‘ಜೂನಿಯರ್ ನೊಬೆಲ್ ಪ್ರಶಸ್ತಿ’ ಪ್ರದಾನ :ಭಾರತೀಯ ಅಮೆರಿಕನ್ ಬಾಲಕಿ ಪ್ರಥಮ
ವಾಶಿಂಗ್ಟನ್, ಮಾ. 17: ಪ್ರತಿಷ್ಠಿತ ‘ರೀಜನರೇಶನ್ ಸಯನ್ಸ್ ಟ್ಯಾಲೆಂಟ್ ಸರ್ಚ್’ ಸ್ಪರ್ಧೆಯಲ್ಲಿ, ಭಾರತೀಯ ಅಮೆರಿಕನ್ ಬಾಲಕಿ ಇಂದ್ರಾಣಿ ದಾಸ್ ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ.
ಮೆದುಳಿನ ಗಾಯಗಳು ಮತ್ತು ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದ ಅವರ ಸಂಶೋಧನೆಗೆ ಈ ಪುರಸ್ಕಾರ ಲಭಿಸಿದೆ.ಪ್ರಶಸ್ತಿಯು 2.5 ಲಕ್ಷ ಡಾಲರ್ (ಸುಮಾರು 1.63 ಕೋಟಿ ರೂಪಾಯಿ) ನಗದು ಬಹುಮಾನ ಹೊಂದಿದೆ.
ಇನ್ನೋರ್ವ ಭಾರತೀಯ ಅಮೆರಿಕನ್ ಅರ್ಜುನ್ ರಮಣಿ ತೃತೀಯ ಪ್ರಶಸ್ತಿ ಗಳಿಸಿದ್ದಾರೆ. ಪ್ರಶಸ್ತಿಯು 1.5 ಲಕ್ಷ ಡಾಲರ್ (ಸುಮಾರು 98 ಲಕ್ಷ ರೂಪಾಯಿ) ನಗದು ಬಹುಮಾನ ಹೊಂದಿದೆ.
ಮ್ಯಾತೆಮೆಟಿಕಲ್ ಫೀಲ್ಡ್ ಆಫ್ ಗ್ರಾಫ್ ತಿಯರಿ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಆಧಾರಿತ ನೆಟ್ವರ್ಕ್ಗಳ ಕುರಿತ ಅವರ ಸಂಶೋಧನೆಗೆ ಪ್ರಶಸ್ತಿ ಲಭಿಸಿದೆ.
‘ಜೂನಿಯರ್ ನೊಬೆಲ್ ಪ್ರಶಸ್ತಿ’ ಎಂದೇ ಕರೆಯಲ್ಪಡುವ ಪ್ರಶಸ್ತಿಯನ್ನು ಮೂಲತಃ 1942ರಲ್ಲಿ ವೆಸ್ಟಿಂಗ್ಹೌಸ್ ಸ್ಥಾಪಿಸಿತ್ತು. ಬಳಿಕ 1998ರಲ್ಲಿ ಪ್ರಶಸ್ತಿಯನ್ನು ಇಂಟೆಲ್ ವಹಿಸಿಕೊಂಡಿತು. ಈ ಪ್ರಶಸ್ತಿ ಪಡೆದವರಲ್ಲಿ 12 ಮಂದಿ ಬಳಿಕ ನೊಬೆಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇನ್ನೋರ್ವ ಭಾರತೀಯ ಅಮೆರಿಕನ್ ಅರ್ಚನಾ ವರ್ಮ ಐದನೆ ಸ್ಥಾನ ಗಳಿಸಿದ್ದು, 90,000 ಡಾಲರ್ (ಸುಮಾರು 58.89 ಲಕ್ಷ ರೂಪಾಯಿ) ಬಹುಮಾನ ಗೆದ್ದಿದ್ದಾರೆ. ಸೌರಶಕ್ತಿಯನ್ನು ಉತ್ಪಾದಿಸಬಹುದಾದ ಕಿಟಿಕಿಗಳ ಅಭಿವೃದ್ಧಿಗೆ ಕಾರಣವಾಗಬಹುದಾದ ಸಂಶೋಧನೆಗಾಗಿ ಈ ಪ್ರಶಸ್ತಿ ಲಭಿಸಿದೆ.
ಜೀನೋಮ್ ಮತ್ತು ಕ್ಯಾನ್ಸರ್ ಅಧ್ಯಯನ ಮಾಡುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಿರುವುದಕ್ಕಾಗಿ ಪ್ರತೀಕ್ ನಾಯ್ಡು ಏಳನೆ ಸ್ಥಾನ ಲಭಿಸಿದೆ.ಮಲೇರಿಯ ಚಿಕಿತ್ಸೆ ಕುರಿತ ಅಧ್ಯಯನಕ್ಕಾಗಿ ವೃಂದಾ ಮದನ್ 9ನೆ ಸ್ಥಾನ ಪಡೆದಿದ್ದು, 50,000 ಡಾಲರ್ (ಸುಮಾರು 32.71 ಲಕ್ಷ ರೂಪಾಯಿ) ಬಹುಮಾನ ಪಡೆದಿದ್ದಾರೆ.
ಅಂತಿಮ ಸುತ್ತಿಗೆ ಬಂದ 40 ಸ್ಪರ್ಧಿಗಳಲ್ಲಿ ಭಾರತೀಯ ಮೂಲದ ಇತರ ಎಂಟು ವಿದ್ಯಾರ್ಥಿಗಳಿದ್ದರು. ಅವರು ತಲಾ 25,000 ಡಾಲರ್ (ಸುಮಾರು 16.36 ಲಕ್ಷ ರೂಪಾಯಿ) ಗೆದ್ದಿದ್ದಾರೆ.