ಮಣಿಪುರದಲ್ಲೀಗ ಸಣ್ಣ ಪಕ್ಷಗಳು ‘ಕಿಂಗ್ ಮೇಕರ್’
ಇಂಫಾಲ,ಮಾ.12: ಮಣಿಪುರದಲ್ಲಿ ಬಹುಮತವನ್ನು ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ತ್ರಿಶಂಕು ವಿಧಾನಸಭೆ ರೂಪುಗೊಂಡಿದ್ದು, ಸರಕಾರ ರಚನೆಯಲ್ಲಿ ಸಣ್ಣಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಮಾಜಿ ಲೋಕಸಭಾ ಸ್ಪೀಕರ್ ಪಿ.ಎ.ಸಂಗ್ಮಾ ಸ್ಥಾಪಿತ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ)ಯು ‘ಕಿಂಗ್ ಮೇಕರ್’ ಆಗುವ ಲಕ್ಷಣಗಳು ಕಂಡುಬರುತ್ತಿವೆ.
ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಕಾಂಗ್ರೆಸ್ 28 ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಬಳಿ 21 ಶಾಸಕರಿದ್ದಾರೆ. ಸರಕಾರ ರಚನೆಗೆ 31 ಶಾಸಕರ ಬೆಂಬಲ ಅಗತ್ಯವಾಗಿದೆ.
ತಾವು ಯಾರನ್ನು ಬೆಂಬಲಿಸಬೇಕು ಎನ್ನುವುದನ್ನು ಪಕ್ಷದ ನೂತನ ಶಾಸಕರು ನಿರ್ಧರಿಸಲಿದ್ದಾರೆ ಎಂದು ಎನ್‌ಪಿಪಿ ನಾಯಕ ಕಾನ್ರಾಡ್ ಸಂಗ್ಮಾ ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎನ್‌ಪಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿದೆ.ಅದು ಈಗಾಗಲೇ ಕಾಂಗ್ರೆಸ್ ವಿರೋಧಿ ಪಕ್ಷಗಳ ಸಂಘಟನೆಯಾಗಿರುವ ಎನ್‌ಇಡಿಎದ ಭಾಗವಾಗಿದೆ. ನಾಲ್ಕು ಸ್ಥಾನಗಳನ್ನು ಗೆದ್ದಿರುವ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಕೂಡ ಈ ಸಂಘಟನೆಯ ಭಾಗವಾಗಿದೆ. ಏಳು ಹೊಸ ಜಿಲ್ಲೆಗಳನ್ನು ರೂಪಿಸುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ತೀವ್ರವಾಗಿ ವಿರೋಧಿಸಿದ್ದ ಎನ್‌ಪಿಎಫ್ ತಾನು ಕಾಂಗ್ರೆಸೇತರ ಸರಕಾರವನ್ನು ಬೆಂಬಲಿಸುವ ಸುಳಿವನ್ನು ನೀಡಿದೆ.
ಮಣಿಪುರದಲ್ಲಿ ಒಂದು ಸ್ಥಾನವನ್ನು ಗೆದ್ದಿರುವ ರಾಮವಿಲಾಸ ಪಾಸ್ವಾನ್ ಅವರ ಎಲ್‌ಜಿಪಿ ಈಗಾಗಲೇ ಬಿಜೆಪಿಯ ಮಿತ್ರಪಕ್ಷವಾಗಿದ್ದು, ಅದರ ಬೆಂಬಲ ಖಚಿತವಾಗಿದೆ. ಒಂದು ಸ್ಥಾನವನ್ನು ಟಿಎಂಸಿ ಗೆದ್ದಿದ್ದು,ಇನ್ನೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಎನ್‌ಪಿಪಿ ಮತ್ತು ಎನ್‌ಪಿಎಫ್ ಬೆಂಬಲ ದೊರೆತರೂ ಸರಕಾರ ರಚನೆಗೆ ಈ ಪಕ್ಷೇತರ ಅಭ್ಯರ್ಥಿಯ ಬೆಂಬಲ ಬಿಜೆಪಿಗೆ ಅತ್ಯಗತ್ಯವಾಗುತ್ತದೆ.