ನೋಟು ರದ್ದತಿ, ಚುನಾವಣೆಗಳು ಮತ್ತು ಜಿಡಿಪಿ
ಭಾಗ -1
ಭಾರತದಂತಹ ಮಹಾನ್ ರಾಷ್ಟ್ರವೊಂದನ್ನು ಅಗತ್ಯಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುವ ಒಬ್ಬ ವ್ಯಕ್ತಿ ಮತ್ತು ಅವನ ಬುದ್ಧಿಯ ವಶಕ್ಕೆ ಒಪ್ಪಿಸಿದಲ್ಲಿ ಅದು ಸರ್ವಾಧಿಕಾರಕ್ಕೆ ತಿರುಗುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ಅರಿತುಕೊಳ್ಳಲಿಲ್ಲ. ಪರಿಣಾಮವಾಗಿ ಇತಿಹಾಸ ಮರುಕಳಿಸುತ್ತಿದೆ.
ನಮಗೆ ದೇಶದ ರಾಜಕೀಯ ನಾಯಕನ ಸ್ಥಾನದಲ್ಲಿ ಒಬ್ಬ ಭಗವಂತ ಬೇಕಿಲ್ಲ....... ಇನ್ನು ಮುಂದೆ ಇಂತಹ ದೇವರು ಇರಬಾರದು. ಅಷ್ಟು ಮಾತ್ರವಲ್ಲ ಪ್ರಧಾನಿ ಹುದ್ದೆಗೆ ನಾವು ಕೊಟ್ಟಿರುವ ಅತಿಯಾದ ಮಹತ್ವವನ್ನು ಅಪಮೌಲ್ಯಗೊಳಿಸಲೇಬೇಕು.
- ವಾಜಪೇಯಿ ಸರಕಾರದಲ್ಲಿ ಮಂತ್ರಿ ಆಗಿದ್ದ ಜಸ್ವಂತ್ ಸಿಂಗ್
ಇಂದಿರಾ ಗಾಂಧಿ, ವಾಜಪೇಯಿಗಳ ಅಧಿಕಾರಾವಧಿಯಲ್ಲಿ ನಡೆದಿರುವ ಪ್ರಮಾದಗಳಿಂದ ನಾವು ಪಾಠ ಕಲಿಯಲಿಲ್ಲ. ಭಾರತದಂತಹ ಮಹಾನ್ ರಾಷ್ಟ್ರವೊಂದನ್ನು ಅಗತ್ಯಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುವ ಒಬ್ಬ ವ್ಯಕ್ತಿ ಮತ್ತು ಅವನ ಬುದ್ಧಿಯ ವಶಕ್ಕೆ ಒಪ್ಪಿಸಿದಲ್ಲಿ ಅದು ಸರ್ವಾಧಿಕಾರಕ್ಕೆ ತಿರುಗುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ಅರಿತುಕೊಳ್ಳಲಿಲ್ಲ. ಪರಿಣಾಮವಾಗಿ ಇತಿಹಾಸ ಮರುಕಳಿಸುತ್ತಿದೆ. ದೇಶದಲ್ಲಿ ಈಗಾಗಲೇ ಕಾಣಿಸಿಕೊಳ್ಳುತ್ತಿರುವ ಏಕವ್ಯಕ್ತಿ ಆಡಳಿತ, ವ್ಯಕ್ತಿಪೂಜೆ, ಅಸಹಿಷ್ಣುತೆ, ವಾಕ್ಸ್ವಾತಂತ್ರ್ಯದ ದಮನ ಮುಂತಾದವು ಸರ್ವಾಧಿಕಾರದ ಲಕ್ಷಣಗಳಲ್ಲದೆ ಬೇರೇನೂ ಅಲ್ಲ. ನಾಯಕನ ನಡೆ, ನುಡಿ, ನೀತಿಗಳನ್ನು ಸರಕಾರದ ಕ್ರಮಗಳನ್ನು ಟೀಕಿಸುವವರ ವಿರುದ್ಧ ಅಕ್ಷರ ದಾಳಿ ಅಥವಾ ದೈಹಿಕ ದಾಳಿ ನಡೆಸುವುದಕ್ಕಾಗಿ ಬ್ರಿಗೇಡುಗಳನ್ನು ಹುಟ್ಟುಹಾಕಲಾಗಿದೆ. ಇಂದು ಬೀದಿಬೀದಿಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಬ್ರಿಗೇಡುಗಳ ಪುಂಡಾಟಿಕೆ ಮಿತಿಮೀರಿದೆ.
ನೋಟು ರದ್ದತಿ ಎಂಬ ಏಕವ್ಯಕ್ತಿ ನಿರ್ಧಾರ
ನೋಟು ರದ್ದತಿಯನ್ನು ಘೋಷಿಸಿದ ಮೋದಿ ಮುಂದಿನ ಒಳಿತಿಗಾಗಿ ಇಂದಿನ ಕಷ್ಟಗಳನ್ನು ಸಹಿಸಿಕೊಳ್ಳಬೇಕೆಂದು ಹೇಳಿದ್ದೇ ತಡ ಹೆಚ್ಚಿನ ಜನರೆಲ್ಲ ಗೋಣುಹಾಕಿದರು! ಕಳೆದ ಶತಮಾನದಲ್ಲಿ ಜರ್ಮನಿ, ಇಟಲಿ, ರಶ್ಯಾಗಳ ಸರ್ವಾಧಿಕಾರಿಗಳು ಕೈಗಾರಿಕೀಕರಣಕ್ಕಾಗಿ, ‘‘ಪಿತೃ ಅಥವಾ ಮಾತೃಭೂಮಿಯ ಹಿರಿಮೆಗಾಗಿ ಶ್ರಮದಾನ ಮಾಡಿ’’ ಎಂದು ಕರೆಕೊಟ್ಟಾಗ ಇದೇ ರೀತಿ ತಲೆಬಾಗಿಸಿದ್ದ ಜನ ನಂತರ ಬಲವಂತದ ಶ್ರಮದಾನಕ್ಕೆ ಒಳಗಾದ ಹಾಗೆ! ಜಿಹ್ವಾಪಟುತ್ವ ಎಂದರೆ ಇದು! ಇರಲಿ, ನವೆಂಬರ್ 8, 2016ರಂದು ಶುರುವಾದ ನೋಟು ರದ್ದತಿ ಕಾರ್ಯಕ್ರಮಕ್ಕೆ ನಾಲ್ಕು ತಿಂಗಳಾಯಿತು. ಭ್ರಷ್ಟಾಚಾರ, ಭಯೋತ್ಪಾದನೆ, ಖೋಟಾ ನೋಟು ಎಂಬ ಮೂರು ಆಪತ್ತುಗಳನ್ನು ಎದುರಿಸಲೆನ್ನಲಾದ ನೋಟು ರದ್ದತಿಯ ಪರಿಣಾಮವಾಗಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡ ದೇಶದ ಆರ್ಥಿಕ ವ್ಯವಸ್ಥೆ ಇನ್ನೂ ಯಥಾಸ್ಥಿತಿಗೆ ಮರಳಿಲ್ಲ. ಆರ್ಥಿಕತಜ್ಞರ ಅಭಿಪ್ರಾಯದಲ್ಲಿ ಅದಕ್ಕೆ ಕನಿಷ್ಠ ಇನ್ನೂ ಒಂದು ವರ್ಷವೇ ಬೇಕಾಗಬಹುದು. ಈ ಸಂದರ್ಭದಲ್ಲಿ ಅಂದು ಮೋದಿ ಏನೆಲ್ಲ ಹೇಳಿದ್ದರು ಮತ್ತು ಇಂದು ಪರಿಸ್ಥಿತಿ ಹೇಗಿದೆ ಎಂದು ನೋಡಬೇಡವೇ?
(1) ‘‘ದೇಶವನ್ನು ಶುದ್ಧೀಕರಿಸುವ ಈ ಮಹಾನ್ ತ್ಯಾಗಕ್ಕೆ ನಿಮ್ಮ ಕೊಡುಗೆಯನ್ನೂ ನೀಡುವಂತೆ ನಿಮ್ಮನ್ನೆಲ್ಲ ಆಹ್ವಾನಿಸುತ್ತಿದ್ದೇನೆ. ದೀಪಾವಳಿ ಸಮಯದಲ್ಲಿ ನೀವು ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಿಲ್ಲವೇ ಹಾಗೆ’’
ಈ ಆಮಂತ್ರಣ ಬರೀ ಜನರನ್ನು ಮರುಳುಗೊಳಿಸುವ ಮಾತುಗಾರಿಕೆಯ ಭಾಗವಾಗಿತ್ತು. ಕಾರ್ಯತಃ ಮಹಾನ್ ತ್ಯಾಗಕ್ಕೆ ಜನರ ಕೊಡುಗೆ ಕಡ್ಡಾಯವಾಗಿತ್ತು! ಈ ವಿವೇಚನಾರಹಿತ, ಹುಚ್ಚು ನಿರ್ಧಾರಕ್ಕೆ ಜನ ಬಲವಂತದ ವಿಧೇಯತೆಯನ್ನು ತೋರಬೇಕಾಯಿತು.
(2) ‘‘ಈ ತಾತ್ಕಾಲಿಕ ಸಂಕಷ್ಟವನ್ನು ಮರೆಯೋಣ.....ಭವಿಷ್ಯದ ಪೀಳಿಗೆಗಳು ಘನತೆಯ ಬದುಕನ್ನು ಸಾಗಿಸುವಂತೆ ಮಾಡೋಣ’’
ಪ್ರಾಣಗಳು, ನೌಕರಿಗಳು, ಜೀವನೋಪಾಯಗಳು ಕಳೆದುಹೋಗಿರು ವುದು ತಾತ್ಕಾಲಿಕ ಸಂಕಷ್ಟವೇ? ನಾಲ್ಕು ತಿಂಗಳು ಕಳೆದರೂ ಈಗಲೂ ಎಲ್ಲಾ ಜನರಿಗೆ ಸಾಕಷ್ಟು ದುಡ್ಡು ಸಿಗುತ್ತಾ ಇಲ್ಲ. ಇನ್ನು ಭವಿಷ್ಯದ ಪೀಳಿಗೆ ಎನ್ನುವುದು ಬಹುದೂರದ ಮಾತಾಯ್ತು. ಪ್ರಸಕ್ತ ಪೀಳಿಗೆಗೆ ಘನತೆಯ ಬಾಳ್ವೆ ಬೇಡವೇ?
(3) ‘‘ಈ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯ ಹಬ್ಬಕ್ಕೆ ಸೇರಿಕೊಳ್ಳೋಣ.’’
100ಕ್ಕೂ ಅಧಿಕ ಜನ ಸಾವನ್ನಪ್ಪಿರುವುದು ಯಾವ ಹಬ್ಬ? ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಎನ್ನುವುದು ಎರಡೂ ಕಡೆಗಳಿಗೆ ಅನ್ವಯಿಸುವ ಮೌಲ್ಯಗಳಾಗಿವೆ. ಆದರೆ ಆಳುವವರಲ್ಲಿ, ಉಳ್ಳವರಲ್ಲಿ ಅವೆರಡರ ಗೈರುಹಾಜರಿ ಎದ್ದುಕಾಣುತ್ತಿದೆ.
(4) ‘‘ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡೋಣ.’’
ಅಮಾನ್ಯಗೊಳಿಸಿದ ದುಡ್ಡಿನ ಶೇ. 97ರಷ್ಟು ಅಥವಾ ಅದಕ್ಕೂ ಜಾಸ್ತಿ ಮೊತ್ತ ಮರಳಿಬಂದಿದೆ. ಹಾಗಾದರೆ ಕಪ್ಪುಹಣ ಎಲ್ಲೋಯ್ತು? ಇನ್ನು ಭ್ರಷ್ಟಾಚಾರದ ಭೂತವೂ ಇಲ್ಲೇ ಇದೆ, ಅದೆಲ್ಲೂ ಓಡಿಹೋಗಿಲ್ಲ. ಐಟಿ ದಾಳಿಗಳು ಯಾರನ್ನು ಗುರಿಯಾ ಗಿಸಿವೆ ಎಂಬುದನ್ನು ಗಮನಿಸಿದರೆ ಈ ಹೋರಾಟ ಬಿಜೆಪಿಯೇತರ ಪಕ್ಷಗಳ ವಿರುದ್ಧವಿರುವಂತೆ ತೋರುತ್ತಿಲ್ಲವೇ?
(5) ‘‘ರಾಷ್ಟ್ರದ ಸಂಪತ್ತು ಬಡವರ ಫಾಯಿದೆಗಾಗಿ ಬಳಕೆಯಾಗುವುದನ್ನು ಖಚಿತಪಡಿಸೋಣ.’’
ಸಾವಿರಾರು ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಮುಚ್ಚಿಸಿ ಕಾರ್ಮಿಕರನ್ನು ಬೀದಿಗೆ ಬೀಳಿಸುವುದು ಫಾಯಿದೆಯೇ? ರೈತರು ತಮ್ಮ ಉತ್ಪನ್ನಗಳನ್ನು ಅತಿ ಅಗ್ಗ ಬೆಲೆಗೆ ಮಾರುವಂತೆ ಮಾಡಿ ಅವರ ಪ್ರಾಣ ಹಿಂಡುತ್ತಿರುವುದು ಫಾಯಿದೆಯೇ? ಕಾರ್ಪೊರೇಟು ಕುಳಗಳಿಗೆ ನೀಡುವ ನಾನಾ ವಿನಾಯಿತಿ, ರಿಯಾಯಿತಿಗಳನ್ನು ನಿಲ್ಲಿಸಿ ಸಾಲ ಮರುಪಾವತಿಯನ್ನು ಖಚಿತಪಡಿಸಿದಾಗ, ಬಡವರ ದಮನಿತರ ಕಲ್ಯಾಣ ಯೋಜನೆಗಳಲ್ಲಿ ಕಡಿತ ಮಾಡಿದಾಗ ರಾಷ್ಟ್ರದ ಸಂಪತ್ತು ಬಡವರ ಫಾಯಿದೆಗಾಗಿ ಬಳಕೆಯಾಗುವ ದಿಕ್ಕಿನಲ್ಲಿದೆ ಎನ್ನಬಹುದು.
(6) ‘‘ನನಗೆ ಭಾರತದ 125 ಕೋಟಿ ಜನರಲ್ಲಿ ನಂಬಿಕೆ ಇದೆ. ದೇಶ ಯಶಸ್ವಿಯಾಗುವ ಬಗ್ಗೆ ವಿಶ್ವಾಸ ಇದೆ.’’
ಸಿನೆಮಾ ಹೀರೋಗಳನ್ನು ದೈವತ್ವಕ್ಕೇರಿಸುವುದು ಭಾರತೀಯರ ದೌರ್ಬಲ್ಯ ಎನ್ನುವುದನ್ನು ಅರಿತ ಇಂಥಾ ಕೆಲವು ಮಹಾಚತುರ ರಾಜಕಾರಣಿಗಳು ಅದೇ ಹೀರೋ ಶೈಲಿಯಲ್ಲಿ ಡಯಲಾಗ್ ಹೊಡೆಯುವಾಗ ಜನ ಕಣ್ಣುಬಾಯಿ ಬಿಟ್ಟು ಕೇಳುತ್ತಾ ಅವರ ಹೇಳಿಕೆಗಳೆಲ್ಲ ಸತ್ಯವೆಂದು ನಂಬುತ್ತಿರುವುದನ್ನು ನಂಬಲಾಗುತ್ತಿಲ್ಲ. ನಟಸಾರ್ವಭೌಮ ಹೇಳುವ ಹಾಗೆ ದೇಶ ಯಶಸ್ವಿಯಾಗಲಿದೆ, ಆದರೆ ಯಾವುದರಲ್ಲಿ? ಆರ್ಥಿಕ ಹಿಂಜರಿಕೆಯಲ್ಲಿ. ಹಣದುಬ್ಬರದಲ್ಲಿ. ಬೆಲೆ ಏರಿಕೆಯಲ್ಲಿ. ಭಾರತವನ್ನು ಧರ್ಮಾಡಳಿತ ರಾಷ್ಟ್ರವಾಗಿ ಪರಿವರ್ತಿಸುವುದರಲ್ಲಿ.