ವಾರಾಹಿ ನೀರು: ಬಹುಭಾಗದ ಜನತೆಗೆ 'ಊಟಕ್ಕಿಲ್ಲದ ಉಪ್ಪಿನಕಾಯಿ'
ಉಡುಪಿ, ಮಾ.6: ಉಡುಪಿ ಮತ್ತು ಕುಂದಾಪುರ ತಾಲೂಕಿನ 15,702 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ಗುರಿಯೊಂದಿಗೆ ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಾರಂಭಗೊಂಡ ವಾರಾಹಿ ನೀರಾವರಿ ಯೋಜನೆ ಸುಧೀರ್ಘ ಸಮಯದ ಬಳಿಕವೂ ಬಹುಭಾಗದ ಜನತೆಗೆ 'ಊಟಕ್ಕಿಲ್ಲದ ಉಪ್ಪಿನಕಾಯಿ'ಯಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ವಾರಾಹಿ ಯೋಜನಾ ಪ್ರದೇಶದ ಎಡದಂಡೆ ಕಾಲುವೆ ಕಾಮಗಾರಿ ನಡೆಯುವ ಅನೇಕ ಕಡೆಗಳಿಗೆ ಉರಿಯುವ ಸುಡುಬಿಸಿಲಿನಲ್ಲೇ ನಡೆದುಕೊಂಡು ಹಲವು ಕಿ.ಮೀ. ದೂರ ಕ್ರಮಿಸಿ, ಅಧಿಕಾರಿಗಳು ನೀಡುವ ಸುಂದರ ಚಿತ್ರ, ಅಂಕಿಅಂಶಗಳಿಗೂ, ವಾಸ್ತವ ಅಂಶಗಳಿಗೂ ಇರುವ ಅಗಾಧ ವ್ಯತ್ಯಾಸವನ್ನು ಸ್ವತಹ ಕಂಡುಕೊಂಡರು.
ಸಚಿವರು ಶಿರಿಯಾರ, ಗುಡ್ಡಟ್ಟು, ಗಾವಳಿ, ಕಕ್ಕುಂಜೆ, ಮೊಳಹಳ್ಳಿ, ಹುಣ್ಸೆಮಕ್ಕಿ, ಭರತ್ಕಲ್ ಮುಂತಾದ ವಾರಾಹಿ ನೀರಾವರಿ ಯೋಜನೆ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಹಲವು ಕಡೆಗಳಲ್ಲಿ ಕಿ.ಮೀ. ಉದ್ದಕ್ಕೂ ಸರ್ವಿಸ್ ರಸ್ತೆಯನ್ನು ನಿರ್ಮಿಸದೇ, ಪೊಗದಸ್ತಾಗಿ ಬೆಳೆದ ನಾಚಿಕೆಮುಳ್ಳಿನ ಗಿಡಗಳ ನಡುವೆ ಸರ್ಕಸ್ ಮಾಡುತ್ತಾ ಸಾಗಿ ನಾಲೆ ಕೆಲಸ ಅರ್ಧಂಬರ್ಧ ಆಗಿರುವುದನ್ನು ಕಣ್ಣಾರೆ ಕಂಡರು. ಇಲ್ಲಿ ಕಿ.ಮೀ. ಉದ್ದಕ್ಕೆ ಸರ್ವಿಸ್ ರಸ್ತೆ ಇಲ್ಲದೇ ಇರುವುದಕ್ಕೆ ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಹಲವು ಕಡೆಗಳಲ್ಲಿ ಸ್ಥಳೀಯರು ಕಾಮಗಾರಿಗಳಲ್ಲಿ, ಮೂಲ ಯೋಜನೆಯಲ್ಲೇ ಇರುವ ಲೋಪದೋಷಗಳನ್ನು ಸಚಿವರ ಗಮನಕ್ಕೆ ತಂದರು. ಹಳ್ಳಾಡಿಯಲ್ಲಿ ನೀರಿನ ಮಟ್ಟವನ್ನು ಗಮನನಿಸದೇ ಕಾಮಗಾರಿ ನಡೆಸದೇ ನೀರು ಸರಾಗ ಹರಿದು ಹೋಗದಿರುವುದನ್ನು ಸಚಿವರು ಗಮನಿಸಿದರು. ಇನ್ನು ಕೆಲವೆಡೆ ನಾಲೆಗಳಿಗಾಗಿ ರಸ್ತೆಯನ್ನು ಹಾಳುಗೆಡವಿ ಅದನ್ನು ರಿಪೇರಿ ಮಾಡದೇ ಹಾಗೆ ಬಿಟ್ಟು ಹೋಗಿರುವುದನ್ನು ಸಹ ಸ್ಥಳೀಯರು ಸಚಿವರ ಗಮನಕ್ಕೆ ತಂದರು.
ಹೆಚ್ಚಿನ ಕಡೆಗಳಲ್ಲಿ ಎಡದಂಡೆಯ ಪ್ರಧಾನ ನಾಲೆಗಳಲ್ಲಿ ನೀರು ದಾರಾಳವಾಗಿ ಹರಿದುಬಂದರೂ, ಉಪನಾಲೆ, ಹಂಚಿಕೆ ನಾಲೆ ಕಾಮಗಾರಿ ಕೆಲವೆಡೆ ನಡೆಯದೇ, ಇನ್ನಷ್ಟು ಸಮರ್ಪಕವಾಗಿ ನಡೆಯದೇ ನೀರು ಬರದಿರುವುದು ಸಹ ಸಚಿವರ ಗಮನಕ್ಕೆ ಬಂತು.
ಹೆಚ್ಚಿನ ಕಡೆಗಳಲ್ಲಿ ಸಚಿವರ ಭೇಟಿಯ ವೇಳೆಗೆ ಸರಿಯಾಗಿ ಇಂಜಿನಿಯರ್ ಗಳು ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ನೀರು ಹರಿಸುತಿದ್ದಾರೆ. ಈವರೆಗೆ ನಾಲೆಯಲ್ಲಿ ಇಷ್ಟೊಂದು ನೀರು ಹರಿದಿರಲಿಲ್ಲ ಎಂದೂ ಅವರು ಅಧಿಕಾರಿಗಳ ಎದುರೇ ಹೇಳಿ ಅವರನ್ನು ನಿರುತ್ತರಗೊಳಿಸಿದರು.
ಕೆಲವು ಕಡೆಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಕಾಲುವೆ ಪೂರ್ಣಗೊಳ್ಳದೇ, ಅಲ್ಲಿಯವರೆಗೆ ಹರಿದ ನೀರು ಮುಂದೆ ಹರಿಯಲು ಜಾಗ ಇಲ್ಲದೇ ಪಕ್ಕದ ಹೊಳೆಗೆ ಸೇರುತ್ತಿರುವುದರತ್ತ ಸ್ಥಳೀಯರು ಗಮನ ಸೆಳೆದರು.
ನೈಲಾಡಿ ಕಬ್ಬಿನಹಿತ್ಲುವಿನಿಂದ ಕಕ್ಕುಂಜೆ ಕಬ್ಬಿನಹಿತ್ಲುವರೆಗೆ ಕಾಲ್ನಡಿಗೆಯಲ್ಲೇ ಕಲ್ಲುಮುಳ್ಳುಗಳನ್ನು ತುಳಿಯುತ್ತಾ, ಧೂಳಿನ ಸ್ನಾನ ಮಾಡುತ್ತಾ ಹಿರಿಯ ಶಾಸಕ ಪ್ರತಾಪ್ಚಂದ್ರ ಶೆಟ್ಟಿ ಹಾಗೂ ಇತರರೊಂದಿಗೆ ಹೆಜ್ಜೆ ಹಾಕಿದ ಪ್ರಮೋದ್, ಇಲ್ಲಿ ಕಾಮಗಾರಿ ಅರೆಬರೆ ನಡೆದಿರುವುದನ್ನು ಗಮನಿಸಿದರು. ಭೂಸ್ವಾಧೀನ ಪ್ರಕ್ರಿಯೆ ನಡೆಯದೇ, ಟೆಂಡರ್ ಕರೆದು ಗುತ್ತಿಗೆದಾರರ ಮರ್ಜಿಗನುಗುಣವಾಗಿ ಈ ಕಾಮಗಾರಿ ನಡೆಯುತ್ತಿದೆ ಎಂದು ಪ್ರತಾಪ್ಚಂದ್ರ ಶೆಟ್ಟಿ ವಿವರಿಸಿದರು.
ಇಲ್ಲಿ ಎರಡು ಕಿ.ಮೀ. ದೂರ ಸರ್ವಿಸ್ ರಸ್ತೆ ಯಾಕೆ ನಿರ್ಮಿಸಿಲ್ಲ ಎಂದು ವಾರಾಹಿ ಇಂಜಿನಿಯರ್ಗಳನ್ನು ಪ್ರಶ್ನಿಸಿದ ಸಚಿವರು, ಇಲ್ಲಿ ಒಂದು ಮೇಲ್ಸೆತುವೆ ಆಗಬೇಕಾಗಿದ್ದು, ಇದರಿಂದ ಜನರು ಕಾಮಗಾರಿಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು.
ಹಳ್ಳಾಡಿಯಲ್ಲಿ ಉಪಕಾಲುವೆಯಲ್ಲಿ ಇಂದು ನೀರು ಧಾರಾಳವಾಗಿ ಹರಿಯುತ್ತಿದೆ. ಆದರೆ ಇಲ್ಲಿ ನೀರಿನ ಮಟ್ಟ ಸರಿಯಾಗಿಲ್ಲದ ಕಾರಣ ಎಲ್ಲಾ ಕಡೆಗಳಿಗೂ ನೀರು ಹರಿಯುತ್ತಿಲ್ಲ ಎಂದು ಹಳ್ಳಾಡಿಯ ಕೃಷಿಕ ಶಂಕರ ಶೆಟ್ಟಿ ದೂರಿದರು. ನೋಡಿ ಇಲ್ಲಿ ಚೆನ್ನಾಗಿದ್ದ ಈ ರಸ್ತೆಯನ್ನು ಕಾಮಗಾರಿಯ ನೆಪ ದಲ್ಲಿ ಹಾಳುಗೆಡವಿದ್ದಾರೆ. ದೊಡ್ಡ ಹೊಂಡ ಬಿದ್ದು ಮಳೆಗಾಲದಲ್ಲಿ 3-4 ಮಕ್ಕಳು ಸೈಕಲ್ನಲ್ಲಿ ಶಾಲೆಗೆ ಹೋಗುವಾಗ ಬಿದ್ದು ಗಾಯಗೊಂಡಿದ್ದಾರೆ ಎಂದು ಶಂಕರ್ ಶೆಟ್ಟಿ ಹೇಳಿದರು.
ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ನೀರು ಬಿಡಲಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದಾಗ, ಇರುವವರೆಲ್ಲ ಸರಿಯಾಗಿ ಕೆಲಸ ಮಾಡಿದರೆ ಎಲ್ಲವನ್ನೂ ಮಾಡಬಹುದು ಎಂದು ಪ್ರಮೋದ್ ಖಾರವಾಗಿ ನುಡಿದರು.
ಯಡಾಡಿ-ಮತ್ಯಾಡಿಯಲ್ಲಿ 15 ದಿನದ ಹಿಂದೆ ನಿಯಮದಂತೆ ಱನಿಯಂತ್ರಿತ ಸ್ಫೋಟೞನಡೆಸದೇ ಹಾಗೆ ಸ್ಪೋಟಿಸಿದ್ದರಿಂದ ಅಕ್ಕಪಕ್ಕದ 6-7 ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ ಜನರು ಇದನ್ನು ವಿರೋಧಿಸಿದ್ದರಿಂದ ಕೆಲಸ ನಿಂತಿದೆ ಎಂದು ಊರವರು ಸಚಿವರಿಗೆ ವಿವರಿಸಿದರು.
ಮೊಳಹಳ್ಳಿಯ ಎಡಕಾಲುವೆಯ 9ಕಿ.ಮೀ.ನಲ್ಲಿ ದಾರಾಳ ನೀರಿರುವುದು ಕಂಡಬಂತು. ಇದನ್ನು ಸರಿಯಾಗಿ ಬಳಸಿದರೆ ಕೋರ್ಗಿ ಮತ್ತು ಬೇಳೂರು ವರೆಗೂ ನೀರನ್ನು ಕಳುಹಿಸಬಹುದು. ಇಲ್ಲದೇ ನೀರು ಸರಿಯಾಗಿ ಹರಿದರೆ ಈ ಪ್ರದೇಶದ ಭೂಗರ್ಭದ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದರು.
ಭರತ್ಕಲ್ನಲ್ಲಿ ಹಾಲಾಡಿ ಹೊಳೆಗೆ ಸೇತುವೆ ನಿರ್ಮಿಸಿ 4 ವರ್ಷವಾಗಿದ್ದರೂ, ಸಂಪರ್ಕ ರಸ್ತೆ ನಿರ್ಮಿಸಿಲ್ಲ. ಇದರಿಂದ ನಮಗೆ ಶಂಕರನಾರಾಯಣ 1.5ಕಿ.ಮೀ. ದೂರ ಆಗುತ್ತದೆ. ನಾವೀಗ 9 ಕಿ.ಮೀ. ಸುತ್ತಿ ಸಾಗಬೇಕಾಗಿದೆ. ಅದೇ ರೀತಿ ಹೊಳೆಯ ಇನ್ನೊಂದು ಬದಿಗಿರುವ ಮಾವಿನಕುಡ್ಲುವಿನ ನೂರಾರು ಮನೆಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಸಚಿವರ ಎದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಾರಾಹಿ ನಷ್ಟಕ್ಕಿನ್ನೂ ಪರಿಹಾರ ಸಿಕ್ಕಿಲ್ಲ 2015ರ ಜು.19ರಂದು ಮೊಳಹಳ್ಳಿ ಬಾಸ್ಬೈಲು ಮಠದ ಬಳಿ ವಾರಾಹಿ ಎಡದಂಡೆ ಕಾಲುವೆ ಒಡೆದು ಅಲ್ಲಿನ ಜೇಡಿಮಣ್ಣು ಅಕ್ಕಪಕ್ಕದ ನೂರಾರು ಎಕರೆ ಅಡಿಕೆ ತೋಟ, ಭತ್ತದ ಗದ್ದೆ, ಮನೆ ಅಂಗಳಗಳಿಗೆ ನುಗ್ಗಿ ಲಕ್ಷಾಂತರ ರೂ.ನಷ್ಟ ಉಂಟಾಗಿದ್ದು, ಇವುಗಳಿಗೆ ಇದುವರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಪರಿಸರದ ಮಹಿಳೆಯರು ಮೊಳಹಳ್ಳಿಯಲ್ಲಿ ಸಚಿವರ ಬಳಿ ದೂರಿದರು.
ನಮ್ಮ ಮನೆಯ ಅಡಿಕೆ, ತೆಂಗಿನ ತೋಟದೊಂದಿಗೆ ಮನೆಯ ಬಾವಿಯೊಳಗೆ ಮಣ್ಣು ತುಂಬಿ ಇಡೀ ಬಾವಿ ಮುಚ್ಚಿದೆ. ಅದರಲ್ಲಿ ನಾವು ಪಂಪ್ ಸಹ ಅಳವಡಿಸಿದ್ದು, ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಕೇವಲ ಭತ್ತದ ಗದ್ದೆಗೆ ಎಕರೆಗೆ 2,000ರೂ. ನೀಡಿದ್ದಾರೆ ಎಂದು ರಾಜಯ್ಯ ವಿರೂಪಾಕ್ಷಯ್ಯ ಹೇಳಿದರು.