ಕೇರಳ: ಕಾಂಗ್ರೆಸ್ ಅಧ್ಯಕ್ಷ ಸುಧೀರನ್ ಪದತ್ಯಾಗ
ತಿರುವನಂತಪುರಂ,ಮಾ.10: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಅಧ್ಯಕ್ಷ ಸ್ಥಾನಕ್ಕೆ ವಿ.ಎಂ.ಸುಧೀರನ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ತಿರುವನಂತಪುರದಲ್ಲಿ ಇಂದು ಕರೆದ ದಿಢೀರ್ ಪತ್ರಿಕಾಗೋಷ್ಠಿ ಯೊಂದರಲ್ಲಿ ಸುಧೀರನ್ ತನ್ನ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಕಲ್ಲಿಕೋಟೆಯಲ್ಲಿ ಇತ್ತೀಚೆಗೆ ಸಾರ್ವಜನಿಕ ಸಮಾರಂಭ ವೊಂದರಲ್ಲಿ ತಾನು ಕುಸಿದುಬಿದ್ದ ಬಳಿಕ ತನ್ನ ದೇಹಾರೋಗ್ಯ ವನ್ನು ತಪಾಸಣೆ ನಡೆಸಿದ ವೈದ್ಯರು, ತನಗೆ ವಿಶ್ರಾಂತಿಯ ಅಗತ್ಯವಿರುವುದಾಗಿ ಹೇಳಿರುವುದರಿಂದ ತಾನು ಪದತ್ಯಾಗ ಮಾಡುತ್ತಿರುವುದಾಗಿ ಸುಧೀರನ್ ತಿಳಿಸಿದ್ದಾರೆ.
ಪಕ್ಷದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ನೋವಿನಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸುಧೀರನ್ ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಲು ತನ್ನಿಂದ ಸಾಧ್ಯವಿದ್ದಷ್ಟು ಮಟ್ಟಿಗೆ ಶ್ರಮಿಸಿರುವೆ ಹಾಗೂ ಪಕ್ಷಕ್ಕೆ ಮರುಚೈತನ್ಯ ನೀಡಲು ಯತ್ನಿಸಿದ್ದೇನೆ ಎಂದು ಸುಧೀರನ್ ತಿಳಿಸಿದ್ದಾರೆ.
ಪ್ರಸಕ್ತ ರಾಜಕೀಯ ಪರಿಸ್ಥಿತಿ ಎಷ್ಟು ಬಿಕ್ಕಟ್ಟಿನಿಂದ ಕೂಡಿದೆ ಯೆಂದರೆ, ಈ ಹುದ್ದೆಯಲ್ಲಿದ್ದುಕೊಂಡು ಒಂದು ದಿನವೂ ವಿರ ಮಿಸಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳಿಗೆ ತಕ್ಷಣವೇ ಸ್ಪಂದಿಸಬಲ್ಲಂತಹ ವ್ಯಕ್ತಿಗಳಿಗೆ ದಾರಿ ಮಾಡಿಕೊಡುವುದು ಉತ್ತಮವೆಂದು ತಾನು ಭಾವಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಕಳುಹಿಸಿರುವುದಾಗಿ ಸುಧೀರನ್ ತಿಳಿಸಿದ್ದಾರೆ.