ಸತ್ಯಾಂಶಗಳ ಅಭಾವದ ಅನಾಗರಿಕ ಚುನಾವಣಾ ಪ್ರಚಾರ
ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುತ್ತಾ ಜನರಿಗೆ ಮಂಕುಬೂದಿ ಎರಚಿ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಳೆದ ಮೂರು ವರ್ಷಗಳಲ್ಲಿ ಏನು ವಿಕಾಸ ಸಾಧಿಸಿದೆ, ಯಾರ ವಿಕಾಸ ಸಾಧಿಸಿದೆ? ಜಿಡಿಪಿಯ ಕುಸಿತ, ನಿರುದ್ಯೋಗದ ಜಿಗಿತದ ಅಂಕಿಅಂಶಗಳನ್ನು ನೋಡಿದವರಿಗೆ ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳ ಅರಿವಾಗದೆ ಇರದು. ಇದರ ಮೇಲೆ ಬಂದ ನೋಟು ರದ್ದತಿಯ ಏಕವ್ಯಕ್ತಿ ತೀರ್ಮಾನವಂತೂ ಜನರನ್ನು ಇನ್ನಷ್ಟು ಬವಣೆಗೆ ದೂಡಿರುವುದರೊಂದಿಗೆ ದೇಶದ ಆರ್ಥಿಕತೆಯನ್ನು ದಯನೀಯ ಸ್ಥಿತಿಗೆ ತಳ್ಳಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನೆಲ್ಲ ಈಡೇರಿಸಲಾಗದ, ಅಭಿವೃದ್ಧಿ ಸಾಧಿಸಲಾಗದ ಬಿಜೆಪಿ ಇಂದು ತೀರ ಅಸಹಾಯಕ ಪರಿಸ್ಥಿತಿಯಲ್ಲಿದೆ. ಇಂತಹ ಸನ್ನಿವೇಶ ಇರುವಾಗ ಉತ್ತರ ಪ್ರದೇಶದಲ್ಲಿ ಚುನಾವಣೆ ಗೆಲ್ಲದಿದ್ದರೆ ದೇಶಾದ್ಯಂತ ಬಿಜೆಪಿಯ ಪ್ರತಿಷ್ಠೆ ಮತ್ತು ವಿಶ್ವಾಸಾರ್ಹತೆಗಳೆರಡೂ ಕುಸಿಯುವುದು ಖಚಿತ. ಆದ್ದರಿಂದಲೇ ಬಿಜೆಪಿಯ ಸ್ಟಾರ್ ಪ್ರಚಾರಕ ಮೋದಿಗೆ ತನ್ನ ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಅಭಿವೃದ್ಧಿ ಮತ್ತು ನೋಟು ರದ್ದತಿ ಬಗ್ಗೆ ಕನಿಷ್ಠ ಪ್ರಸ್ತಾಪ ಮಾಡಬೇಕಾದ ಅಥವಾ ಸತ್ಯವನ್ನು ಮುಚ್ಚಿಡಬೇಕಾದ ಪರಿಸ್ಥಿತಿ ಬಂದಿದೆ. ತನ್ನ ಸರಕಾರದ ವೈಫಲ್ಯಗಳನ್ನು ಮರೆಮಾಚಲು ಜಾತಿವಾದ, ಕೋಮುವಾದ, ಅರ್ಧಸತ್ಯಗಳು ಮತ್ತು ಸುಳ್ಳುಗಳ ಮೊರೆಹೋಗಬೇಕಾಗಿ ಬಂದಿದೆ. ದಿಕ್ಕು ತಪ್ಪಿಸುವ ಅಂಕಿಅಂಶಗಳನ್ನು ಉದುರಿಸುವುದು, ರೈಲು ಅಪಘಾತಕ್ಕೂ, ಪಾಕಿಸ್ತಾನಿ ಪಿತೂರಿಗೂ, ರಾಜ್ಯ ಚುನಾವಣೆಗಳಿಗೂ, ದೇಶದ ಭದ್ರತೆಗೂ ಬಾದರಾಯಣ ಸಂಬಂಧ ಕಲ್ಪಿಸುವುದು ಇವೇ ಮುಂತಾದ ಕರತಲಾಮಲಕ ತಂತ್ರಗಳ ಮೂಲಕ ಮೋದಿ ತನ್ನ ಅನ್ವರ್ಥನಾಮವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದೇ ಫೆಬ್ರವರಿ 16ರಂದು ಉತ್ತರ ಪ್ರದೇಶದ ಬಾರಾಬಂಕಿ ಮತ್ತು 24ರಂದು ಗೊಂಡಾ ಜಿಲ್ಲೆಯಲ್ಲಿ ಮಾಡಿದ ಪ್ರಚಾರ ಭಾಷಣಗಳಲ್ಲಿ ಅವರು ಕೆಲವೊಂದು ಪ್ರತಿಪಾದನೆಗಳನ್ನು ಸಭಿಕರ ಮುಂದಿರಿಸಿದರು. ವೇದಿಕೆಗಳಿಂದ ಮಾಡುವ ಇಂತಹ ಪ್ರತಿಪಾದನೆ ಅಥವಾ ವಾದಗಳ ವೈಶಿಷ್ಟ್ಯ ಏನೆಂದರೆ ಇದಕ್ಕೆ ಆ ಕ್ಷಣದಲ್ಲಿ ಉತ್ತರಿಸಲು ಅವಕಾಶವಿಲ್ಲ. ವಿಶ್ಲೇಷಣೆ ಏನಿದ್ದರೂ ತರುವಾಯ ಮಾಧ್ಯಮಗಳಲ್ಲಿ ಆಗಬೇಕು. ಆದರೆ ಅಷ್ಟರಲ್ಲಾಗಲೇ ಸಭಿಕರ ಮೇಲೆ ಅಪೇಕ್ಷಿತ ಪರಿಣಾಮ ಆಗಿಬಿಟ್ಟಿರುತ್ತದೆ. ವಾಕ್ಚತುರ ಮೋದಿಗೂ ಇದು ಚೆನ್ನಾಗಿ ಗೊತ್ತು. ಇರಲಿ.
ಮೋದಿ ಪ್ರತಿಪಾದನೆ 1
ರಾಜ್ಯದಲ್ಲಿರುವ ಒಟ್ಟು ಶಿಕ್ಷಕರ ಹುದ್ದೆಗಳ ಪೈಕಿ ಶೇ.50ರಷ್ಟು ಖಾಲಿಬಿದ್ದಿವೆ. ಇದು ಅಖಿಲೇಶ್ ಯಾದವ್ ಸರಕಾರದ ಸಾಧನೆಯನ್ನು ತೋರಿಸುವ ರೀತಿಯಲ್ಲಿದೆ. ಹಾಗಾದರೆ ಬಡವರ ಮಕ್ಕಳು ಎಲ್ಲಿ ಕಲಿಯಬೇಕು?
ವಾಸ್ತವ
ಮೋದಿ ಹೇಳುತ್ತಿರುವುದು ಅರ್ಧ ಸತ್ಯ. ಮಾಧ್ಯಮಿಕ ಹಂತದಲ್ಲಿ (9 ಮತ್ತು 10ನೆ ಇಯತ್ತೆ) ಶೇ. 50ರಷ್ಟು ಟೀಚರ್ ಹುದ್ದೆಗಳು ತೆರವಾಗಿರುವುದು ನಿಜ. ಆದರೆ ಪ್ರಾಥಮಿಕ ಹಂತದಲ್ಲಿ (1ರಿಂದ-8ನೆ ಇಯತ್ತೆ) ಅದು ಶೇ. 23ರಷ್ಟಿದೆ. ನಿಜವಾಗಿ ಮಾಧ್ಯಮಿಕ ಹಂತದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಜಾರ್ಖಂಡ್ (ಶೇ.71.7). ಉತ್ತರ ಪ್ರದೇಶ ಎರಡನೆ ಸ್ಥಾನದಲ್ಲಿದೆ. ಪ್ರಾಥಮಿಕ ಹಂತದಲ್ಲಿಯೂ ಜಾರ್ಖಂಡವೇ ಮೊದಲ ಸ್ಥಾನದಲ್ಲಿದೆ (ಶೇ. 38.4). ಬಿಹಾರದ್ದು ಎರಡನೆ ಸ್ಥಾನವಾದರೆ (ಶೇ. 34.5) ಪಂಜಾಬ್ ಮೂರನೆ ಸ್ಥಾನದಲ್ಲಿದೆ (ಶೇ. 23.4). ಉತ್ತರ ಪ್ರದೇಶದ ಸರದಿ ಪಂಜಾಬ್‌ನ ನಂತರ ಬರುತ್ತದೆ (ಲೋಕಸಭೆ ಮಾಹಿತಿ). ಇಡೀ ದೇಶವನ್ನು ತೆಗೆದುಕೊಂಡರೆ ಒಟ್ಟು ಇರುವ 60 ಲಕ್ಷ ಶಿಕ್ಷಕ ಹುದ್ದೆಗಳಲ್ಲಿ 10 ಲಕ್ಷ ಹುದ್ದೆಗಳಿಗೆ ಇನ್ನೂ ನೇಮಕಾತಿ ಆಗಿಲ್ಲ.
ಪ್ರತಿಪಾದನೆ 2
ಹಿಂದೂಸ್ಥಾನದಲ್ಲಿ ದಲಿತರ ಮೇಲೆ ಅತ್ಯಧಿಕ ದೌರ್ಜನ್ಯಗಳು ಎಲ್ಲಾದರೂ ಸಂಭವಿಸುತ್ತಿದ್ದರೆ ಅದು ಉತ್ತರ ಪ್ರದೇಶದಲ್ಲಿ.
ವಾಸ್ತವ
ಮೋದಿ ಇಲ್ಲಿ ಬರೀ ಅಪರಾಧಗಳ ಸಂಖ್ಯೆಯನ್ನಷ್ಟೆ ಪ್ರಸ್ತಾಪಿಸಿ ಉದ್ದೇಶಪೂರ್ವಕವಾಗಿ ತಪ್ಪುಮಾಡಿದ್ದಾರೆೆ. ಈ ರೀತಿ ನೋಡಿದರೆ 2015ರಲ್ಲಿ ಉತ್ತರ ಪ್ರದೇಶದಲ್ಲಿ ದಲಿತರ ವಿರುದ್ಧ ಅತ್ಯಧಿಕ ಅಪರಾಧಗಳು (ಒಟ್ಟು 8,358) ಸಂಭವಿಸಿರುವಂತೆ ಕಾಣುತ್ತದೆ. ಆದರೆ ಅಧಿಕೃತ ಹಾಗೂ ಅಂಗೀಕೃತವಾದ (ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ; ಎನ್‌ಸಿಆರ್‌ಬಿ) ಅಪರಾಧ ಗತಿಯನ್ನು (rate; ಪ್ರತಿ 1 ಲಕ್ಷ ದಲಿತರಲ್ಲಿ ದೌರ್ಜನ್ಯಕ್ಕೊಳಗಾದವರ ಸಂಖ್ಯೆ) ಪರಿಗಣಿಸಿದರೆ 11 ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಉತ್ತರ ಪ್ರದೇಶಕ್ಕಿಂತಲೂ ಹೆಚ್ಚು ಅಪರಾಧಗಳು ಸಂಭವಿಸಿವೆ. ಉದಾಹರಣೆಗೆ ಎನ್‌ಸಿಆರ್‌ಬಿ ದಾಖಲೆಗಳ ಪ್ರಕಾರ ವಿವಿಧ ರಾಜ್ಯಗಳಲ್ಲಿ ನಡೆದಿರುವ ಅಪರಾಧಗಳ ಗತಿ ಹೀಗಿದೆ:
ರಾಜಸ್ಥಾನ 57 (ಅತ್ಯಧಿಕ), ಆಂಧ್ರ ಪ್ರದೇಶ 52, ಗೋವಾ 51, ಬಿಹಾರ 39, ಮಧ್ಯ ಪ್ರದೇಶ 37, ಛತ್ತೀಸ್‌ಗಡ 31, ಗುಜರಾತ್ 26, ಉತ್ತರ ಪ್ರದೇಶ 20, ಮಹಾರಾಷ್ಟ್ರ 14.
2008ರಿಂದ-2015ರ ವರೆಗಿನ ಅವಧಿಯನ್ನು ಪರಿಗಣಿಸಿದರೆ ಗುಜರಾತ್‌ನಲ್ಲಿ ಅಪರಾಧ ಗತಿ ಯಾವತ್ತೂ 25ಕ್ಕಿಂತ ಜಾಸ್ತಿ ಇತ್ತು. ಉತ್ತರ ಪ್ರದೇಶದಲ್ಲಿ ಯಾವತ್ತೂ 20ಕ್ಕಿಂತ ಕಡಿಮೆ ಇತ್ತು. ಮಾಯಾವತಿ ಸರಕಾರದ ಅವಧಿಯಲ್ಲಿ ಇನ್ನಷ್ಟು ಕಡಿಮೆಯಾಗಿದ್ದ ಗತಿ ಅಖಿಲೇಶ್ ಸರಕಾರದ ಅವಧಿಯಲ್ಲಿ ಮತ್ತೆ ಯಥಾಸ್ಥಿತಿಗೆ ಮರಳಿದೆ.
ಪ್ರತಿಪಾದನೆ 3
ಅಪರಾಧಗಳ ವಿಚಾರದಲ್ಲಿ ಉತ್ತರ ಪ್ರದೇಶ ದೇಶದಲ್ಲೇ ನಂಬರ್ ವನ್. ಅಲ್ಲಿ ದಿನಂಪ್ರತಿ 24 ಅತ್ಯಾಚಾರ, 21 ಅತ್ಯಾಚಾರ ಯತ್ನ, 13 ಕೊಲೆ, 33 ಅಪಹರಣ, 19 ದಂಗೆ, 136 ಕಳವು ಪ್ರಕರಣಗಳು ನಡೆಯುತ್ತವೆ (ಇವು 2015ರ ಅಂಕಿಅಂಶಗಳು).
ವಾಸ್ತವ
ಮೋದಿ ಮತ್ತೆ ಉದ್ದೇಶಪೂರ್ವಕವಾಗಿ ಅದೇ ತಪ್ಪು ಮಾಡಿದ್ದಾರೆೆ. ಅಧಿಕೃತ (ಎನ್‌ಸಿಆರ್‌ಬಿ) ವಿಧಾನದಲ್ಲಿ ಅಂದರೆ ಅಪರಾಧ ಗತಿಯ ಆಧಾರದಲ್ಲಿ (ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ ನಡೆದಿರುವ ಪ್ರಕರಣಗಳು) ನೋಡಿದರೆ ಕೊಲೆ ಪ್ರಕರಣಗಳ ಮಟ್ಟಿಗೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಅತ್ಯಾಚಾರ ಪ್ರಕರಣಗಳ ಮಟ್ಟಿಗೆ 27 ರಾಜ್ಯಗಳಲ್ಲಿ, ಅಪಹರಣ ಪ್ರಕರಣಗಳ ಮಟ್ಟಿಗೆ 19 ರಾಜ್ಯಗಳಲ್ಲಿ, ದಂಗೆ ಪ್ರಕರಣಗಳ ಮಟ್ಟಿಗೆ 16 ರಾಜ್ಯಗಳಲ್ಲಿ ಅಪರಾಧ ಗತಿ ಉತ್ತರ ಪ್ರದೇಶಕ್ಕಿಂತ ಜಾಸ್ತಿ ಇದೆ.
ಪ್ರತಿಪಾದನೆ 4
ಉತ್ತರ ಪ್ರದೇಶ ಸರಕಾರ ಬರೀ 3 ಪ್ರತಿಶತ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದೆ.
ವಾಸ್ತವ
ಇದೂ ಒಂದು ಅರ್ಧ ಸತ್ಯ. ಮೋದಿ ಹೇಳಿರುವ ಅಂಕಿಅಂಶ ಕೇವಲ ಗೋಧಿಯ ಮಟ್ಟಿಗೆ ಮಾತ್ರ ಸರಿ. ಆದರೆ ಭತ್ತದ ವಿಷಯ ಬೇರೆಯೇ ಇದೆ. 2014-15ರಲ್ಲಿ ಭಾರತೀಯ ಆಹಾರ ನಿಗಮ ಮತ್ತಿತರ ಸರಕಾರಿ ಇಲಾಖೆಗಳು ಖರೀದಿಸಿದ ಗೋಧಿಯ ಪ್ರಮಾಣ ಶೇ. 2.5ರಷ್ಟಿದ್ದರೆ ಅಕ್ಕಿಯ ಪ್ರಮಾಣ ಶೇ. 10.5ರಷ್ಟಿತ್ತು! ಮಿಕ್ಕಿದುದನ್ನೆಲ್ಲ ರೈತರು ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿರುವ ಏಜಂಟರಿಗೂ ವ್ಯಾಪಾರಿಗಳಿಗೂ ಮಾರಿದ್ದರು.
ರಾಜಸ್ಥಾನದಲ್ಲಿ ಖರೀದಿಯ ಪ್ರಮಾಣ ಶೇ. 50ರಷ್ಟಿತ್ತು ಎಂದು ಮೋದಿ ಹೇಳಿರುವುದು ಸುಳ್ಳು. ಸರಕಾರಿ ಸಂಸ್ಥೆಗಳು ಖರೀದಿಸಿರುವುದು ಕೇವಲ ಶೇ. 18 ಅಷ್ಟೆ. ಇನ್ನು ಬಿಜೆಪಿ ಆಡಳಿತವಿರುವ ಛತ್ತೀಸ್‌ಗಡ, ಮಧ್ಯ ಪ್ರದೇಶಗಳಲ್ಲಿ ಶೇ. 60ರಷ್ಟು ಖರೀದಿಸಲಾಗಿದೆ ಎಂಬ ಮೋದಿಯ ಹೇಳಿಕೆಗಳೂ ಅರ್ಧ ಸತ್ಯ. ಏಕೆಂದರೆ ಛತ್ತೀಸ್‌ಗಡದ ಅಂಕಿಅಂಶ ಕೇವಲ ಭತ್ತದ್ದಾದರೆ ಮಧ್ಯ ಪ್ರದೇಶದ್ದು ಬರೀ ಗೋಧಿಯದಾಗಿತ್ತು. ಆದರೆ ಹರ್ಯಾಣದ ಬಗ್ಗೆ ಮೋದಿ ಕೊಟ್ಟ ಶೇ. 70ರ ಅಂಕಿ ಅಂಶ ಭತ್ತ, ಗೋಧಿ ಎರಡರ ಮಟ್ಟಿಗೂ ಹೆಚ್ಚುಕಮ್ಮಿ ಸರಿಯಾಗಿತ್ತು.
ಪ್ರತಿಪಾದನೆ 5
ನಾವು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಹೇಗಿದೆ ಎಂದರೆ ನೇಜಿ ಕಾಲದಲ್ಲಿ ಯಾವುದೇ ಪ್ರಾಕೃತಿಕ ಕಾರಣಗಳಿಂದಾಗಿ ಬೆಳೆಗೆ ಹಾನಿಯಾದಲ್ಲಿ ರೈತನಿಗೆ ವಿಮೆ ಸಿಗಲಿದೆ. ಇದಕ್ಕೂ ಮುಂಚೆ ಇಂತಹದೊಂದು ಯೋಜನೆಯನ್ನು ಯಾರಾದರೂ ಕಂಡಿದ್ದೀರಾ?
ವಾಸ್ತವ
ಹವಾಮಾನ ವೈಪರೀತ್ಯಗಳಿಂದಾಗುವ ಬೆಳೆ ಹಾನಿಗೆ ವಿಮೆ ಸಿಗುತ್ತಿರುವುದು ಇದೇ ಮೊದಲ ಬಾರಿ ಎಂದು ಮೋದಿ ಹೇಳುತ್ತಿರುವುದು ನಿಜವಲ್ಲ. ಹಿಂದಿನ ವಿಮಾ ಯೋಜನೆಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ, ಪರಿವರ್ತಿತ ಕೃಷಿ ವಿಮಾ ಯೋಜನೆ ಮತ್ತು ಹವಾಮಾನ ಆಧರಿಸಿದ ಬೆಳೆ ವಿಮಾ ಯೋಜನೆ ಎಂಬ ಮೂರು ವಿಭಾಗಗಳಿದ್ದವು. ಹವಾಮಾನ ಆಧರಿಸಿದ ಬೆಳೆ ವಿಮಾ ಯೋಜನೆ ದೇಶದ ಕೆಲವು ಭಾಗಗಳಿಗೆ ಸೀಮಿತವಾಗಿತ್ತು. ಇದು ಅತಿವೃಷ್ಟಿ, ಅನಾವೃಷ್ಟಿ ಮತ್ತು ಹಿಮದ ವಿರುದ್ಧವೂ ವಿಮೆ ಒದಗಿಸುತ್ತದೆ. ಈ ಯೋಜನೆಯನ್ನು 2003ರಲ್ಲಿ ಬೇಸಗೆಯ ಬೆಳೆಗಳಿಗೂ 2008ರಲ್ಲಿ ಚಳಿಗಾಲದ ಬೆಳೆಗಳಿಗೂ ವಿಸ್ತರಿಸಲಾಗಿತ್ತು. ಮೋದಿ ಸರಕಾರ ಇದನ್ನು ಹಾಗೇ ಮುಂದುವರಿಸಿದೆ. 2014-15 ಮತ್ತು 2015-16ರಲ್ಲಿ ಆ ಬಾಬತ್ತು ಸುಮಾರು ರೂ. 1,000 ಕೋಟಿಯಷ್ಟನ್ನು ವ್ಯಯಿಸಿದೆ ಕೂಡಾ. ಮತ್ತೆ ಮತ್ತೆ ಬರಗಾಲ ಬಂದುದರಿಂದ 2016-17ರಲ್ಲಿ ರೂ. 13,200 ಕೋಟಿ ಖರ್ಚು ಮಾಡಿದೆ. ಮೋದಿಯ ನೂತನ ಯೋಜನೆ ಮಾಡಿರುವುದಿಷ್ಟೆ: ಮೊದಲ ಎರಡು ವಿಭಾಗಗಳನ್ನು ಒಟ್ಟು ಸೇರಿಸಿ ‘ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ’ ಎಂಬ ಹೊಸ ಹೆಸರನ್ನು ನೀಡಲಾಗಿದೆ! ಮೂರನೆ ವಿಭಾಗ ಮೊದಲಿನ ಹಾಗೇ ಇದೆ!
ಪ್ರತಿಪಾದನೆ 6
ಬಿಜೆಪಿ ಸರಕಾರಗಳು ಇರುವಲ್ಲೆಲ್ಲಾ 60-70 ಪ್ರತಿಶತ ರೈತರು ಈ ವಿಮಾ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬರೀ 3 ಪ್ರತಿಶತ ರೈತರಿಗೆ ಪ್ರಯೋಜನ ಲಭಿಸಿದೆ.
ವಾಸ್ತವ
ಮಹಾರಾಷ್ಟ್ರ, ರಾಜಸ್ಥಾನಗಳ ಮಟ್ಟಿಗೆ ಮೋದಿಯವರ ಅಂಕಿಅಂಶ ಸರಿಯಾಗಿದೆ. ಆದರೆ ಗುಜರಾತ್, ಮಧ್ಯ ಪ್ರದೇಶಗಳ ಬಗ್ಗೆ ಅವರು ಕೊಟ್ಟಿರುವ ಅಂಕಿಅಂಶಗಳು ತೀರ ಉತ್ಪ್ರೇಕ್ಷಿತ. ಉತ್ತರ ಪ್ರದೇಶದ ಬಗ್ಗೆ ಸುಳ್ಳು ಅಂಕಿಅಂಶ ನೀಡಿದ್ದಾರೆೆ.
ಪ್ರತಿಪಾದನೆ 7
ಪೊಲೀಸರು ನಡೆಸಿರುವ ತನಿಖೆಗಳ ಪ್ರಕಾರ ಕಾನ್ಪುರದ ಇತ್ತೀಚಿನ ರೈಲು ದುರ್ಘಟನೆಯ ಹಿಂದೆ ಒಂದು ಪಿತೂರಿ ಇದೆಯೆಂದು ತಿಳಿದುಬರುತ್ತಿದೆ. ಇದು ನಮ್ಮ ಗಡಿಯಾಚೆಗಿನ ಶತ್ರುಗಳು ಮಾಡಿದಂತಹ ಪಿತೂರಿ....
ವಾಸ್ತವ
ಮೋದಿ ಉಲ್ಲೇಖಿಸಿದ ರೈಲು ದುರ್ಘಟನೆ ನವಂಬರ್ 20, 2016ರಂದು ನಡೆದಿರುವುದಾಗಿದೆ. ಸದರಿ ಅಪಘಾತಕ್ಕೆ ಹಳೆಯ ಕೋಚುಗಳು ಮತ್ತು ಸವೆದ ಚಕ್ರಗಳೇ ಕಾರಣವೆಂದು ತೋರುತ್ತದೆ ಎಂದು ರೈಲು ಸುರಕ್ಷಾ ಪ್ರಾಧಿಕಾರದ ಪ್ರಾಥಮಿಕ ತನಿಖಾ ವರದಿ ಹೇಳಿದರೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಾಥಮಿಕ ತನಿಖೆ ಪ್ರಕಾರ ಈ ವಿಧ್ವಂಸಕ ಕೃತ್ಯದ ಹಿಂದೆ ಭಯೋತ್ಪಾದಕರ ಕೈವಾಡ ಇಲ್ಲ. ಸಾರ್ವಜನಿಕ ಸಭೆಗಳಲ್ಲಿ ಅನಾಗರಿಕರಂತೆ ಮಾತನಾಡುವ, ವಾಸ್ತವಕ್ಕೆ ದೂರವಿರುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ, ಕೋಮು ಭಾವನೆಗಳನ್ನು ಉದ್ದೀಪಿಸುವ ವ್ಯಕ್ತಿ ಪ್ರಧಾನಿ ಸ್ಥಾನದಲ್ಲಿರಲು ಅರ್ಹರೇ ಎಂಬ ಪ್ರಶ್ನೆಯನ್ನು ಮತದಾರರು ಕೇಳಲೇಬೇಕಾಗಿದೆ.
(ಆಧಾರ: Factchecker.inನಲ್ಲಿ ಅಭಿಷೇಕ್ ವಾಗ್ಮಾರೆ: scroll.inನಲ್ಲಿ ಸಮರ್ ಹಾಲ್ರನ್‌ಕರ್)