ಹರ್ಯಾಣ ಬಿಜೆಪಿಯಲ್ಲಿ ಬಿರುಕು ?
ಚಂಡೀಗಢ, ಮಾ.8: ಹರ್ಯಾಣ ಬಿಜೆಪಿಯಲ್ಲಿ ಬಿರುಕು ಉಂಟಾಗಿದೆಯೇ ಎಂದು ಹಲವರು ಪ್ರಶ್ನಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಶಾಸಕ ಸಂತೋಷ್ ಸರ್ವನ್ ಅವರನ್ನೊಳಗೊಂಡ 15 ಬಿಜೆಪಿ ಸದಸ್ಯರ ಬಣವೊಂದು ರಾಜ್ಯದ ಮನೋಹರ್ ಲಾಲ್ ಖಟ್ಟರ್ ಸರಕಾರವು ತಮ್ಮ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದೆ. ಇತರ ಶಾಸಕರು ತಮ್ಮನ್ನು ವಿಷ್ಣುವಿನ ಅವತಾರಗಳೆಂದು ಅಂದುಕೊಳ್ಳುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.
''ಪ್ರತೀ ಶಾಸಕ ಅಥವಾ ಶಾಸಕಿ ಎಲ್ಲರೂ ತಮ್ಮ ಮಾತುಗಳನ್ನು ಕೇಳಬೇಕೆಂದು ಬಯಸುತ್ತಾರೆ. ಆದರೆ ಶಾಸಕರ ಒಂದು ಗುಂಪು ತಾನೇ ಎಲ್ಲವನ್ನೂ ಮಾಡುವ ಪಣ ತೊಟ್ಟಿದೆ. ಅವರೇನು ವಿಷ್ಣುವಿನ ಅವತಾರಗಳಲ್ಲ. ನಮ್ಮ ಮಾತುಗಳನ್ನೂ ಕೇಳಬೇಕು'' ಎಂದ ಮುಲ್ಲಾನ ಕ್ಷೇತ್ರದ ಶಾಸಕರಾದ ಸಂತೋಷ್ ಹೇಳಿಕೊಂಡಿದ್ದಾರೆ.
ಇನ್ನೊಬ್ಬ ಭಿನ್ನಮತೀಯ ಶಾಸಕರಾದ ಉಮೇಶ್ ಅಗರ್ವಾಲ್ ಅವರಂತೂ 2015ರಲ್ಲಿ ಜಾರಿಯಾದ ಗುರುಗ್ರಾಮ ಗೃಹ ನಿರ್ಮಾಣ ಯೋಜನೆಯಲ್ಲಿನ ವ್ಯವಹಾರಗಳಿಗೆ ಸರಕಾರವನ್ನೇ ದೂಷಿಸಿದ್ದಾರಲ್ಲದೆ, ಈ ವಿಚಾರವನ್ನು ವಿಧಾನಸಭೆಯಲ್ಲೂ ಎತ್ತಿದ್ದಾರೆ.
ಆದರೆ ಪಕ್ಷದಲ್ಲಿ ಬಿರುಕು ಮೂಡಿಲ್ಲವೆಂದು ಮುಖ್ಯಮಂತ್ರಿ ಖಟ್ಟರ್ ಸ್ಪಷ್ಟಪಡಿಸಿದ್ದಾರೆ. ''ನಮ್ಮ ಯಾವ ಶಾಸಕರೂ ಅಸಂತುಷ್ಟರಾಗಿಲ್ಲ. ಅವರೆಲ್ಲರೂ ಏಕತೆಯಿಂದಿದ್ದಾರೆ'' ಎಂದು ಅವರು ಹೇಳಿದ್ದಾರೆ. ಶಾಸಕರು ನಿಮ್ಮ ವಿರುದ್ಧ ಲಾಬಿ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಎಲ್ಲಾ ನಿರ್ಧಾರಗಳನ್ನೂ ಒಮ್ಮತದಿಂದ ತೆಗೆದುಕೊಳ್ಳಲಾಗುತ್ತಿದೆ ಎಂದು ಖಟ್ಟರ್ ಹೇಳಿದ್ದಾರೆ.