ಅವನ ಪೂರ್ತಿ ಹೆಸರು ಮುಹಮ್ಮದ್ ಮುಸ್ತಫಾ!
ಧಾರಾವಾಹಿ-14
ತಾನು ಮಾತನಾಡುವಾಗೆಲ್ಲ ಪಪ್ಪು ಎರಡು ಕಣ್ಣುಗಳನ್ನು ಅರಳಿಸಿ ಗಮನವಿಟ್ಟು ಆಲಿಸುವುದು ಜಾನಕಿಗೆ ಇಷ್ಟವಾಗಿತ್ತು. ತಾನು ಹೋದಲ್ಲೆಲ್ಲ ಅವನು ಹಿಂಬಾಲಿಸಿ ಬರುವುದು, ತನ್ನ ಬಳಿ ಆಗಾಗ ‘ನಿನಗೆ ತುಂಬಾ ಗೊತ್ತಿದೆ ಜಾನಕಿ...’ ಎನ್ನುವುದು ಅವಳಿಗೆ ಖುಷಿ ಕೊಡುತ್ತಿತ್ತು.
ಪಪ್ಪು ಅವಳಿಗೆ ಒಂದೇ ಕಾರಣಕ್ಕೆ ಇಷ್ಟ. ‘ಪ್ರತಾಪ ಸಿಂಹ’ ಎಂಹ ಹೆಸರನ್ನಿಟ್ಟಿಕೊಂಡಿರುವುದಕ್ಕೆ. ಅದೂ ತನ್ನ ತಂದೆ ಇಟ್ಟ ಹೆಸರು ಎನ್ನುವ ಹೆಮ್ಮೆ ಅವಳಿಗಿತ್ತು. ಪಪ್ಪುವನ್ನು ಬಿಟ್ಟು ಪುತ್ತೂರು ಸೇರುವುದು ಅವಳಿಗೆ ದೊಡ್ಡ ಕಷ್ಟವೇನೂ ಆಗಿರಲಿಲ್ಲ. ಪುತ್ತೂರು ಎನ್ನುವುದು ಉಪ್ಪಿನಂಗಡಿಗಿಂತಲೂ ದೊಡ್ಡ ಪಟ್ಟಣ. ಅಲ್ಲೆಲ್ಲ ತುಂಬಾ ನೋಡಬಹುದು. ಮುಖ್ಯವಾಗಿ, ಇಡೀ ಕಾಲೇಜೇ ನನ್ನ ತಂದೆಗೆ ಸೇರಿದ್ದು ಎಂಬ ಹೆಮ್ಮೆಯೂ ಅವಳಲ್ಲಿತ್ತು.
ವಿವೇಕ ಶ್ರೀ ಕಾಲೇಜಿನ ಶಿಸ್ತಿಗೆ ಜಾನಕಿ ಸುಲಭದಲ್ಲಿ ಹೊಂದಿಕೊಂಡಳು. ಅಲ್ಲಿನ ಯಾವ ನಿಯಮಗಳೂ ಆಕೆಗೆ ಹೊಸತೆನಿಸಲಿಲ್ಲ. ಯಾಕೆಂದರೆ, ಅವುಗಳನ್ನೆಲ್ಲ ಗುರೂಜಿ ಬಾಲ್ಯದಿಂದಲೇ ಕಲಿಸುತ್ತಾ ಬಂದಿದ್ದರು. ಬೆಳಗಿನ ‘ವಂದೇಮಾತರಂ’ ಹಾಡನ್ನು ಅವಳು ಸಂಪೂರ್ಣವಾಗಿ ರಾಗಸಹಿತ ಹಾಡಬಲ್ಲಳು. ವಿಜ್ಞಾನದ ಜೊತೆ ಜೊತೆಗೇ ಅಲ್ಲಿನ ಸಾಂಸ್ಕೃತಿಕ ವಿಭಾಗದ ಹೊಣೆಯನ್ನೂ ಅವಳು ಹೊತ್ತುಕೊಂಡಿದ್ದಳು. ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕವಾಗಿ ಸಂಘಟಿಸುವ ಹೊಣೆಗಾರಿಕೆಯೂ ಅವಳಿಗಿದ್ದಿತ್ತು. ಕಲಿಕೆಯಲ್ಲೂ, ಸಾಂಸ್ಕೃತಿಕವಾಗಿಯೂ ಸದಾ ಮುಂದಿರುತ್ತಿದ್ದ ಜಾನಕಿ ಎಲ್ಲ ಅಧ್ಯಾಪಕರ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿ ಗುರುತಿಸಲ್ಪಡತೊಡಗಿದಳು. ಇತ್ತ ಗುರೂಜಿಯಂತೂ ಮಗಳ ಸಾಧನೆಯ ವರದಿಗಳನ್ನು ವಾರಕ್ಕೊಮ್ಮೆ ತರಿಸಿಕೊಂಡು ಅತನ್ನು ಪತ್ನಿಗೆ ವಿವರಿಸಿ ಹೇಳುತ್ತಿದ್ದರು.
ಹೀಗೆ ಸರಾಗವಾಗಿ ಸಾಗುತ್ತಿದ್ದ ಜಾನಕಿಯ ವಿದ್ಯಾರ್ಥಿ ಬದುಕಿಗೆ, ಸಣ್ಣದೊಂದು ತಡೆ ಮೊದಲ ಹಂತದ ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗ ಎದುರಾಯಿತು. ಬೇರೆಯವರಿಗೆ ಅದೊಂದು ಸಣ್ಣ ತಡೆಯಾದರೂ, ಜಾನಕಿಯ ವಿಷಯದಲ್ಲಿ ಬಹಳ ದೊಡ್ಡದಾಗಿತ್ತು. ಫಲಿತಾಂಶದಲ್ಲಿ ಆಕೆ ತರಗತಿಗೆ ಎರಡನೆ ಸ್ಥಾನದಲ್ಲಿದ್ದಳು. ಅವಳಿಗೆ ಬಹುದೊಡ್ಡ ಮುಖಭಂಗವಾಗಿತ್ತು. ಹಾಗಾದರೆ ಮೊದಲನೆ ಸ್ಥಾನ ಯಾರಿಗೆ? ತನಗಿಂತಲೂ ಪ್ರತಿಭಾವಂತರು ನನ್ನ ಜೊತೆಗೇ ಇದ್ದರೆ? ನಾನೀವರೆಗೆ ಗುರುತಿಸದ ಆ ವಿದ್ಯಾರ್ಥಿ ಯಾರು? ತಕ್ಷಣ ವಿಚಾರಣೆಗೆ ತೊಡಗಿದಳು. ಕೊನೆಗೂ ಆಕೆಗೆ ಉತ್ತರ ದೊರಕಿತು. ಆತನ ಹೆಸರು ಮುಸ್ತಫಾ. ಪೂರ್ತಿ ಹೆಸರು ಮುಹಮ್ಮದ್ ಮುಸ್ತಫಾ. ಅರೆ! ಅವನನ್ನು ನಾನು ಈವರೆಗೆ ನೋಡಿಯೇ ಇರಲಿಲ್ಲವಲ್ಲ. ಹುಡುಗರ ವಿಭಾಗದಲ್ಲಿ ಮಧ್ಯದಲ್ಲಿ ಕುಳ್ಳಿತುಕೊಳ್ಳುತ್ತಿದ್ದ. ನೋಡಿದರೆ ಆತ ಉಳಿದ ಸಾಬರಂತೆ ಇರಲಿಲ್ಲ. ಬಿಳಿಯಾಗಿ ಮುದ್ದಾಗಿದ್ದ. ಎಲ್ಲೋ ಒಂದು ಕಡೆ ಪಪ್ಪುವನ್ನು ಹೋಲುತ್ತಿದ್ದ. ಓಹ್, ಕಣ್ಣಿಗೆ ಕನ್ನಡಕವನ್ನೂ ತಗುಲಿಸಿಕೊಂಡಿದ್ದ. ಸಾಬರು ಹೀಗೂ ಇರುತ್ತಾರೆಯೋ ಎನ್ನುವ ಹಾಗೆ. ಆ ಬಳಿಕ ಅವನನ್ನು ಗಮನಿಸುವುದು ಅವಳ ಪರಿಪಾಠವಾಯಿತು.
ಒಂದು ದಿನ ಮಧ್ಯಾಹ್ನ ಶಾಲೆಯ ಗಂಟೆ ಬಾರಿಸುತ್ತಿದ್ದಂತೆ ಅವನು ಚಡಪಡಿಸಿ ಓಡುವುದನ್ನು ನೋಡಿದಳು. ಇದು ಮೊದಲ ಸಲ ಅಲ್ಲ ಅನ್ನಿಸಿತು. ಈ ಹಿಂದೆಯೂ ಅವನು ಹೀಗೆ ಚಡಪಡಿಸಿ ಓಡುವುದನ್ನು ನೋಡಿದ್ದಳು.
ಇರುವ ಒಬ್ಬ ಗೆಳತಿ ಮೀನಾಕ್ಷಿಯಲ್ಲಿ ಕೇಳಿದಳು ‘‘ಅವನೇಕೆ ಹಾಗೆ ಅವಸರವಸರವಾಗಿ ಓಡುತ್ತಿದ್ದಾನೆ....’’
‘‘ನಿನಗೇಕೆ ಆ ಜಾತಿಯವರ ಸುದ್ದಿ...’’ ಮೀನಾಕ್ಷಿ ಸಿಡುಕಿ ಕೇಳಿದಳು.
‘‘ಅಲ್ಲ ಕಣೇ...ಅವನು ಗಾಬರಿಯಿಂದ ಓಡುತ್ತಿರುವ ಹಾಗಿದೆ...’’ ಜಾನಕಿ ಕೇಳಿದಳು.
‘‘ಇವತ್ತು ಶುಕ್ರವಾರವಲ್ಲವಾ ಹಾಗೆ...’’ ಮೀನಾಕ್ಷಿ ಹೇಳಿದಳು.
‘‘ಶುಕ್ರವಾರವಾದರೆ...’’
‘‘ಶುಕ್ರವಾರ ಅವರ ಮಸೀದಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಪ್ರಾರ್ಥನೆ ಇದೆ....ತಡವಾದರೆ ಪ್ರಾರ್ಥನೆ ಮುಗಿಯುತ್ತದೆ ಎಂದು ಓಡುತ್ತಿದ್ದಾನೆ...’’
‘‘ಓಹೋ...ಹಾಗಾ...ಆದರೆ ಪ್ರತಿ ದಿನ ಐದು ಹೊತ್ತು ಅಡ್ಡ ಬೀಳುತ್ತಾರಲ್ಲ...ಅದು...’’
‘‘ಇದು ವಿಶೇಷ ಪ್ರಾರ್ಥನೆಯಂತೆ ಕಣೇ...ಶಾಲೆಗೆ ಸೇರುವ ಮೊದಲು ಆ ವಿಷಯದಲ್ಲಿ ಸ್ವಲ್ಪ ತಕರಾರು ತೆಗೆಯಲು ಶುರು ಮಾಡಿದನಂತೆ...’’
‘‘ಏನಂತೆ...?’’
‘‘ಅದೇ...ಶುಕ್ರವಾರ ನಮಾಝ್ ಇರುವ ಕಾರಣ ಕಾಲು ಗಂಟೆ ಬೇಗ ಬಿಡಬೇಕು ಎಂದು ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿದನಂತೆ...’’
‘‘ಅದಕ್ಕೆ’’
‘‘ಅದಕ್ಕೇನು...ನಮಾಝ್-ಗಿಮಾಝ್ ಅಂತೆಲ್ಲ ಇದ್ರೆ ನೀನು ಬೇರೆ ಕಾಲೇಜಿಗೆ ಹೋಗು ಎಂದರಂತೆ...’’
‘‘ಓಹೋ ಹಾಗೋ...’’
‘‘ಸ್ವಲ್ಪ ಬಿಟ್ಟರೆ ಇಲ್ಲೇ ಒಂದು ಮಸೀದಿ ನಿರ್ಮಾಣ ಮಾಡುತ್ತಾರೆ ಆ ಜಾತಿಯವರು...ನಿನಗೆ ಗೊತ್ತಿಲ್ಲ...’’ ‘‘ಗೊತ್ತು ಗೊತ್ತು. ನಮ್ಮೂರಲ್ಲೂ ಇವರ ಉಪದ್ರ ಇದೆ...ಶಾಖೆಯ ಹುಡುಗರು ಒಂದಿಷ್ಟು ಇರುವುದರಿಂದಾಯಿತು...’’ ಜಾನಕಿ ತನಗೂ ಗೊತ್ತು ಎನ್ನುವುದನ್ನು ಸ್ಪಷ್ಟ ಮಾಡಿದಳು. ಇದಾದನಂತರ ಮುಸ್ತಫಾನನ್ನು ಒಂದು ಅಸಹನೆಯ ದೃಷ್ಟಿಯನ್ನು ಇಟ್ಟುೊಂಡು ಗಮನಿಸುತ್ತಲೇ ಇದ್ದಳು.
‘ತನ್ನಿಂದ ಮೊದಲ ಸ್ಥಾನ ಕಸಿದುಕೊಂಡವನು’ ಎನ್ನುವುದು ಅದಕ್ಕೆ ಮುಖ್ಯ ಕಾರಣವಾಗಿತ್ತು.
ಮೀನಾಕ್ಷಿ ಅದಕ್ಕೂ ಸಮಜಾಯಿಶಿ ಕೊಟ್ಟಿದ್ದಳು ‘‘ಆ ಜಾತಿಯವರು ಡೋಂಗಿಯಲ್ಲಿ ನಂಬರ್ ವನ್ ಕಣೇ...ಪರೀಕ್ಷೆಯಲ್ಲಿ ಚೀಟಿ ಇಟ್ಟುಕೊಂಡಿರ ಬೇಕು...ಯಾರಿಗೆ ಗೊತ್ತು?’’ ಜಾನಕಿಗೂ ಇರಬಹುದು ಅನ್ನಿಸಿ, ಮತ್ತಷ್ಟು ಅಸಹನೆ ಉಕ್ಕಿ ಬಂತು.
ಆದರೆ ಅವನು ಇನ್ನೊಂದು ಸಂದರ್ಭದಲ್ಲಿ ಮತ್ತೆ ಜಾನಕಿಗೆ ಮುಖಾಮುಖಿಯಾಗಿ ಬಿಟ್ಟ. ಅದು ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ.
ಭಾಷಣ ಸ್ಪರ್ಧೆಯ ವಸ್ತು ‘‘ಜನಸಂಖ್ಯೆ ದೇಶಕ್ಕೆ ವರವೇ? ಶಾಪವೇ?’’ ನೋಟಿಸ್ ಬೋರ್ಡ್‌ನಲ್ಲಿ ಹೀಗೊಂದು ಭಾಷಣ ಸ್ಪರ್ಧೆ ಘೋಷಿಸಿರುವುದು ಗೊತ್ತಾದಾಕ್ಷಣವೇ ಜಾನಕಿ ‘ಶಾಪ’ ಎಂದು ಆರಿಸಿಕೊಂಡಿದ್ದಳು. ಕಾಲೇಜಿನ ಹಲವರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಗೆದ್ದ ಮೊದಲ ಮತ್ತು ಎರಡನೆ ಸ್ಥಾನ ಪಡೆದ ಅಭ್ಯರ್ಥಿಗಳು ಮಂಗಳೂರಿನ ಕಾಲೇಜಿನಲ್ಲಿ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿತ್ತು. ಭಾಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳೆಲ್ಲ ಜನಸಂಖ್ಯೆ ‘ಶಾಪ’ ಎಂದೇ ಆರಿಸಿಕೊಂಡಿದ್ದರು. ಆದರೆ ಎಲ್ಲರ ಕಣ್ಣು ಕುಕ್ಕುವಂತೆ ಮುಸ್ತಫಾ ‘ವರ’ ಎಂದು ಆರಿಸಿಕೊಂಡಿದ್ದ. ಕಾಲೇಜಿನ ಸ್ಪರ್ಧಿಗಳೆಲ್ಲ ಅವನನ್ನು ದುರುಗುಟ್ಟಿ ನೋಡುವಂತಾಯಿತು.
‘‘ಹತ್ತತ್ತು ಮಕ್ಕಳನ್ನು ಹುಟ್ಟಿಸಿ ಹಾಕುವ ಅವರಿಗೆ ಜನಸಂಖ್ಯೆ ವರವಲ್ಲದೆ ಶಾಪ ಹೇಗಾಗುತ್ತದೆ’’ ಮೀನಾಕ್ಷಿ ಕೇಳಿ ನಕ್ಕಿದ್ದಳು.
ಜಾನಕಿಗೂ ಅದು ಸರಿ ಅನ್ನಿಸಿತು. ಮುಸ್ತಫಾನ ಕುರಿತಂತೆ ಅಸಹನೆಗೆ ಸಮರ್ಥನೆಗಳು ಇನ್ನಷ್ಟು ಸಿಕ್ಕಿದಂತಾಯಿತು.
ಸ್ಪರ್ಧೆಗೆ ತೀರ್ಪುಗಾರರಾಗಿ ಪುತ್ತೂರಿನವರೇ ಆಗಿದ್ದ ಕಾಲೇಜಿಗೆ ಸಂಬಂಧ ಪಡದ ಇಬ್ಬರು ವಿದ್ವಾಂಸರು ಬಂದಿದ್ದರು.
ಜಾನಕಿ ತನ್ನ ಭಾಷಣದಲ್ಲಿ ಜನಸಂಖ್ಯೆ ಹೆಚ್ಚುತ್ತಿರು ವುದರಿಂದ ದೇಶದಲ್ಲಿ ಅಧಿಕವಾಗುತ್ತಿರುವ ಬಡತನದ ಬಗ್ಗೆ ಗಮನ ಸೆಳೆದಿದ್ದಳು. ಮತ್ತು ಕಡ್ಡಾಯವಾಗಿ ಎಲ್ಲ ಧರ್ಮೀಯರಿಗೂ ಕುಟುಂಬ ಯೋಜನೆ ಜಾರಿಗೊಳ್ಳಬೇಕು ಎಂದು ಒತ್ತಿ ಹೇಳಿದಳು. ಮುಸ್ಲಿಮರ ಎಲ್ಲ ಸಮಸ್ಯೆಗಳಿಗೂ ಅವರ ಜನಸಂಖ್ಯೆಯೇ ಕಾರಣ ಎಂದೂ ಸೇರಿಸಿಕೊಂಡಳು. ಆದುದರಿಂದ ಅವರಿಗೂ ಕುಟುಂಬ ಯೋಜನೆ ಕಡ್ಡಾಯವಾಗಬೇಕು ಎಂದು ಹೇಳಿದಳು. ಈ ಸಾಲನ್ನು ಆಕೆ ಉದ್ದೇಶಪೂರ್ವಕವಾಗಿ ಮುಸ್ತಫಾನಿ ಗಾಗಿ ಹೊಸದಾಗಿ ಸೇರ್ಪಡೆ ಮಾಡಿದ್ದಳು. ಉಳಿದಂತೆ ಎಲ್ಲರೂ ಜನಸಂಖ್ಯೆಯಿಂದ ದೇಶ, ಪರಿಸರ, ಸಮಾಜ, ಆರ್ಥಿಕ ವ್ಯವಸ್ಥೆಗೆ ಆಗುತ್ತಿರುವ ತೊಂದರೆಯನ್ನು ತಮ್ಮದೇ ರೀತಿಯಲ್ಲಿ ಮಂಡಿಸಿದರು. ಜನಸಂಖ್ಯೆ ವರ ಎನ್ನುವ ವಾದವನ್ನು ಮುಸ್ತಫಾ ಒಬ್ಬನೇ ಮುಂದಿಡುತ್ತಿ ರುವುದರಿಂದ ಅವನಿಗೆ ಕೊನೆಯಲ್ಲಿ ಅವಕಾಶ ನೀಡಲಾಯಿತು.
ಮುಸ್ತಫಾ ತನ್ನ ಮಾತುಗಳನ್ನು ಅತ್ಯಂತ ಜಾಣತನ ದಿಂದ ಹೆಣೆದಿದ್ದ. ಜನಸಂಖ್ಯೆ ಒಂದು ಸಂಪನ್ಮೂಲ ಎಂದು ಹೇಳಿದ. ಮತ್ತು ಭಾರತ ಮಾತೆ ಈ ದೇಶದಲ್ಲಿ ಹುಟ್ಟಿದ ತನ್ನ ಮಕ್ಕಳಿಗೆ ಅನ್ನ ಹಾಕದಷ್ಟು ಬಡವಿಯಲ್ಲ. ನೂರು ಜನ ಉಣ್ಣುವ ಅನ್ನವನ್ನು ಕೆಲವೇ ಕೆಲವು ಜನರು ತಮ್ಮ ತಟ್ಟೆಯಲ್ಲಿ ಸೇರಿಸಿಟ್ಟುಕೊಂಡಿರುವುದರಿಂದ ಬಡತನ ಹೆಚ್ಚಾಗಿದೆ. ಈ ದೇಶದ ಭೂಮಿ, ನದಿ, ಸಾಗರ ಸಂಪತ್ತಿಗೆ ಹೋಲಿಸಿದರೆ ಜನಸಂಪತ್ತು ಹೆಚ್ಚಾಗುವುದಿಲ್ಲ. ಅದರ ಸಮರ್ಪಕ ಬಳಕೆಯಾಗಿಲ್ಲ ಎಂದು ವಾದಿಸಿದ. ಅಷ್ಟೇ ಅಲ್ಲ, ಒಂದೇ ಮಗು ಎಂಬ ಸಿದ್ಧಾಂತದಿಂದ ಚೀನ ಕೂಡ ಹಿಂದೆ ಸರಿಯಲು ಯತ್ನಿಸುತ್ತಿದೆ. ಚೀನಾದಲ್ಲಿ ವೃದ್ಧರ ಸಂಖ್ಯೆ ಜಾಸ್ತಿಯಾಗುತ್ತಿದೆ. ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದೂ ಉದಾಹರಣೆ ಸಹಿತ ಹೇಳಿದ. ಅಂಕಿಅಂಶಗಳನ್ನೂಅವನು ಪರಿಣಾಮಕಾರಿಯಾಗಿ ಬಳಸಿದ್ದ.
ಅವನ ಭಾಷಣ ತುಂಬಾ ಪರಿಣಾಕಾರಿಯಾಗಿತ್ತು ಅನ್ನಿಸಿತ್ತು ಜಾನಕಿಗೆ. ಪ್ರಥಮ ಸ್ಥಾನ ಅವನಿಗೇ ಹೋಗಿ ಬಿಡುತ್ತದೆಯೋ ಎಂದು ಭಯಪಟ್ಟಳು. ಆದರೆ ಫಲಿತಾಂಶ ಘೋಷಣೆಯಾದಾಗ ಜಾನಕಿ ಗೆದ್ದಿದ್ದಳು. ವಿವೇಕಾನಂದ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಅಂತರ್‌ಕಾಲೇಜು ಸ್ಪರ್ಧೆಗೆ ಆಯ್ಕೆಯಾಗಿದ್ದರು. ಒಬ್ಬಳು ಜಾನಕಿಯಾಗಿದ್ದರೆ ಇನ್ನೊಬ್ಬ ಮುಸ್ತಫಾ. ಗೆದ್ದರೂ ಜಾನಕಿಗೆ ಅದೇನೋ ಅಸಮಾಧಾನ. ಇದಾದ ಒಂದು ವಾರದೊಳಗೆ ಮಂಗಳೂರಿನಲ್ಲಿ ನಡೆಯುವ ಸ್ಪರ್ಧೆಗೆ ಇವರು ಭಾಗವಹಿಸಬೇಕಾಗಿತ್ತು.
ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಮುಸ್ತಫಾ ಮನೆಯಿಂದಲೇ ಮಂಗಳೂರಿಗೆ ಹೊರಟಿದ್ದ. ಜಾನಕಿ ತನ್ನ ಜೊತೆ ಮೀನಾಕ್ಷಿಯನ್ನು ಕರೆದುಕೊಂಡು ಹಾಸ್ಟೆಲ್‌ನಿಂದ ಹೊರಟಳು. ಸ್ಪರ್ಧೆ ನಡೆಯುವ ಮಂಗಳೂರಿನ ಕಾಲೇಜಿನಲ್ಲಿ ಮುಸ್ತಫಾನನ್ನು ಕಂಡರೂ ಹುಡುಗಿಯರಿಬ್ಬರೂ ಮುಖ ಕೊಟ್ಟು ಮಾತನಾಡಲಿಲ್ಲ. ಅಪರಿಚಿತರಂತೆ ವರ್ತಿಸಿದರು. ವಿವೇಕ ಶ್ರೀ ಕಾಲೇಜಿನ ವಿದ್ಯಾರ್ಥಿಗಳು ಎಂದು ಮುಸ್ತಫಾ ಮತ್ತು ಜಾನಕಿ ಇಬ್ಬರಿಗೂ ಅಲ್ಲಿನ ಶಿಕ್ಷಕರು ಭಾರೀ ಗೌರವ ನೀಡಿದ್ದರು.
ಅಲ್ಲಿನ ಶಿಕ್ಷಕರು ಜಾನಕಿಯನ್ನು ಕಂಡು ‘‘ನೀನು ಗುರೂಜಿಯವರ ಮಗಳೇನಮ್ಮ?’’ ಎಂದು ಕೇಳಿದಾಗ ಆಕೆ, ಗಾಂಭೀರ್ಯದ ಮುಖಭಾವ ಮಾಡಿ ಮುಸ್ತಫಾನ್ನು ಚೂಪು ಕಣ್ಣಿಂದ ನೋಡಿದ್ದಳು.
‘‘ಗುರೂಜಿಯನ್ನು ಕೇಳಿದೆ ಎಂದು ಹೇಳು’’ ವೃದ್ಧರೊಬ್ಬರು ಆಕೆಯ ತಲೆಯ ಮೇಲೆ ಕೈಯಿಟ್ಟು ಹೇಳಿದರು.
ಮುಸ್ತಫಾ ಒಬ್ಬಂಟಿಯಾಗಿ ಮೂಲೆಯಲ್ಲಿ ಕುಳಿತಿದ್ದ. ಅಲ್ಲಿನ ಅಪರಿಚಿತ ವಾತಾವರಣಕ್ಕೆ ಕಂಗಾಲಾಗಿದ್ದ. ಜೊತೆಗೆ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯರೂ ಅಪರಿಚಿತರಂತೆ ವರ್ತಿಸುತ್ತಿರುವಾಗ ಅವನಿಗೆ ತುಂಬಾ ಸಂಕಟವಾಯಿತು. ಅಲ್ಲಿ ಅವನು ಇನೊ್ನಂದು ವಿಚಿತ್ರವನ್ನು ಕಂಡುಕೊಂಡ.
‘‘ಜನಸಂಖ್ಯೆ ಶಾಪವಲ್ಲ ವರ’’ ಎಂದು ವಾದ ಮಾಡಲು ಬಂದವರು ಕೇವಲ ಮೂರೇ ವಿದ್ಯಾರ್ಥಿಗಳು. ಅಚ್ಚರಿಯೆಂದರೆ ಅವರೆಲ್ಲರೂ ಮುಸ್ಲಿಮರಾಗಿದ್ದರು.
ಸುರತ್ಕಲ್ ಕಾಲೇಜಿನಿಂದ ಬಂದ ಒಬ್ಬ ಮುಸ್ಲಿಮ್ ಹುಡುಗ ಇವನ ಜೊತೆ ಮಾತನಾಡಲು ಯತ್ನಿಸಿದ. ಆದರೆ ಅವರು ಪ್ರತಿಸ್ಪರ್ಧಿ ಕಾಲೇಜಿನವರಾಗಿ ರುವುದರಿಂದ ಮತ್ತು ಜೊತೆಗೆ ಬಂದ ತನ್ನ ಕಾಲೇಜಿನ ಸಹ ವಿದ್ಯಾರ್ಥಿಗಳು ತಪ್ಪು ತಿಳಿಯಬಹುದು ಎಂದು ಅವನ ಜೊತೆ ಹೆಚ್ಚು ಮಾತನಾಡದೇ ದೂರವೇ ಉಳಿದ.
‘ತಾನು ಕೂಡ ಜನಸಂಖ್ಯೆ ಶಾಪ’ ಎಂದು ಆಯ್ಕೆ ಮಾಡಬೇಕಾಗಿತ್ತು ಎಂದು ಮನದಲ್ಲೇ ಮರುಗಿದ. ಅವನು ಅದೇ ವಿಷಯವನ್ನು ಆರಿಸಿಕೊಳ್ಳುತ್ತಿದ್ದನೋ ಏನೋ? ಆದರೆ ಕನ್ನಡ ಪಂಡಿತ ಎಸ್. ಆರ್. ಹೆಗ್ಡೆಯವರು ‘ನೀನು ವಿರುದ್ಧ ಮಾತನಾಡು. ಒಂದು ವಿಷಯದ ಬಗ್ಗೆ ಪರ-ವಿರುದ್ಧ ಮಾತನಾಡುವವರು ಬೇಕು. ಒಬ್ಬರೂ ವಿರುದ್ಧ ಮಾತನಾಡದಿದ್ದರೆ ಹೇಗೆ?’ ಎಂದು ಹೇಳಿದ್ದರು.
(ರವಿವಾರದ ಸಂಚಿಕೆಗೆ)