ಸುಭಾಷಿತ ಸುಮಧುರ ಭಾಷಣ
ಮಕ್ಕಳ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡು ವಿವಿಧ ವಯಸ್ಸಿನ ಹಂತಗಳನ್ನು ಗುರುತಿಸುವುದು ರೂಢಿ. ಇದು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಮಾತ್ರವಲ್ಲದೇ ಅವರೊಂದಿಗೆ ವಿವಿಧ ವೈಚಾರಿಕ ಪರಿಭಾಷೆಗಳಲ್ಲಿ ಮಾತನಾಡಲೂ ಕೂಡ ಗಮನಿಸಬೇಕಾಗುತ್ತದೆ.
ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾಗಿರುವುದೆಂದರೆ, ಮಕ್ಕಳೊಂದಿಗೆ ಮಾತನಾಡುವಾಗ ಅವರಿಗೆ ಅರ್ಥವಾಗುವ ಸರಳವಾದ ಭಾಷೆಯನ್ನು ಉಪಯೋಗಿಸಬೇಕು. ಆದರೆ ಹಿರಿಯರು ತಮ್ಮ ಹಿರಿತನದ ಅರ್ಥವಂತಿಕೆಯನ್ನು, ಪ್ರಬುದ್ಧತೆಯನ್ನು ಅವರಿಗೆ ದಾಟಿಸಬೇಕು. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ಮಕ್ಕಳ ದನಿಗೆ ನಾವು ಶೃತಿ ಸೇರಿಸಬೇಕು.
ಶೃತಿ ಸೇರಿಸುವುದೆಂದರೇನು?
ಶೃತಿ ಸೇರಿಸುವುದೆಂದರೆ ಒಂದು ದನಿಯು ಮತ್ತೊಂದು ದನಿಯೊಡನೆ ಕೂಡುತ್ತಾ ಒಂದೇ ಆಗಿ ಕೇಳುವುದು. ಮಕ್ಕಳೊಡನೆ ಮಾತನಾಡುವಾಗ ಅವರಿಗೆ ಹಿರಿಯರು ಬೇರೆ ಯಾವುದೋ ಲೋಕದ ಭಾಷೆ ಮಾತನಾಡುತ್ತಿದ್ದಾರೆ ಎಂದು ಅನ್ನಿಸಬಾರದು. ಮಕ್ಕಳು ದಿನ ನಿತ್ಯ ಬಳಸುವ ಭಾಷೆ ಮಾತ್ರವಲ್ಲದೇ, ಸಾಮಾನ್ಯವಾಗಿ ಒಂದು ಮಗುವು ತನ್ನ ಆಯಾ ವಯೋಮಾನಕ್ಕೆ ತಕ್ಕಂತೆ ವ್ಯವಹರಿಸುವ ವಿಷಯಗಳನ್ನು ಮತ್ತು ಮಾಡುವ ಚಟುವಟಿಕೆಗಳನ್ನು ಪುನರಾವಲೋಕನ ಮಾಡುವಂತಹ ಪರಿಭಾಷೆ ಬಳಸಬೇಕು. ಹಾಗೆಯೇ ಮಕ್ಕಳಿಗೆ ಆ ಚಟುವಟಿಕೆಗಳಲ್ಲಿಯೇ ಹೊಸ ನೋಟವನ್ನು ಮತ್ತು ಭಿನ್ನ ಸಾಧ್ಯತೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುವಂತಹ ರೀತಿಯಲ್ಲಿ ಹಿರಿಯರು ಮಾತನಾಡಬೇಕು ಮತ್ತು ವರ್ತಿಸಬೇಕು.
ಎಷ್ಟೋ ಸಲ ಬಹಳ ಉದಾತ್ತ ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕೆಂದು, ಅವರಿಗೆ ವೌಲ್ಯಾಧಾರಿತ ವಿಷಯಗಳನ್ನು ಕೊಡಬೇಕೆಂದು ಉದ್ದುದ್ದ ಭಾಷಣಗಳನ್ನು ಮತ್ತು ಸುಭಾಷಿತಗಳನ್ನು ಹೇಳುತ್ತಾರೆ. ಆದರೆ ಸಮಸ್ಯೆ ಮತ್ತು ವಿಪರ್ಯಾಸವೆಂದರೆ ಅವರಿಗೆ ವಿಷಯದ ಆಂತರ್ಯವನ್ನು ತಿಳಿಸಲು ಪದಗಳ ಬಗ್ಗೆಯೇ ಸ್ಪಷ್ಟತೆ ಇರುವುದಿಲ್ಲ. ಅಂತವೆಲ್ಲಾ ಕ್ಲೀಷೆ ಹುಟ್ಟಿಸುವಂತಹ, ಹಳಸಲು ಮತ್ತು ಸವಕಲು ಪದಗಳಾಗಿ ಮುಂದೆ ಅವುಗಳನ್ನು ಬಳಸಿದರೂ ಬರಿಯ ಯಾಂತ್ರಿಕತೆ ಇರುವುದೇ ಹೊರತು ಅದರಲ್ಲಿ ಯಾವುದೇ ಸ್ವಂತದ ಭಾವ ಇರುವುದಿಲ್ಲ. ಸ್ವಾನುಭವಕ್ಕೆ ಒದಗುವುದೂ ಇಲ್ಲ.
ಅರ್ಥವಾಗದ ಅರಿವುಗಳು
ಕೆಲವನ್ನು ಹಾಗೇ ಗಮನಿಸೋಣ. ತಂದೆ ತಾಯಿ ದೇವರಂತೆ. ಅವರನ್ನು ಗೌರವಿಸಬೇಕು. ಇದೊಂದು ಅತ್ಯಂತ ಸವಕಲು ಮತ್ತು ಹಳಸಲು ನಾಣ್ಣುಡಿ. ಪಾಪದ ಮಕ್ಕಳಿಗೆ ದೇವರು ಎಂಬುದೂ ಗೊತ್ತಿರುವುದಿಲ್ಲ. ಗೌರವ ಎಂಬುದು ಕೂಡ ಹೇಗೆ ಎಂದು ಅರಿವಿರುವುದಿಲ್ಲ. ದೇವರನ್ನು ಕಂಡಿಲ್ಲ. ದೇವರೊಂದಿಗೆ ವ್ಯವಹರಿಸಿಲ್ಲ. ಆದರೆ ತಂದೆ ತಾಯಿಗಳು ದಿನ ಬೆಳಗಾದರೆ ಜೊತೆಗಿರುತ್ತಾರೆ. ಅವರೊಂದಿಗೆ ಮಕ್ಕಳ ಆಪ್ತ ಒಡನಾಟವಿರುತ್ತದೆ. ಭಯವಿರುತ್ತದೆ. ಬೇಸರವಾಗುತ್ತದೆ. ಸಂತೋಷವಾಗುತ್ತದೆ. ನಿರಾಸೆಯಾಗುತ್ತದೆ. ಸುರಕ್ಷತೆಯ ಭಾವ ಒದಗುತ್ತದೆ. ಹೀಗೆ ಹತ್ತು ಹಲವು ಅನುಭವಗಳಿಗೆ ನೇರವಾಗಿ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಆದರೆ ದೇವರು ಎಂಬುದು ಗುಡಿಯಲ್ಲಿರುವ ವಿಗ್ರಹವೋ ಅಥವಾ ಒಂದು ಭಯ ಭಕ್ತಿಗೆ ತಮ್ಮನ್ನು ಒಡ್ಡಿಕೊಳ್ಳಲು ಹಿರಿಯರು ಬರಿಯ ಮಾತಿನಲ್ಲಿ ಆಗಾಗ್ಗೆ ಉಪಯೋಗಿಸುತ್ತಲೇ ಇರುವಂತಹ ಒಂದು ಪದ. ಹೀಗೆ ತಮಗೆ ಅಸ್ಪಷ್ಟವಾದ, ಅನುಭವಕ್ಕೆ ಸಿಗದ, ಅಮೂರ್ತವಾದ ಕಲ್ಪನೆಗೆ ತಂದೆ ತಾಯಿ ಗುರುವನ್ನು ಹೋಲಿಸುವುದೇ ಒಂದು ಅವೈಜ್ಞಾನಿಕ. ಮಕ್ಕಳಿಗೆ ಇಲ್ಲಿಂದಲೇ ವಾಸ್ತವಕ್ಕೆ ಅವಾಸ್ತವದ ಲೇಪವನ್ನು ಹಚ್ಚುತ್ತಾ ಗೊಂದಲವೆಬ್ಬಿಸುತ್ತಾರೆ.
ಹಾಗೆಯೇ ಗೌರವ ಕೂಡ. ಮುಖ್ಯವಾಗಿ ಗೌರವ ಎಂದರೇನು? ಅದನ್ನು ಏಕೆ ಮತ್ತು ಹೇಗೆ ಕೊಡಬೇಕು ಎಂಬುದೇ ಮಕ್ಕಳಿಗೆ ತಿಳಿಯದಂತಹ ದೊಡ್ಡ ಪ್ರಶ್ನೆಯಾಗಿದೆ.
ಹೇಳಬೇಡಿ, ಮಾಡಿ ದೊಡ್ಡವರಿಗೆ ಬಹುವಚನದಲ್ಲಿ ಮಾತನಾಡಬೇಕು. ಚಿಕ್ಕವರಲ್ಲಿ ಏಕವಚನದಲ್ಲಿ ಮಾತನಾಡಬಹುದು. ದೊಡ್ಡವರಿಗೆ ಬನ್ನಿ, ಹೋಗಿ ಎನ್ನಬೇಕು. ಚಿಕ್ಕವರಿಗೆ ಬಾ ಹೋಗು ಎನ್ನಬಹುದು. ಚಿಕ್ಕವರಿಗೆ ಎದುರುತ್ತರ ಕೊಡಬಹುದು. ಬೈಯಬಹುದು. ಕೀಳಾಗಿ ಮಾತನಾಡಬಹುದು. ತರಲೆ ಜೋಕ್ಸ್ ಮಾಡಬಹುದು, ಅಪಹಾಸ್ಯ ಮಾಡಬಹುದು. ಆದರೆ ದೊಡ್ಡವರಿಗೆ ಹಾಗೆಲ್ಲಾ ಮಾಡಬಾರದು. ಇಂತಹ ಮಾನದಂಡಗಳಿಂದ ಮಗುವಿಗೆ ಗೌರವ ಎನ್ನುವುದನ್ನು ಅರ್ಥೈಸುವುದು ಅವೈಜ್ಞಾನಿಕ ಮಾತ್ರವಲ್ಲ ಅಸಂಭವ. ಗೌರವ ಎನ್ನುವುದು ನಡವಳಿಕೆಯ ಮತ್ತು ಆಡುವ ಮಾತಿನ ಪ್ರದರ್ಶನದಿಂದಲೇ ಅಸ್ತಿತ್ವದಲ್ಲಿರುವುದು ಎನ್ನುವುದಾದರೆ ಮಕ್ಕಳೊಂದಿಗೆ ನಾವು ಗೌರವಯುತವಾಗಿ ನಡೆದುಕೊಳ್ಳಬೇಕು.
ಮಕ್ಕಳು ಬಂದಾಗ ಎದ್ದು ನಿಲ್ಲುವುದು, ನಮಸ್ಕಾರ ಹೇಳುವುದು, ದೊಡ್ಡವರೊಂದಿಗೆ ಮಾತನಾಡುವಾಗ ಎಷ್ಟು ಬೇಕೋ ಅಷ್ಟೇ ಮಾತಾಡಿ ಧನ್ಯವಾದಗಳೊಂದಿಗೆ ಮಾತು ಮುಗಿಸುವಂತೆ ಮಕ್ಕಳಿಗೂ ಮಾಡುವುದು, ತರಲೆ ಮತ್ತುಅಪಹಾಸ್ಯಗಳಿಲ್ಲದೇ ಸಂಭಾಷಣೆಗಳನ್ನು ನಡೆಸುವುದು. ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳಿ ಸಮ್ಮತಿಯನ್ನು ಅಥವಾ ಅಸಮ್ಮತಿಯನ್ನು ಸೂಚಿಸುವುದು; ಹೀಗೆ ನಮ್ಮ ವರ್ತನೆ ಮತ್ತು ಮಾತಿನ ಮೂಲಕ ಅವರಿಗೆ ಯಾವ ಭಾವ ಉಂಟಾಗುತ್ತದೆಯೋ ಅದೇ ರೀತಿಯಲ್ಲಿ ಅವರೂ ವರ್ತಿಸಲು ಪ್ರಾರಂಭಿಸುವರು.
ತಮ್ಮ ಸುತ್ತಲೂ ಹಾಗೆಯೇ ಮಾತನಾಡುವವರ ಪರಿಸರ ಇರುವಾಗ ಸಹಜವಾಗಿಯೇ ಅಂತಹ ಪ್ರಭಾವಕ್ಕೆ ಒಳಗಾಗುವರು. ಹೀಗೆ ಮಕ್ಕಳಿಗೆ ಅರ್ಥವಾಗದ ಅಥವಾ ನೇರ ಅನುಭವಕ್ಕೆ ಸಿಗದ ಪರಿಭಾಷೆಯಲ್ಲಿ ಉಲ್ಲೇಖಿಸುವ ಸುಭಾಷಿತಗಳು, ನಾಣ್ಣುಡಿಗಳು, ಸೂಕ್ತಿಗಳು, ಹಿತೋಪದೇಶಗಳು ಮತ್ತು ಗಾದೆಗಳೂ ಕೂಡ ಬೋಧನೆ ಮಾಡುವುದರಲ್ಲಿ ಅರ್ಥವೂ ಇಲ್ಲ, ಅಗತ್ಯವೂ ಇಲ್ಲ.
ಹಾಗಿರುವಾಗ ಮಕ್ಕಳಿಗೆ ಯಾವುದೋ ನಾಣ್ಣುಡಿಯನ್ನು ಅಥವಾ ಸುಭಾಷಿತವನ್ನೋ ಹೇಳಿಬಿಟ್ಟರೆ ಅಥವಾ ನೀತಿಕಥೆಗಳನ್ನು ಹೇಳಿಕೊಂಡು ಒಂದಷ್ಟು ಉದ್ದದ ಭಾಷಣವನ್ನು ಹೇಳಿದರೆ ಬಹಳಷ್ಟು ಹಿರಿಯರು ತುಂಬಾ ಖುಷಿಪಡುತ್ತಾರೆ. ಅವರ ದೃಷ್ಟಿಯಲ್ಲಿ ಎಷ್ಟು ಒಳ್ಳೆಯ ಹಿತವಚನಗಳನ್ನು ಹೇಳಿಕೊಡುವ ಭಾಷಣ ಮಾಡಿದರು ಎಂದು. ತುಂಬಾ ಜನಕ್ಕೆ ಜೀವನದಲ್ಲಿ ಹಾಗಿರಬೇಕು, ಹೀಗಿರಬೇಕು, ಹೀಗಿದ್ದರೆ ಸುಖ ಶಾಂತಿ ನೆಮ್ಮದಿ ಎಂಬಂತಹ ಪುಸ್ತಕಗಳು ಬಹಳ ಇಷ್ಟವಾಗುತ್ತದೆ. ಅವುಗಳು ಒಂದು ಬಗೆಯ ಭ್ರಮಾ ಲೋಕಕ್ಕೆ ತಳ್ಳುತ್ತವೆ.
ನಾನು ಇದೇ ರೀತಿಯಲ್ಲಿ ಇನ್ನು ಕೆಲವು ದಿನಕ್ಕೆ ಹಾಗೆ ಆಗಿಬಿಡುತ್ತೇನೆ, ಬಯಸಿದಷ್ಟು ಅಥವಾ ಭ್ರಮಿಸಿದಷ್ಟು ಸಂತೋಷ ಮತ್ತು ನೆಮ್ಮದಿಯನ್ನು ಕಂಡುಬಿಡುತ್ತೇನೆ ಎಂದು. ಆ ಬಗೆಯಲ್ಲಿ ಬದುಕುವ ಆಸೆಯಿಂದ ಯಶಸ್ಸಿಗೇ ನೂರು ಮೆಟ್ಟಿಲು, ಯಶಸ್ವೀ ಪುರುಷರ ಬದುಕಿನ ವಿಧಾನ, ಶ್ರೀಮಂತರಾಗುವುದು ಹೇಗೆ?, ಇತ್ಯಾದಿ ಪುಸ್ತಕಗಳನ್ನು ರಾಶಿ ರಾಶಿ ಕೊಂಡು ತಮ್ಮ ಮನೆಯಲ್ಲಿ ಪೇರಿಸುತ್ತಲೇ ಹೋಗುವವರನ್ನು ಕಂಡಿದ್ದೇನೆ. ಅವರು ಬಯಸುವ ಸುಖ, ಶಾಂತಿ, ನೆಮ್ಮದಿ ಮತ್ತು ಯಶಸ್ಸು ಮಾತ್ರ ಅವರಲ್ಲಿ ಕಾಣುವುದಿಲ್ಲ. ಅಂತಹ ಪುಸ್ತಕಗಳನ್ನೇ ಸಂಗ್ರಹಿಸುವ ಹವ್ಯಾಸ ಮತ್ತು ಅವುಗಳಿಂದ ತಮ್ಮ ಬದುಕಿನಲ್ಲಿ ಏನೋ ತಿರುವು ಸಿಕ್ಕು ತಾವು ಉನ್ನತ ವ್ಯಕ್ತಿಗಳಾಗಿಬಿಡುತ್ತೇವೆ ಅಥವಾ ಬಿಟ್ಟಿದ್ದೇವೆ ಎಂದುಕೊಂಡು ಇತರರಿಗೆಲ್ಲಾ ಅದರಲ್ಲಿರುವುದನ್ನು ಉಲ್ಲೇಖಿಸಿಕೊಂಡಿರುವ ಗೀಳು ಬಹಳಷ್ಟು ಜನರಲ್ಲಿ ಗುರುತಿಸಬಹುದು.
ಹಾಗೆಯೇ ಸುಭಾಷಿತ ಸಂಗ್ರಹಣೆಯೂ ಕೂಡಾ ಕೆಲವರ ಹವ್ಯಾಸ. ಸುಂದರ ಮತ್ತು ಉಪಯುಕ್ತ ಸುಭಾಷಿತಗಳು ಎಂದು ಪ್ರತಿದಿನವೂ ಶಾಲೆಯಲ್ಲಿ ಹೇಳಿಸಿಯೇ ತೀರುತ್ತಾರೆ. ಅದನ್ನು ಹಲಗೆಯ ಮೇಲೆ ಬರೆಯುತ್ತಾರೆ. ಹೊರಗೆ ನೋಟಿಸ್ ಬೋರ್ಡಿನಲ್ಲಿಯೂ ಕೂಡ ಬರೆಯುತ್ತಾರೆ. ಕೆಲವು ಶಾಲೆಗಳಲ್ಲಿ ಗೋಡೆಗಳ ಮೇಲೆ ಶಾಶ್ವತ ಬಣ್ಣದಲ್ಲಿ ಬರೆದ ಈ ಬಗೆಯ ಸುಭಾಷಿತಗಳು, ಮಂಕುತಿಮ್ಮನ ಕಗ್ಗಗಳು, ಸರ್ವಜ್ಞನ ಮತ್ತು ಶರಣರ ವಚನಗಳು, ಕ್ರಿಸ್ತನ ಅಥವಾ ಇತರ ಧರ್ಮಗ್ರಂಥಗಳಿಂದ ಆಯ್ದ ಸೂಕ್ತಿಗಳು ರಾರಾಜಿಸುತ್ತಿರುತ್ತವೆ.
ಇಂತಹ ಬರವಣಿಗೆಗಳು ಶಾಲೆಯವರು ತೋರುವಂತಹ ತಮ್ಮ ಒಲವು ನಿಲುವಿನ ಪ್ರದರ್ಶನ ಆಗಿರುತ್ತದೆಯೇ ಹೊರತು. ಮಕ್ಕಳಿಗೆ ಇದರಿಂದ ಏನೂ ಉಪಯೋಗವಿಲ್ಲ. ಅವುಗಳೆಷ್ಟೇ ಉನ್ನತವಾಗಿರಲಿ ಅಥವಾ ವೌಲ್ಯವನ್ನು ಹೊಂದಿರಲಿ ಅವುಗಳು ಮಕ್ಕಳ ವಿಷಯದಲ್ಲಿ ಪ್ರಭಾವಿಸುವುದು ಸೊನ್ನೆ. ಸುಭಾಷಿತಗಳನ್ನು ಮತ್ತು ಸುಮಧುರ ಭಾಷಣಗಳನ್ನು ಮಕ್ಕಳಿರುವ ಪರಿಸರದಲ್ಲಿ ಮಾಡುವುದು ತಪ್ಪೇನು ಇಲ್ಲದಿದ್ದರೂ ಪರಿಣಾಮವಂತೂ ಏನೂ ಇರುವುದಿಲ್ಲ. ಅದೊಂದು ವ್ಯರ್ಥ ಬಡಬಡಿಕೆ ಎಂದಷ್ಟೇ ಇಲ್ಲಿ ಹೇಳುತ್ತಿರು ವುದು.
ನೇರವಾಗಿ ಹೇಳುವುದಾದರೆ, ಮಕ್ಕಳಿಗೆ ಸಿದ್ಧ ಸುಭಾಷಿತಗಳು ಬೇಡ, ನೀವು ಸಂಭಾಷಿಸುವಾಗ ಅದು ಸುಂದರ ಮತ್ತು ಗೌರವಪೂರ್ಣವಾಗಿರಲಿ. ಶಾಲೆಯಲ್ಲಿ ನಡೆಯುವ ಸಾಂಪ್ರದಾಯಿಕ ಸುಭಾಷಿಕ ಪಠಣ ಏನೂ ಪರಿಣಾಮ ಬೀರದು. ವಾಸ್ತವವಾಗಿ ಅಂತಹ ಸೂಕ್ತಿಗಳ ವೌಲ್ಯವನ್ನೂ ಹಗುರಗೊಳಿಸುವಂತೆಯೇ ಆಗುತ್ತದೆ. ಹಿರಿಯರು ಅನುಭವದಲ್ಲಿ ಮಾತನಾಡುವಂತೆ ಸಂದರ್ಭೋಚಿತವಾಗಿ, ಸ್ಥಿತಿ ಗತಿಗಳಿಗನುಸಾರವಾಗಿ ಗಾದೆಗಳನ್ನು ಬಳಸುತ್ತಾರೆ. ಅದೊಂದು ಒಳ ದೃಷ್ಟಿಯನ್ನು ಅಥವಾ ವಾಸ್ತವದ ಸೂಕ್ಷ್ಮತೆಯನ್ನು ಕೊಡುವುದೇ ಆಗಿರುತ್ತದೆ. ಹಾಗೆಯೇ ಸೂಕ್ತಿಗಳು, ಸುಭಾಷಿತಗಳೂ ಕೂಡ. ಯಾವುದೋ ಅನುಭವದ ಸಾರವನ್ನು ಗಟ್ಟಿಗೊಳಿಸಿರುವಂತೆ ಅಥವಾ ಬದುಕಿನ ಸೂಕ್ಷ್ಮತೆಗಳ ಸರಮಾಲೆಯನ್ನು ಹೆಣೆದಿರುವಂತೆ ಅಥವಾ ಕಾಣುವ ವಿಷಯವನ್ನು ದಾಟಿ ಕಾಣಬಹುದಾದ ಸತ್ಯವನ್ನು ಹರಳು ಕಟ್ಟಿ ಕೊಡುವಂತಹ ಮಾತುಗಳನ್ನು ಅನುಭವದ ಮೂಲಕವೇ ಉಲ್ಲೇಖಿಸುವುದಾಗಿರುತ್ತದೆಯೇ ಹೊರತು ಬರಿದೇ ಸುಭಾಷಿತಗಳನ್ನು ಕೋಟ್ ಮಾಡುವುದರಲ್ಲಿ ಅಲ್ಲ. ಅವು ತಮ್ಮ ಓದಿನ ಅನುಭವದಿಂದ ಸಹಜವಾಗಿ ಉಲ್ಲೇಖಿಸಲ್ಪಡುತ್ತವೆ. ಸೂಕ್ತಿಗಳು ಸೂಕ್ತವೇ?
ವಿವಿಧ ಬಗೆಯ ಸುಭಾಷಿತ ಅಥವಾ ಸೂಕ್ತಿಗಳು
1.ಸಕಾರಾತ್ಮಕ ದೃಷ್ಟಿಯನ್ನು ನೀಡುವುದು.
2.ಬದುಕಿನ ಸೂಕ್ಷ್ಮತೆಯನ್ನು ತಿಳಿಸುವುದು.
3.ಜನರ ವರ್ತನೆಗಳನ್ನು ಅಥವಾ ಅವರ ನೈಜ ಮನಸ್ಥಿತಿಯನ್ನು ತೆರೆದಿರುಡುವುದು.
4.ದಿನ ನಿತ್ಯದ ವ್ಯವಹಾರದಲ್ಲಿ ಜಾಣನಾಗುವುದು.
5.ಒಳದೃಷ್ಟಿಯನ್ನು ನೀಡುವುದು.
6.ಐಕ್ಯತೆ ಅಥವಾ ಸಾಮರಸ್ಯಗಳನ್ನು ಬಿಂಬಿಸುವುದು.
7.ಮಾನವತೆಯನ್ನು ಸಮರ್ಥಿಸುವುದು. ಪ್ರೀತಿ, ಕರುಣೆ, ಕ್ಷಮೆ ಮತ್ತು ಮಮತೆಯನ್ನು ಎತ್ತಿ ಹಿಡಿಯುವುದು.
8.ಅಹಂಕಾರ ಮತ್ತು ಸ್ವಾರ್ಥಗಳಂತಹ ಗುಣಗಳು ವ್ಯಕ್ತಿತ್ವವನ್ನು ನಾಶ ಮಾಡುವಂತಹ ಎಚ್ಚರವನ್ನು ತಾಳುವುದು.
9.ತನ್ನ ವ್ಯಕ್ತಿತ್ವವನ್ನು ಹದಗೊಳಿಸಿಕೊಳ್ಳುವುದು.
10.ವಿವೇಚನೆ ಕಳೆದುಕೊಳ್ಳುವಂತಹ ಸಂದರ್ಭದಲ್ಲಿ ಅಥವಾ ದುಡುಕಿಗೆ ಬಲಿಯಾಗುವಂತಹ ಸಂದರ್ಭದಲ್ಲಿ ಎಚ್ಚರಿಕೆಯನ್ನು ಪಡೆದು ಸಮಸ್ಥಿತಿಗೆ ತಲುಪುವುದು ಅಥವಾ ಪ್ರಜ್ಞಾವಂತಿಕೆಯಿಂದ ತನ್ನನ್ನೂ ಮತ್ತು ಸನ್ನಿವೇಶವನ್ನೂ ನಿಯಂತ್ರಣಕ್ಕೆ ತಂದುಕೊಳ್ಳುವುದು.
ಹೀಗೆ ಹಲವು ರೀತಿಗಳ ಸಾರ ಸತ್ವವನ್ನು ಹರಳುಗಟ್ಟಿಸಿರುವಂತಹ ಅಕ್ಷರರೂಪದ ದಾಖಲುಗಳನ್ನು ಉಲ್ಲೇಖಿಸುತ್ತೇವೆ.
ಇವುಗಳೆಲ್ಲಾ ವ್ಯರ್ಥವೇ ಅಥವಾ ಬೇಡವಾದ್ದವೇ ಎಂದು ಆಲೋಚಿಸುವುದು ಬೇಡ. ಸೂಕ್ತಿಗಳು ಸೂಕ್ತವೇ. ಅವುಗಳಿಗೆ ಅವುಗಳದ್ದೇ ಆದಂತಹ ವೌಲ್ಯಗಳಿವೆ ಮತ್ತು ಅಗತ್ಯ ದಾಖಲೆಗಳಾಗಿವೆ. ಆದರೆ ಅವು ಮಕ್ಕಳ ವಿಷಯದಲ್ಲಿ ಒಂದು ರೆಡಿ ಮೇಡ್ ಕೊಟೇಷನ್ ಆಗಿ ಪರಿಚಿತವಾದರೆ ವ್ಯರ್ಥವಾಗುವುದು ಎಂದಷ್ಟೇ ಇಲ್ಲಿ ಹೇಳುತ್ತಿರುವುದು.
ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ. ಈ ವಚನದ ಉಲ್ಲೇಖವನ್ನು ಸುಭಾಷಿತದಲ್ಲಿ ಶಾಲೆಗಳಲ್ಲಿ ಬಳಸುತ್ತಾರೆ. ಹಲಗೆಗಳ ಮೇಲೆ ಬರೆಯುತ್ತಾರೆ. ಭಾಷಣಗಳಲ್ಲಿ ಉಲ್ಲೇಖಿಸುತ್ತಾರೆ. ಆದರೆ ಮಕ್ಕಳಿಗೆ ದಯೆ ಎಂಬ ಅಮೂರ್ತವಾದ ವಿಷಯವೂ ಗೊತ್ತಿರುವುದಿಲ್ಲ. ಹಾಗೆಯೇ ಧರ್ಮ ಎಂಬ ವ್ಯವಸ್ಥೆ ಅಥವಾ ಗುಣ ಎಂಬುದು ಕೂಡ ತಿಳಿದಿರುವುದಿಲ್ಲ. ದಯೆ ಎಂಬುದನ್ನು ಹಿರಿಯರು ಸದಾ ತಮ್ಮ ವರ್ತನೆ ಮತ್ತು ನಿಲುವುಗಳ ಮೂಲಕ ಪ್ರದರ್ಶಿಸುತ್ತಿದ್ದರೆ ಮಾತ್ರವೇ ಅದನ್ನು ಗ್ರಹಿಸುವ ಮಕ್ಕಳು ಮುಂದೊಂದು ದಿನ ಇಂತಹ ನಿಲುವು ಮತ್ತು ವರ್ತನೆಗಳಿಗೆ ದಯೆ ಅಥವಾ ದಯೆಯಿಂದ ಕೂಡಿರುವುದು ಎಂದು ಅರಿತುಕೊಳ್ಳುತ್ತಾರೆ. ನೀನು ನಿನ್ನ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನು ಪ್ರೀತಿಸು ಎಂಬ ಸುಭಾಷಿತವನ್ನು ಓದುವಾಗ ಮಗುವಿಗೆ ಪ್ರೀತಿ ಎಂದರೆ ಏನೆಂದೂ ನೆರೆಯವನೆಂದರೆ ಯಾರೆಂದೂ ತಮ್ಮನ್ನು ಪ್ರೀತಿಸಿಕೊಳ್ಳುವಂತೆ ಅವರನ್ನು ಪ್ರೀತಿಸಬೇಕೆಂದರೆ ಹೇಗೆಂದೂ ಖಂಡಿತ ತಿಳಿಯದು. ಅದೇನಿದ್ದರೂ ಮಗುವಿನ ಗ್ರಹಿಕೆಗೆ ಅದು ಬರುವುದು ಆ ಅನುಭವಕ್ಕೆ ತನ್ನನ್ನು ಒಡ್ಡಿಕೊಂಡಾಗಲೇ ಮತ್ತು ಸತತವಾಗಿ ಅವುಗಳನ್ನು ಸಾಕ್ಷೀಕರಿಸುತ್ತಿದ್ದರೆ ಮಾತ್ರ.
ಮಗುವು ಸತತವಾಗಿ ಯಾವುದನ್ನು ಸಾಕ್ಷೀಕರಿಸುತ್ತಿರುತ್ತದೆಯೋ, ಅನುಭವಿಸುತ್ತಿರುತ್ತದೆಯೋ ಅದನ್ನೇ ಸತ್ಯವೆಂದು ಗ್ರಹಿಸುತ್ತದೆ ಮತ್ತು ಅದನ್ನೇ ತನ್ನ ವರ್ತನೆಗಳಲ್ಲಿ ಮತ್ತುನಡವಳಿಕೆಗಳಲ್ಲಿ ವ್ಯಕ್ತಪಡಿಸುತ್ತಿರುತ್ತದೆ ಮತ್ತು ಪ್ರಕಟಪಡಿಸುತ್ತಿರುತ್ತದೆ. ಹಾಗಾಗಿ ಸುಭಾಷಿತವೆಂಬುದು ಒಳ್ಳೆಯ ಉಲ್ಲೇಖಗಳೆಂದು ಮಾತಲ್ಲಿ ಮತ್ತು ಬರಹದಲ್ಲಿ ಪ್ರದರ್ಶಿತವಾಗುವುದಲ್ಲ, ಮಕ್ಕಳ ವಿಷಯದಲ್ಲಿ ಕೃತಿಯಲ್ಲಿ ಮತ್ತು ವರ್ತಿಸುವ ರೀತಿಯಲ್ಲಿ ಪ್ರಕಟವಾಗಬೇಕೆಂದು ಮಕ್ಕಳ ಮನೋವೈಜ್ಞಾನಿಕ ತಿಳುವಳಿಕೆ.
ಸಹಜವಾದ ಮತ್ತು ಸಾಮಾಜಿಕವಾದ ವರ್ತನೆಗಳನ್ನು ಒಳಗೊಂಡಿರುವ ಸುಭಾಷಿತಗಳ ಕಲಿಕೆಯೇ ಮಕ್ಕಳಿಗೆ ಎಷ್ಟರ ಮಟ್ಟಿಗೆ ಅಪ್ರಸ್ತುತವೆಂದಿರುವಾಗ, ಇನ್ನು ಧಾರ್ಮಿಕ ಶ್ಲೋಕಗಳು, ಸ್ತುತಿಗಳು, ಇತರೇ ಆಧ್ಯಾತ್ಮಿಕ ಸಾಹಿತ್ಯದ ಸಾಲುಗಳನ್ನು ಕಂಠಪಾಠ ಮಾಡಿಸುವುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಧಾರ್ಮಿಕ ಗ್ರಂಥಗಳನ್ನು ಗಿಳಿಪಾಠಗಳನ್ನು ಮಾಡಿಕೊಳ್ಳುವ ಮಕ್ಕಳು ಎಂತಹ ಧಾರ್ಮಿಕರಾಗುವರು ಎಂದು ಹೇಳಿಕೊಡುವವರು ವಿಮರ್ಶಿಸಿಕೊಳ್ಳುವ ಅಗತ್ಯವಿದೆ.
ಸುಹಾನ ಎಂಬ ಹೆಣ್ಣು ಮಗುವು ತಾನು ಕಲಿತ ಶ್ರೀನಿವಾಸನ ಹಾಡನ್ನು ಹಾಡುವ ಮೂಲಕ ತನ್ನ ಪ್ರತಿಭಾ ಪ್ರದರ್ಶನ ಮಾಡುವಾಗ ಸುಹಾನ ಎಂಬ ಮುಸ್ಲಿಂ, ಹಿಂದೂ ಭಕ್ತಿಗೀತೆ ಹಾಡುವಳು ಎಂದು ವಿವಾದದ ಬಣ್ಣ ಬಳಿದು ವಾರಗಟ್ಟಲೆ ಚರ್ಚೆ ಮಾಡುವಂತಹ ವ್ಯವಸ್ಥೆಯಲ್ಲಿ ಇರುವವರಿಗೆ ಸುಹಾನ ಎಂಬುದು ಒಂದು ಮಗು, ಅದು ಒಂದು ಗೀತೆ, ಸಂಗೀತವನ್ನು ಹಾಡುವುದು ಒಂದು ಕಲೆ ಎಂದಷ್ಟೇ ಸರಳವಾದ ವಾತಾವರಣ ಮಕ್ಕಳಿಗೆ ದೊರಕದಿದ್ದರೆ ಮುಂದೆ ಈ ಪೀಳಿಗೆಗಳು ಎದುರಿಸುವ ಸಂಕಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ.