ಕ್ರೀಡಾ ಪದಕಕ್ಕೆ ಪ್ರೇರಣೆ ಯಾವುದು?
ಕ್ರೀಡಾಕೂಟಗಳಲ್ಲಿ ಗೆಲ್ಲುವವರು ಯಾರೇ ಆಗಿರಲಿ, ಆದರೆ ಸ್ವತಃ ಕ್ರೀಡೆಯು ರಾಜಕೀಯ ಸಿದ್ಧಾಂತಗಳನ್ನೂ, ವಾಣಿಜ್ಯ ಹಿತಾಸಕ್ತಿಗಳನ್ನು ಕೆಲವೊಮ್ಮೆಯಾದರೂ ಮಣಿಸಿ ಅಥವಾ ಬದಿಗೆ ಸರಿಸಬಲ್ಲದು. ಕ್ರೀಡಾಳುಗಳನ್ನು ಕೇವಲ ಮನುಷ್ಯರನ್ನಾಗಿ ಯಶಸ್ಸಿನ ಉತ್ತುಂಗಕ್ಕೆ ತಲುಪಿಸಬಲ್ಲದೆಂಬುದನ್ನು ಪುಟ್ಟ, ದುರ್ಬಲ ದೇಶಗಳ ಜನ ಸಾಬೀತು ಮಾಡುತ್ತಿದ್ದಾರೆ. ಇದು ಕ್ರೀಡೆಗಳ ಗೆಲುವು ಆಗಿದೆ.
ಕ್ರೀಡೆ ಕುರಿತಂತೆ ಚರ್ಚಿಸುವಾಗೆಲ್ಲಾ ಅದೊಂದು ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು ಎನ್ನುವ ನಂಬಿಕೆ ಬಹಳ ಕಾಲ ಇತ್ತು. ನಂತರ ಕ್ರೀಡಾಳುಗಳಿಗೆ ಕೇವಲ ದೈಹಿಕ ಶಕ್ತಿ ಇದ್ದರಷ್ಟೇ ಸಾಲದು ಅದಕ್ಕೆ ತಕ್ಕಷ್ಟು ಮನೋಬಲವೂ ಬೇಕು ಎನ್ನುವ ಮಾತು ಶುರುವಾದವು. ಕೊನೆಗದು ನಿರೂಪಿತವೂ ಆಯಿತು.
ಆ ನಂತರ ಏನಾಯಿತು ನೋಡಿ ‘ಸ್ಪೋರ್ಟ್ಸ್ ಸೈಕಾಲಜಿ’ ಎನ್ನುವ ಒಂದು ವಿಜ್ಞಾನದ ಶಾಖೆಯೇ ಬೆಳೆದು, ಸಾವಿರಾರು ಸಂಶೋಧನೆ, ಅಧ್ಯಯನ ಗಳಾಗಿ ಈಗ ಅದೊಂದು ಜ್ಞಾನಧಾರೆಯೇ ಆಗಿ ಹೋಗಿದೆ. ಇದಕ್ಕೂ ಈಗ ಅರ್ಧಶತಮಾನದಷ್ಟು ವಯಸ್ಸಾಗಿದೆ. ಲ್ಯಾರಿ.ಎಂ.ಲೀತ್ ಎಂಬ ಮನೋವಿಜ್ಞಾನಿ ‘The Psychology of achieving Sports Excellence’ ಎಂಬ ಪ್ರಖ್ಯಾತ ಪುಸ್ತಕ ಬರೆದು ಹಲವು ದಶಕಗಳೇ ಆಗಿ ಹೋಗಿವೆ.
ದೇಶ ವಿದೇಶಗಳ ನಡುವೆ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಪೈಪೋಟಿ, ಮಿಲಿಟರಿ ಬಲಾಬಲಗಳ ಪ್ರದರ್ಶನ, ಸಿದ್ಧಾಂತಗಳ ಸಂಘರ್ಷ ನಡೆಯುತ್ತಿರುವಾಗ ಒಂದು ಇನ್ನೊಂದರೊಳಗೆ ಬೆರೆತು ಪ್ರಭಾವಿಸುತ್ತಿರುತ್ತವೆ. ಆದರೆ ಕ್ರೀಡಾ ಸ್ಪರ್ಧೆಯ ಕಣಕ್ಕೆ ಕಾಲಿಟ್ಟಾಗ, ಪದಕಗಳ ಬೆನ್ನತ್ತಿ ಕ್ರೀಡಾಳುಗಳು ಸೆಣಸಾಡುವಾಗ ಅಂದರೆ ವ್ಯಕ್ತಿಗಳಾಗಿ ಪರಸ್ಪರ ಎದುರಾಳಿಗಳಾಗಿ ನಿಂತಾಗ ಅವರು ಆಯಾ ದೇಶಗಳ ಕ್ರೋಡೀಕೃತ ಬಲದ ಪ್ರತಿನಿಧಿಗಳಾಗಿರುತ್ತಾರಾ? ಮೇಲ್ನೋಟಕ್ಕೆ ಇದು ಹೌದು ಅನಿಸುತ್ತದೆ. ಅದಕ್ಕೆ ಹಲವು ಸಾಕ್ಷಿ ಪುರಾವೆಗಳು ಸಿಗಬಹುದು, ಆದರೆ ಕ್ರೀಡಾ ಹಾಗೂ ಕ್ರೀಡಾಸ್ಫೂರ್ತಿ ಕೆಲಕಾಲ ವಾಣಿಜ್ಯ ಹಿತಾಸಕ್ತಿಗಳಿಗೂ, ರಾಜಕೀಯ ಸಿದ್ಧಾಂತಗಳ ಸಂಘರ್ಷಗಳ ದಾಳವಾಗಿ, ದೇಶಭಕ್ತಿ ಪ್ರದರ್ಶಿಸುವ ಸಂಕೇತವಾಗಿ ಬಳಕೆಯಾಗದಂತೆ ಭಾಸವಾದರೂ ಅವೆಲ್ಲಾ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.
20ನೆ ಶತಮಾನದುದ್ದಕ್ಕೂ ಬಂಡವಾಳಶಾಹಿ ಹಾಗೂ ಸಮಾಜವಾದಿ ದೇಶಗಳ ನಡುವೆ ಸೈದ್ಧಾಂತಿಕ ಹಾಗೂ ಮಿಲಿಟರಿ ಗುದ್ದಾಟ ನಡೆಯುತ್ತಿದ್ದಾಗ ಆ ಜಗಳ ಕ್ರೀಡಾಕ್ಷೇತ್ರವನ್ನು ಪ್ರವೇಶಿಸಿತ್ತು. ಸಮಾಜವಾದಿ ದೇಶಗಳು ಪಶ್ಚಿಮದ ಬಂಡವಾಳಶಾಹಿ ದೇಶಗಳ ಕ್ರೀಡಾಪಟುಗಳನ್ನು ಮೀರಿಸುವಂತೆ ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಸೆಣಸಿ ಚಿನ್ನದ ಪದಕಗಳನ್ನು ಗೆಲ್ಲುತ್ತಾ ತಮ್ಮ ದೇಶಗಳ ಹಿರಿಮೆಯನ್ನು ಸಾಬೀತು ಪಡಿಸುತ್ತಿದ್ದರು.
ಆಗೆಲ್ಲಾ ಅಮೆರಿಕ, ಬ್ರಿಟನ್, ಫ್ರಾನ್ಸ್ ದೇಶಗಳ ಕ್ರೀಡಾಪಟುಗಳಿಗೆ ಕ್ರೀಡಾ ಯಶಸ್ಸಿನೊಂದಿಗೆ ಕೀರ್ತಿ, ಹಣಗಳ ಪ್ರತಿಫಲ ಇರುತ್ತಿತ್ತು. ಇತ್ತ ರಶ್ಯಾ, ಚೀನಾ, ಕ್ಯೂಬಾ, ಪೂರ್ವ ಜರ್ಮನಿಯವರಿಗೆ ಗೆಲ್ಲುವ ಪದಕಗಳೊಂದಿಗೆ ಮಾತೃಭೂಮಿ-ಐಡಿಯಾಲಜಿಯ ಗೆಲುವಿನ ಹೆಮ್ಮೆಯ ಭಾವ ಸ್ಫುರಿಸುತ್ತಿದ್ದವು.
ಇವೆರಡೂ ಬಣದವರು ತಾವೇ ಮೇಲೆಂದು ಬೀಗುತ್ತಿದ್ದಾಗ, ಕ್ರೀಡಾ ಸ್ಪರ್ಧೆಯಲ್ಲಿ ಕ್ರೀಡೆಯು ಮನುಷ್ಯನ ಚೈತನ್ಯವನ್ನು ಉದ್ದೀಪಿಸಬಲ್ಲದೆಂಬ ನಂಬಿಕೆ ಮಂಕಾಗುತ್ತಿದೆ ಅನಿಸುವ ಹಂತದಲ್ಲಿದ್ದಾಗ ಒಂದು ಬೆಳವಣಿಗೆ ಸಂಭವಿಸಿತು.
ಅತ್ತ ಬಂಡವಾಳಶಾಹಿ ಶ್ರೀಮಂತ ದೇಶಗಳೂ ಅಲ್ಲದ ಇತ್ತ ಸಮಾಜವಾದಿ ಸರಕಾರಗಳೂ ಇರದ ಬಡದೇಶಗಳ ಅಥ್ಲೀಟ್‌ಗಳು ವಿಶ್ವ ಕ್ರೀಡಾನಕ್ಷೆಯಲ್ಲಿ ಕಾಣಿಸಿಕೊಂಡು ಚಿನ್ನದ ಪದಕಗಳನ್ನು ಗೆಲ್ಲತೊಡಗಿದರು.
ಕೀನ್ಯಾ ಹಾಗೂ ಇಥಿಯೋಪಿಯಾದ ಕ್ರೀಡಾಳುಗಳನ್ನೇ ನೋಡಿ. ಕಳೆದ ನಾಲ್ಕು ದಶಕಗಳಿಂದಲೂ ದೂರ ಓಟದ ಸ್ಪರ್ಧೆಗಳಲ್ಲಿ ಇವರನ್ನು ಮೀರಿಸುವವರೇ ಇಲ್ಲ. 3,000, 5,000, 10,000 ಹಾಗೂ ಮ್ಯಾರಾಥಾನ್ ಇವೆಂಟ್‌ಗಳಲ್ಲಿ ಇವತ್ತಿಗೂ ಈ ಆಫ್ರಿಕಾದ ಬಡ ದೇಶಗಳ ಪುರುಷ ಹಾಗೂ ಮಹಿಳೆಯರದೇ ಮೇಲುಗೈ.
ಯಾವುದೇ ಸಂದರ್ಭದಲ್ಲೂ ದೂರ ಓಟದ ಇವೆಂಟ್‌ಗಳಲ್ಲಿ 10 ಇರಲ್ಲಿ ಒಂಬತ್ತು ಮಂದಿ ಇವರೇ ಇರುತ್ತಾರೆ. ನ್ಯೂಯಾರ್ಕ್ ಮ್ಯಾರಥಾನ್, ಬಾಸ್ಟನ್ ಮ್ಯಾರಥಾನ್, ಲಂಡನ್ ಮ್ಯಾರಥಾನ್‌ನಿಂದ ಹಿಡಿದು ಇತ್ತೀಚೆಗೆ ನಡೆದ ಬೆಂಗಳೂರು ಮ್ಯಾರಾಥಾನ್‌ವರೆಗೂ ಆಫ್ರಿಕನ್ನರನ್ನು ಮೀರಿಸುವವರು ಇಂದಿಗೂ ಕಾಣಿಸಿಕೊಂಡಿಲ್ಲ.
ಕ್ರೀಡಾ ಸಾಧನೆ ಎಂಬುದು, ಎಕ್ಸಲೆನ್ಸ್ ಎನ್ನುವುದು ಉತ್ತಮ ತರಬೇತಿಯಿಂದ, ಡಯಟ್‌ನಿಂದ, ಕ್ರೀಡಾ ಶಾಲೆ, ಟ್ರಾಕ್‌ಗಳಿಂದ ಸರಕಾರದ ಬೆಂಬಲದಿಂದ, ಕೋಚ್‌ಗಳಿಂದ ಸಾಧಿಸಬೇಕಾದ ಉನ್ನತ ಸಾಧನೆ ಎಂದು ನಂಬಿದ್ದವರಿಗೆ ಇದರಿಂದ ಶಾಕ್ ಆಯಿತು. ಅದರಲ್ಲೂ ಪಶ್ಚಿಮದ ಶ್ರೀಮಂತ ಕ್ರೀಡಾ ವ್ಯವಸ್ಥೆಗೆ ಇದರಿಂದ ಮುಖಭಂಗ ಆದಂತಾಯಿತು. ಹಾಗಾಗಿ ಅವರು ಕೆಲವು ಕ್ರೀಡಾ ತಜ್ಞರನ್ನು ಕೀನ್ಯಾ-ಇಥಿಯೋಪಿಯಾಗೆ ಕಳುಹಿಸಿ ಅದು ಹೇಗೆ ಈ ಬಡಕಲು ಶರೀರದ ಪೂರ್ವ ಆಫ್ರಿಕನ್ನರು ಉತ್ತಮ ದೇಹದಾರ್ಢ್ಯ ಹೊಂದಿರುವವರನ್ನು ಮಣಿಸುತ್ತಿದ್ದಾರೆಂದು ಪತ್ತೆ ಹಚ್ಚಲು ಕಳುಹಿಸಿಕೊಟ್ಟರು.
ಈ ತಜ್ಞರು ಕೀನ್ಯಾಗೆ ಹೋದರು. ಅಲ್ಲಿ ‘ಕಲಂಜಿನ್’ ಎನ್ನುವ ಬುಡಕಟ್ಟಿಗೆ ಸೇರಿದ ಕ್ರೀಡಾಳುಗಳೇ ಹೆಚ್ಚು ವಿಶ್ವ ಪದಕಗಳನ್ನು ಗೆದ್ದಿದ್ದಾರೆಂಬುದನ್ನು ಗಮನಿಸಿದರು. ಕೊನೆಗೆ ತಮ್ಮ ಕ್ರೀಡಾ ಸಂಶೋಧನೆಯನ್ನು ಹೀಗೆ ಮಂಡಿಸಿದರು.
‘‘ಕೀನ್ಯಾ ಹಾಗೂ ಇಥಿಯೋಪಿಯಾದ ನಂಡಿ ಕಣಿವೆ, ಆರ್ಸಿ ಹಾಗೂ ಷೇವಾ ಪ್ರಾಂತಗಳು ಸಮುದ್ರ ಮಟ್ಟದಿಂದ 2,500 ಮೀಟರ್ ಎತ್ತರದಲ್ಲಿವೆ. ಅಲ್ಲಿನ ವಿದ್ಯಾರ್ಥಿಗಳು ಶಾಲೆಗಾಗಿ ನಿತ್ಯ 5ರಿಂದ 10 ಕಿಲೋಮೀಟರ್ ಓಡಾಡುತ್ತಾರೆ. ಅಲ್ಲಿನ ಎತ್ತರದ ಪ್ರದೇಶವು ಜನರ ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಆಮ್ಲಜನಕದ ಸರಬರಾಜು ದೇಹದ ಎಲ್ಲೆಡೆ ವೇಗವಾಗಿ ಹರಿಯುವಂತೆ ಅಲ್ಲಿನ ಜನರ ದೇಹ ರಚನೆ ವಿನ್ಯಾಸಗೊಂಡಿದೆ. ಅಲ್ಲಿನ ಜನರ ದೇಹದ ಮಾಂಸಖಂಡಗಳ ರಚನೆ, ಶಕ್ತಿ ಸಂಚಯ ಮತ್ತು ಬಳಕೆ ಜಗತ್ತಿನ ಇನ್ನಿತರ ಜನಾಂಗಗಳಿಗಿಂತ ವಿಭಿನ್ನವಾಗಿದೆ’’ ಎಂದೆಲ್ಲಾ ತರ್ಕಗಳನ್ನು ಮುಂದಿಟ್ಟಿದ್ದಾರೆ. ಆದರೆ ಈ ತರ್ಕಗಳೆಲ್ಲಾ ಹುಟ್ಟಿಕೊಂಡ ವೇಗದಲ್ಲೇ ಕ್ರಿಸ್ ಗೇಲ್‌ನ ಬ್ಯಾಟಿಗೆ ಸಿಕ್ಕಿ ಕ್ರಿಕೆಟ್ ಬಾಲ್ ಸ್ಟೇಡಿಯಂನ ಆಚೆ ಹಾರಿ ಮಾಯವಾಗುವಂತೆಯೇ ಕಣ್ಮರೆಯಾದವು. ಏಕೆಂದರೆ ನಂದಿ, ಅರ್ಸಿ ಷೇವಾ ಕಣಿವೆಗಳಷ್ಟೆ ಎತ್ತರದ ಪ್ರದೇಶಗಳು ಮೆಕ್ಸಿಕೊ, ನೇಪಾಳ ಹಾಗೂ ದಕ್ಷಿಣ ಅಮೆರಿಕದ ದೇಶಗಳಲ್ಲೂ ಇವೆ. ಹಾಗಿದ್ದಾಗಲೂ ಅಲ್ಲಿಂದ ಕೀನ್ಯಾ ತರದ ಚಾಂಪಿಯನ್ನರು ಏಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಈ ಸಂಶೋಧಕರ ಬಳಿ ಉತ್ತರವಿರಲಿಲ್ಲ.
ಕೀರ್ತಿಗಾಗಿ, ಸಿದ್ಧಾಂತಗಳಿಗಾಗಿ ಸ್ಪರ್ಧಿಸಿ ಗೆಲ್ಲಬೇಕೆಂಬುವವರಿಗಿಂತ ಬಡದೇಶ ಕೀನ್ಯಾದವರು ಉತ್ತಮ ಜೀವನೋಪಾಯಕ್ಕಾಗಿ ಸ್ಪರ್ಧಿಸಿ ಗೆಲ್ಲುತ್ತಿದ್ದಾರೆಂಬುದು ಈಗಿನ ತಿಳುವಳಿಕೆಯಾಗಿದೆ. ಒಮ್ಮೆ ಇದರಲ್ಲಿ ಯಶಸ್ಸು ಕಂಡರೆ ಕೀರ್ತಿ, ಹಣ ಮುಂತಾದವು ಹಿಂಬಾಲಿಸಿ ಬರುತ್ತವೆಂಬುದನ್ನು ಕೀನ್ಯಾದ ಅಥ್ಲೀಟ್‌ಗಳು ನಿರೂಪಿಸಿದ್ದಾರೆ. ಕ್ರೀಡಾಕೂಟಗಳಲ್ಲಿ ಗೆಲ್ಲುವವರು ಯಾರೇ ಆಗಿರಲಿ, ಆದರೆ ಸ್ವತಃ ಕ್ರೀಡೆಯು ರಾಜಕೀಯ ಸಿದ್ಧಾಂತಗಳನ್ನೂ, ವಾಣಿಜ್ಯ ಹಿತಾಸಕ್ತಿಗಳನ್ನು ಕೆಲವೊಮ್ಮೆಯಾದರೂ ಮಣಿಸಿ ಅಥವಾ ಬದಿಗೆ ಸರಿಸಬಲ್ಲದು. ಕ್ರೀಡಾಳುಗಳನ್ನು ಕೇವಲ ಮನುಷ್ಯರನ್ನಾಗಿ ಯಶಸ್ಸಿನ ಉತ್ತುಂಗಕ್ಕೆ ತಲುಪಿಸಬಲ್ಲದೆಂಬುದನ್ನು ಪುಟ್ಟ, ದುರ್ಬಲ ದೇಶಗಳ ಜನ ಸಾಬೀತು ಮಾಡುತ್ತಿದ್ದಾರೆ. ಇದು ಕ್ರೀಡೆಗಳ ಗೆಲುವು ಆಗಿದೆ.