ಬಾಲ ಭಾಷೆಯ ಬಾಲವ ಹಿಡಿದು
ಮಗುವಿಗೆ ಅಪರಿಚಿತವಾಗಿರುವ ವಸ್ತುವನ್ನು ತೋರಿಸಿದಾಗ, ಅವರು ಅದು ಗೊತ್ತಿಲ್ಲ ಎಂದು ಹೇಳಿ ಸುಮ್ಮನಾಗಲು ಬಿಡದೇ ಅದು ಹೇಗೆ ಕಾಣಿಸುತ್ತದೆ? ಅದರಿಂದ ಏನು ಮಾಡಬಹುದು ಅನಿಸುತ್ತದೆ? ಅದನ್ನು ಏನು ಮಾಡೋಣ? ಹೀಗೆ ಮಾತಾಡಿಸುವುದರಿಂದ ಅವರ ಶಬ್ದ ಭಂಡಾರ ಮಾತ್ರವಲ್ಲದೇ ಒಂದು ವಸ್ತುವನ್ನು ಅವರು ಹೇಗೆಲ್ಲಾ ತಿಳಿದುಕೊಳ್ಳಲು ಯತ್ನಿಸುತ್ತಾರೆ ಎಂದು ಗಮನಿಸಬಹುದು. ಬಹಳಷ್ಟು ಬಾರಿ ಅವರ ಗ್ರಹಿಕೆಯು ನಮ್ಮ ಆಲೋಚನೆಯನ್ನುಮೀರಿರುತ್ತದೆ.
ಯಾವುದೇ ಮಗುವಿನ ಜೊತೆ ಮಾತಾಡುವಾಗಲೂ ನಾವು ಮಗುವಿನ ಜೊತೆಗೆ ಏಕಾಏಕಿ ಮಾತಾಡಲು ಹೋಗಬಾರದು. ಶಿಕ್ಷಕರೇ ಆಗಲಿ, ಅತಿಥಿಗಳೇ ಆಗಲಿ ಮಕ್ಕಳ ಸಮೂಹವಲ್ಲದೇ ಒಂದು ಮಗುವಿನ ಜೊತೆಗೆ ಮಾತಾಡುವಾಗ ಕೆಲವು ವಿಷಯಗಳನ್ನು ಗಮನಿಸಬೇಕು.
ಮಗುವಿನ ಭಾಷೆಯನ್ನು ಮೊದಲು ಅರಿಯಬೇಕು. ಅದಕ್ಕೆ ಹಲವು ವಿಧಾನಗಳಿವೆ. ಮಗುವು ಇತರರ ಜೊತೆಗೆ ಮಾತಾಡುವಾಗ ಅದರ ಆಸಕ್ತಿ ಮತ್ತು ಅಭಿರುಚಿಗಳನ್ನು ತಿಳಿಯಬೇಕು. ಅಲ್ಲದೇ ಯಾವ ಬಗೆಯ ಪದ ಪ್ರಯೋಗಗಳನ್ನುಮಾಡು್ತದೆ ಎಂಬುದನ್ನು ಗಮನಿಸಬೇಕು.
ಹೇಳುವ ಮುನ್ನ ಕೇಳಿಸಿಕೊಳ್ಳಿ
ಮಗುವು ಕೆಲವೊಮ್ಮೆ ಆಟವಾಡಿಕೊಳ್ಳುವಾಗ ತನ್ನ ಪಾಡಿಗೆ ತಾನೇ ಮಾತಾಡಿಕೊಳ್ಳುತ್ತದೆ. ಆಗ ಆಡುವ ಪದಗಳಂತೂ ಆ ಮಗುವಿನ ನೇರ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಗಳಾಗಿರುತ್ತೆ. ಅವುಗಳನ್ನು ಗಮನಿಸಬೇಕು.
ಪರಿಚಯದಲ್ಲಿ ಸರಳ ಮಾತುಕತೆಗಳನ್ನು ಆಡಬೇಕು. ಉದಾಹರಣೆಗೆ, ಹಲೋ, ಏನು ನಿನ್ನ ಹೆಸರು? ಯಾವ ತರಗತಿ ಮತ್ತು ಯಾವ ಶಾಲೆ. ಅಷ್ಟೇ. ಇಷ್ಟಾದ ಮೇಲೆ ಮಗುವನ್ನು ಬಿಟ್ಟುಬಿಡಬೇಕು. ನೀರು ಬೇಕಾದರೆ ಕೇಳುವುದು, ಸೆಕೆ ಇದ್ದರೆ ಫ್ಯಾನ್ ಸ್ವಿಚ್ ಎಲ್ಲಿದೆ ಎಂದು ಕೇಳುವುದು ಇತ್ಯಾದಿಗಳನ್ನು ಕೇಳುವುದರಿಂದ ಮಕ್ಕಳಿಗೆ ಕೇಳುವವರ ಭಾಷೆಗೆ ತೆರೆದುಕೊಳ್ಳಲು, ತಿಳಿದುಕೊಳ್ಳಲು ಸಹಾಯಕವಾಗುತ್ತದೆ.
ಹಲೋ ಹೇಳಿ ಮಗುವಿಗೆ ಅದರ ಪರಿಚಯ ತಿಳಿದುಕೊಳ್ಳುವ ಮೊದಲು ಹಿರಿಯರು ತಮ್ಮ ಪರಿಚಯ ಮಾಡಿಕೊಳ್ಳಬೇಕು. ಮಗುವಿನ ತಂದೆ ತಾಯಿಯೇ ಮಾಡಿಕೊಟ್ಟಿದ್ದರೆ ಒಳಿತು. ಇಲ್ಲವೆಂದರೆ ತಾವೇ ಹೇಳಿಕೊಳ್ಳಬೇಕು. ಉದಾಹರಣೆಗೆ ಹಲೋ, ನನ್ನ ಹೆಸರು ಯೋಗೀಶ, ನಿನ್ನ ತಂದೆಯ ಸ್ನೇಹಿತ. ನಾನು ಕತೆ ಬರೆಯುವವನು. ನಾಟಕ ಮತ್ತು ಸಿನೆಮಾ ಮಾಡಿಸುವವನು. ಹೀಗೆಂದು ಪರಿಚಯ ಹೇಳಿಕೊಂಡಿದ್ದರೆ, ಮಗುವಿನ ಜೊತೆಗೆ ಇರುವಷ್ಟು ಹೊತ್ತು ಅಥವಾ ಮಗುವಿನ ಪರಿಧಿಯಲ್ಲಿ ಇರುವಾಗ ಅದಕ್ಕೆ ನಮ್ಮ ಕೆಲಸದ ಬಗ್ಗೆ ಏನಾದರೂ ಪ್ರಶ್ನೆ ಹುಟ್ಟುತ್ತದೆ. ಅದನ್ನು ನಮ್ಮ ಬಳಿ ಕೇಳುವ ಮೂಲಕ ಹತ್ತಿರವಾಗುತ್ತಾರೆ. ಒಂದು ವಿಷಯ ಮಗುವಿನ ಮನಸ್ಸಿಗೆ ಹೊಕ್ಕರೆ ಅವು ಪ್ರಶ್ನೆಗಳಾಗಿ ರೂಪುಗೊಳ್ಳುತ್ತವೆ. ಅದರಿಂದ ಎರಡು ಮುಖ್ಯವಾದ ಪ್ರಕ್ರಿಯೆ ಶುರುವಾಗುವುದು.
ಒಂದು, ಮಗುವಿನಲ್ಲಿ ಪ್ರಶ್ನೆಗಳು ಏಳುವ ಮೂಲಕ ವಿಚಾರಣೆ ಮಾಡುವ ಸಾಮರ್ಥ್ಯ ಬೆಳೆಯುತ್ತದೆ, ತಿಳಿದುಕೊಳ್ಳುವ ಹಸಿವು ಉಂಟಾಗುತ್ತದೆ. ಅಲ್ಲದೇ ಎಷ್ಟೋ ಬಾರಿ ನಾವು ಹೇಳಿದ ವೃತ್ತಿಯ ಬಗ್ಗೆ ಅವಕ್ಕಿರುವ ಹಳೆಯ ಸಂದೇಹಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಎರಡನೆಯದು, ಅವರು ನಮ್ಮ ಜೊತೆಗೆ ಸಂಪರ್ಕವನ್ನು ಏರ್ಪಡಿಸಿಕೊಳ್ಳಲು ಸೇತುವೆಗಳು ನಿರ್ಮಾಣವಾಗುತ್ತದೆ. ಹತ್ತಿರವಾಗುತ್ತಾರೆ. ಯಾವುದೇ ಕಾರಣವಿಲ್ಲದಿದ್ದರೆ ಸಮೀಪಿಸಲು ಸಾಧ್ಯವಿಲ್ಲ.
ಮಗುವು ಹತ್ತಿರವಾದ ಮೇಲೆ ಅದು ಕೇಳುವ ಪ್ರಶ್ನೆ ಅಥವಾ ಸಂದೇಹಗಳನ್ನು ಗಮನಿಸುತ್ತಾ ಗಮನಿಸುತ್ತಾ, ಕೇಳುತ್ತಾ ಉತ್ತರಿಸಲು ಯತ್ನಿಸಬೇಕು. ಅವರ ಕೇಳುವಿಕೆಯಲ್ಲಿ ಅವರ ಭಾಷೆ ಮತ್ತುತಿಳುವಳಿಕೆ ಅರಿವಾಗುತ್ತದೆ. ಅದನ್ನು ಗಮನಿಸಿಕೊಂಡು ಮಾತುಕತೆಯಲ್ಲಿ ತೊಡಗಬೇಕು.
ಒಂದು ಮುಖ್ಯವಾದ ಅಂಶವನ್ನು ಗಮನಿಸಬೇಕೆಂದರೆ ಅದು ನಾವು ಮಕ್ಕಳಿಗೆ ಹೆಚ್ಚು ಹೇಳುವುದಕ್ಕಿಂತ ಹೆಚ್ಚು ಹೆಚ್ಚು ಕೇಳಿಸಿಕೊಳ್ಳಬೇಕು. ನಂತರ ಅವರೇ ಅವರ ಪ್ರಶ್ನೆಗಳನ್ನು ನಮ್ಮೆಂದಿಗೆ ಕೇಳುತ್ತಾರೆ. ಆಗ ನಮಗೆ ಅವಕಾಶ ಸಿಕ್ಕಾಗ ಇಷ್ಟು ಹೊತ್ತು ಅವರ ಭಾಷೆಯ ಜಾಡನ್ನು ಹಿಡಿದಿರುವ ನಾವು ಅವರ ಭಾಷೆಯಲ್ಲಿ ಉತ್ತರಿಸಬೇಕು.
ಮಾತಾಡಲು ಪ್ರೇರೇಪಿಸಿ
ಮಗುವಿಗೆ ಅಪರಿಚಿತವಾಗಿರುವ ವಸ್ತುವನ್ನು ತೋರಿಸಿದಾಗ ಅವರು ಅದು ಗೊತ್ತಿಲ್ಲ ಎಂದು ಹೇಳಿ ಸುಮ್ಮನಾಗಲು ಬಿಡದೇ ಅದು ಹೇಗೆ ಕಾಣಿಸುತ್ತದೆ? ಅದರಿಂದ ಏನು ಮಾಡಬಹುದು ಅನಿಸುತ್ತದೆ? ಅದನ್ನು ಏನು ಮಾಡೋಣ? ಹೀಗೆ ಮಾತಾಡಿಸುವುದರಿಂದ ಅವರ ಶಬ್ಧ ಭಂಡಾರ ಮಾತ್ರವಲ್ಲದೇ ಒಂದು ವಸ್ತುವನ್ನು ಅವರು ಹೇಗೆಲ್ಲಾ ತಿಳಿದುಕೊಳ್ಳಲು ಯತ್ನಿಸುತ್ತಾರೆ ಎಂದು ಗಮನಿಸಬಹುದು. ಬಹಳಷ್ಟು ಬಾರಿ ಅವರ ಗ್ರಹಿಕೆಯು ನಮ್ಮ ಆಲೋಚನೆಯನ್ನು ಮೀರಿರುತ್ತದೆ.
ದಿನ ನಿತ್ಯದ ಬದುಕಿನ ಆಗುಹೋಗುಗಳನ್ನು ಗಮನಿಸಲು ಮಕ್ಕಳಿಗೆ ಪ್ರೇರೇಪಿಸಬೇಕು. ಟಿವಿ ಅಥವಾ ಮೊಬೈಲ್‌ನಲ್ಲಿ ಮುಳುಗಿರುವ ಮಕ್ಕಳಿಗೆ ಉದ್ದೇಶ ಪೂರ್ವಕವಾಗಿ ಹೊರಗೆ ಕರೆದುಕೊಂಡು ಬರಬೇಕು. ಆಗ ಮೊಬೈಲನ್ನು ಖಂಡಿತವಾಗಿ ನಾವು ವಾಟ್ಸ್ ಆ್ಯಪ್ ಮತ್ತು ಫೇಸ್‌ಬುಕ್‌ಗೆ ಉಪಯೋಗಿಸಬಾರದು. ಏಕೆಂದರೆ ಅವುಗಳಲ್ಲಿ ನಾವು ತೊಡಗಿಕೊಂಡರೆ ಮಗುವು ತನ್ನ ಬಾಲಭಾಷೆಯನ್ನು ಉಪಯೋಗಿಸುವುದಕ್ಕಾಗಲಿ ಅದನ್ನು ನಾವು ತಿಳಿದುಕೊಳ್ಳುವುದಕ್ಕಾಗಲಿ ಆಸ್ಪದವಾಗುವುದಿಲ್ಲ. ಯಾವುದೋ ಮರವನ್ನು, ಕಟ್ಟಡವನ್ನು, ಆಕಾಶದಲ್ಲಿರುವ ಮೋಡಗಳನ್ನು, ಪಾರ್ಕ್‌ನಲ್ಲಿ ಕಾಣುವ ವಿವಿಧ ಹೂಗಳ ಬಣ್ಣಗಳನ್ನು, ಎಲೆಗಳ ಆಕಾರಗಳನ್ನು, ಹಕ್ಕಿ, ಚಿಟ್ಟೆ, ನಾಯಿ, ಓಡಾಡುತ್ತಿರುವ ದೊಡ್ಡವರು, ಆಡುತ್ತಿರುವ ಮಕ್ಕಳು; ಹೀಗೆ ಹಲವು ವಿಷಯಗಳ ಕಡೆಗೆ ಗಮನ ಸೆಳೆಯುವಂತೆ ಮಾಡಬೇಕು. ಆದರೆ, ವಿವರಿಸಲು ಹೋಗಬಾರದು. ಅವರ ಮಾತಿನ ಆಧಾರದಲ್ಲಿ ನಾವು ಪ್ರತ್ಯುತ್ತರಗಳನ್ನು ನೀಡುತ್ತಾ ಹೋಗಬೇಕು.
ಕಥನ ತಂತ್ರ
ಕಥೆಯನ್ನು ಮಕ್ಕಳಿಗೆ ಹೇಳುವಾಗ ಸಣ್ಣ ಉತ್ತರ ನೀಡಲಾಗುವಂತಹ ಪುಟ್ಟ ಪ್ರಶ್ನೆಗಳನ್ನು ಕೇಳಬೇಕು. ನಂತರ ಮಗುವು ನೀಡಿರುವಂತಹ ಉತ್ತರದ ಆಧಾರವಾಗಿ ಮತ್ತೆ ಕಥೆಯನ್ನು ಮುಂದುವರಿಸಬೇಕು. ಹೀಗೆ ಕಥೆಗಳ ಮೂಲಕ ನಡೆಯುವ ಸಂಭಾಷಣೆಯಲ್ಲಿ ಹಲವಾರು ಬಗೆಗಳ ವಿಷಯವನ್ನು ಮಗುವಿಗೆ ತಿಳಿಸಲು ಸಾಧ್ಯವಾಗುವುದು ಮತ್ತು ಅವರಿಂದಲೂ ಮಗೆ ತಿಳಿಯಲು ಸಾಧ್ಯವಾಗುವುದು.
ಕಥೆಯನ್ನು ಹೇಳಿದಾಗ ಯಾವುದಾದರೂ ಮುಖ್ಯ ಪಾತ್ರದ ಚಟುವಟಿಕೆಯನ್ನು ಗುರುತಿಸುವಂತೆ ಮಾಡಬೇಕು. ನಂತರ ನೀನಾಗಿದ್ದರೆ ಏನು ಮಾಡುತ್ತಿದ್ದೆ? ಎಲ್ಲಿಗೆ ಹೋಗುತ್ತಿದ್ದೆ? ಇತ್ಯಾದಿ ಪ್ರಶ್ನೆಗಳನ್ನು ಕೇಳುವುದರಿಂದ ಅವರ ಒಲವು ನಿಲುವುಗಳು ನಮಗೆ ತಿಳಿಯುವುದಲ್ಲದೇ, ಅವರ ಆಲೋಚನಾ ಕ್ರಮವನ್ನೂ ಕೂಡ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಅವರ ಕಲ್ಪನೆ ಮತ್ತು ಪರಿಕಲ್ಪನೆಗಳು ಅವರ ಆಲೋಚನಾ ಕ್ರಮ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಸುತ್ತದೆ. ಹಾಗೆಯೇ ಅವರ ಭಾಷೆಯನ್ನು ಕೇಳುವುದರಿಂದ ಅವರಿಗೆ ನಾವು ಹೇಗೆ ಉದ್ದೇಶಿಸಬೇಕೆಂದೂ ಕೂಡ ಅರಿವಾಗುತ್ತದೆ.
ಮಕ್ಕಳಿಗೆ ದೀರ್ಘಕಾಲ ಒಂದೇ ವಿಷಯವನ್ನು ಅನುಸರಿಸಲು ಆಗುವುದಿಲ್ಲ. ಬೇಗನೆ ಮನಸ್ಸನ್ನು ಅತ್ತಿತ್ತ ಹೊರಳಿಸುತ್ತಿರುತ್ತಾರೆ ಅಥವಾ ಕಣ್ಣಿಗೆ ಯಾವುದು ಕಾಣುವುದೋ ಅಥವಾ ಕಿವಿಗೆ ಕೇಳುವುದೋ; ಅದು ನಮ್ಮ ಸಂಭಾಷಣೆಗಿಂತ ಭಿನ್ನವಾಗಿ ಧ್ವನಿಸಿತೆಂದರೆ ತಟ್ಟನೆ ಅತ್ತ ಕಡೆ ಹೊರಳುವರು. ಅದು ಬಹಳ ಸಾಮಾನ್ಯ. ಅದು ದೊಡ್ಡವರಲ್ಲಿಯೂ ಕೂಡಾ ಸಾಮಾನ್ಯವೇ. ಅಂತಹುದರಲ್ಲಿ ಬಹಳ ಹೊತ್ತು ಅವರನ್ನು ಕೂಡಿಸಿಕೊಂಡು ಉದ್ದುದ್ದ ಭಾಷಣಗಳನ್ನು ಮಾಡುವುದಾಗಲಿ, ತಿಳುವಳಿಕೆಗಳ ಸರಮಾಲೆಗಳನ್ನು ೊಡಿಸುವುದಾಗಲಿ ನಿಜಕ್ಕೂ ಅಕ್ಷಮ್ಯ.
ಮಾತಿಲ್ಲದ ಭಾಷೆ
ಬಾಲಭಾಷೆ ಎಂದರೆ ಮಕ್ಕಳಾಡುವ ಮಾತು ಮಾತ್ರವಲ್ಲದೇ ಮಕ್ಕಳೊಡನೆ ಇತರೇ ರೀತಿಗಳಲ್ಲಿಯೂ ಕೂಡ ಅವರೊಂದಿಗೆ ಸಂವಾದಿಸಲು ಸಾಧ್ಯ. ತಿಳುವಳಿಕೆಗಳನ್ನು ನೀಡುವಾಗ ಮಾತನ್ನು ಹೆಚ್ಚು ಉಪಯೋಗಿಸುವುದಕ್ಕಿಂತ ಮುಖಭಾವ ಮತ್ತು ದೇಹ ಭಾಷೆಗಳನ್ನು ಉಪಯೋಗಿಸುವುದು ಹೆಚ್ಚು ಒಳಿತು. ಅದು ಅವರಿೆ ಬೇಗನೆ ಗಮನ ಸೆಳೆಯುತ್ತದೆ.
ಉದಾಹರಣೆಗೆ ನಮ್ಮ ಮಗುವು ಬೇರೆ ಮಗುವಿನ ವಸ್ತುವನ್ನು ಕಿತ್ತುಕೊಂಡು ದೌರ್ಜನ್ಯ ಪ್ರದರ್ಶಿಸಿದಾಗ ಅಥವಾ ಹೊಡೆದಾಗ ನಮ್ಮ ಕೋಪಕ್ಕಿಂತ ಮಗುವಿನ ಮೇಲೆ ಪರಿಣಾಮವಾಗುವುದು ನಮ್ಮ ಬೇಸರ ಮತ್ತು ದುಃಖ. ಕೋಪದಿಂದ ಬೈಯುವಾಗ ಅವನು ತಾನು ಅಧೀರನಾಗುತ್ತಾನೆ, ಅಸಹಾಯಕನಾಗುತ್ತಾನೆ. ಇನ್ನು ಹೊಡೆದರಂತೂ ಆ ಮಗು ಕೂಡ ಬಲಿಪಶು ಆಗುತ್ತಾನೆ. ಆದರೆ ತನ್ನ ವರ್ತನೆಯು ದಬ್ಬಾಳಿಕೆ ಅಥವಾ ದೌರ್ಜನ್ಯ ಎಂದು ಅದರದೇ ಭಾಷೆಯಲ್ಲಿ ತಿಳಿಸುವುದಾದರೆ ಹೊಡೆಸಿಕೊಂಡವರ ಪರವಾಗಿ ನಮ್ಮ ದುಃಖ ಮತ್ತು ನೋವನ್ನು ಪ್ರದರ್ಶಿಸಿದಾಗ ಅದಕ್ಕೆ ಪರಿಣಾಮಕಾರಿಯಾಗಿರುತ್ತದೆ. ತಾನು ಒಬ್ಬರಿಗೆ ಹೊಡೆದಾಗ ಮತ್ತೊಬ್ಬರು ವ್ಯಕ್ತಪಡಿಸುವ ನೋವು, ಅದರಲ್ಲೂ ತನ್ನ ಪ್ರೀತಿಪಾತ್ರರಾದವರು ವ್ಯಕ್ತಪಡಿಸುವ ನೋವು ಅದಕ್ಕೆ ಪರರ ದುಃಖವನ್ನು ತನ್ನದಾಗಿಸಿಕೊಂಡು ನೋಡುವ ಎಂಪತಿಯನ್ನು ಕಲಿಸಿಕೊಡುತ್ತದೆ. ತಾನು ಇಷ್ಟಪಡದವರನ್ನು ಘಾಸಿಗೊಳಿಸಿದರೆ ತಾನು ಇಷ್ಟಪಡುವವರು ಘಾಸಿಗೊಳ್ಳುತ್ತಾರೆ ಎಂಬ ಶಿಕ್ಷಣ ಮಕ್ಕಳಲ್ಲಿ ಬಹಳ ಮುಖ್ಯವಾದದು. ಇದು ಅವರನ್ನು ಸೂಕ್ಷ್ಮ ಸಂವೇದನೆಗಳನ್ನು ಪಡೆಯುವುದಕ್ಕೆ ಬಹಳ ಸಹಾಯಕವಾಗುತ್ತದೆ.
ಮಗುವು ತನ್ನ ವಸ್ತುವನ್ನು ಯಾರಿಗೂ ಕೊಡಲು ಇಷ್ಟಪಡದೇ ತನಗೇ ಬೇಕೆಂದು ಹಟ ಹಿಡಿದಾಗ ಮಗುವಿಗೆ ‘‘ಕೊಡು’’ ಎಂದು ಗದರುವುದಾಗಲಿ, ಕೊಡುವಿಕೆ ನಮ್ಮ ಜೀವನದಲ್ಲಿ ಎಷ್ಟು ಮಹತ್ವದ್ದು ಎಂದು ಒಂದಷ್ಟು ನಿಮಿಷಗಳ ಕಾಲ ಭಾಷಣ ಮಾಡುವುದಾಗಲಿ ಪ್ರಯೋಜನವಿಲ್ಲ. ಅದರ ಬದಲು ನಾವು ಇತರರಿಗೆ ಕೊಡುವಾಗ ಮಕ್ಕಳ ಸಹಾಯವನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ, ನಮ್ಮ ಮೆಚ್ಚಿನ ಮತ್ತು ಚೆಂದದ ಉಡುಗೆಯನ್ನು ಇತರರಿಗೆ ಕೊಡುವಾಗ ಮಗುವಿಗೆ ಆ ಉಡುಗೆಯನ್ನು ಮಡಿಸಲು ನೆರವಾಗಲು ಕರೆಯುವುದು, ಹಾಗೆ ಕೊಡುವಾಗ ನಾವು ನಮ್ಮ ಬಳಿ ಇರುವ ಉತ್ತಮ ವಸ್ತುವನ್ನು ಕೊಡಬೇಕು, ಇಷ್ಟ ಪಟ್ಟಿದ್ದರೂ ಪರವಾಗಿಲ್ಲ, ಮತ್ತೆ ತೆಗೆದುಕೊಳ್ಳಬಹುದು. ಈಗ ಅವರಿಗೆ ಕೊಡುವ ಅಗತ್ಯವಿರುವುದರಿಂದ ಕೊಡಬೇಕು ಎಂದು ಸಹಜವಾಗಿ ಹೇಳಬೇಕು ಅಥವಾ ಅವರು ಪ್ರಶ್ನೆಗಳನ್ನು ಕೇಳಿದಾಗ ಇಂತಹ ಧ್ವನಿಪೂರ್ಣವಾದಂತಹ ಮಾತುಗಳನ್ನುಹೇಳಬೇಕು. ಆಗ ಆ ಸಂದೇಶ ಮಕ್ಕಳನ್ನು ಅಪರಾಧ ಪ್ರಜ್ಞೆಗೆ ತಳ್ಳಿ ಬೋಧನೆ ಮಾಡಿದಂತೆಯೂ ಇರುವುದಿಲ್ಲ ಮತ್ತು ನೇರವಾಗಿ ಉದ್ದೇಶಿಸಿದಂತೆ ಇರುವುದಿಲ್ಲ. ಬದಲಾಗಿ ತಾನೂ ಕೊಡುವಿಕೆಯಲ್ಲಿ ಇಂತಹ ಸಂತೋಷವನ್ನು ಪಡೆಯುವ ಅವಕಾಶವನ್ನು ಕಾಯುತ್ತಾರೆ.
ಮಕ್ಕಳು ಅವರ ವಸ್ತುಗಳನ್ನು ಎಲ್ಲೆಂದರಲ್ಲಿ ಒಗೆದು ಹೋಗುವಂತಹ ವರ್ತನೆಗಳನ್ನು ಕಂಡರೆ, ತಕ್ಷಣ ತಡೆದು ಅದನ್ನು ಹಾಗೆ ಬಿಸಾಡಬೇಡ, ಎತ್ತಿ ಇಡು ಎಂದು ಬೈದಾಗ ಆ ಕ್ಷಣಕ್ಕೆ ಅವರು ಹಾಗೆ ಎತ್ತಿಡುತ್ತಾರೆ. ಆದರೆ ನಾವು ಬೈಯುವವರು ಇಲ್ಲದಿರುವಾಗ ಆ ವರ್ತನೆ ಸಹಜವಾಗಿ ಪುನರಾವರ್ತಿತವಾಗುತ್ತದೆ. ಅದರ ಬದಲಾಗಿ ನಾವು ಆ ವಸ್ತುವನ್ನು ಎತ್ತಿಕೊಂಡು ಶುಭ್ರಗೊಳಿಸಿ ಮಗುವನ್ನು ಕರೆದು ಅದರ ಜೊತೆಯಲ್ಲಿ ಇತರ ವಸ್ತುಗಳನ್ನು ಇಡಲು ತೊಡಗಿದರೆ, ನಾವು ಮಾಡುವ ಕೆಲಸಕ್ಕೆ ಅವರ ಸಹಾಯವನ್ನು ಪಡೆಯುವುದರಿಂದ ಅವರಿಗೆ ಅಪರಾಧ ಪ್ರಜ್ಞೆಯನ್ನು ಬೆಳೆಸುವ ಬದಲು ಕೆಲಸದ ಮೇಲೆ ಒಲವನ್ನು ಬೆಳೆಸಲು ಸಾಧ್ಯ.