ಕಸ್ತೂರಿ ರಂಗನ್ ವರದಿ ಮಲೆನಾಡಿಗರ ನಿದೆ್ದಗೆಡಿಸಿ ಕೇಂದ್ರ ಸರಕಾರದ ಅಧಿಸೂಚೆ
ಕಸ್ತೂರಿ ರಂಗನ್ ವರದಿಯ ಬಗ್ಗೆ ಹೊಸ ಅಧಿಸೂಚನೆಯಲ್ಲಿ ಕೇಂದ್ರ ಸರಕಾರ ರಾಜ್ಯದ ಜನತೆಗೆೆ ಅನ್ಯಾಯ ಮಾಡಿದೆ. ಜನರ ಹಿತ ಕಾಪಾಡುವಲ್ಲಿ ರಾಜ್ಯದ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಇಲ್ಲಿ ಹೋರಾಟ ಮಾಡುತ್ತಿದ್ದವರು ಸಂಸತ್ತಿನಲ್ಲಿ ಮಾತನಾಡಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ರಾಜ್ಯ ಸರಕಾರ ನೀಡಿರುವ ವರದಿಯನ್ನು ಕೇಂದ್ರ ಸಂಪೂರ್ಣ ಕಡೆಗಣಿಸುವ ಮೂಲಕ ರಾಜ್ಯಕ್ಕೆ ದ್ರೋಹವೆಸಗಿದೆ. ಕಸ್ತೂರಿ ರಂಗನ್ ವರದಿಯನ್ನು ಸರಕಾರ ಕೂಡಲೇ ಪೂರ್ಣವಾಗಿ ಕೈಬಿಡಬೇಕು. ಜನರೊಂದಿಗೆ ಸೇರಿ ಪರಿಸರ ಸಂರಕ್ಷಣೆಗೆ ಹೊಸ ನೀತಿಯನ್ನು ರೂಪಿಸಬೇಕು. ಇದು ಮಲೆನಾಡಿನ ಜನರ ಅಳಿವು ಉಳಿವಿನ ಪ್ರಶ್ನೆಯಾಗಿದ್ದು ಇದರ ಅನುಷ್ಠಾನದ ವಿರುದ್ಧ್ದ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಿದ್ಧ.
-ಬಿ.ಎಂ.ಭಟ್, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ
ದೇಶದ ಆರು ರಾಜ್ಯಗಳ ಮಲೆನಾಡಿನ ಜನರ ನಿದ್ದೆಗೆಡಿಸಿದ್ದ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಕೇಂದ್ರದ ಪರಿಸರ ಸಚಿವಾಲಯ ಫೆ.27ರಂದು ಪ್ರಕಟಿಸಿದೆ. 2015ರ ಸೆಪ್ಟಂಬರ್ 14ರ ಅಧಿಸೂಚನೆಯ ಅವಧಿ ಮಾರ್ಚ್ 3ಕ್ಕೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಹಳೆಯ ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡದೆ ಮತ್ತೊಂದು ತಾತ್ಕಾಲಿಕ ಅಧಿಸೂಚನೆಯನ್ನು ಕೇಂದ್ರ ಸರಕಾರ ಹೊರಡಿಸಿದ್ದು, ರಾಜ್ಯದ ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ.
ಕೇಂದ್ರ ಸರಕಾರ ಈ ಬಾರಿಯೂ ಅಂತಿಮ ಅಧಿಸೂಚನೆಯನ್ನು ಮುಂದೂಡಿ ಮತ್ತೊಮ್ಮೆ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಕಳೆದ ಸೆ.14ರ ಅಧಿಸೂಚನೆಯಲ್ಲಿ ಕೇರಳದ ಬೇಡಿಕೆಯನ್ನು ಬಹುತೇಕ ಅಂಗೀಕರಿಸಿದ್ದ ಕೇಂದ್ರ ಸರಕಾರ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳ ಜನರ ಬೇಡಿಕೆಗಳನ್ನು ತಿರಸ್ಕರಿಸಿತ್ತು. ಈ ಬಾರಿಯಾದರೂ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳು ಸಲ್ಲಿಸಿದ್ದ ಆಕ್ಷೇಪಗಳನ್ನು ಪರಿಗಣಿಸುವ ಭರವಸೆಯನ್ನು ಮಲೆನಾಡಿನ ಜನರು ಇಟ್ಟುಕೊಂಡಿದ್ದರು. ಆದರೆ ಯಾವ ಮಾರ್ಪಾಡುಗಳನ್ನೂ ಮಾಡದೆ ಮತ್ತೊಂದು ಅಧಿಸೂಚನೆ ಹೊರಡಿಸಿ ಪರಿಸರ ಸೂಕ್ಷ್ಮ ಪ್ರದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಿಂದಿನಂತೆ ರಾಜ್ಯದ ಹತ್ತು ಜಿಲ್ಲೆಗಳ 1,500 ಕ್ಕೂ ಹೆಚ್ಚು ಗ್ರಾಮಗಳು ಇದರ ವ್ಯಾಪ್ತಿಯಲ್ಲಿ ಬರುತ್ತಿವೆ. ರಾಜ್ಯದ ಮಲೆನಾಡಿನ ಜನತೆ ನ್ಯಾಯಕ್ಕಾಗಿ ನಡೆಸಿದ ಹೋರಾಟಗಳಿಗೆ ಈ ಬಾರಿಯೂ ಯಾವುದೇ ಫಲ ದೊರೆತಿಲ್ಲ.
ಕಸ್ತೂರಿ ರಂಗನ್ ವರದಿಯ ಬಗ್ಗೆ ಹಿಂದೆ 2014ರಲ್ಲಿ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಿದಾಗ ಕೇರಳ ರಾಜ್ಯ ಮುಂದಿಟ್ಟಿದ್ದ ಬೇಡಿಕೆಗಳನ್ನು ಕೇಂದ್ರ ಸರಕಾರ ಅಂಗೀಕರಿಸಿ ಅಲ್ಲಿನ ಜನವಸತಿ ಪ್ರದೇಶಗಳನ್ನು ಹೊರಗಿಟ್ಟು ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ರಾಜ್ಯದ ಮಲೆನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಭಾರೀ ಪ್ರತಿಭಟನೆಗಳೂ ನಡೆದಿದ್ದವು, ರಾಜ್ಯ ಸರಕಾರ ಈ ಬಗ್ಗೆ ಗ್ರಾಮಗಳಿಗೆ ತೆರಳಿ ಮತ್ತೊಮ್ಮೆ ವರದಿಯನ್ನು ತಯಾರಿಸಿ ಸಲ್ಲಿಸಿತ್ತು. ಆದರೆ ಇದಕ್ಕೆ ಯಾವ ಮಾನ್ಯತೆಯನ್ನೂ ಕೇಂದ್ರ ಸರಕಾರ ನೀಡಿಲ್ಲ. ಈಗಿನ ಅಧಿಸೂಚನೆಯಲ್ಲೂ 2014ರಂತೆಯೇ ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಗಡಿಗಳೇ ಇರಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಈಗಿನ ಹೊಸ ಅಧಿಸೂಚನೆಯಂತೆ ಗುಜರಾತಿನ 449 ಚದರ ಕಿ.ಮೀ., ಮಹಾರಾಷ್ಟ್ರದ 17,340 ಚ. ಕಿ.ಮೀ., ಗೋವಾದ 1,461 ಚ.ಕಿ.ಮೀ., ಕರ್ನಾಟಕದ 20,668 ಚ.ಕಿ.ಮೀ, ತಮಿಳುನಾಡಿನ 6,914 ಚ.ಕಿ.ಮೀ,ಹಾಗೂ ಕೇರಳದ 9,993 ಚ.ಕಿ.ಮೀ. ಪ್ರದೇಶಗಳನ್ನು ಪರಿಸರ ಸೂಕ್ಷ್ಮಪ್ರದೇಶಗಳೆಂದು ಗುರುತಿಸಲಾಗಿದೆ. ಕೇಂದ್ರ ಸರಕಾರದ ಪರಿಸರ ಸಚಿವಾಲಯ ಈ ಅಧಿಸೂಚನೆಯ ಬಗ್ಗೆ ಯಾವುದಾದರೂ ತಕರಾರುಗಳಿದ್ದರೆ 60 ದಿನಗಳ ಒಳಗಾಗಿ ಸಲ್ಲಿಸುವ ಅವಕಾಶವನ್ನು ನೀಡಿದೆ.
ಏನಿದು ವರದಿ ಪಶ್ಚಿಮಘಟ್ಟ ಪ್ರದೇಶ ಜಗತ್ತಿನ ಅತ್ಯಂತ ಸೂಕ್ಷ್ಮವಾದ ಸಸ್ಯ, ಪ್ರಾಣಿ, ಜೀವ ಸಂಕುಲಗಳ ತಾಣವಾಗಿದ್ದು, ಅದನ್ನು ಸಂರಕ್ಷಿಸಬೇಕು ಎಂದು ಕೇಂದ್ರ ಸರಕಾರ ಮಾಧವ ಗಾಡ್ಗಿಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಗಾಡ್ಗಿಲ್ ಸಮಿತಿ ತನ್ನ ವರದಿ ನೀಡಿತ್ತು. ವರದಿ ಅನುಷ್ಠಾನಕ್ಕೆ ಮುಂದಾದಾಗ ಅದರ ವಿರುದ್ಧ ಸಂಬಂಧಿಸಿದ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಕೇಂದ್ರ ಸರಕಾರ ಈ ವರದಿಯ ಬಗ್ಗೆ ಪರಿಶೀಲನೆ ನಡೆಸಲು ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಹಿಂದಿನ ವರದಿಯನ್ನು ಹಾಗೂ ಪಶ್ಚಿಮ ಘಟ್ಟದ ಸ್ಥಿತಿಗತಿಗಳನ್ನು ಪರಿಶೀಲಿಸಿ ಮತ್ತೊಂದು ವರದಿಯನ್ನು ನೀಡಿತ್ತು. ಇದೇ ಕಸ್ತೂರಿ ರಂಗನ್ ವರದಿಯಾಗಿದೆ. ಈ ವರದಿಯನ್ನು ಆಧಾರವಾಗಿಟ್ಟು ಕೆಂದ್ರ ಸರಕಾರದ ಪರಿಸರ ಸಚಿವಾಲಯ 2013ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ಪ್ರತಿಭಟನೆಗಳು, ಹೋರಾಟಗಳು ನಡೆದಾಗ ಕೇಂದ್ರ ಸರಕಾರ ವರದಿಯಲ್ಲಿನ ಪರಿಸರ ಸೂಕ್ಷ್ಮ ಪ್ರದೇಶಗಳ ಮರುನಿರ್ಣಯಕ್ಕೆ ಮುಂದಾಯಿತು. ಮರು ಪರಿಶೀಲನೆಯ ಬಳಿಕ 2014ರಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಕೇರಳದ ಬೇಡಿಕೆಗಳಿಗೆ ಮನ್ನಣೆ ನೀಡಲಾಗಿತ್ತು. 2017ರ ಅಧಿಸೂಚನೆಯಲ್ಲಿ ಹಿಂದಿನ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯಗಳಲ್ಲಿದ್ದು, ಅಂತಿಮ ಅಧಿಸೂಚನೆ ಹೊರಡಿಸುವ ಒತ್ತಡ ಸರಕಾರದ ಮೇಲಿದೆ. ಅಂತಿಮ ಅಧಿಸೂಚನೆ ಹೊರಬರುವ ಮೊದಲು ಜನವಸತಿ ಪ್ರದೇಶಗಳನ್ನು ಹೊರಗಿಡದಿದ್ದರೆ ಅದು ಮಲೆನಾಡಿನ ಜನರ ಪಾಲಿಗೆ ಆತಂಕದ ವಿಚಾರವಾಗಲಿದೆ.
ಪರಿಸರ ಸೂಕ್ಷ್ಮಪ್ರದೇಶಗಳು ಎಲ್ಲೆಲ್ಲಿ?
ರಾಜ್ಯದ ಹತ್ತು ಜಿಲ್ಲೆಗಳ 38 ತಾಲೂಕುಗಳ 1,576 ಗ್ರಾಮಗಳ 20,668 ಚದರ ಕಿ.ಮೀ. ವ್ಯಾಪ್ತಿಯನ್ನು ಈಗಿನ ಅಧಿಸೂಚನೆಯಂತೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ರಾಜ್ಯದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ 62, ಬೆಳಗಾವಿಯ 1, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ 21 ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ 27, ಕೊಪ್ಪದ 32, ಮೂಡಿಗೆರೆಯ 27, ನರಸಿಂಹರಾಜಪುರದ 35, ಶೃಂಗೇರಿಯ 26 ಗ್ರಾಮಗಳು.ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 23, ಸೋಮವಾರಪೇಟೆಯ 11, ವೀರಾಜಪೇಟೆಯ 21 ಗ್ರಾಮಗಳು. ಹಾಸನ ಜಿಲ್ಲೆಯ ಆಲೂರು ತಾಲೂಕಿನ 1 ಗ್ರಾಮ, ಸಕಲೇಶಪುರದ 34 ಗ್ರಾಮಗಳು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ 43, ಭಟ್ಕಳದ 28, ಹೊನ್ನಾವರದ 44, ಜೋಯ್ಡಾದ 110, ಕಾರವಾರದ 39, ಕುಮಟಾದ 43, ಸಿದ್ದಾಪುರ 107, ಶಿರ್ಸಿ 125, ಯಲ್ಲಾಪುರದ 87 ಗ್ರಾಮಗಳು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 17, ಪುತ್ತೂರಿನ 11, ಸುಳ್ಯದ 18 ಗ್ರಾಮಗಳು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ 126, ಸಾಗರದ 134, ಶಿಕಾರಿಪುರದ 12,ಶಿವಮೊಗ್ಗದ 66, ತೀರ್ಥಹಳ್ಳಿಯ 146 ಗ್ರಾಮಗಳು. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯ 62 ಗ್ರಾಮಗಳು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ 13 ಹಾಗೂ ಕುಂದಾಪುರದ 24 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಬರಲಿವೆೆ. ಈ ಗ್ರಾಮಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಕೃಷಿಕರು ಇನ್ನು ಮುಂದೆ ಸರಕಾರಗಳು ನಿರ್ಧರಿಸುವ ಪ್ರಕಾರವೇ ಬದುಕು ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಆದಿವಾಸಿಗಳೇ ಬಲಿಯಾಗಲಿದ್ದಾರೆ
ಅರಣ್ಯ ಸಂರಕ್ಷಣೆ ಪರಿಸರ ಸಂರಕ್ಷಣೆಯ ಎಲ್ಲ ಯೋಜನೆಗಳಂತೆ ಇಲ್ಲೂ ಮೊದಲು ಬಲಿಯಾಗುವವರು ದೇಶದ ಆದಿವಾಸಿಗಳಾಗಿದ್ದಾರೆ. ಅರಣ್ಯ ಮತ್ತು ಅರಣ್ಯಕ್ಕೆ ತಾಗಿಕೊಂಡಿರುವ ಪ್ರದೇಶಗಳಲ್ಲೇ ಆದಿವಾಸಿಗಳು ತಮ್ಮ ಬದುಕನ್ನು ನಡೆಸುತ್ತಾರೆ. ಇವರ ಬಹುತೇಕ ನೆಲೆಗಳು ಈ ವರದಿಯ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿಯೇ ಬರುತ್ತವೆ. ಆರು ರಾಜ್ಯಗಳ ಲಕ್ಷಾಂತರ ಕೃಷಿಕರ, ಮೂಲನಿವಾಸಿಗಳ ಬದುಕಿನೊಂದಿಗೆ ನೇರವಾಗಿ ಸಂಬಂಧವಿರುವ ಈ ಅಧಿಸೂಚನೆಯನ್ನು ಹೊರಡಿಸುವಾಗ ಸರಕಾರ ಹಾಗೂ ಪರಿಸರ ಸಚಿವಾಲಯ ರಾಜ್ಯಗಳ ಬೇಡಿಕೆಯನ್ನು ಈ ಬಾರಿಯೂ ಸರಿಯಾಗಿ ಪರಿಶೀಲಿಸಿಲ್ಲ. ಅದರಲ್ಲೂ ಮೂಲನಿವಾಸಿಗಳ ಮೇಲೆ ಇದು ಬೀರಲಿರುವ ಪರಿಣಾಮಗಳ ಬಗ್ಗೆ ಯಾವುದೇ ಚಿಂತನೆ ನಡೆದಿರುವಂತೆ ತೋರುತ್ತಿಲ್ಲ. ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಪರಿಸರ ಸೂಕ್ಷ್ಮ ಎಂದು ಗುರುತಿಸಿರುವ ಪ್ರದೇಶದಲ್ಲಿ ಲಕ್ಷಾಂತರ ಕೃಷಿಕರು ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ರಾಜ್ಯದ ಮೂಲನಿವಾಸಿಗಳಲ್ಲಿ ಬಹುಪಾಲು ಜನರು ಈ ಪ್ರದೇಶಗಳಲ್ಲೇ ಬದುಕನ್ನು ನಡೆಸುತ್ತಿದ್ದಾರೆ. ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೇಂದ್ರ ಸರಕಾರದ ಮೇಲೆ ತೀವ್ರ ಒತ್ತಡ ಹೇರಿ ರಾಜ್ಯದ ಮಲೆನಾಡಿನ ಜನರ ಹಿತ ಕಾಪಾಡುವ ಪ್ರಯತ್ನ ನಡೆಸುವ ಅಗತ್ಯವಿದೆ.
ನಿರ್ಬಂಧಗಳೇನು?
ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ. ಮುಖ್ಯವಾಗಿ ಐದು ನಿಬಂಧನೆಗಳಿದ್ದು, ಗಣಿಗಾರಿಕೆಯ ಮೇಲೆ ಪೂರ್ಣ ನಿಷೇಧ, ವಿದ್ಯುತ್ ಸ್ಥಾವರಗಳಿಗೆ ನಿಷೇಧ, ಕೆಂಪು ಪಟ್ಟಿಯ ಕೈಗಾರಿಕೆಗಳಿಗೆ ನಿಯಂತ್ರಣ 20,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ ನಿಷೇಧವಿದ್ದು ಇದು ಸಾಮಾನ್ಯ ಜನಜೀವನದ ಮೇಲೆ ಅಷ್ಟೊಂದು ಪ್ರಭಾವ ಬೀರುವಂತಹದ್ದಲ್ಲ ಎಂದೆನಿಸುತ್ತದೆ. ಆದರೆ ಕೃಷಿ, ಪ್ರಾಣಿ ಸಾಕಣೆ ಸೇರಿದಂತೆ ಕೈಗಾರಿಕೆಗಳಿಗೂ ಸಾಕಷ್ಟು ನಿಯಂತ್ರಣಗಳಿದ್ದು, ರಸ್ತೆಗಳು ಸೇರಿದಂತೆ ಮೂಲಭೂತ ಅಭಿವೃದ್ಧಿಗೆ ತೊಡಕಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳ ಬಹುಭಾಗ ಪರಿಸರ ಸೂಕ್ಷ್ಮ ಪ್ರದೇಶವಾಗಲಿದ್ದು, ಈ ಜಿಲ್ಲೆಗಳ ಜನಜೀವನವೇ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ. ಕರ್ನಾಟಕದ ಮಲೆನಾಡಿನಲ್ಲಿ ಈಗಾಗಲೇ ಹತ್ತು ಹಲವು ಯೋಜನೆಗಳು ಬಂದಿದ್ದು, ಇಲ್ಲಿನ ಜನರ ಬದುಕಿಗೆ ಕೊಳ್ಳಿಯಿಟ್ಟಿವೆೆ. ಇದರೊಂದಿಗೆ ಕಸ್ತೂರಿ ರಂಗನ್ ವರದಿಯೂ ಸೇರಿದರೆ ಇವರ ಬದುಕು ಇನ್ನಷ್ಟು ದುಸ್ತರವಾಗಲಿದೆ ಎಂಬುದು ಇಲ್ಲಿನ ಜನರ ಖಚಿತ ಅಭಿಪ್ರಾಯ.
ಕಳೆದ ಚುನಾವಣೆಯಲ್ಲಿ ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿಯು ಪ್ರಚಾರದ ಮುಖ್ಯ ವಿಚಾರವಾಗಿತ್ತು. ಅದನ್ನು ಅನುಷ್ಠಾನಕ್ಕೆ ತರಲು ಅವಕಾಶ ನೀಡುವುದಿಲ್ಲ ಎಂದು ಜನರಿಗೆ ಭರವಸೆ ನೀಡಿ ಗೆಲುವನ್ನು ಪಡೆದ ಸಂಸದರು ಈ ವಿಚಾರದಲ್ಲಿ ಇದೀಗ ಧ್ವನಿಯೆತ್ತಬೇಕಿದೆ. ಬೆಳಗಾವಿಯಿಂದ ಮಡಿಕೇರಿಯವರೆಗೆ ಮಲೆನಾಡಿನ ಪ್ರಭಾವಿ ನಾಯಕರು ಸಂಸದರಾಗಿದ್ದಾರೆ. ಕೇಂದ್ರ ಸರಕಾರವೂ ಸ್ಥಳೀಯ ಸಂಸದರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬಂದಿದೆ ಎಂದು ಹೇಳುತ್ತಿದೆ. ತಮ್ಮದೇ ಪಕ್ಷದ ಸರಕಾರದ ಮೇಲೆ ಪ್ರಭಾವ ಬೀರಿ ರಾಜ್ಯದ ಮಲೆನಾಡಿನ ಜನರ ಹಿತ ಕಾಯಲು ಇವರಿಗೆ ಈವರೆಗೆ ಸಾಧ್ಯವಾಗಿಲ್ಲ. ಸಂಸದರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.
ರಾಜ್ಯದ ಬೇಡಿಕೆಯೇನು?
ಕಸ್ತೂರಿ ರಂಗನ್ ವರದಿಯಲ್ಲಿನ ಪರಿಸರ ಸೂಕ್ಷ್ಮ ಪ್ರದೇಶಗಳ ಬಗೆಗಿನ ಪ್ರಸ್ತಾವವನ್ನು ಪೂರ್ಣವಾಗಿ ತಿರಸ್ಕರಿಸುವ ನಿರ್ಧಾರಕ್ಕೆ ಕರ್ನಾಟಕ ಸರಕಾರದ ಸಚಿವ ಸಂಪುಟ ಉಪಸಮಿತಿ ವರದಿ ನೀಡಿದೆ. ಇದನ್ನು ರಾಜ್ಯ ಸಚಿವ ಸಂಪುಟ ಈ ಹಿಂದೆಯೇ ಅಂಗೀಕರಿಸಿತ್ತು. ಕೇಂದ್ರ ಸರಕಾರಕ್ಕೆ ಈ ಬಗ್ಗೆ ತನ್ನ ವರದಿಯನ್ನು ಈಗಾಗಲೇ ಸಲ್ಲಿಸಿತ್ತು. ಆದರೆ ಅದ್ಯಾವುದನ್ನೂ ಈ ಬಾರಿಯೂ ಕೇಂದ್ರ ಪರಿಸರ ಸಚಿವಾಲಯ ಗಣನೆಗೆ ತೆಗೆದುಕೊಂಡಿಲ್ಲ. ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯ ಸಮಿತಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಗ್ರಾಮಗಳಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಜನಾಭಿಪ್ರಾಯ ಸಂಗ್ರಹಿಸಿತ್ತು. ಈ ಜನಾಭಿಪ್ರಾಯವನ್ನು ಮನ್ನಿಸಿ ಸಂಪುಟ ಉಪ ಸಮಿತಿ ವರದಿ ನೀಡಿದ್ದು, ಇದರ ಆಧಾರದಲ್ಲಿ ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ರಾಜ್ಯದ ಜನವಸತಿ ಪ್ರದೇಶಗಳನ್ನು, ಖಾಸಗಿ ಜಮೀನುಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ತರಬಾರದು. ಮೀಸಲು ಅರಣ್ಯಗಳು, ಸಂರಕ್ಷಿತ ಅರಣ್ಯಗಳು, ವನ್ಯಧಾಮಗಳು ಹಾಗೂ ರಾಷ್ಟ್ರೀಯ ಉದ್ಯಾನವನಗಳನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸುವಂತೆ ಕೋರಲಾಗಿದೆ. ರಾಜ್ಯದ ಸುಮಾರು 1,500 ಕ್ಕೂ ಹೆಚ್ಚು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್ ಸಮಿತಿ ಗುರುತಿಸಿತ್ತು. ಆದರೆ ರಾಜ್ಯ ಸರಕಾರ ಈಗಾಗಲೇ ಸಂರಕ್ಷಿತ ಪ್ರದೇಶಗಳ ಒಳಗಿರುವ ಕೇವಲ ಸುಮಾರು 150 ಗ್ರಾಮಗಳನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರಲು ಒಪ್ಪಿಗೆ ನೀಡಿದೆ. ಅದೆರೀತಿ ವರದಿಯಲ್ಲಿದ್ದ ಜನವಿರೋಧಿ ನಿರ್ಬಂಧಗಳಿಗೂ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿದೆ. ಈ ರೀತಿಯ ಶಿಫಾರಸುಗಳಿರುವ ವರದಿಯನ್ನು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಕಳೆದ ಬಾರಿ ಕೇರಳದ ಬೇಡಿಕೆಗೆೆ ಮನ್ನಣೆ ನೀಡಿದ ಕೇಂದ್ರ ಸರಕಾರ ಈ ಬಾರಿ ಕರ್ನಾಟಕದ ಬೇಡಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದು ದುರಂತವಾಗಿದೆ
ದ.ಕ. ಜಿಲ್ಲೆಯ ಪರಿಸರ ಸೂಕ್ಷ್ಮ ಗ್ರಾಮಗಳು
ಬೆಳ್ತಂಗಡಿ ತಾಲೂಕಿನ ಮಲವಂತಿಗೆ, ಕುತ್ಲೂರು, ಸುಲ್ಕೇರಿ ಮೊಗ್ರು, ಶಿರ್ಲಾಲು, ನಾವರ, ಸವಣಾಲು, ಚಾರ್ಮಾಡಿ, ಸುಲ್ಕೇರಿ, ನಾವೂರು, ನಡ, ಪುದುವೆಟ್ಟು, ಶಿಶಿಲ, ಕಳೆಂಜ, ಶಿಬಾಜೆ, ರೆಖ್ಯ ಗ್ರಾಮಗಳು. ಪುತ್ತೂರು ತಾಲೂಕಿನ ಕೌಕ್ರಾಡಿ, ಶಿರಾಡಿ, ಅಲಂತಾಯ, ಸಿರಿಬಾಗಿಲು, ಇಚಿಲಂಪಾಡಿ, ಸಿರಿಬಾಗಿಲು, ಬಲ್ಯ, ಕೊಂಬಾರು, ಬಿಳಿನೆಲೆ, ದೋಲ್ಪಾಡಿ. ಗ್ರಾಮಗಳು. ಸುಳ್ಯ ತಾಲೂಕಿನ ಬಳ್ಪ, ಸುಬ್ರಹ್ಮಣ್ಯ, ನಾಲ್ಕೂರು, ಕುದ್ಕುಂಜ, ಇನಕ್ಕಿದು, ದೇವಾಚಲ, ಹರಿಹರ ಪಲ್ಲತ್ತಡ್ಕ, ಬಾಳಗೋಡು, ಮಡಪ್ಪಾಡಿ, ಉಬರಡ್ಕ ಮಿತ್ತೂರು, ಅರಂತೋಡು, ಅಲೆಟ್ಟಿ, ಸಂಪಾಜೆ, ತೊಡಿಕಾನ ಗ್ರಾಮಗಳು.
ಕಸ್ತೂರಿ ರಂಗನ್ ವರದಿಯ ಬಗ್ಗೆ ಹಿಂದೆ 2014ರಲ್ಲಿ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಿದಾಗ ಕೇರಳ ರಾಜ್ಯ ಮುಂದಿಟ್ಟಿದ್ದ ಬೇಡಿಕೆಗಳನ್ನು ಕೇಂದ್ರ ಸರಕಾರ ಅಂಗೀಕರಿಸಿ ಅಲ್ಲಿನ ಜನವಸತಿ ಪ್ರದೇಶಗಳನ್ನು ಹೊರಗಿಟ್ಟು ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ರಾಜ್ಯದ ಮಲೆನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಭಾರೀ ಪ್ರತಿಭಟನೆಗಳೂ ನಡೆದಿದ್ದವು, ರಾಜ್ಯ ಸರಕಾರ ಈ ಬಗ್ಗೆ ಗ್ರಾಮಗಳಿಗೆ ತೆರಳಿ ಮತ್ತೊಮ್ಮೆ ವರದಿಯನ್ನು ತಯಾರಿಸಿ ಸಲ್ಲಿಸಿತ್ತು.