ಸ್ಥಳಾಂತರಗೊಳ್ಳುತ್ತಿದೆ ಟಿಪ್ಪುವಿನ ಶಸ್ತ್ರಾಗಾರ!
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ವಿಶಿಷ್ಟ ಕಾರ್ಯಾಚರಣೆ
ಈ ಪಾರಂಪರಿಕ ಸ್ಮಾರಕವನ್ನು ಸ್ಥಳಾಂತರಿಸುವ ಪರಿಕಲ್ಪನೆ ಮೊದಲು ಮೂಡಿದ್ದು 2009ರಲ್ಲಿ. ಆದರೆ ಅದು ಸಾಕಾರಗೊಳ್ಳುತ್ತದೆಯೇ ಎಂಬ ಬಗ್ಗೆ ಶಂಕೆಯಿತ್ತು. ಈ ಕೆಲಸವನ್ನು ವಹಿಸಿಕೊಳ್ಳಲು ಭಾರತೀಯ ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು ಮುಂದಾಗಿರಲಿಲ್ಲ. ಕೊನೆಗೆ ‘ಪಿಎಸ್ಎಲ್ ವೂಲ್ಫ್ ’ ಕಾಮಗಾರಿಯನ್ನು ವಹಿಸಿಕೊಂಡಿತ್ತು. ಇದಕ್ಕಾಗಿಯೇ ಕಂಪೆನಿಯು ಅಮೆರಿಕದಿಂದ ಭಾರೀ ಹೈಡ್ರಾಲಿಕ್ ಜ್ಯಾಕ್ಗಳು ಮತ್ತು ಬೀಮ್ ರೋಲರ್ಗಳನ್ನು ಇಲ್ಲಿಗೆ ತಂದಿದೆ.
ಭಾರತದ ಪುರಾತತ್ವ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾರಂಪರಿಕ ಸ್ಮಾರಕವೊಂದನ್ನು ಸ್ಥಳಾಂತರಿಸಲಾಗುತ್ತಿದೆ. ಮೈಸೂರಿನ ದೊರೆ ಟಿಪ್ಪು ಸುಲ್ತಾನ್ (ಕ್ರಿ.ಶ.1761-1799)ರ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ಈ ವಿಶಿಷ್ಟ ಪ್ರಯೋಗ ನಡೆಯುತ್ತಿದೆ. ಒಂದು ಕಾಲದಲ್ಲಿ ಗನ್ ಪೌಡರ್ ಮತ್ತು ಇತರ ಮದ್ದುಗುಂಡುಗಳನ್ನು ಸಂಗ್ರಹಿಸಿಡಲಾಗುತ್ತಿದ್ದ ಅವರ ಭೂಗತ ಶಸ್ತ್ರಾಗಾರ(ಇಸ್ಲಾಹಾಖಾನಾ)ವನ್ನು ಅದರ ಮೂಲಸ್ಥಾನದಿಂದ 100 ಮೀ.ದೂರಕ್ಕೆ ಸ್ಥಳಾಂತರಿಸಲಾಗುತ್ತಿದೆ. ರಾಜ್ಯ ಪುರಾತತ್ವ ಇಲಾಖೆ ಮತ್ತು ನೈಋತ್ಯ ರೈಲ್ವೆ ಜಂಟಿಯಾಗಿ ಕೈಗೆತ್ತಿಕೊಂಡಿರುವ ಸುಮಾರು 14 ಕೋ.ರೂ.ವೆಚ್ಚದ ಈ ಕಾಮಗಾರಿಯ ಗುತ್ತಿಗೆಯನ್ನು ಅಮೆರಿಕನ್ ಕಂಪೆನಿ ಪಿಎಸ್ಎಲ್-ವೂಲ್ಫ್ ವಹಿಸಿಕೊಂಡಿದೆ.
ಶ್ರೀರಂಗಪಟ್ಟಣದ ರೈಲ್ವೆ ಯಾರ್ಡ್ನೊಳಗೆ ಬೆಂಗಳೂರು- ಮೈಸೂರು ರೈಲುಮಾರ್ಗದ ಬಳಿಯಿರುವ ಈ ಶಸ್ತ್ರಾಗಾರದಿಂದ ಇವೆರಡು ನಗರಗಳ ನಡುವೆ ಹಳಿ ದ್ವಿಗುಣ ಕಾರ್ಯಕ್ಕೆ ಅಡ್ಡಿಯುಂಟಾಗಿತ್ತು. 15 ಕಿ.ಮೀ.ಉದ್ದದ ಕೊನೆಯ ಹಂತದಲ್ಲಿ ಹಳಿ ದ್ವಿಗುಣ ಸಾಧ್ಯವಾಗದೆ ಉಭಯ ನಗರಗಳ ನಡುವೆ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲು ಅವಕಾಶವಿರಲಿಲ್ಲ.
12 ಚದರ ಮೀಟರ್ ವಿಸ್ತೀರ್ಣದ ಶಸ್ತ್ರಾಗಾರವು ಸುಣ್ಣ ಮತ್ತು ಗಾರೆಯಿಂದ ನಿರ್ಮಾಣಗೊಂಡಿದೆ. ಅದರ ಅರ್ಧಕ್ಕೂ ಹೆಚ್ಚಿನ ಭಾಗ ನೆಲದೊಳಗಿದ್ದು, ತುದಿಭಾಗ ಮತ್ತು ದ್ವಾರದ ಭಾಗ ಮಾತ್ರ ನೆಲದ ಮೇಲೆ ಕಾಣುತ್ತದೆ. ಟಿಪ್ಪು ಬ್ರಿಟಿಷ್ರೊಂದಿಗೆ ನಿರಂತರ ಯುದ್ಧದಲ್ಲಿ ತೊಡಗಿಕೊಂಡಿದ್ದಾಗ ಸುಮಾರು 1787ರಲ್ಲಿ ಈ ಶಸ್ತ್ರಾಗಾರವನ್ನು ನಿರ್ಮಿಸಲಾಗಿತ್ತು. 10 ಮೀ.ಎತ್ತರವಿರುವ ಶಸ್ತ್ರಾಗಾರ ಸುಮಾರು 900 ಟನ್ ತೂಗುತ್ತದೆ.
ಸ್ಥಳಾಂತರ ಕಾರ್ಯಕ್ಕೆ ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಚಾಲನೆ ದೊರಕಿತ್ತು. ಅದಕ್ಕಾಗಿ ಪೆನ್ಸಿಲ್ವೇನಿಯಾದಲ್ಲಿ ರುವ ಪಿಎಸ್ಎಲ್-ವೂಲ್ಫ್ನ ಆರು ಇಂಜಿನಿಯರ್ಗಳ ತಂಡ ಮೈಸೂರಿಗೆ ಆಗಮಿಸಿತ್ತು.
ಪೀಟರ್ ನೇತೃತ್ವದ ಈ ತಂಡವು ಶಸ್ತ್ರಾಗಾರದ ಬುನಾದಿಯವರೆಗೆ ತಲುಪಲು ಸುತ್ತಲಿನ ಸ್ಥಳವನ್ನು ಅಗೆದು ನೂರಾರು ಟ್ರಕ್ಲೋಡ್ಗಳಷ್ಟು ಮಣ್ಣು-ಕೆಸರನ್ನು ಹೊರತೆಗೆದಿತ್ತು. ನಂತರ ಬುನಾದಿಯ ಕೆಳಗೆ ಗರ್ಡರ್ಗಳು ಮತ್ತು ಜ್ಯಾಕ್ಗಳನ್ನು ಸೇರಿಸಲಾಗಿದ್ದು, ಕಟ್ಟಡವೀಗ ಗರ್ಡರ್ಗಳು ಮತ್ತು ಬಲಿಷ್ಠ ಬೀಮ್ ರೋಲರ್ಗಳ ಮೇಲೆ ನಿಂತಿದೆ. ಗರ್ಡರ್ಗಳಿಗೆ ಈಗ ಗಾಲಿಗಳನ್ನು ಅಳವಡಿಸಲಾಗುತ್ತಿದ್ದು, ಇದು ಕಟ್ಟಡವನ್ನು ಹಳಿಗಳ ಮೇಲಿನಿಂದ ನಿಧಾನಗತಿಯಲ್ಲಿ 100 ಮೀ.ದೂರಕ್ಕೆ ಸಾಗಿಸಲು ನೆರವಾಗಲಿದೆ.
ಈ ಮಧ್ಯೆ ಕಟ್ಟಡದ ಮರುಸ್ಥಾಪನೆಗಾಗಿ ಪರ್ಯಾಯ ಸ್ಥಳವನ್ನು ಗೊತ್ತು ಮಾಡಲಾಗಿದ್ದು, ಅದನ್ನು ಕಾಂಕ್ರಿಟ್ ಬೇಸ್ನೊಂದಿಗೆ ಸಜ್ಜುಗೊಳಿಸಲಾಗಿದೆ. ಸ್ಥಳಾಂತರಿತ ಸ್ಮಾರಕವು ಭೂಮಿಯ ಮೇಲೆ ಮೊದಲಿನ ಎತ್ತರವನ್ನೇ ಹೊಂದಿರಲಿದೆ ಎಂದು ತಿಳಿಸಿದ ನೈಋತ್ಯ ರೈಲ್ವೆಯ ಎಇಇ ಕೇಶವಮೂರ್ತಿ ಅವರು, ಮಾ.10ರ ವೇಳೆಗೆ ಸ್ಮಾರಕವು ಸ್ಥಳಾಂತರಗೊಳ್ಳಲಿದೆ. ರೈಲ್ವೆ ಹಳಿಗಳನ್ನು ಹಾಕುವ ಮುನ್ನ ಅಗೆದ ಜಾಗದಲ್ಲಿ ಮಣ್ಣು ಭರ್ತಿ ಮಾಡಲು ಎರಡು ತಿಂಗಳು ಬೇಕಾಗುತ್ತದೆ ಎಂದರು.
ಶಸ್ತ್ರಾಗಾರದ ಗೋಡೆಗಳು ಒಂದು ಮೀ.ದಪ್ಪವನ್ನು ಹೊಂದಿದ್ದು ಸುಣ್ಣ ಮತ್ತು ಗಾರೆಯಿಂದ ನಿರ್ಮಾಣಗೊಂಡಿವೆ. ಹೊಸ ಸ್ಥಳದ ವರೆಗೆ ಹಳಿಗಳ ಅಳವಡಿಕೆ ಪೂರ್ಣಗೊಂಡ ಬಳಿಕ ಅದರ ಮೇಲಿ ನಿಂದ ಶಸ್ತ್ರಾಗಾರವನ್ನು ನಿಧಾನವಾಗಿ ಸಾಗಿಸಲಾಗುವುದು.
ಪಿಎಸ್ಎಲ್ ವೂಲ್ಫ್ ಕಳೆದ 40 ವರ್ಷಗಳಿಂದಲೂ ಇಂತಹ ಸ್ಥಳಾಂತರಗಳಲ್ಲಿ ತೊಡಗಿಕೊಂಡಿದ್ದು, ಇದು ಅದರ ದೈನಂದಿನ ಕಾಯಕವಾಗಿದೆ ಎನ್ನುತ್ತಾರೆ ಕಂಪೆನಿಯ ತಂಡದ ನೇತೃತ್ವ ವಹಿಸಿರುವ ಪೀಟರ್. ಈ ಪಾರಂಪರಿಕ ಸ್ಮಾರಕವನ್ನು ಸ್ಥಳಾಂತರಿಸುವ ಪರಿಕಲ್ಪನೆ ಮೊದಲು ಮೂಡಿದ್ದು 2009ರಲ್ಲಿ. ಆದರೆ ಅದು ಸಾಕಾರಗೊಳ್ಳು ತ್ತದೆಯೇ ಎಂಬ ಬಗ್ಗೆ ಶಂಕೆಯಿತ್ತು. ಈ ಕೆಲಸವನ್ನು ವಹಿಸಿಕೊಳ್ಳಲು ಭಾರತೀಯ ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು ಮುಂದಾಗಿರಲಿಲ್ಲ. ಕೊನೆಗೆ ಪಿಎಸ್ಎಲ್ ವೂಲ್ಫ್ ಕಾಮಗಾರಿಯನ್ನು ವಹಿಸಿಕೊಂಡಿತ್ತು. ಇದಕ್ಕಾಗಿಯೇ ಕಂಪೆನಿಯು ಅಮೆರಿಕದಿಂದ ಭಾರೀ ಹೈಡ್ರಾಲಿಕ್ ಜ್ಯಾಕ್ಗಳು ಮತ್ತು ಬೀಮ್ ರೋಲರ್ಗಳನ್ನು ಇಲ್ಲಿಗೆ ತಂದಿದೆ.
ಸುಮಾರು 236 ವರ್ಷಗಳ ಹಿಂದೆ ಟಿಪ್ಪು ಸುಲ್ತಾನರು ತನ್ನ ರಾಜ್ಯದಲ್ಲಿ ಇಂತಹ ಅರ್ಧ ಡಝನ್ ಶಸ್ತ್ರಾಗಾರಗಳನ್ನು ನಿರ್ಮಿಸಿ ದ್ದರು. ಶ್ರೀರಂಪಟ್ಟಣವು ನಾಲ್ಕೂ ದಿಕ್ಕುಗಳಿಂದ ಕಾವೇರಿ ನದಿ ನೀರಿನಿಂದ ಸುತ್ತುವರಿಯಲ್ಪಟ್ಟಿದ್ದರಿಂದ ಭದ್ರತೆಯ ದೃಷ್ಟಿಯಿಂದ ಟಿಪ್ಪು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಕರ್ನಲ್ ಆರ್ಥರ್ ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಸೇನೆಯ ವಿರುದ್ಧ ನಾಲ್ಕನೆಯ ಮೈಸೂರು ಯುದ್ಧದಲ್ಲಿ ತನ್ನ ರಾಜ್ಯದ ರಕ್ಷಣೆಗಾಗಿ ಹೋರಾಡುತ್ತ ಅವರು ಪ್ರಾಣತ್ಯಾಗ ಮಾಡಿದ್ದರು.
ಶಸ್ತ್ರಾಗಾರದ ಸ್ಥಳಾಂತರದಿಂದಾಗಿ ಬೆಂಗಳೂರು -ಮೈಸೂರು ನಡುವಿನ ಪ್ರಯಾಣದ ಅವಧಿ 15 ನಿಮಿಷಗಳಷ್ಟು ಕಡಿಮೆಯಾ ಗಲಿದೆ ಮತ್ತು ಉಭಯ ನಗರಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳ ಸಂಚಾರ ಸಾಧ್ಯವಾಗಲಿದೆ.