ಉತ್ತರ ಪ್ರದೇಶದ ಮುಖ್ಯ ಮಂತ್ರಿ ಹುದ್ದೆಗೆ ಮನೋಜ್ ಸಿನ್ಹಾ ಆಯ್ಕೆ ಸಾಧ್ಯತೆ
ಹೊಸದಿಲ್ಲಿ, ಮಾ.17: ಉತ್ತರ ಪ್ರದೇಶದ ಮುಖ್ಯ ಮಂತ್ರಿ ಹುದ್ದೆಗೆ ಕೇಂದ್ರ ಸಂವಹನ ಹಾಗೂ ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹಾ ಆಯ್ಕೆಯಾಗುವ ಸಾಧ್ಯತೆ ಕಂಡು ಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶ ಮುಖ್ಯ ಮಂತ್ರಿ ಹುದ್ದೆಗೆ ಮನೋಜ್ ಸಿನ್ಹಾ ರ ಹೆಸರನ್ನು ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಲಕ್ನೋದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಬಿಜೆಪಿ ಶಾಸಕರು ಈ ಬಗ್ಗೆ ಚರ್ಚಿಸಿ ಉತ್ತರ ಪ್ರದೇಶ ಮುಖ್ಯ ಮಂತ್ರಿ ಹುದ್ದೆಗೆ ಸಿನ್ಹಾ ಹೆಸರನ್ನು ಅಂತಿಮಗೊಳಿಸಲಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಘಾಝಿಪುರ್ ಕ್ಷೇತ್ರದಿಂದ 1996, 1999 ಮತ್ತು 2014ರಲ್ಲಿ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಮನೋಜ್ ಸಿನ್ಹಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಂವಹನ ಖಾತೆ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಂಡುಬಂದಾಗಲೇ ಮುಖ್ಯ ಮಂತ್ರಿ ಹುದ್ದೆಗೆ ಸಿನ್ಹಾ ಅವರ ಹೆಸರು ಕೇಳಿ ಬಂದಿತ್ತು.