varthabharthi


ಅಂಬೇಡ್ಕರ್ ಚಿಂತನೆ

ಅಸ್ಪಶ್ಯರ ಧರ್ಮಾಂತರ ಮತ್ತು ಅವರ ರಾಜಕೀಯ ಹಕ್ಕು

ವಾರ್ತಾ ಭಾರತಿ : 3 Mar, 2017
ಭಾಗ- 2

ಅಸ್ಪಶ್ಯರ ರಾಜಕೀಯ ಹಕ್ಕಿನ ವಿಷಯದಲ್ಲಿ, ಹಿಂದೂ ಧರ್ಮತ್ಯಾಗದ ನಿರ್ಧಾರದಿಂದ ಯಾವುದೇ ವಿಘಾತಕ ಪರಿಣಾಮವಾಗುವುದು ಶಕ್ಯವಿಲ್ಲ. ಇದಕ್ಕೆ ಬೇರೆಯೇ ಕಾರಣವಿದೆ. ಈ ಕಾರಣ, ಸುಲಭ ರೀತಿಯಲ್ಲಿ ‘ಜನತೆ’ಯ ವಾಚಕರ ತಿಳಿವಿಗೆ ಬರುವಂತೆ, ಅದಕ್ಕೂ ಮುನ್ನ, ಜಾತಿವಾರು ಪ್ರತಿನಿಧಿತ್ವದ ಕಾಯ್ದೆ ನಿರ್ಧರಿಸಿದ ಪದ್ಧತಿಯ ರೂಪುರೇಷೆಗಳೇನು ಎಂಬುದನ್ನು ಮೊದಲು ಹೇಳಬೇಕು. ಹಿಂದೂಸ್ಥಾನದಲ್ಲಿ ಭಿನ್ನ ಭಿನ್ನ ಧರ್ಮಗಳ ಅನುಯಾಯಿಗಳಿದ್ದಾರೆ. ಉದಾಹರಣೆಗೆ ಹಿಂದೂ, ಜೈನ, ಬೌದ್ಧ, ಪಾರಸಿ, ಇಸ್ಲಾಂ ಇತ್ಯಾದಿ. ಹಾಗೆಯೇ, ಯಾವುದೇ ಧರ್ಮವನ್ನೊಪ್ಪದ ನಾಸ್ತಿಕರೂ ಇದ್ದಾರೆ. ಇವರೆಲ್ಲರಿಂದ ಕೂಡಿದ ಒಟ್ಟು ಜನಸಮೂಹ ಇಲ್ಲಿದೆ. ಈ ಸಾಮಾನ್ಯ ಜನಸಮೂಹದಿಂದ ರೂಪಿತವಾದ ಮತದಾರ ಸಂಘವನ್ನು ಸಾಮಾನ್ಯ ಮತದಾರ ಸಂಘ ಎಂದೇ ಕರೆಯಲಾಗಿದೆ. ಜಾತಿವಾರು ಪ್ರಾತಿನಿಧ್ಯದ ತತ್ವ, ಹಿಂದೂಸ್ಥಾನದಲ್ಲಿ ಬಂದುದಲ್ಲದಿದ್ದರೆ ಒಂದೇ ಮತದಾರ ಸಂಘದಲ್ಲಿ ಎಲ್ಲ ಧರ್ಮದ ಜನರು ಇರುತ್ತಿದ್ದರು. ಅಂದರೆ, ಸಾಮಾನ್ಯ ಮತದಾರ ಸಂಘಕ್ಕೆ ಯಾವುದೇ ಪ್ರಕಾರದ ವಿಧಿನಿಷೇಧ ಇರುತ್ತಿರಲಿಲ್ಲ. ಆದರೆ ಜಾತಿವಾರು ಪ್ರತಿನಿಧಿತ್ವದ ತತ್ವ ಮಾನ್ಯವಾದ್ದರಿಂದ ಜಾತೀಯ ನಿರ್ಣಯದಂತೆ ಮೊದಲು ಸಾಮಾನ್ಯ ಮತದಾರ ಸಂಘದಿಂದ ಕೆಲವು ವಿಶಿಷ್ಟ ಧರ್ಮದ ಜನರನ್ನಾರಿಸಿ, ಅವರ ಸ್ವತಂತ್ರ ಮತದಾರ ಸಂಘ ಸ್ಥಾಪಿಸಲು ನಿರ್ಧರಿಸಿದರು. ಆ ರೀತಿ, ಜಾತೀಯ ನಿರ್ಧಾರದಂತೆ ಕ್ರೈಸ್ತ, ಇಸ್ಲಾಂ, ಸಿಖ್ಖ ಈ ಮೂರು ಧರ್ಮಗಳ ಜನರನ್ನು ಸಾಮಾನ್ಯ ಮತದಾರ ಸಂಘದಿಂದ ಹೊರ ತೆಗೆದು, ಅವರ ಸ್ವತಂತ್ರ ಒಕ್ಕೂಟ ರಚಿಸಲಾಯಿತು. ಈ ರೀತಿ ಜಾತೀಯ ನಿರ್ಣಯದಂತೆ ಹಿಂದೂಸ್ಥಾನದಲ್ಲಿ ಮತದಾರರ ಎರಡು ವಿಧದ ಸಂಘ ಸ್ಥಾಪಿತವಾಗಿದೆ. ಒಂದು ಸಾಮಾನ್ಯ ಮತದಾರ ಸಂಘ. ಮತ್ತೊಂದು ಸ್ವತಂತ್ರ ಮತದಾರ ಸಂಘ.

ಈ ವಿಚಾರದಲ್ಲಿ ಒಂದು ವಿಷಯ ಧ್ಯಾನದಲ್ಲಿಡಬೇಕು. ಧರ್ಮಾವಲಂಬಿ ಸ್ವತಂತ್ರ ಮತದಾರ ಸಂಘದಲ್ಲಿರುವ ರಾಜಕೀಯ ಹಕ್ಕಿನ ಉಪಭೋಗ ಪಡೆಯಲು ಕ್ರೈಸ್ತ, ಇಸ್ಲಾಂ ಮತ್ತು ಸಿಖ್ಖ ಈ ಮೂರೂ ಧರ್ಮಗಳ ಪೈಕಿ, ಯಾವ ಧರ್ಮಾನುಯಾಯಿಯ ಸಂಘವೋ, ಆ ಧರ್ಮದ ಅನುಯಾಯಿತ್ವವನ್ನು ಮಾನ್ಯ ಮಾಡುವುದು ಒಂದು ಆವಶ್ಯಕ ಷರತ್ತಾಗಿದೆ. ಆದರೆ ಸಾಮಾನ್ಯ ಮತದಾರ ಸಂಘದಲ್ಲಿ ದಾಖಲಾಗಲು ಮತ್ತು ಈ ಮತದಾರ ಸಂಘಕ್ಕೆ ನೀಡಿದ ಹಕ್ಕಿನ ಉಪಭೋಗ ಪಡೆಯಲು, ಅದರಲ್ಲಿ ಸಮಾವಿಷ್ಟವಾದ ಯಾವುದಾದರೂ ಧರ್ಮದ ಅನುಯಾಯಿತ್ವ ಮಾನ್ಯ ಮಾಡುವ ಷರತ್ತನ್ನು ಮಾತ್ರ ಇಟ್ಟಿಲ್ಲ. ಗವರ್ಮೆಂಟ್ ಆಫ್ ಇಂಡಿಯಾ ಆ್ಯಕ್ಟ್‌ನ 6ನೆ ಪರಿಚ್ಛೇದದಲ್ಲಿ ಮತದಾರನಾಗಲು ಅವಶ್ಯವಿರುವ ಷರತ್ತಿನಂತೆ ಮತದಾರ 21 ವರ್ಷದವನಿರಬೇಕು. ನಿಶ್ಚಿತ ಸ್ಥಳದಲ್ಲಿ ನಿಶ್ಚಿತ ಸಮಯದಿಂದ ವಾಸ್ತವ್ಯವಿರಬೇಕು ಮತ್ತು ತಕ್ಕಂತೆ ಶಿಕ್ಷಿತನಿರಬೇಕು.

ಈ ನಿಬಂಧನೆ ಸರ್ವಸಾಧಾರಣ ಮತದಾರ ಸಂಘದ ಮತದಾರರಿಗೆ ಅನ್ವಯವಾಗುವಂತೆ ಸ್ವತಂತ್ರ ಮತದಾರ ಸಂಘದ ಮತದಾರರಿಗೂ ಅನ್ವಯವಾಗುತ್ತದೆ. ಆದರೆ 6ನೆ ಪರಿಚ್ಛೇದದ 5 ಮತ್ತು 6ನೆ ಕಲಮುಗಳತ್ತ ದೃಷ್ಟಿಸಿದರೆ ಅಲ್ಲಿ ನಿಶ್ಚಿತ ಧರ್ಮದ ಅನುಯಾಯಿತ್ವದ ಷರತ್ತನ್ನೂ ಹಾಕಲಾಗಿದೆ. ಅಂದರೆ ಮುಸಲ್ಮಾನ ಮತದಾರ ಸಂಘಕ್ಕೆ ಸೇರಿದ ವ್ಯಕ್ತಿ, ತಾನು ಇಸ್ಲಾಂ ಧರ್ಮದವನೆಂದು ಒಪ್ಪಿಕೊಳ್ಳಬೇಕು. ಹಾಗೆಯೇ, ಕ್ರೈಸ್ತ, ಸಿಖ್ಖರೂ ಸಹ! ಇದರಿಂದಾಗಿ, ಸಾಮಾನ್ಯ ಮತದಾರ ಸಂಘದಲ್ಲಿ ಧರ್ಮಕ್ಕೆ ಯಾವುದೇ ಪ್ರಕಾರದ ರಾಜಕೀಯ ಮಹತ್ವ ಕೊಡಲಾಗಿಲ್ಲ ಎಂದು ತಿಳಿಯುತ್ತದೆ. ಅಸ್ಪಶ್ಯ ವರ್ಗವನ್ನು ಸರ್ವ ಸಾಮಾನ್ಯ ಮತದಾರ ಸಂಘದಲ್ಲಿ ಸೇರಿಸಲಾಗಿದೆ. ಮೇಲೆ ತಿಳಿಸಿದಂತೆ ಸಾಮಾನ್ಯ ಮತದಾರ ಸಂಘಕ್ಕೆ ಧರ್ಮಾಧರ್ಮದ ಮತ್ತು ಮತದಾರರ ಪಾತ್ರಾಪಾತ್ರತೆಯ ಯಾವುದೇ ಬಗೆಯ ಸಂಬಂಧವಿಲ್ಲ. ಈ ಎರಡು ವಿಷಯಗಳನ್ನು ಸೇರಿಸಿದರೆ ಅಸ್ಪಶ್ಯ ವರ್ಗಕ್ಕೆ ಕೊಡಲಾದ ರಾಜಕೀಯ ಹಕ್ಕು, ಅವರ ಹಿಂದೂ ಧರ್ಮತ್ಯಾಗದ ಬಹಿರಂಗ ಘೋಷಣೆಯ ಕಾರಣ ಹಿಂದೆಗೆಯಲ್ಪಡುತ್ತದೆ ಎನ್ನಲು ಯಾರಿಗೂ ಸಾಧ್ಯವಿಲ್ಲ.

ಕಾರಣ ಆ ಹಕ್ಕು ಧರ್ಮಾವಲಂಬಿಯಲ್ಲ. ಹಿಂದೂ ಧರ್ಮವನ್ನು ತ್ಯಜಿಸುವ ನಿಶ್ಚಯವನ್ನು ಸಾರಿದ್ದರೂ, ಇನ್ನೂ ಪರಧರ್ಮವನ್ನು ಆಯ್ದುಕೊಳ್ಳದ ಅಸ್ಪಶ್ಯರನ್ನು ನಿಧರ್ಮೀಯರೆನ್ನಬಹುದು. ಆದರೆ ನಿಧರ್ಮೀಯರನ್ನು ಸಾಮಾನ್ಯ ಮತದಾರ ಸಂಘದಲ್ಲಿ ಸೇರಿಸಲಾಗುವುದಿಲ್ಲವೆಂದು ಕಾಯ್ದೆಯ ಸಾಮಾನ್ಯ ಜ್ಞಾನವುಳ್ಳ ಯಾರೂ ಹೇಳುವಂತಿಲ್ಲ.
ಅಸ್ಪಶ್ಯರ ಮುಂದೆ ಯಾರು ಈ ಭೂತವನ್ನು ತಂದು ನಿಲ್ಲಿಸಿದ್ದಾರೋ, ಅವರು ಹಿಂದೂಗಳ ಪಾಲಿಗೆ ಬಂದ ಅವಕಾಶವನ್ನು ಅಸ್ಪಶ್ಯ ವರ್ಗಕ್ಕೆ ಕೊಡಲಾಗಿದೆಯೆಂದು ತಿಳಿದಿದ್ದಾರೆ. ಆದರೆ ಇದು ಕೇವಲ ಅವರ ಭ್ರಮೆ ಎಂದು ನಾವು ತಿಳಿದಿದ್ದೇವೆ. ಕಾರಣ ಹಿಂದೂ ಜಾತಿಗೆ ಕಾಯ್ದೆಯಂತೆ ನಿರ್ಧರಿತವಾದ ಸ್ಥಳ ಯಾವುದೇ ಪ್ರಾಂತದಲ್ಲೂ ಕೊಡಲಾಗಿಲ್ಲ.

ಮುಸಲ್ಮಾನ, ಸಿಖ್ಖ, ಕ್ರೈಸ್ತ ಮತದಾರ ಸಂಘಗಳಿಗೆ ನಿರ್ಧರಿತವಾದ ಸ್ಥಳದ ಹೊರತು, ಉಳಿದ ಅವಕಾಶವನ್ನು ಉಳಿದ ಸಾಮಾನ್ಯ ಜನತೆಗೆ, ಹಾಗೆಯೇ ಅಸ್ಪಶ್ಯರಿಗೂ ಕೊಡಲ್ಪಟ್ಟಿರುವುದರಿಂದ, ಹಿಂದೂಗಳ ಸ್ಥಳವನ್ನು ಕೊಡಲಾಗಿದೆಯೆಂಬುದಕ್ಕೆ ಯಾವ ಆಧಾರವೂ ಇಲ್ಲ. ಕಾರಣ, ಯಾವ ಸರ್ವಸಾಧಾರಣ ಮತದಾರ ಸಂಘದ ಪಾಲಿನಿಂದ ಅಸ್ಪಶ್ಯ ವರ್ಗಕ್ಕೆ ಕೆಲ ಭಾಗ ಕೊಡಲಾಗಿದೆಯೋ ಆ ಸರ್ವಸಾಧಾರಣ ಮತದಾರ ಸಂಘದಲ್ಲಿ ಹಿಂದೂಗಳಂತೆ ಜೈನ, ಬೌದ್ಧ, ಪಾರಸಿ, ಯಹೂದಿ, ನಾಸ್ತಿಕರೇ ಮುಂತಾದ ಹಿಂದೂಗಳಲ್ಲದವರನ್ನೂ ಸೇರಿಸಲಾಗಿದೆ.

ಈ ವರೆಗೆ ನಮ್ಮ ವಿಚಾರದ ಸಮರ್ಥನೆಗೆ ಮೂರು ಕಾರಣ ಕೊಟ್ಟಿದ್ದೇವೆ. ಒಂದು, ಶೆಡ್ಯೂಲ್ಡ್ ಕಾಸ್ಟ್‌ನ ವ್ಯಾಖ್ಯೆ ನೀಡುವಾಗ, ಹಿಂದೂ ಧರ್ಮಾಂತರ್ಗತ ಜಾತಿ ಎಂಬ ಉಲ್ಲೇಖ ಕಾಯ್ದೆಯಲ್ಲಿ ಎಲ್ಲೂ ಇಲ್ಲ. ಎರಡನೆಯ ಕಾರಣ, ಸರ್ವಸಾಧಾರಣ ಮತದಾರ ಸಂಘದಲ್ಲಿ ಅಸ್ಪಶ್ಯರನ್ನು ಸೇರಿಸಿದ್ದು, ಅದಕ್ಕೆ ಹಿಂದೂ ಧರ್ಮದ ಅನುಯಾಯಿತ್ವ ಇಲ್ಲವಾದರೆ ಯಾವುದಾದರೂ ಧರ್ಮದ ಅನುಯಾಯಿತ್ವದ ಆವಶ್ಯಕತೆ ಇದೆಯೆಂದೇನೂ ಹೇಳಲಾಗಿಲ್ಲ ಮತ್ತು ಮೂರನೆಯ ಕಾರಣ, ಅಸ್ಪಶ್ಯ ವರ್ಗಕ್ಕೆ ಕೊಡಲಾದ ಅವಕಾಶ ಹಿಂದೂಗಳ ಪಾಲಿನಿಂದಾಗಿರದೆ, ಸರ್ವ ಸಾಧಾರಣ ಜನತೆಯ ಪಾಲಿನಿಂದ ಕೊಟ್ಟದ್ದಾಗಿದೆ.

ಶೆಡ್ಯೂಲ್ಡ್ ಕಾಸ್ಟ್ ನ ಪಟ್ಟಿಯಲ್ಲಿ ಸೇರಿಸಿದ ಜಾತಿಗೆ ಹಿಂದೂ ಧರ್ಮದಲ್ಲಿ ನಿಷ್ಠೆ ಇದ್ದರೆ ಮಾತ್ರ ಅವರಿಗೆ ಆ ಮೀಸಲಿಟ್ಟ ಸ್ಥಾನದ ಸೌಲಭ್ಯ ಸಿಗುವುದೆಂದು ಹೇಳುವ ವರು ಒಂದು ಮಹತ್ವದ ವಿಚಾರದ ಕಡೆಗೆ ಗಮನ ನೀಡಿಲ್ಲವೆಂದು ನಮಗನಿಸುತ್ತದೆ. ಈ ಜಾತಿಯ ಜನರಿಗೆ ಮೀಸಲಿಟ್ಟ ಸ್ಥಾನದ ಲಾಭ ನೀಡಲಾಗಿರುವುದು, ಅವರ ಧಾರ್ಮಿಕ ನಿಷ್ಠೆಯನ್ನಾಧರಿಸಿ ಆಗಿರದೆ, ಮತದಾರರ ಜಾತಿತ್ವವನ್ನಾಧರಿಸಿಯೇ ಆಗಿದೆ. ಈ ಮೀಸಲು ಸ್ಥಾನದ ಬಗ್ಗೆ ಪಾತ್ರಾಪಾತ್ರತೆಯ ಸತ್ವಪರೀಕ್ಷೆ ಆಗಬೇಕಾದರೆ ಅದು ಜಾತಿಯ ಬಗೆಗಲ್ಲದೆ, ಧರ್ಮದ ಬಗೆಗಲ್ಲ. ಈ ಕೆಳಗಿನ ಉದಾಹರಣೆ, ಈ ಮಾತಿನ ಸತ್ಯತೆಯನ್ನು ಮನನ ಮಾಡುವುದು.

ಪಂಜಾಬಿನಲ್ಲಿ ಶೆಡ್ಯೂಲ್ಡ್ ಕಾಸ್ಟ್‌ನ ಪಟ್ಟಿಯಲ್ಲಿ ಅರೆಧರ್ಮೀಯರು ಮತ್ತು ರಾಮದಾಸಿಗಳನ್ನೂ ಸೇರಿಸಲಾಗಿದೆ. ಶೆಡ್ಯೂಲ್ಡ್ ಕಾಸ್ಟ್ ಬಗ್ಗೆ ಸರಕಾರಿ ಆರ್ಡರ್ ಇನ್ ಕೌನ್ಸಿಲ್‌ನ ಪ್ರಕಟನೆಯಲ್ಲಿ ಹೀಗಿದೆ. ಈ ಅರೆಧರ್ಮೀಯರ ಇತಿಹಾಸ ಅತ್ಯಂತ ಉದ್ಬೋಧಕವಾಗಿದೆ ಎನ್ನಬೇಕು. ಕೆಲ ವರ್ಷಗಳ ಹಿಂದೆ ಪಂಜಾಬಿನಲ್ಲಿ ಚಮ್ಮಾರರು ಮತ್ತು ಕ್ಷೌರಿಕರಂಥಾ ಅಸ್ಪಶ್ಯ ಜಾತಿಯ ಜನರು, ‘ಅರೆಧರ್ಮ ಮಂಡಳ’ವೆಂಬ ಹೆಸರಿನ ಸಂಸ್ಥೆಯನ್ನು ಆರಂಭಿಸಿದರು. ಈ ಸಂಸ್ಥೆಯ ಮೂಲ ಉದ್ದೇಶ, ಹಿಂದೂ ಧರ್ಮವನ್ನು ತ್ಯಜಿಸುವುದೇ ಆಗಿತ್ತು. ಸನ್ 1931ರ ಖಾನೇಸುಮಾರಿಯ ವೇಳೆ, ಈ ಸಂಸ್ಥೆಯು ನಾವು ಹಿಂದೂ ಧರ್ಮವನ್ನು ತ್ಯಜಿಸಿದ್ದೇವೆ. ಆದ್ದರಿಂದ ನಮ್ಮನ್ನು ಹಿಂದೂಗಳಿಂದ ಬೇರ್ಪಡಿಸಿ. ಸೆನ್ಸಸ್ ವರದಿಯಲ್ಲಿ ನಮ್ಮ ಜನಸಂಖ್ಯೆಯನ್ನು ‘ಅರೆಧರ್ಮೀಯ’ ಎಂಬ ಹೆಸರಿನಲ್ಲಿ ಸ್ವತಂತ್ರವಾಗಿ ನಮೂದಿಸಬೇಕು ಎಂದು ಪಂಜಾಬ್ ಸರಕಾರಕ್ಕೆ ಮನವಿ ಮಾಡಿತು.

ಈ ಬೇಡಿಕೆಯಿಂದ ಪಂಜಾಬಿನ ಹಿಂದೂ ಜನರು ರೊಚ್ಚಿಗೆದ್ದು, ತುಂಬಾ ಅತ್ಯಾಚಾರ ಮಾಡಿದರು. ಆದರೆ ಈ ಜನರು ತಮ್ಮ ನಿರ್ಧಾರದಿಂದ ಕದಲದೆ ಇದ್ದುದರಿಂದ ಅರೆಧರ್ಮೀಯರ ಚಳವಳಿ ಯಶಸ್ವಿಯಾಗಿ ಪಂಜಾಬ್‌ನ ಸೆನ್ಸಸ್ ವರದಿಯಲ್ಲಿ ಅವರ ಹೆಸರು ಅರೆಧರ್ಮೀಯರ ಪಟ್ಟಿಯಲ್ಲಿ, ಹಿಂದೂಗಳಿಂದ ಭಿನ್ನವಾಗಿ ದಾಖಲಾಯಿತು. ರಾಮದಾಸಿಗಳು ಸಿಖ್ ಧರ್ಮದ ಅನುಯಾಯಿಗಳು. ಅಂದರೆ ಅವರು ಹಿಂದೂಗಳಲ್ಲ. ಆದರೂ ಅವರನ್ನು ಶೆಡ್ಯೂಲ್ಡ್ ಕಾಸ್ಟ್‌ನಲ್ಲಿ ಸೇರಿಸಲಾಗಿದೆ. ಈ ಎರಡೂ ಉದಾಹರಣೆಯಿಂದ ಒಂದೇ ನಿಷ್ಕರ್ಷೆಗೆ ಬರಲಾಗುತ್ತದೆ. ಶೆಡ್ಯೂಲ್ಡ್ ಕಾಸ್ಟ್‌ನಲ್ಲಿ ಸೇರಿಸಲ್ಪಟ್ಟ ಜಾತಿ, ಮೀಸಲು, ರಾಜಕೀಯ ಹಕ್ಕಿಗೆ ಪಾತ್ರವೋ ಅಲ್ಲವೋ ಎಂದು ತಿಳಿಯಲು, ಅದು ಹಿಂದೂ ಧರ್ಮದಲ್ಲಿದೆಯೋ ಇಲ್ಲವೋ ಎಂಬ ಪ್ರಶ್ನೆ ನಿರರ್ಥಕ. ಉಮೇದುವಾರನು ಶೆಡ್ಯೂಲ್ಡ್ ಕಾಸ್ಟ್ ಪಟ್ಟಿಯಲ್ಲಿರುವ ಯಾವುದೇ ಜಾತಿಗೆ ಸೇರಿದ್ದರೂ ಸರಿ, ಅವರಿಗಾಗಿ ಮೀಸಲಿಟ್ಟ ರಾಜಕೀಯ ಹಕ್ಕು ಸಿಕ್ಕೇ ಸಿಗುತ್ತದೆ.

ಪರಧರ್ಮ ಸೇರಿದರೆ ಏನಾಗುವುದು?
ಅಸ್ಪಶ್ಯ ವರ್ಗದ ಹಿತಶತ್ರುಗಳು ಎತ್ತಿದ ಪ್ರಶ್ನೆಯನ್ನು ಕಿತ್ತೆಸೆಯಲು, ಇಲ್ಲಿನ್ನು ಹೆಚ್ಚು ಬರೆಯುವ ಆವಶ್ಯಕತೆ ಇದೆಯೆಂದು ನಮಗನಿಸುವುದಿಲ್ಲ. ಶೆಡ್ಯೂಲ್ಡ್ ಕಾಸ್ಟ್‌ನ ಪಟ್ಟಿಯಲ್ಲಿನ ಕೆಲ ಜಾತಿಗಳು ಹಿಂದೂ ಧರ್ಮವನ್ನು ತ್ಯಜಿಸಿವೆ. ಅಷ್ಟೇ ಅಲ್ಲ, ಬೇರೆ ಧರ್ಮವನ್ನು ಸ್ವೀಕರಿಸಿದರೆ ಅವರ ರಾಜಕೀಯ ಹಕ್ಕುಗಳ ಗತಿ ಏನಾಗುವುದು? ಅಸ್ಪಶ್ಯ ವರ್ಗದ ವಿರೋಧಿಗಳು ಈ ವಿಷಯದಲ್ಲಿ ಸಾಕಷ್ಟು ಪ್ರಖ್ಯಾತ ಹಿಂದೂ ಕಾಯ್ದೆ ಪಂಡಿತರ ಸಲಹೆ ಕೇಳಿದ್ದಾರೆಂದು ತಿಳಿದು ಬಂದಿದೆ. ಈ ಹಿಂದೂ ಪಂಡಿತರು ಶೆಡ್ಯೂಲ್ಡ್ ಕಾಸ್ಟ್‌ನ ಪಟ್ಟಿಯಲ್ಲಿರುವ ಜಾತಿಗಳು ಹಿಂದೂ ಧರ್ಮವನ್ನು ತ್ಯಜಿಸಲಿ ಎಂಬ ಆಭಾವಾತ್ಮಕ ಧೋರಣೆ ಹೊಂದಿದ ಮಾತ್ರಕ್ಕೆ ಅವರ ರಾಜಕೀಯ ಹಕ್ಕನ್ನು ಹಿಂದೆಗೆಯಬೇಕೆನ್ನುವುದು ಕಾಯ್ದೆಯ ದೃಷ್ಟಿಯಿಂದ ಸಬಲ ಕಾರಣವಲ್ಲ ಅಂದಿದ್ದಾರೆ. ಹೀಗೆ ಅಸ್ಪಶ್ಯರ ಹಿತಶತ್ರುಗಳ ಕುಟಿಲನೀತಿಗೆ ಕಡಿವಾಣ ಬಿದ್ದುದು, ನಮಗೆ ಸಂತೋಷವೆನಿಸಿದೆ. ಆದರೆ ಈ ಹಿಂದೂ ಕಾಯ್ದೆ ಪಂಡಿತರು, ಅಸ್ಪಶ್ಯರು ಧರ್ಮಾಂತರ ಮಾಡಿದರೆ ಅವರ ಹಕ್ಕನ್ನು ಕಳಕೊಳ್ಳುತ್ತಾರೆ ಎಂದಿರುವುದು ಮಾತ್ರ ನನಗೆ ಅಸಮಾಧಾನವಾಗಿದೆ.

ಈ ಹಿಂದೂ ಕಾಯ್ದೆ ಪಂಡಿತರ ವಿಚಾರದಲ್ಲಿ ಅತಿವ್ಯಾಪ್ತಿಯ ದೋಷವಿದೆ. ಹಾಗಾಗಿ ಅದು ಅಗ್ರಾಹ್ಯ ಎಂದು ನಮ್ಮ ಅನಿಸಿಕೆ. ನಮ್ಮ ಕಾಯ್ದೆಯಂತೆ ಜಾತೀಯ ಪ್ರತಿನಿಧಿತ್ವದ ವಿಷಯದಲ್ಲಿ ಕಾಯ್ದೆ ನಿರ್ಧರಿಸಿದ ವ್ಯವಸ್ಥೆಯಂತೆ ಅಸ್ಪಶ್ಯ ವರ್ಗಕ್ಕೆ ಸಾಮಾನ್ಯ ಮತದಾರ ಸಂಘದಲ್ಲಿರುವ ರಾಜಕೀಯ ಹಕ್ಕು, ಕೆಲಧರ್ಮಗಳನ್ನು ಅಂಗೀಕರಿಸಿದರೆ, ನಷ್ಟವಾಗುವುದು ಎಂಬುದು ನಿಜ. ಆದರೆ ಈ ನಿಯಮ ಎಲ್ಲ ಧರ್ಮಕ್ಕೂ ಅನ್ವಯಿಸುವುದೆಂದಿಲ್ಲ. ಅಸ್ಪಶ್ಯ ವರ್ಗವು, ಸಾಮಾನ್ಯ ಮತದಾರ ಸಂಘದಿಂದ ವಿಭಕ್ತವಾದ ಯಾವುದಾದರೂ ಧರ್ಮವನ್ನು ಅಂಗೀಕರಿಸಿದರೆ ಮಾತ್ರ ಅವರ ರಾಜಕೀಯ ಹಕ್ಕು ನಷ್ಟವಾಗುವುದು ಎಂದು ನಮ್ಮ ಸ್ಪಷ್ಟ ವಿಚಾರ. ಹೀಗೆ ವಿಭಕ್ತವಾದ ಧರ್ಮ ಯಾವುದೆಂಬುದು ವಿಭಿನ್ನ ಪ್ರಾಂತಗಳಲ್ಲಿ ಕಾಯ್ದೆ ವ್ಯವಸ್ಥೆ ಮಾಡಿದಂತಿದೆ.

ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ಹಿಂದೂಸ್ಥಾನದ ಎಲ್ಲ ಪ್ರಾಂತಗಳಲ್ಲಿಯೂ ಸಾಮಾನ್ಯ ಮತದಾರ ಸಂಘದಿಂದ ವಿಭಕ್ತವಾಗಿಸಿದೆ. ಇದರರ್ಥ, ಮುಸಲ್ಮಾನ ಇಲ್ಲವೇ ಕ್ರೈಸ್ತರಾದರೆ ಹಿಂದೂಸ್ಥಾನದ ಎಲ್ಲಾ ಪ್ರಾಂತಗಳಲ್ಲೂ ಅವರ ರಾಜಕೀಯ ಹಕ್ಕು ಶೂನ್ಯವಾಗುವುದು ಮತ್ತು ಸಿಖ್ಖರಾದರೆ ಕೇವಲ ಪಂಜಾಬ್‌ನಲ್ಲಿ ಅವರ ರಾಜಕೀಯ ಹಕ್ಕು ಇಲ್ಲವಾಗುವುದು. ಅಸ್ಪಶ್ಯ ವರ್ಗ, ಬುದ್ಧ, ಜೈನ, ಜ್ಯೂ ಮತ್ತು ಸಿಖ್ ಧರ್ಮಗಳನ್ನು ಪಂಜಾಬ್ ಹೊರತುಪಡಿಸಿ ಅಂಗೀಕರಿಸಿದರೆ, ಅವರ ರಾಜಕೀಯ ಹಕ್ಕುಗಳಿಗೆ ಯಾವುದೇ ರೀತಿಯ ಬಾಧೆ ಬರುವಂತಿಲ್ಲ ಎಂಬುದು ನಿರ್ವಿವಾದ. ಬಂಗಾಳದಲ್ಲಿ ಮಾತ್ರ ಬೌದ್ಧ ಧರ್ಮೀಯರು ಶೆಡ್ಯೂಲ್ಡ್‌ಕಾಸ್ಟ್ ಆಗಿ ಪರಿಗಣಿಸಲ್ಪಡುವುದಿಲ್ಲವಾದ್ದರಿಂದ ಅಲ್ಲಿ ಅವರ ರಾಜಕೀಯ ಹಕ್ಕೂ ಇಲ್ಲವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)