ಸಂಘಟನೆಯನ್ನು ಮತ್ತೊಮ್ಮೆ ನಿಷೇಧಿಸಬೇಕೇ?
ಅಜ್ಮೀರ್ ದರ್ಗಾ ಸ್ಫೋಟದಲ್ಲಿ ಆರೆಸ್ಸೆಸ್ ಸದಸ್ಯರು
2007, ಅಕ್ಟೋಬರ್ 11. ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿಯವರ 800 ವರ್ಷಗಳಷ್ಟು ಹಳೆಯ ದರ್ಗಾದಲ್ಲಿ ಭಯಾನಕ ಸ್ಫೋಟವೊಂದು ನಡೆದಿತ್ತು. ರಮಝಾನ್ ತಿಂಗಳಾದ ಕಾರಣ ಉಪವಾಸ ಕೊನೆಗೊಳಿಸಲು ಬಹುದೊಡ್ಡ ಸಂಖ್ಯೆಯಲ್ಲಿ ಜನರು ದರ್ಗಾದ ಹೊರಗಡೆ ಸೇರಿದ್ದ ಸಂದರ್ಭದಲ್ಲೇ ಈ ಸ್ಫೋಟ ನಡೆದಿತ್ತು. ಟಿಫಿನ್ ಬಾಕ್ಸ್ ಒಳಗಡೆ ಇಡಲಾಗಿದ್ದ ಬಾಂಬ್‌ಸ್ಫೋಟಗೊಂಡು ಮೂರು ಮಂದಿಯ ಸಾವಿಗೆ ಕಾರಣವಾಗಿತ್ತು. ಇತ್ತೀಚೆಗೆ ಹೊರಬಂದ ನ್ಯಾಯಾಲಯದ ತೀರ್ಪು ಈ ಪ್ರಕರಣದಲ್ಲಿ ಮತ್ತೆ ಆಸಕ್ತಿ ಮೂಡುವಂತೆ ಮಾಡಿತು. ಈ ಪ್ರಕರಣದಲ್ಲಿ ಮೂರು ಮಂದಿಯನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತು. ಇವರಲ್ಲಿ ಇಬ್ಬರು-ದೇವೇಂದ್ರ ಗುಪ್ತಾ ಮತ್ತು ಸುನೀಲ್ ಜೋಶಿಯನ್ನು ನ್ಯಾಯಾಲಯದ ದಾಖಲೆಗಳಲ್ಲಿ ಆರೆಸ್ಸೆಸ್ ಪ್ರಚಾರಕರು ಎಂದು ಗುರುತಿಸಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿರುವ ಈ ಸಮಯದಲ್ಲಿ ಈ ಕಟ್ಟರ್ ಹಿಂದುತ್ವವಾದಿ ಸಂಘಟನೆಯ ಸದಸ್ಯರು ಸೂಫಿ ದರ್ಗಾದ ಮೇಲೆ ಭಯೋತ್ಪಾದನಾ ದಾಳಿ ನಡೆಸಿರುವುದು ಭಾರತದ ಮಟ್ಟಿಗೆ ಏನನ್ನು ಸೂಚಿಸುತ್ತದೆ?
ಆರೆಸ್ಸೆಸ್ ಮತ್ತು ಅಧಿಕಾರ
ಆರೆಸ್ಸೆಸ್ ಒಂದು ಸಾಮಾನ್ಯ ಸಂಘಟನೆಯಲ್ಲ. ಬಿಜೆಪಿಯ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ ಭಾರತೀಯ ಜನತಾ ಪಕ್ಷದ ಮೊದಲ ಅವತಾರ ಜನಸಂಘವನ್ನು ಆರೆಸ್ಸೆಸ್‌ನ ಗೊಳ್ವಲ್ಕರ್ ಗುರೂಜಿಯವರಲ್ಲಿ ಸಮಾಲೋಚನೆ ನಡೆಸಿದ ನಂತರವೇ ಸ್ಥಾಪಿಸಲಾಯಿತು. ಹಾಗಾಗಿ ಬಿಜೆಪಿ ಆರೆಸ್ಸೆಸ್‌ನ ರಾಜಕೀಯ ವಿಭಾಗವಾಗಿದೆ. ಬಿಜೆಪಿಯ ಉನ್ನತ ನಾಯಕತ್ವ ಆರೆಸ್ಸೆಸ್ ಮೂಲದಿಂದ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು 1987ರಲ್ಲಿ ಬಿಜೆಪಿಗೆ ವರ್ಗಾವಣೆಗೊಳ್ಳುವುದಕ್ಕಿಂತಲೂ ಮೊದಲು ಆರೆಸ್ಸೆಸ್ ಪ್ರಚಾರಕರಾಗಿದ್ದರು ಮತ್ತು ಅವರ ಸಂಪುಟದಲ್ಲಿ ಸಂಘಟನೆಯ ಬಹಳಷ್ಟು ಮಂದಿಯಿದ್ದಾರೆ. 2014ರಲ್ಲಿ ಅವರು ಪ್ರಧಾನ ಮಂತ್ರಿಯಾದಾಗ ಅವರ ಸಂಪುಟದ 12 ಸಚಿವರು ಆರೆಸ್ಸೆಸ್ ಜೊತೆ ಸಂಪರ್ಕ ಹೊಂದಿದ್ದರು. ಸಂಪೂರ್ಣವಾಗಿ ರಾಜಕೀಯಕ್ಕೆ ವರ್ಗಾವಣೆಗೊಳ್ಳುವುದಕ್ಕಿಂತ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡಾ ಆರೆಸ್ಸೆಸ್ ಪ್ರಚಾರಕರಾಗಿದ್ದರು. ಸಮೀಪದ ಮಹಾರಾಷ್ಟ್ರದಲ್ಲಿ ಸಂಪೂರ್ಣ ಸಂಪುಟವೇ ನಾಗ್ಪುರದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿರುವ ಆರೆಸ್ಸೆಸ್‌ನಿಂದ ಸಾರ್ವಜನಿಕ ಆಡಳಿತದ ಪಾಠವನ್ನು ಕಲಿಯುತ್ತದೆ.
ಮೋದಿ ಅಧಿಕಾರಕ್ಕೆ ಬಂದ ನಂತರ ಸರಕಾರದಲ್ಲಿ ಆರೆಸ್ಸೆಸ್ ಪಾತ್ರ ಅಕ್ಷರಶಃ ಪಸರಿಸಿದೆ. ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ದೂರದರ್ಶನ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಜಯ ದಶಮಿಯ ಸಂದರ್ಭದಲ್ಲಿ ಮಾಡುವ ಭಾಷಣವನ್ನು ಎಲ್ಲೆಡೆಯೂ ನೇರ ಪ್ರಸಾರ ಮಾಡುತ್ತದೆ ಎಂದಾದರೆ ಸರಕಾರಿ ಯಂತ್ರವನ್ನು ಯಾವ ಮಟ್ಟಕ್ಕೆ ಖಾಸಗಿ ಉಪಯೋಗಕ್ಕೆ ಬಳಸಲಾಗುತ್ತಿದೆ ಎಂಬುದರ ಅರಿವಾಗುತ್ತದೆ. ಈ ಪ್ರಭಾವವು ಕೇಂದ್ರ ಸರಕಾರದ ದೈನಂದಿನ ಕಾರ್ಯವೈಖರಿ ಮತ್ತು ಬಿಜೆಪಿ ಆಡಳಿತದ ಇತರ ರಾಜ್ಯಗಳಿಗೂ ವಿಸ್ತರಣೆಯಾಗಿದೆ. ಉದಾಹರಣೆಗೆ ಮಂಗಳವಾರದಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿರುವಂತೆ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಪಟ್ಟ ಕ್ರೈಸ್ತ ದತ್ತಿಸಂಸ್ಥೆಯನ್ನು ಯಾವುದೇ ಅಧಿಕಾರಿಗಳ ಅಥವಾ ಮಂತ್ರಿಗಳ ಜೊತೆಯಲ್ಲ ಬದಲಿಗೆ ಆರೆಸ್ಸೆಸ್ ಮುಖಂಡರಲ್ಲಿ ಮಾತುಕತೆ ನಡೆಸುವಂತೆ ಹೇಳಲಾಗಿತ್ತು. ಜುಲೈಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ನಿರ್ಧರಿಸಲು ಆರೆಸ್ಸೆಸ್ ಪ್ರಮುಖರನ್ನು ಭೇಟಿ ಮಾಡಿದ್ದರು.
ಅಜ್ಮೀರ್ ದಾಳಿ ಸಂಪರ್ಕ
2007ರ ಅಜ್ಮೀರ್ ಭಯೋತ್ಪಾದನಾ ದಾಳಿಯಲ್ಲಿ ಇಬ್ಬರು ಆರೆಸ್ಸೆಸ್ ಪ್ರಚಾರಕರಿಗೆ ಶಿಕ್ಷೆಯಾಗಿರುವಂತೆಯೇ ಈ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದನ ಭಾಗಿಯಾಗಿರುವುದು ಅದನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಆರೆಸ್ಸೆಸ್ ಪ್ರಚಾರಕನಾಗಿದ್ದ ಅಸೀಮಾನಂದ ಗುಜರಾತ್‌ನಲ್ಲಿ ಆದಿವಾಸಿ ಗುಂಪುಗಳ ಜೊತೆ ಕೆಲಸ ಮಾಡುತ್ತಿದ್ದ. ದೆಹಲಿ ನ್ಯಾಯಾಲಯದ ನ್ಯಾಯಾಧೀಶರಿಗೆ ನೀಡಿದ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಆತ ಅಜ್ಮೀರ್ ದಾಳಿಯ ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದ. ಕಳೆದ ವರ್ಷ ಕಾರವಾನ್ ಪಾಕ್ಷಿಕಕ್ಕೆ ನೀಡಿದ ಸಂದರ್ಶನದಲ್ಲಿ ಆತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಖುದ್ದಾಗಿ ಈ ಸ್ಫೋಟಗಳಿಗೆ ಅನುಮತಿ ಸೂಚಿಸಿದ್ದಾಗಿ ತಿಳಿಸಿದ್ದ. ಈ ತಪ್ಪೊಪ್ಪಿಗೆಯ ಹೊರತಾಗಿಯೂ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ ಅಸೀಮಾನಂದನನ್ನು ನಿರ್ದೋಷಿ ಎಂದು ತೀರ್ಪಿತ್ತು ಬಿಡುಗಡೆಗೆ ಆದೇಶಿಸಿತು. ಮೂರು ಡಝನ್‌ಗಿಂತಲೂ ಅಧಿಕ ಸಾಕ್ಷಿಗಳು ವಿರುದ್ಧವಾಗಿದ್ದರೂ ನ್ಯಾಯಾಲಯದ ಈ ತೀರ್ಪು ಕೇಂದ್ರ ಸರಕಾರ ನಿಯಂತ್ರಿತ ರಾಷ್ಟ್ರೀಯ ತನಿಖಾ ಸಂಸ್ಥೆಯ ಹುಳುಕುಗಳತ್ತ ಬೊಟ್ಟು ಮಾಡುತ್ತಿತ್ತು. ಮೋದಿ ಸರಕಾರವು ಹಿಂದುತ್ವ ಭಯೋತ್ಪಾದನೆಯ ಪ್ರಕರಣಗಳಲ್ಲಿ ತನಿಖೆಗಳಿಗೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. 2008ರಲ್ಲಿ ರಮಝಾನ್ ಸಮಯದಲ್ಲಿ ನಾಲ್ವರು ಮುಸ್ಲಿಮರನ್ನು ಬಲಿಪಡೆದ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದ ಸ್ಫೋಟದ ವಿಶೇಷ ಸಾರ್ವಜನಿಕ ಅಭಿಯೋಜಕರಾದ ರೋಹಿಣಿ ಸಾಲ್ಯಾನ್, ಮೋದಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಈ ಪ್ರಕರಣದಲ್ಲಿ ‘ಮೃದು ಧೋರಣೆ’ ಅನುಸರಿಸುವಂತೆ ತನ್ನ ಮೇಲೆ ಒತ್ತಡ ಹೇರುತ್ತಿರುವುದಾಗಿ 2015ರಲ್ಲಿ ಆರೋಪ ಮಾಡಿದ್ದರು.
ಭಯೋತ್ಪಾದನೆಯ ಇತಿಹಾಸ
ಖಂಡಿತವಾಗಿಯೂ, ಆರೆಸ್ಸೆಸ್ ಸದಸ್ಯನೊಬ್ಬನಿಗೆ ಹತ್ಯೆಯ ಆರೋಪದಲ್ಲಿ ಶಿಕ್ಷೆಯಾಗುವುದು ಇದೇ ಮೊದಲೇನಲ್ಲ. ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆ ಓರ್ವ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಎಂಬುದನ್ನು ಆತನ ಸಹೋದರ ಗೋಪಾಲ್ ಗೋಡ್ಸೆ ದೃಢಪಡಿಸಿದ್ದರು. ಈ ಕಾರಣದಿಂದಾಗಿ ಅಂದು ಕೇಂದ್ರ ಗೃಹಸಚಿವರಾಗಿದ್ದ ವಲ್ಲಭಾ ಭಾಯ್ ಪಟೇಲ್ ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಿದ್ದರು. ಹತ್ಯೆಯ ಎಂಟು ತಿಂಗಳ ನಂತರ ಪಟೇಲ್ ಆರೆಸ್ಸೆಸ್ ಮುಖ್ಯಸ್ಥ ಎಂ.ಎಸ್. ಗೋಳ್ವಾಲ್ಕರ್‌ಗೆ ಬರೆದ ಪತ್ರದಲ್ಲಿ ಗಾಂಧೀಜಿ ಹತ್ಯೆಗೆ ಸಂಘಟನೆಯ ಕೋಮುವಾದವನ್ನು ದೂಷಿಸಿದ್ದರು. ಆರೆಸ್ಸೆಸ್ ಕಾರ್ಯಕರ್ತರು ಗಾಂಧೀಜಿ ಹತ್ಯೆಯ ಸಂದರ್ಭದಲ್ಲಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದ್ದರು ಎಂದು ಕೂಡಾ ಪಟೇಲ್ ಆರೋಪಿಸಿದ್ದರು.
1975ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಆ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿಷೇಧ ಹೇರಲಾಗಿತ್ತು. ಬಹುತೇಕ ಸಂದರ್ಭಗಳಲ್ಲಿ ಅಜ್ಮೀರ್ ದಾಳಿಯು ಆರೆಸ್ಸೆಸ್ ಪಾತ್ರ ಮತ್ತು ಅದರ ಸಿದ್ಧಾಂತದ ಬಗ್ಗೆ ಮತ್ತು ಗಾಂಧೀಜಿಯ ಹತ್ಯೆಯ ನಂತರ ಅದನ್ನು ನಿಷೇಧಿಸಿದಂತೆ ಈಗಲೂ ನಿಷೇಧಿಸುವ ಅಗತ್ಯವಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. 1948ರಲ್ಲಿ ಗಾಂಧೀಜಿಯ ಹತ್ಯೆಗೆ ಕಾರಣವಾದ ಕೋಮು ವಿಷದ ಬಗ್ಗೆ ಪಟೇಲರು ಚರ್ಚಿಸಬಹುದಾಗಿದ್ದರೆ 2017ರಲ್ಲಿ ಆರೆಸ್ಸೆಸ್‌ನ ಸಿದ್ಧಾಂತದ ಯಾವ ಅಂಶ 800 ವರ್ಷದಷ್ಟು ಹಳೆಯ ಮುಸ್ಲಿಂ ದರ್ಗಾದ ಮೇಲೆ ಆರೆಸ್ಸೆಸ್‌ಪ್ರಚಾರಕರು ದಾಳಿ ನಡೆಸಲು ಪ್ರೇರಣೆ ನೀಡಿತು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.