ಸದ್ದಿಲ್ಲದೇ ಚಿಕ್ಕಮಗಳೂರಿಗೆ ಬಂದು ಹೋದ ಹಾಲಿವುಡ್ ನಟಿ .... !
ಹ್ಯಾಟ್ಸಾಫ್ ಇಂಡಿಯಾ ಅಂಡ್ ಇಂಡಿಯನ್ ಮೆಡಿಶನ್: ಇಸಬೆಲ್ಲಾ ಲೂಕಾಸ್
ಚಿಕ್ಕಮಗಳೂರು, ಮಾ.16: ಹಾಲಿವುಡ್‌ನ ಹೆಸರಾಂತ ನಟಿಯೊಬ್ಬರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ರಹಸ್ಯವಾಗಿ ಬಂದು ಆಯುರ್ವೇದಿಕ್ ಚಿಕಿತ್ಸೆ ಪಡೆದು ಮರಳುತ್ತಿರುವ ಸಂಗತಿ ಇದೀಗ ಬಯಲಾಗಿದೆ.
ಮೂಲತಃ ಆಸ್ಟ್ರೇಲಿಯಾದ ಹೆಸರಾಂತ ಹಾಲಿವುಡ್ ನಟಿ ಇಸಬೆಲ್ಲಾ ಲೂಕಾಸ್ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ ಬಳಿಯ ಆರೋಗ್ಯ ನಿಕೇತನ ಆಯುರ್ವೇದಾಶ್ರಮದಲ್ಲಿ ಇತಿಹಾಸ ಪ್ರಸಿದ್ದ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಸಬೆಲ್ಲಾ ಲೂಕಾಸ್ ಇದೀಗ ಸಂಪೂರ್ಣ ಗುಣಮುಖವಾಗಿದ್ದಾರೆ. ಇಂದು (ಗುರುವಾರ) ಭಾರತದಿಂದ ವಿಮಾನವೇರಿ ಆಸ್ಟ್ರೇಲಿಯಾ ತಲುಪಲಿದ್ದಾರೆ.
ಹಾಲಿವುಡ್‌ನಲ್ಲಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಇಸಬೆಲ್ಲಾ ಲೂಕಾಸ್ ಹಾಲಿವುಡ್‌ನಲ್ಲಿ ಅತ್ಯಂತ ಹೆಚ್ಚು ಪ್ರಖ್ಯಾತಿಯನ್ನು ಸಣ್ಣ ವಯಸ್ಸಿನಲ್ಲಿಯೇ ಗಳಿಸಿಕೊಂಡಿದ್ದಾರೆ. ಹಾಲಿವುಡ್ ಚಿತ್ರಗಳಲ್ಲಿ ಆಕ್ಷನ್, ಸ್ಟಂಟ್, ಫೈಟ್‌ಗಳಿಗೆ ಕೊರತೆ ಇರುವುದಿಲ್ಲ. ಸಿನಿಮಾಕ್ಕಾಗಿ ದೇಶ-ವಿದೇಶ ಸುತ್ತಿದ್ದ ಇಸಬೆಲ್ಲಾ ಲೂಕಾಸ್ ಮಾನಸಿಕ ಹಾಗೂ ದೈಹಿಕ ಜರ್ಜರಿತಕ್ಕೆ ಒಳಗಾಗಿದ್ದರು. ದೇಹದ ಸ್ಥಿತಿಗತಿಗಳನ್ನು ಹತೋಟಿಗೆ ತಂದುಕೊಳ್ಳಲು ಇವರು ಆಯ್ಕೆ ಮಾಡಿಕೊಂಡ ಜಾಗ ಕೊಪ್ಪ ತಾಲೂಕಿನ ಹರಿಹರಪುರ.
ಭಾರತದ ಆಯುರ್ವೇದಿಕ್ ಚಿಕಿತ್ಸೆ ಪಡೆದು ಸಂತೋಷದಿಂದ ತಾಯ್ನೆಡಿಗೆ ಮರಳುತ್ತಿದ್ದೇನೆ. ಭಾರತದ ಆಯುರ್ವೇದ ಹಾಗೂ ಇಲ್ಲಿನ ಪಥ್ಯದ ಚಿಕಿತ್ಸೆಯಿಂದ ನಮ್ಮ ದೇಹದ ಆಂತರಿಕ ಹಾಗೂ ಬಾಹ್ಯ ಸ್ಥಿತಿಗತಿಗಳು ತುಂಬಾ ಬದಲಾಗಿದೆ. ಹ್ಯಾಟ್ಸಾಫ್ ಇಂಡಿಯಾ ಅಂಡ್ ಇಂಡಿಯನ್ ಮೆಡಿಷನ್ ಎಂದು ಚಿಕಿತ್ಸೆ ಕುರಿತು ಇಸಬೆಲ್ಲಾ ಲೂಕಾಸ್ ಸಂತಸ ವ್ಯಕ್ತಪಡಿಸುತ್ತಾಳೆ.
ಹರಿಹರಪುರದ ಆರೋಗ್ಯ ನಿಕೇತನ ಆಯುರ್ವೇದಾಶ್ರಮದಲ್ಲಿ ಸದ್ಯ 15ಕ್ಕೂ ಹೆಚ್ಚು ವಿದೇಶಿಗರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 10 ವರ್ಷದಿಂದ ಆಯುರ್ವೇದ ಚಿಕಿತ್ಸೆ ನಡೆಸುತ್ತಿರುವ ಈ ಆಶ್ರಮದಲ್ಲಿ ಈವರಗೆ 3 ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ ಸಮಯದಲ್ಲಿ ಅಮೇರಿಕಾ, ಜಪಾನ್, ರಷ್ಯಾ ಸೇರಿದಂತೆ ವಿವಿಧ ದೇಶಗಳ ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಲೂ ವಾರ್ಷಿಕ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೇರಿಕಾದ ಕೆಲ ವಿದ್ಯಾರ್ಥಿಗಳು ಇಲ್ಲಿನ ಆಯುರ್ವೇದದ ಚಿಕಿತ್ಸೆಯನ್ನು ಕಲಿಯುತ್ತಿರುವುದು ಇಲ್ಲಿನ ಹೆಗ್ಗಳಿಕೆಯಾಗಿದೆ.
ಜಗತ್ತಿನಲ್ಲಿ ಭಾರತ ಹಲವು ವಿಚಾರಗಳು ಇಂದಿಗೂ ವಿಶ್ವಕ್ಕೆ ಮಾದರಿಯಾಗಿದೆ. ಅದಕ್ಕಾಗೆ ನಾನಾ ದೇಶಗಳ ಜನರು ಪ್ರವಾಸ ಬರಲು ತುದಿಗಾಲಿನ ಮೇಲೆ ನಿಂತಿರುತ್ತಾರೆ. ಭಾರತವನ್ನು ಯಾರೂ ಕೂಡ ಹಗುರವಾಗಿ ಕಾಣುವಂತಿಲ್ಲ ಎನ್ನಲು ಇದೊಂದು ಸಣ್ಣ ಉದಾಹರಣೆಯಾಗಿದೆ. ಜಗತ್ತು ಎಷ್ಟೇ ಮುಂದುವರೆದಿದ್ದರೂ, ವಿಶ್ವದ ಹತ್ತಾರು ದೇಶದ ಜನ ಭಾರತದ ಪುರಾತನ ಔಷಧಿ ಪದ್ಧತಿಗೆ ಮಾರುಹೋಗಿದ್ದಾರೆ ಎಂದರೆ ನಿಜಕ್ಕೂ ನಾವು ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುವುದರಲ್ಲಿ ಅನುಮಾನವಿಲ್ಲ.
ಪುರಾತನ ಪ್ರಸಿದ್ಧ ಭಾರತದ ಮಣ್ಣು ಸತ್ವಯುತವಾದುದು. ಜಗತ್ತು ಎಷ್ಟೇ ಮುಂದುವರೆದಿದ್ದರೂ, ಈ ಪುಣ್ಯಭೂಮಿಯ ಮುಂದೆ ಕೈ ಕಟ್ಟಿಯೇ ನಿಲ್ಲಬೇಕು. ಚಂದ್ರನ ಮೇಲೂ ಕಾಲಿಟ್ಟು ಜಗತ್ತಿನಲ್ಲಿ ನಾವೇ ಮೊದಲು ಅನ್ನುವ ಜನರೆಲ್ಲರೂ ಕೆಲ ವಿಚಾರಗಳಲ್ಲಿ ಭಾರತದೆದುರು ತಲೆ ಎತ್ತಿ ನಿಲ್ಲಲು ಸಾಧ್ಯವಿಲ್ಲ. ಸಾವಿರಾರು ವರ್ಷಗಳಿಂದ ವೈವಿದ್ಯತೆಯಲ್ಲಿ ಏಕತೆ ಸಾರಿದ ಭಾರತದ ಮಣ್ಣಿನ ಆ ತಾಕತ್ತು ಬಹಳ ದೊಡ್ಡದು. ಜಯಲಲಿತಾ ಅನಾರೋಗ್ಯಕ್ಕೆ ತುತ್ತಾದಾಗ ಲಂಡನ್‌ನಿಂದ ವೈದ್ಯರು ಬಂದರು. ಅದೇ ಆಸ್ಟ್ರೇಲಿಯಾದ ರೋಗಿ ಚಿಕಿತ್ಸೆಗಾಗಿ ಭಾರತಕ್ಕೆ ಬಂದರು. ಇದು ನಮ್ಮ ಆಯುರ್ವೇದಿಕ್ ಔಷಧಿಯ ಶಕ್ತಿ ಅಂತ ಎದೆಯುಬ್ಬಿಸಿ ಹೇಳಬಹುದು
- ಕುಮಾರಸ್ವಾಮಿ, ಹರಿಹರಪುರ