ಆಝಾದಿಗೆ ರಿಜಿಜು ಹೊಸ ವ್ಯಾಖ್ಯಾನ!
ಲಕ್ನೋ, ಮಾ.5: "ನೆಹರೂ ಗಾಂಧಿ ಕುಟುಂಬದವರನ್ನು ನೀವು ಟೀಕಿಸಲು ಸಾಧ್ಯವೇ? ಇದೀಗ ಮೋದಿಯನ್ನು ಟೀಕಿಸಿದರೂ ನಿಮ್ಮ ವಿರುದ್ಧ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ನಿಮಗೆ ಇನ್ನೇನು ಸ್ವಾತಂತ್ರ್ಯ ಬೇಕು?"
ವಿವಾದಾತ್ಮಕ ಸಚಿವ ಕಿರಣ್ ರಿಜಿಜು ಹೀಗೆ ಹೇಳಿಕೆ ನೀಡುವ ಮೂಲಕ 'ಆಝಾದಿ' ಪದಕ್ಕೆ ಹೊಸ ವ್ಯಾಖ್ಯಾನ ಬರೆದಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, "ದೇಶದಲ್ಲಿ ನಡೆಯುತ್ತಿರುವುದು ಎಡಪಂಥೀಯರು ಹಾಗೂ ರಾಷ್ಟ್ರೀಯವಾದಿಗಳ ನಡುವಿನ ಸೈದ್ಧಾಂತಿಕ ಸಮರ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ, ದೇಶವನ್ನು ದೂಷಿಸುವ ಸ್ವಾತಂತ್ರ್ಯವಲ್ಲ" ಎಂದು ಪ್ರತಿಪಾದಿಸಿದ್ದಾರೆ.
"ಮುಸ್ಲಿಮರನ್ನು ಹೊಗಳಿದರೆ ಆ ವ್ಯಕ್ತಿ ಜಾತ್ಯತೀತ ಎನಿಸಿಕೊಳ್ಳುತ್ತಾನೆ. ಆದರೆ ಹಿಂದೂಗಳನ್ನು ಹೊಗಳಿದರೆ ಆತನನ್ನು ಕೋಮುವಾದಿ ಎಂದು ಪರಿಗಣಿಸಲಾಗುತ್ತದೆ" ಎಂದೂ ರಿಜಿಜು ಕಿಡಿ ಕಾರಿದ್ದಾರೆ.
ಅಸಹಿಷ್ಣುತೆ ಬಗೆಗೆ ಕೇಳಿದ ಪ್ರಶ್ನೆಗೆ, "ಅಸಹಿಷ್ಣುತೆ ಬಗೆಗಿನ ಚರ್ಚೆಯನ್ನು ತಪ್ಪುದಾರಿಗೆ ಎಳೆಯಲಾಗಿದೆ ಎನ್ನುವುದು ನನ್ನ ಅಭಿಪ್ರಾಯ. ತಮ್ಮ ಸಿದ್ಧಾಂತವನ್ನು ಜನ ಒಪ್ಪಿಕೊಳ್ಳುತ್ತಿಲ್ಲ ಎನ್ನುವುದರಿಂದ ಕೆಲ ಮಂದಿ ಹತಾಶರಾಗಿದ್ದಾರೆ. ಆದ್ದರಿಂದ ವೃಥಾ ಚರ್ಚೆಗೆ ಎಳೆಯುತ್ತಿದ್ದಾರೆ" ಎಂದು ಹೇಳಿದರು. "ಆದರೆ ಸರ್ಕಾರದ ನೀತಿ ಸ್ಪಷ್ಟ. ದೇಶಾದ್ಯಂತ ಕಾಲೇಜು ಹಾಗೂ ವಿವಿಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಇರಬೇಕು. ಭಿನ್ನಾಭಿಪ್ರಾಯ ಎಲ್ಲರ ಹಕ್ಕು. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಟೀಕಿಸುವುದು ಆರೋಗ್ಯಕರ ಬೆಳವಣಿಗೆ. ಏಕೆಂದರೆ ಇದು ಸರ್ಕಾರವನ್ನು ಹೆಚ್ಚು ಜವಾಬ್ದಾರಿಯುತವಾಗಿ ಮಾಡುತ್ತದೆ" ಎಂದು ಹೇಳಿದರು.