ಮಧ್ಯ ಕರ್ನಾಟಕದಲ್ಲಿ ಮಹಿಳೆಯರದ್ದೇ ಮೆಲುಗೈ !
ಜಿಲ್ಲೆಯ ಎಲ್ಲ ಸ್ಥಾನಗಳಲ್ಲೂ ಮಹಿಳೆಯರದೇ ಪಾರುಪತ್ಯ
ಬದುಕಿನ ಬಂಡಿ ಸಾಗಿಸಲು ಯಾವ ಪರಿವೆಯೂ ಇಲ್ಲದೆ ಕಾಯಕದಲ್ಲಿ ನಿರತರಾಗಿರುವ ಮಹಿಳೆ ದಾವಣಗೆರೆಯ ಪಿಬಿ ರಸ್ತೆಯಲ್ಲಿ ಕಂಡುಬಂದದ್ದು ಹೀಗೆ
ದಾವಣಗೆರೆ, ಮಾ.7: ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೆ ಆಳಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ಕರ್ನಾಟಕದ ಕೇಂದ್ರ ಬಿಂದುವಾದ ದಾವಣಗೆರೆ ಜಿಲ್ಲೆಯಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರದ್ದೇ ಮೇಲುಗೈ.
ಹೌದು ..
ಜಿಲ್ಲೆಯ ಜಿಪಂ ಅಧ್ಯಕ್ಷೆ ಸ್ಥಾನದಿಂದ ಹಿಡಿದು, ಅಪರ ಡಿಸಿ, ಪೊಲೀಸ್ ಇಲಾಖೆಯ ಎಎಸ್ಪಿ, ಶಿಕ್ಷಣ ಇಲಾಖೆಯ ಡಿಡಿಪಿಐ ಸೇರಿದಂತೆ ಎಲ್ಲಾ ಸ್ಥಾನಗಳಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ.
ಹೆಣ್ಣು ಹುಟ್ಟಿದರೆ ತಂದೆ ತಾಯಿಗೆ ಹೊರೆ ಎಂಬ ಸಮಸ್ಯೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ದಿನಗಳಲ್ಲಿ ಮಹಿಳೆಯರೇ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈಯುವ ಮೂಲಕ, ಮಹಿಳೆಯರು ಎಂದರೆ ಮನೆ, ಮಕ್ಕಳು ಮತ್ತು ಅಡುಗೆಗೆ ಮಾತ್ರ ಸೀಮಿತ ಎಂಬ ಮಾತನ್ನು ದೇವನಗರಿಯ ಮಹಿಳಾ ಮಣಿಗಳು ಸುಳ್ಳಾಗಿಸಿದ್ದಾರೆ.
ಅಧಿಕಾರ ವರ್ಗ, ರಾಜಕಾರಣ, ಉದ್ಯಮ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರೇ ಮುಂದಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಉಮಾ ರಮೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಮಮತಾ ಮಲ್ಲೇಶಪ್ಪ, ಮಹಾನಗರ ಪಾಲಿಕೆ ಮೇಯರ್ ಆಗಿ ರೇಖಾ ನಾಗರಾಜ್, ಹೊನ್ನಾಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಶ್ರೀದೇವಿ ಧರ್ಮಪ್ಪ ಅಧಿಕಾರ ನಡೆಸುತ್ತಿದ್ದಾರೆ.
ಅದೇರೀತಿ, ತಾಪಂ ಅಧ್ಯಕ್ಷರಾಗಿ ಸುಲೋಚನಮ್ಮ ಪಾಲಾಕ್ಷಪ್ಪ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಅಶ್ವತಿ, ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಎಂ. ಶ್ರೀದೇವಿ, ಜಿಲ್ಲಾ ನ್ಯಾಯಾಧೀಶರು ಸುವರ್ಣ ಮಿರ್ಜಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸಂತಪ್ಪ, ಎಎಸ್ಪಿ ಯಶೋಧ ವಂಟಿಗೋಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಚಾರ್ಯರಾಗಿ ಹಾಗೂ ಹಾಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಜಿ. ನಜ್ಮಾ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ತ್ರಿಪುರಲಾಂಬಿಕಾ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಲದೆ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾಗಿ ಹಂಸವೇಣಿ, ಚಿಗಟೇರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿಯಾಗಿ ಡಾ. ನೀಲಾಂಬಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹೆಚ್.ಎಂ. ಪ್ರೇಮಾ ಅವರು ದಕ್ಷ, ಪ್ರಾಮಾಣಿಕ ಆಡಳಿತಕ್ಕೆ ಸಾಕ್ಷಿಯಾಗಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಸೌಮ್ಯ ಬಾಪಟ್, ಡಿಎಲ್ಓ ಸರೋಜಾ ಬಾಯಿ, ಎಪಿಎಂಸಿ ಸಹಾಯಕ ನಿರ್ದೇಶಕರು ಮಂಜುಳಾ ದೇವಿ, ಹರಿಹರ ಭೂಸ್ವಾಧೀನ ಅಧಿಕಾರಿಯಾಗಿ ರೇಶ್ಮಾ ಹಾನಗಲ್, ದಾವಣಗೆರೆ ಬಡಾವಣೆ ಠಾಣೆಯ ಪಿಎಸ್ಐ ಶಿಲ್ಪಾ, ನಾಗಮ್ಮ, ಭೂದಾಖಲೆಗಳ ಉಪನಿರ್ದೇಶಕರಾಗಿ ಕುಸುಮಲತಾ, ಹರಿಹರ ತಹಸೀಲ್ದಾರ್ ನಳೀನಾ, ಚನ್ನಗಿರಿ ತಹಸೀಲ್ದಾರ್ ಪದ್ಮಾ, ಹರಿಹರ ನಗರಸಭೆ ಆಯುಕ್ತರಾಗಿ ಲಕ್ಷ್ಮಿ ಜನಸೇವೆ ಮಾಡುತ್ತಿದ್ದಾರೆ.
ಇದಿಷ್ಟೇ ಅಲ್ಲದೆ, ಹರಿಹರ ಸಬ್ ರಿಜಿಸ್ಟಾರ್ ಆಗಿ ವೀಣಾ, ಹರಪನಹಳ್ಳಿ ತಾಲೂಕಿನ ಅರಣ್ಯ ಸಂರಕ್ಷಾಣಾಧಿಕಾರಿಯಾಗಿ ಉಷಾರಾಣಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿಯಾಗಿ ಶಶಿಕಲಾ, ಕೃಷಿ ಇಲಾಖೆಯ ಉಪ ನಿರ್ದೇಶಕಿಯಾಗಿ ಸ್ಪೂರ್ತಿ, ಅಬಕಾರಿ ಇನ್ಸ್ಪೆಕ್ಟರ್ ಲತಾ, ಸಿಡಿಪಿಓ ಪ್ರಫುಲ್ಲಾ, ದಾವಣಗೆರೆ ಮಹಾನಗರ ಪಾಲಿಕೆಯ ಅಧಿಕಾರಿಯಾಗಿ ಅಶ್ವಿನಿ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷವಾಗಿದೆ.
ಒಟ್ಟಾರೆಯಾಗಿ ಸ್ಮಾರ್ಟ್ಸಿಟಿ ಘೋಷಿತ ದೇವನಗರಿ ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಮಹಿಳೆಯರ ಪಾಲು ಹೆಚ್ಚಿದ್ದು, ಈ ಮೂಲಕ ಜಿಲ್ಲೆಯಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನರಾಗಿ ಎಲ್ಲಾ ರಂಗಗಳಲ್ಲಿ ಸಮಾನತೆ ಮೆರೆದಿರುವುದು ಶ್ಲಾಘನೀಯ.