿಜೆಪಿಯ ಎಲ್ಲ ರಾಜಕೀಯ ರಣತಂತ್ರಗಳನ್ನು ಭೇದಿಸಿ ಬಿಎಸ್ಪಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಬಹುಶಃ ಆ ಆಘಾತದಿಂದ ನರೇಂದ್ರ ಮೋದಿ ಚೇತರಿಸಿಕೊಳ್ಳಬಹುದೇ ಹೊರತು, ‘ಕಪ್ಪು ಕುರಿ’ಗಳಂತಾಗಿರುವ ಮಾಧ್ಯಮಗಳು ಹಾಗೂ ಅವುಗಳ ಮಾಲಕರು ಖಂಡಿತ ಅಲ್ಲ..!! ಕಾರಣ: ನೋಟು ಅಮಾನ್ಯದ ಪ್ರಮುಖ ಫಲಾನುಭವಿಗಳು ಅವರೇ ಆಗಿರುವುದಲ್ಲವೇ?!