ದಿಲ್ಲಿ ಪಾಲಿಕೆ: ಹಾಲಿ ಬಿಜೆಪಿ ಕೌನ್ಸಿಲರ್‌ಗಳಿಗಿಲ್ಲ ಟಿಕೆಟ್
ಹೊಸದಿಲ್ಲಿ, ಮಾ.15: ದಿಲ್ಲಿಯಲ್ಲಿ ಏಪ್ರಿಲ್ 22ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದೆ. ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ವಿರೋಧಿ ಅಲೆಯನ್ನು ತಡೆಯುವ ಪ್ರಯತ್ನವಾಗಿ ಹಾಲಿ ಪಾಲಿಕೆ ಸದಸ್ಯರಾಗಿರುವ ಯಾರಿಗೂ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ.
ಎಲ್ಲ ಸ್ಥಾನಗಳಿಗೆ ಹೊಸ ಮುಖಗಳನ್ನು ಪರಿಚಯಿಸಲು ಬಿಜೆಪಿ ನಿರ್ಧರಿಸಿದ್ದು, ಯುವಕರಿಗೆ ಮಣೆ ಹಾಕುವುದು ಬಿಜೆಪಿಯ ರಣತಂತ್ರವಾಗಿದೆ.
ಚುನಾವಣೆ ನಡೆಯುವ ಎಲ್ಲ ಮೂರು ಪಾಲಿಕೆಗಳಲ್ಲೂ ಬಿಜೆಪಿ ಆಡಳಿತವಿದ್ದು, ಹಾಲಿ ಪಾಲಿಕೆ ಸದಸ್ಯರಾಗಿರುವವರಿಗೆ, ಅವರ ಸಂಬಂಧಿಕರಿಗೆ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಈ ತಿಂಗಳ 22ರಂದು ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಹೊಸ ಮುಖಗಳ ಸೇನೆ ಸಜ್ಜುಗೊಳಿಸುವುದು ನಮ್ಮ ಉದ್ದೇಶ. ಅದರಲ್ಲೂ ಮುಖ್ಯವಾಗಿ ಯುವಕರಿಗೆ ಆದ್ಯತೆ. ಹೊಸ ಭಾರತದ ಮೋದಿ ಕನಸನ್ನು ನನಸುಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ. ಇದು ಪಕ್ಷದ ಅವಿರೋಧ ನಿರ್ಣಯ ಎಂದು ದಿಲ್ಲಿ ಬಿಜೆಪಿಯ ಮುಖ್ಯಸ್ಥ ಮನೋಜ್ ತಿವಾರಿ ಅವರು ಪಕ್ಷದ ಸಂಸದರಾದ ಹರ್ಷವರ್ಧನ, ಮಹೇಶ್ ಗಿರಿ, ಪರ್ವೇಶ್ ವರ್ಮಾ ಮತ್ತು ಉದಿತ್‌ರಾಜ್ ಅವರ ಸಮ್ಮುಖದಲ್ಲಿ ಸ್ಪಷ್ಟಪಡಿಸಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜತೆ ಪಕ್ಷದ ರಾಜ್ಯ ಮುಖಂಡರು ಸಭೆ ನಡೆಸಿದ ವೇಳೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಆಡಳಿತ ವಿರೋಧಿ ಅಲೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಪಕ್ಷ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.