ಉತ್ತರ ಪ್ರದೇಶದಲ್ಲಿ ಬಿಜೆಪಿ ದಿಗ್ವಿಜಯ: ಆರೆಸ್ಸೆಸ್‌ನಲ್ಲೇಕೆ ಸೂತಕದ ವಾತಾವರಣ..?
ಇನ್ನೊಂದು ಸುತ್ತಿನ ಪ್ರಧಾನ ಮಂತ್ರಿ ಖುರ್ಚಿ ಹೆಚ್ಚೂಕಮ್ಮಿ ನರೇಂದ್ರ ಮೋದಿಯವರ ಪಾಲಾಗಲಿರುವುದನ್ನು ಈಗ ಯಾರಾದರೂ ಅಲ್ಲಗೆಳೆಯುವುದು ಕಷ್ಟ. ಒಂದರ್ಥದಲ್ಲಿ ವಿರೋಧಿಗಳೇ ಇಲ್ಲದ ಕುಸ್ತಿ ಅಖಾಡದಲ್ಲಿ ನರೇಂದ್ರ ಮೋದಿಯವರದು ಬಲಿಷ್ಠ ಪೈಪೋಟಿ ಎದುರಾಗದ ಸಲೀಸು ಕದನ. ಮೋದಿಯವರ ಮುಂಬಾಲಕ ಹಿಂಬಾಲಕ ಕಾರ್ಪೊರೇಟ್ ಧಣಿಗಳು ಅವರ ಜತೆಗಿರುವ ತನಕ ಈ ಸಲೀಸು ಕದನ ಇನ್ನೊಂದಷ್ಟು ವರ್ಷಗಳ ಕಾಲ ಸಲೀಸಾಗಿಯೇ ನಡೆಯಲಿದೆ. ಹಾಗಿದ್ದರೆ, ಈ ಸಲೀಸು ಕದನಕ್ಕೆ ಕೊನೆ ಎಂಬುದಿಲ್ಲವೇ? ಮೋದಿಯವರನ್ನು ಈ ಅಖಾಡದಲ್ಲಿ ಯಾರೂ ಬಗ್ಗು ಬಡಿಯಲಾರರೇ?
ಬಹುಶಃ ಈಗ ಮೋದಿಯವರನ್ನು ಬಗ್ಗು ಬಡಿಯಲು ಸಾಧ್ಯವಿರುವುದು ಒಬ್ಬನೇ ಒಬ್ಬನಿಗೆ ಮಾತ್ರ. ಅವನು ಬೇರಾರೂ ಅಲ್ಲ ಆರೆಸ್ಸೆಸ್.
ಈ ದೇಶ ಬಲಪಂಥೀಯರಿಗೆ ಅರ್ಥವಾಗಿರುವಷ್ಟು, ಅವರಿಗೆ ಪಳಗಿರುವಷ್ಟು ಮತ್ತಾರಿಗೂ ನಡು ಬಗ್ಗಿಸಿಲ್ಲ. ಈ ದೇಶ ಬಲಪಂಥೀಯರಿಗೆ ಅರ್ಥವಾಗಿದ್ದರಲ್ಲಿ ಕೇವಲ ಎರಡೇ ಎರಡು ಪರ್ಸೆಂಟ್ ಎಡಪಂಥೀಯರಿಗೆ ಅರ್ಥವಾಗಿಬಿಟ್ಟಿದ್ದಿದ್ದರೆ ಇಂಡಿಯಾದ ರಾಜಕಾರಣದ ವ್ಯಾಕರಣ ಇವತ್ತು ಇಷ್ಟೊಂದು ಶೋಚನೀಯವಾಗಿರುತ್ತಿರಲಿಲ್ಲ.
ಮೊನ್ನೆಯ ಚುನಾವಣಾ ಫಲಿತಾಂಶ ಯಾರಿಗ್ಯಾವ ಒಳನೋಟಗಳನ್ನು ನೀಡಿತೋ ಇಲ್ಲವೋ ಗೊತ್ತಿಲ್ಲ. ನನಗಂತೂ ಬಿಜೆಪಿ ಜತೆಗೂಡಿರುವ ಕಾರ್ಪೊರೇಟ್ ಧಣಿಗಳ Workaholic Strategy ಇಂಚಿಂಚೆ ಅರ್ಥವಾಗಲು ಶುರುವಾಯಿತು. ದುಡ್ಡು, ಜಾತಿ, ಉಪಜಾತಿ, ಧರ್ಮ, ದೇವರು ಮತ್ತು ತೋಳ್ಬಲಗಳನ್ನೆಲ್ಲ ಸ್ಟ್ರ್ಯಾಟೆಜಿಯಾಗಿ ಬಿಜೆಪಿ ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾದ ಚುನಾವಣೆಯಿದು. ಈ ಸ್ಟ್ರ್ಯಾಟೆಜಿಯನ್ನು ಚುನಾವಣಾ ರಣತಂತ್ರವೆಂದು ಬೇಕಿದ್ದರೆ ಕರೆಯಬಹುದು. ಈ ರಣತಂತ್ರ ಈಗ ಆರೆಸ್ಸೆಸ್ಸಿಗೂ ದಿಗಿಲು ಹುಟ್ಟಿಸಿದೆ.
ಸದಾ ತನ್ನ ಅಂಕೆಯಲ್ಲಿ ಹಿಡಿದಿಟ್ಟುಕೊಳ್ಳಲು ಹವಣಿಸುವ ಆರೆಸ್ಸೆಸ್ ತಂತ್ರಗಾರಿಕೆಯನ್ನು ಮೀರಿ ಮೋದಿ ಜಿಗಿಯುತ್ತಿದ್ದಾರೆ. ಆರೆಸ್ಸೆಸ್ಸಿಗೆ ತಲೆನೋವಾಗಿರುವುದೆ ಇದು. ಬಿಹಾರದ ಚುನಾವಣೆಯ ಸಂದರ್ಭದಲ್ಲಿ ಮೋಹನ್ ಭಾಗವತ್ ಮೂಲಕ ಮೀಸಲಾತಿಯ ಕೆಚ್ಚಲಿಗೆ ಕಲ್ಲೆಸೆಯುವಂತೆ ಆರೆಸ್ಸೆಸ್ ಮಾಡಿತು. ಅದರ ಪರಿಣಾಮ ಬಿಹಾರದ ಜನತೆ ಬಿಜೆಪಿಯ ಮುಖಮೂತಿ ನೋಡದೆ ಇಕ್ಕತೊಡಗಿದರು. ಈ ತಂತ್ರ ಮೊನ್ನೆ ಉತ್ತರಪ್ರದೇಶದ ಚುನಾವಣೆಯಲ್ಲಿ ಕಂಡುಬರಲಿಲ್ಲ. ಆರೆಸ್ಸೆಸ್ಸಿನ ಮುಂಚೂಣಿ ನಾಯಕರನ್ನು ಮೋದಿ ಮೊನ್ನೆಯ ಚುನಾವಣೆಯಲ್ಲಿ ಮನೆಯಲ್ಲೇ ಉಳಿದು ಬರೀ ಟಿ.ವಿ. ನೋಡುವಂತೆ ಮಾಡಿದರು. ಆರೆಸ್ಸೆಸ್ ಕೆರಳಲು ಇನ್ನೇನೂ ಬೇಕು. ಕಾರ್ಪೊರೇಟ್ ಕುಳಗಳು ಮೋದಿಯವರ ಜೊತೆಯಲ್ಲಿರುವ ತನಕ ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲೇಬೇಕು’ ಎನ್ನುವ ಬಾಯಿಗಳಿಗೆ ಬೀಗ ಬೀಳಲಿದೆ.
ಉತ್ತರಪ್ರದೇಶದ ಬಿಜೆಪಿಯ ದಿಗ್ವಿಜಯದಿಂದ ಹೆಚ್ಚು ಆತಂಕ, ಕಳವಳಕ್ಕೀಡಾಗಿರುವುದು ಆರೆಸ್ಸೆಸ್. ಆರೆಸ್ಸೆಸ್ಸಿನ ಬ್ರಾಹ್ಮಣ್ಯದ ಹಿಡಿತ ಮೀರಿ ಅಬ್ರಾಹ್ಮಣನೊಬ್ಬ ಬಿಜೆಪಿಯಲ್ಲಿ ಬೆಳೆಯಲುಂಟೇ? ಬದುಕಲುಂಟೇ? ಮೊನ್ನೆಯ ಗೆಲುವಿನ ಸಂಭ್ರಮದ ಅಲೆಯಲ್ಲಿ ಬಿಜೆಪಿ ಮತ್ತು ಕಾರ್ಪೊರೇಟ್ ಮಾಧ್ಯಮಗಳು ತೇಲುತ್ತಿದ್ದರೆ ಆರೆಸ್ಸೆಸ್ ಸೂತಕದಲ್ಲಿದ್ದಂತೆ ತೋರುತ್ತಿತ್ತು. ಮೋಹನ್ ಭಾಗವತರ ಮುಖದಲ್ಲಿ ಗೆಲುವಿನ ಗೆರೆಗಳೇ ಕಾಣಲಿಲ್ಲ. ಟಿ.ವಿ. ಮಾಧ್ಯಮಗಳಿಗೂ ಮೋಹನ್ ಭಾಗವತರ ಅಭಿಪ್ರಾಯ ಕೇಳಿಸಿಕೊಳ್ಳುವ ತುರ್ತಿದ್ದಂತೆ ಕಂಡುಬರಲಿಲ್ಲ.
ಹಾಗೇ ನೋಡಿದರೆ ಈ ದೇಶದಲ್ಲಿ ನರೇಂದ್ರ ಮೋದಿಯವರ ಎದುರು ಅವರ ಸಮಕ್ಕೆ ನಿಲ್ಲಬಲ್ಲ ಎದುರಾಳಿಯೇ ಇಲ್ಲ. ಬಹುಮುಖ್ಯವಾಗಿ ಮೋದಿಯವರನ್ನು ಸದೆಬಡಿಯಬಲ್ಲ ಸಂಗತಿಗಳೇ ಅವರ ಎದುರಾಳಿಗಳ ಕೈಯಲ್ಲಿಲ್ಲ. ಮುಂಬರುವ ಲೋಕಸಭಾ ಚುನಾವಣೆಯ ತೀರ್ಪಿಗೆ ಮುನ್ನುಡಿಯಂತೆ ಉತ್ತರಪ್ರದೇಶದ ಫಲಿತಾಂಶ ಪ್ರಕಟಗೊಂಡಿದೆ. ಬಲಪಂಥೀಯರಂತೆಯೇ ದೇಶದುದ್ದಕ್ಕೂ ಬಹುದೊಡ್ಡ ಕಾರ್ಯಕರ್ತ ಸಮೂಹವನ್ನು ಹೊಂದಿರುವ ಎಡಪಂಥೀಯರಿಗೆ ಈ ಎಲ್ಲಾ ಸ್ಟ್ರ್ಯಾಟೆಜಿಗಳೊಂದಿಗೆ ಈ ದೇಶ ಚುನಾವಣೆಯ ಭಾಗವಾಗಿ ಇನ್ನಷ್ಟು ಅರ್ಥವಾಗಲು ಇನ್ನೊಂದೈದು ಸಾವಿರ ವರ್ಷಗಳಾದರೂ ಬೇಕು. ಆಗ ಈ ದೇಶ ಇನ್ನಾವ ವಿಕಾರದ ತುದಿ ತಲುಪಿರುತ್ತೋ ಯಾರು ಬಲ್ಲರು.
ಸರಿ, ಈಗ ನಾವೇನೂ ಮಾಡುವುದು. ನಿಜಕ್ಕೂ ನಾವೇನಾದರೂ ಮಾಡುವ ಸ್ಥಿತಿಯಲ್ಲಿದ್ದೀವಾ? ಇದು ಪ್ರಶ್ನೆ. ಬಹುಶಃ ನಾವು ಮಾಡಬಹುದಾದದ್ದು ಇಷ್ಟೇ: ‘ಬಿಜೆಪಿ ವರ್ಸಸ್ ಆರೆಸ್ಸೆಸ್’ ಎಂಬ ಪತನಕಾಂಡದ ಹೊಸ ಅಧ್ಯಾಯದ ಆರಂಭಕ್ಕಾಗಿ ನಾವೆಲ್ಲ ಚಡಪಡಿಸುವುದು ಮತ್ತೂ ಈ ಅಧ್ಯಾಯದ ನಂತರದ ಫಲಿತಾಂಶ ಆದಷ್ಟು ಬೇಗ ಹೊರಬೀಳಲೆಂದು ನಮ್ಮ ನಮ್ಮ ಕುಲದೈವಗಳಲ್ಲಿ ಪ್ರಾರ್ಥಿಸುವುದು.’ ಇದಿಷ್ಟೇ ಈ ಹೊತ್ತಲ್ಲಿ ನಾವು ಮಾಡಬಹುದಾದದ್ದು.