ಪತಿ ಮೃತಪಟ್ಟರೂ ಪ್ರಕರಣ ಮುಂದುವರಿಯಬೇಕು: ಕೇರಳ ಹೈಕೋರ್ಟ್
ಮದುವೆಯ ಸಿಂಧುತ್ವ ಕುರಿತ ಅರ್ಜಿ
ಕೊಚ್ಚಿ,ಮಾ.3: ಮದುವೆಯ ಸಿಂಧುತ್ವವನ್ನು ಪ್ರಶ್ನಿಸಿಸಲ್ಲಿಸಲಾದ ಅರ್ಜಿ ಕೋರ್ಟಿನ ಪರಿಗಣನೆಯಲ್ಲಿರುವಾಗ ಪತಿ ಮೃತಪಟ್ಟರೆ ಪತಿಯ ಸಂಬಂಧಿಕರನ್ನು ಫಿರ್ಯಾದುದಾರರನಾಗಿ ಪ್ರಕರಣಕ್ಕೆ ಸೇರಿಸಿ ಪ್ರಕರಣವನ್ನು ಮುಂದುವರಿಸಬೇಕೆಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿಯೊಂದಿಗಿನ ತನಗಿರುವ ವಿವಾಹ ಸಂಬಂಧವನ್ನು ಅಸಿಂಧು ಮತ್ತು ಕಾನೂನು ಬಾಹಿರವಾಗಿದೆ ಎಂದು ಘೋಷಿಸುವಂತೆ ಆಗ್ರಹಿಸಿ ಕುಟುಂಬ ಕೋರ್ಟಿಗೆ ಎರ್ನಾಕುಲಂನ ಕೆ.ಜೆ. ಆಂಟನಿ ಎಂಬವರು ದೂರು ನೀಡಿದ್ದರು. ಆದರೆ ವಿಚಾರಣಾ ಹಂತದಲ್ಲಿ ಆಂಟನಿ ನಿಧನರಾಗಿದ್ದರು.
ಕುಟುಂಬ ಕೋರ್ಟು ಆಂಟನಿಯ ನಿಧನದಿಂದಾಗಿ ಪ್ರಕರಣವನ್ನು ಅಲ್ಲಿಗೆ ಮುಗಿಸಿತ್ತು. ದೂರು ದಾರ ನಿಧನನಾದ್ದರಿಂದ ಪ್ರಕರಣ ಅಸ್ತಿತ್ವ ಕಳಕೊಳ್ಳುತ್ತದೆ ಎಂದು ಕುಟುಂಬ ಕೋರ್ಟು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆಂಟನಿಯ ಸಹೋದರರು ತಮ್ಮನ್ನು ಪ್ರಕರಣದಲ್ಲಿ ಸೇರಿಸಿ ಪ್ರಕರಣವನ್ನು ಮುಂದುವರಿಸಲು ಅನುಮತಿಸಬೇಕೆಂದು ಕುಟುಂಬಕೋರ್ಟಿಗೆ ಮನವಿ ಸಲ್ಲಿಸಿದ್ದರು.
ಕುಟುಂಬಕೋರ್ಟು ಆಂಟನಿ ಸಹೋದರರ ಮನವಿಯನ್ನು ತಿರಸ್ಕರಿಸಿತ್ತು. ಕುಟುಂಬ ಕೋರ್ಟಿನ ತೀರ್ಪಿನ ವಿರುದ್ಧ ಆಂಟನಿ ಸಹೋದರರಾದ ಕೆ.ವಿ. ವರ್ಗೀಸ್ ಹಾಗೂ ಇತರರ ಸಹೋದರರು ಪ್ರಕರಣದಲ್ಲಿ ನಮ್ಮನ್ನೂ ಕಕ್ಷಿದಾರರಾಗಿ ಸೇರಿಸಿ ಪ್ರಕರಣ ಮುಂದುವರಿಸಲು ಅನುವು ಮಾಡಿಕೊಡ ಬೇಕೆಂದು ಕೇರಳ ಹೈಕೋರ್ಟಿನ ಮೊರೆ ಹೋಗಿದ್ದರು.
ಇವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಹೈಕೋರ್ಟು, ಅರ್ಜಿದಾರನ(ಆಂಟನಿಯ) ಸಹೋದರರನ್ನು ಕೇಸಿಗೆ ಸೇರಿಸಿ ಸದ್ರಿ ಪ್ರಕರಣವನ್ನು ಮುಂದುವರಿಸಬೇಕು ಎಂದು ಕುಟುಂಬ ಕೋರ್ಟಿಗೆ ಆದೇಸಿದ್ದು, ಪತಿ ಮೃತಪಟ್ಟರೂ ಪ್ರಕರಣ ಕೊನೆಗೊಳ್ಳುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ತನ್ನ ಪತ್ನಿಯೊಂದಿಗಿನ ಮದುವೆಯನ್ನು ಅಸಿಂಧುಗೊಳಿಸಬೇಕೆಂದು ಆಂಟನಿ ಕುಟುಂಬ ಕೋರ್ಟಿನ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ ಅವರು ದುರದೃಷ್ಣವಶಾತ್ ಮೃತಪಟ್ಟಿದ್ದಾರೆ. ಆದರೆ ನಿಧನರಾದ ವ್ಯಕ್ತಿಯ ಸಹೋದರರಾದ ನಾವು ನಿಧರಾದ ವ್ಯಕ್ತಿಯ ಆಸ್ತಿಯಲ್ಲಿ ಹಕ್ಕು ಹೊಂದಿದ್ದೇವೆ. ಕುಟುಂಬ ಕೋರ್ಟು ಆಂಟನಿ ನಿಧನರಾದರೆಂದು ಪ್ರಕರಣವನ್ನೆ ಮುಗಿಸಿ ಬಿಟ್ಟಿದೆ. ಇದರಿಂದ ನಮಗೆ ಅನ್ಯಾಯವಾಗುತ್ತದೆ.
ನಮ್ಮ ಹಕ್ಕುಗಳು ನಿರಾಕರಿಸಲ್ಪಡುತ್ತವೆ. ಒಂದು ವೇಳೆ ಸದ್ರಿ ಮಹಿಳೆ ಮತ್ತು ಆಂಟನಿಯ ವಿವಾಹ ಅಸಿಂಧು ಎಂದು ತೀರ್ಪು ಬಂದರೆ ಆಂಟನಿಯವರ ಪತ್ನಿಯಾಗಿ ಮಹಿಳೆಯನ್ನು ಪರಿಗಣಿಸಲಾಗದು. ಮಾತ್ರವಲ್ಲ ಮಹಿಳೆಗೆ ಆಂಟನಿಯ ಆಸ್ತಿಯಲ್ಲಿ ಪಾಲು ನೀಡಲು ಸಾಧ್ಯವಿಲ್ಲ. ಆದ್ದರಿಂದ ಈ ಪ್ರಕರಣವನ್ನು ಮುಂದುವರಿಸಲು ತಮಗೆ ಅವಕಾಶ ನೀಡಬೇಕೆಂದು ಆಂಟನಿಯ ಸಹೋದರರು ಹೈಕೋರ್ಟಿನ ಮೊರೆಹೋಗಿದ್ದರು.
ಆಂಟನಿಯ ಸಹೋದರರ ವಾದವನ್ನು ಪುರಸ್ಕರಿಸಿದ ಕೇರಳ ಹೈಕೋರ್ಟಿನ ಡಿವಿಜನಲ್ ಬೆಂಚ್ ಕುಟುಂಬ ಕೋರ್ಟಿನ ಹಿಂದಿನ ಆದೇಶವನ್ನು ರದ್ದು ಪಡಿಸಿದ್ದಲ್ಲದೆ, ಆಂಟನಿಯ ಸಹೋದರರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಸೇರ್ಪಡೆಗೊಳಿಸಿ, ಪ್ರಕರಣವನ್ನು ಮುಂದುವರಿಸಬೇಕು ಎಂದು ಕುಟುಂಬ ಕೋರ್ಟಿಗೆ ಆದೇಶಿಸಿದೆ ಎಂದು ವರದಿ ತಿಳಿಸಿದೆ.