ಮಣಿಪುರದಲ್ಲಿ ನಾಳೆ ಮೊದಲ ಹಂತದ ಮತದಾನ
ಇಂಫಾಲ,ಮಾ.3: 60 ಸದಸ್ಯಬಲದ ಮಣಿಪುರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ನಡೆಯಲಿದೆ. ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ಬಿಷ್ಣುಪುರ, ಚುಡಾಚಂದ್ರಪುರ ಮತ್ತು ಕಾಂಗ್ಪೊಕ್ಪಿ ಜಿಲ್ಲೆಗಳ 38 ವಿಧಾನಸಭಾ ಕ್ಷೇತ್ರಗಳಲ್ಲಿ 1,643 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 168 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ರಾಜ್ಯದಲ್ಲಿ ಒಟ್ಟು 9,28,573 ಪುರುಷ ಮತ್ತು 9,73,989 ಮಹಿಳಾ ಮತದಾರ ರಿದ್ದಾರೆ. 45,642 ಮತದಾರರು ಇದೇ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸ ಲಿದ್ದಾರೆ.
ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದಲ್ಲಿ ಮಣಿಪುರದಲ್ಲಿ ಸಂಯುಕ್ತ ನಾಗಾ ಮಂಡಳಿಯು ಹೇರಿರುವ ನಿರಂತರ ಆರ್ಥಿಕ ದಿಗ್ಬಂಧನ ಮತ್ತು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ಮರಳಿಸುವಲ್ಲಿ ರಾಜ್ಯ ಸರಕಾರದ ವೈಫಲ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದವು. ಅಭಿವೃದ್ಧಿ ಕೊರತೆ, ವ್ಯಾಪಕ ಭ್ರಷ್ಟಾಚಾರ, ಹಣದ ದುರುಪಯೋಗ ಹಾಗೂ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಇವು ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯಗಳಾಗಿದ್ದವು.
ಚುನಾವಣೆಯಲ್ಲಿ ಎಲ್ಲರ ಕಣ್ಣು ಮಾನವ ಹಕ್ಕುಗಳ ಕಾರ್ಯಕರ್ತೆ ಇರೋಮ್ ಶರ್ಮಿಳಾ ಅವರ ಮೇಲಿದೆ. ಕಳೆದ ವರ್ಷ ತನ್ನ 16 ವರ್ಷಗಳ ಉಪವಾಸ ಮುಷ್ಕರಕ್ಕೆ ಅಂತ್ಯ ಹಾಡಿ ರಾಜಕೀಯವಾಗಿ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ’ಯ ವಿರುದ್ಧ ಹೋರಾಟವನ್ನು ಮುಂದುವರಿಸಲು ‘ಪೀಪಲ್ಸ್ ರಿಸರ್ಜನ್ಸ್ ಆ್ಯಂಡ್ ಜಸ್ಟೀಸ್ ಅಲಯನ್ಸ್ ’ಹೆಸರಿನಲ್ಲಿ ಹೊಸಪಕ್ಷವನ್ನು ಹುಟ್ಟು ಹಾಕಿರುವ ಅವರು ಚುನಾವಣಾ ಕಣದಲ್ಲಿದ್ದಾರೆ. ಪಕ್ಷವು ಮೂವರು ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದ್ದು, ಈ ಪೈಕಿ ಓರ್ವ ಅಭ್ಯರ್ಥಿಯ ಹಣೆಬರಹ ಮೊದಲ ಹಂತದಲ್ಲಿ ನಿರ್ಧಾರವಾಗಲಿದೆ.
ಎರಡನೇ ಮತ್ತು ಕೊನೆಯ ಹಂತದ ಮತದಾನ ಮಾ.8ರಂದು ನಡೆಯಲಿದ್ದು, ಮಾ.11ರಂದು ಮತಎಣಿಕೆ ನಡೆಯಲಿದೆ.