ಉಡುಪಿ: ದುಂಡಪ್ಪಗೆ 'ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ' ಪ್ರದಾನ
ಉಡುಪಿ, ಮಾ.4: ಸಾಹಿತ್ಯ ಕೃತಿಯನ್ನು ಓದಿ ಅರ್ಥೈಸುವುದೇ ವಿಮರ್ಶೆ ಯಾಗಿದೆ. ಸಾಹಿತ್ಯ ಎಂಬುದು ಜೀವನ. ಅದರಲ್ಲಿರುವ ತಪ್ಪು ಸರಿಯನ್ನು ತಿಳಿದುಕೊಳ್ಳುವುದು ಕೂಡ ವಿಮರ್ಶೆ. ವಿಮರ್ಶಕರು ಜ್ಞಾನದ ಕಡೆ ಹೆಚ್ಚು ಗಮನ ಕೊಡುತ್ತಾರೆ ಎಂದು ವಿಮರ್ಶಕ ಎಚ್.ದುಂಡಪ್ಪ ಬೆಂಗಳೂರು ಹೇಳಿದ್ದಾರೆ.
ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ವತಿಯಿಂದ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಮುದ್ದಣ ಸಾಹಿತ್ಯೋತ್ಸವದಲ್ಲಿ 'ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ'ಯನ್ನು ಸ್ವೀಕರಿಸಿ 'ಸಾಹಿತ್ಯ ಮತ್ತು ವಿಮರ್ಶೆ' ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಱನಂದಳಿಕೆ ಮುದ್ದಣ ಹೆಜ್ಜೆ ಗುರುತು -31ೞಭಾವಚಿತ್ರಗಳನ್ನು ಅನಾವರಣ ಗೊಳಿಸಿ ಮಾತನಾಡಿ, ನವೋದಯ ಕಾಲಕ್ಕೆ ಹೊಸ ರೂಪದ ಕೃತಿಗಳನ್ನು ನೀಡಿದವರು ಕವಿ ಮುದ್ದಣ. ಈ ಕೃತಿಗಳನ್ನು ಸಮಾಜ ಸ್ವೀಕರಿಸುತ್ತದೆಯೋ ಇಲ್ಲವೊ ಎಂಬ ಕೀಳರಿಮೆ ಅವರಲ್ಲಿತ್ತು ಎಂದರು.
ಮಣಿಪಾಲ ವಿವಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಪ್ರಶಸ್ತಿ ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಮಂಗಳೂರು ಮುದ್ದಣ ಪ್ರಕಾಶನದ ಗೌರವ ನಿರ್ದೇಶಕ ನಂದಳಿಕೆ ಬಾಲಚಂದ್ರರಾವ್ ಉಪಸ್ಥಿತರಿದ್ದರು. ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಶಮಂತ್ ಕುಮಾರ್ ಪ್ರಶಸ್ತಿ ಪತ್ರ ವಾಚಿಸಿ, ವಂದಿಸಿದರು. ಉಪನ್ಯಾಸಕಿ ಸುಪ್ರೀತಾ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಭಾವಗಾಯನ ನಡೆಯಿತು.