ಮೆರಿಟ್ ಅಥವಾ ಅರ್ಹತೆ ಬಗ್ಗೆ ಕಾನ್ಶೀರಾಮ್‌ರ ನಿಲುವುಗಳು
ಮೀಸಲಾತಿ ಈ ದೇಶವನ್ನು ಕಳ್ಳ ವ್ಯಾಪಾರಿಗಳ ದೇಶವನ್ನಾಗಿ ಮಾಡಿಟ್ಟಿದೆ ಎಂಬ ತೀಕ್ಷ್ಣ ಟೀಕೆ ವ್ಯಕ್ತವಾದಾಗ ಕಾನ್ಶೀರಾಮ್‌ರವರು ಹೇಳುತ್ತಾರೆ. ‘‘ಈ ದೇಶದ ಈಗಿನ ವಾಸ್ತವ ಏನೆಂದರೆ ನಿರ್ಧಾರ ತೆಗೆದುಕೊಳ್ಳುವ, ಯೋಜನೆ ರೂಪಿಸುವ, ನಿರ್ಣಾಯಕ ಸ್ಥಾನದಲ್ಲಿರುವ ಎಲ್ಲ ಉನ್ನತ ಹುದ್ದೆಗಳಲ್ಲಿರುವರೆಲ್ಲರೂ ಪ್ರತಿಭಾವಂತರೇ ಅಥವಾ ಅರ್ಹತೆಯುಳ್ಳವರೇ! ಆದರೆ ಜನತೆ ಕಿರಿಕಿರಿಮಾಡದೆ, ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕೈ ಬೆಚ್ಚಗೆಮಾಡದೆ ಆಡಳಿತದಲ್ಲಿ ಕಾಗದದ ಒಂದು ಸಣ್ಣ ಚೂರೂ ಸಹ ಅಲುಗಾಡುವುದಿಲ್ಲ ಅಥವಾ ಕಚೇರಿಯ ಕಿಟಕಿಯಾಚೆಗಿನ ಹುಲ್ಲಿನ ಒಂದು ಸಣ್ಣ ಎಳೆಯೂ ಅಲುಗಾಡುವುದಿಲ್ಲ!’’
ಮೆರಿಟ್ ಅಥವಾ ಅರ್ಹತೆ ಮತ್ತು ಅದರ ಮತ್ತೊಂದು ಸಮಾನಾರ್ಥಕ ಪದವಾದ ದಕ್ಷತೆ ಇವು ಮೂರು ಸಮಾನತೆಯ ತಲೆ ತಿನ್ನುವ ಪದಗಳು. ಮೆರಿಟ್ ಅಥವಾ ಅರ್ಹತೆ ಯನ್ನು ಮೀಸಲಾತಿ ಪ್ರಶ್ನೆ ಬಂದಾಗ ಸಂಬಂಧಪಟ್ಟ ಮೇಲ್ಜಾತಿ, ಮೇಲ್ವರ್ಗ ಮತ್ತು ಮೀಸಲಾತಿ ಪಡೆಯುತ್ತಿದ್ದರೂ ಅದರ ಅರಿವಿಲ್ಲದೆ ಎಸ್ಸಿ/ಎಸ್ಟಿಗಳನ್ನು ನೋಡಿ ಕರುಬುವ ಕೆಲ ಒಬಿಸಿ ಜಾತಿಗಳು ಈ ಪದಗಳನ್ನು ಬಳಸುತ್ತಾರೆ. ಒಟ್ಟಾರೆ ಮೀಸಲಾತಿ ವಿರೋಧಿಗಳು ಮೀಸಲಾತಿ ನೀಡುವ ಸರಕಾರಕ್ಕೆ ಮೆರಿಟ್ ಅಥವಾ ಅರ್ಹತೆ ಎಂಬ ಅಂಶ ಮುಂದೆ ತರುತ್ತಾರೆ. ಇವರ ಅಭಿಪ್ರಾಯ ಮೀಸಲಾತಿಯಿಂದ ಮೆರಿಟ್ ಅಥವಾ ಅರ್ಹತೆ ಅಥವಾ ಪ್ರತಿಭೆಗೆ ಧಕ್ಕೆಯಾಗುತ್ತದೆ ಎಂಬುದು. ಇನ್ನು ದಕ್ಷತೆ, ಈಚಿನ ಎಸ್ಸಿ/ಎಸ್ಟಿ ಭಡ್ತಿ ಮೀಸಲು ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿರುವಂತೆ ಎಸ್ಸಿ/ಎಸ್ಟಿಗಳಿಗೆ ಭಡ್ತಿಯಲ್ಲಿ ಮೀಸಲು ನೀಡಿದರೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ ಎಂಬುದು. ಈ ನಿಟ್ಟಿನಲ್ಲಿ ಮೀಸಲಾತಿ ವಿರೋಧಿಸಲು ವಿರೋಧಿಗಳು ಬಳಕೆ ಮಾಡುವ ಎರಡು ಅಳತೆಗೋಲುಗಳು ಈ ಮೆರಿಟ್ ಮತ್ತು ದಕ್ಷತೆಗಳಾಗಿವೆ.
ಮೆರಿಟ್ ಅಥವಾ ಅರ್ಹತೆ ಅಥವಾ ಪ್ರತಿಭೆಯ ಬಗ್ಗೆ ವೈಯಕ್ತಿಕ ನಿಲುವುಗಳನ್ನು ದಾಖಲಿಸುವುದಕ್ಕಿಂತ ಅಂಬೇಡ್ಕರರ ನಂತರ ಶೋಷಿತ ಸಮುದಾಯಗಳ ಹೋರಾಟದ ಮೇರು ನಾಯಕ ಎಂದು ಇತಿಹಾಸ ಗುರುತಿಸುವ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶೀರಾಮ್‌ರವರ ವಿಚಾರಗಳನ್ನು ಇಲ್ಲಿ ದಾಖಲಿಸುವುದು ಉತ್ತಮ ಎನಿಸುತ್ತದೆ. ಯಾಕೆಂದರೆ ಮೀಸಲಾತಿ ತಂದ ನಂತರ ಅದರ ಪರ ವಿರೋಧ ಚರ್ಚೆ ತಿಳಿಯುವ ಮುನ್ನವೇ ಅಂಬೇಡ್ಕರರು ನಿಧನರಾದರು. ಆದರೆ ಹಿಂದುಳಿದ ವರ್ಗಗಳಿಗೆ ಮಂಡಲ್ ವರದಿ ಜಾರಿಗೊಳಿಸುವ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ, ‘ಮಂಡಲ್ ವರದಿ ಜಾರಿ ಕರೋ; ನಹೀತೋ ಕುರ್ಸಿ ಖಾಲಿ ಕರೋ’ ಎಂಬ ಘೋಷಣೆ ಮೊಳಗಿಸಿದ ಕಾನ್ಶೀರಾಮ್‌ರವರಿಗೆ ಮೀಸಲಾತಿ ವಿರೋಧಿಗಳು ಎತ್ತಿದ ಈ ಅರ್ಹತೆ ಅಥವಾ ಪ್ರತಿಭೆಯ ಪ್ರಶ್ನೆ ಬಹಳವಾಗಿ ಕಾಡಿತು. ಈ ಹಿನ್ನೆಲೆಯಲ್ಲಿ ಕಾನ್ಶೀರಾಮ್ ಅದಕ್ಕೆ ಸ್ಪಷ್ಟವಾಗಿ ಉತ್ತರಿಸಿದ್ದಾರೆ. ಅದನ್ನು ದಾಖಲಿಸುವುದಾದರೆ, 1995 ಮಾರ್ಚ್ 15 ರಂದುಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಲೇಖಕರೊಬ್ಬರು ‘Quotas harmed IASso called (ಮೀಸಲಾತಿ ಐಎಎಸ್‌ಅನ್ನು ಹಾಳುಮಾಡುತ್ತದೆ) ಎಂಬ ಲೇಖನ ಬರೆದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಕಾನ್ಶೀರಾಮ್ ರವರು ಹೇಳಿದ್ದೇನೆಂದರೆ ‘‘ಈ ದೇಶ 90 ಕೋಟಿ ಜನಸಂಖ್ಯೆ ಇರುವ ಬೃಹತ್ ದೇಶ ಮತ್ತು ಈಗಲೂ ಕೂಡ ಇದರ ಸಾಕ್ಷರತೆ ಪ್ರಮಾಣ ಶೇ.35ನ್ನು ದಾಟಿಲ್ಲ. ಆದ್ದರಿಂದ ಮೆರಿಟ್ ಇರುವ ಜನ ಬರುವುದು ಅತೀ ಕಡಿಮೆ ಸಂಖ್ಯೆ ಇರುವ ಈ ಸುಶಿಕ್ಷಿತ ಜನರಿಂದಷ್ಟೆ. ಅದರಲ್ಲೂ ವಿಶೇಷತಃ ಪ್ರತಿಭೆ ಇರುವ ವಿದ್ಯಾರ್ಥಿಗಳು ಕೆಲವರನ್ನು ಪ್ರತಿಭಾವಂತರು ಎಂದು ಲೆಕ್ಕಾಚಾರ ಹಾಕಬಹುದಷ್ಟೆ. ಆದರೆ ಇದರ ಹಿಂದಿರುವ ಲಾಜಿಕ್ ಅನ್ನು ಯಾರೂ ಕೂಡ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.’’ ಲಾಜಿಕ್, ಹಾಗಿದ್ದರೆ ಕಾನ್ಶೀರಾಮ್ ರವರು ಹೇಳುವ ಆ ಲಾಜಿಕ್ ಏನು? ಅವರು ಹೇಳುತ್ತಾರೆ ‘‘ಅರ್ಹತೆ ಅಥವಾ ಪ್ರತಿಭೆ ಬಗ್ಗೆ ಮಾತನಾಡುವಾಗ ಎಲ್ಲಕ್ಕಿಂತ ಮೊದಲು ನಾವು ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಮತ್ತು ಅನುಕೂಲಗಳನ್ನು ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ನಿಜಕ್ಕೂ ಒಂದು ಪ್ರಜಾಪ್ರಭುತ್ವವಾಗಿದ್ದರೆ ಮತ್ತು ಒಂದು ಮುಕ್ತ ರಾಷ್ಟ್ರವಾಗಿದ್ದರೆ ಇವುಗಳು (ಅವಕಾಶ ಮತ್ತು ಅನುಕೂಲಗಳು) ಎಲ್ಲ ನಾಗರಿಕರಿಗೂ ದೊರಕುವಂತೆ ನೋಡಿಕೊಳ್ಳಬೇಕಾಗುತ್ತದೆ. ಆ ನಂತರವಷ್ಟೆ ಮುಕ್ತ ವಾತಾವರಣದಲ್ಲಿ ಸಮಾನತೆಯ ವಾತಾವರಣದಲ್ಲಿ ಯಾರೇ ಆಗಲೀ ನ್ಯಾಯಬದ್ಧ ಸ್ಪರ್ಧಾತ್ಮಕ ನಿಬಂಧನೆಗಳ ಮೂಲಕ ವಾಸ್ತವವಾಗಿ ಮತ್ತು ನೈಜವಾಗಿ ವ್ಯಕ್ತಿಯೊಬ್ಬನ ಒಳಗಿನ ನೈಜ ಪ್ರತಿಭೆ ಅಥವಾ ಅರ್ಹತೆಯನ್ನು ಆ ವಿದ್ಯಾರ್ಥಿಯ ಮೂಲ ಮತ್ತು ಇತರ ಅನುಮಾನಾಸ್ಪದ ಹಿನ್ನೆಲೆ ಅಥವಾ ಕಾಲ್ಪನಿಕ ಅಂಶಗಳನ್ನು ಪರಿಗಣಿಸದೆ ಗುರುತಿಸಲು ಸಾಧ್ಯ. ಆಗಷ್ಟೆ ಒಂದು ನೈಜ ಪ್ರತಿಭೆ ಹೊರಹೊಮ್ಮುತ್ತದೆ. ಆದರೆ ಭಾರತದಲ್ಲಿ ಶಿಕ್ಷಣವನ್ನು ಮೌನವಾಗಿ ಕೇಡಿತನದಿಂದ ಕೆಲವೇ ಕೆಲವು ಜಾತಿಗಳಿಗೆ, ಸಮುದಾಯಗಳಿಗೆ ಆ ಸಮುದಾಯಗಳ ಜಾತಿಗಳ ನಾಯಕರುಗಳಿಂದ ಏಕಸ್ವಾಮ್ಯವೆಂಬಂತೆ ಮೀಸಲಿರಿಸಲ್ಪಟ್ಟಿದೆ.
ಕಳೆದ 4,000 ವರ್ಷಗಳಿಂದ ಓದುವುದನ್ನು, ಬೇರೆಯವರು ಓದಿದ್ದನ್ನು ಕೇಳುವುದನ್ನು, ಇವೆಲ್ಲವನ್ನು ಅನ್ಯಾಯದ ಮಾರ್ಗದ ಮೂಲಕ, ಕಾನೂನುಬಾಹಿರವಾಗಿ, ಥರವಲ್ಲದ ಕ್ರಮಗಳ ಮೂಲಕ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿತ್ತು. ಇದನ್ನು ಉಲ್ಲಂಘಿಸಿದವರಿಗೆ ಅಂದರೆ ಓದಿದ್ದನ್ನು ಕೇಳಿಸಿಕೊಂಡವರಿಗೆ ಕಿವಿಗೆ ಕಾದ ಸೀಸ ಸುರಿಯುವುದು, ಓದಿದವರ ನಾಲಿಗೆ ಮತ್ತು ಹೆಬ್ಬೆರಳನ್ನು ಕತ್ತರಿಸುವುದು ಹೀಗೆ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಹೀಗಿರುವಾಗ ಇಂತಹ ವಾತಾವರಣದಲ್ಲಿ ವ್ಯಕ್ತಿಯೊಬ್ಬ (ಅರ್ಹತೆಗೆ ಸಂಬಂಧಿಸಿದಂತೆ ಅಥವಾ ಉದ್ಯೋಗಕ್ಕೆ ಸರಿಸಮನಾದ ನೈಜ ಅರ್ಹತೆಗೆ ಸಂಬಂಧಿಸಿದಂತೆ) ಇದ್ದಕ್ಕಿದ್ದಂತೆ ತನ್ನ ಮುಖದಲ್ಲಿ ಹೊಳಪನ್ನು ಪಡೆಯುವುದಾದರೂ ಹೇಗೆ ಸಾಧ್ಯ? ಇಂತಹ ವಾತಾವರಣದಲ್ಲಿ ಈ ದೇಶದಲ್ಲಿ ಸ್ಪಷ್ಟ ಪ್ರತಿಭೆ ಅಥವಾ ಅರ್ಹತೆ ಇರುವುದಾದರೂ ಹೇಗೆ ಸಾಧ್ಯ? ಈ ದಿಸೆಯಲ್ಲಿ ಅವಕಾಶ ವಂಚಿತ ಮತ್ತು ಬಹಿಷ್ಕೃತ ಜನರು ಮೀಸಲಾತಿ ಮೂಲಕ ಸಮಾನ ಶಿಕ್ಷಣ, ಜೀವನದಲ್ಲಿ ಮುಂದೆ ಬರಲು ಔದ್ಯೋಗಿಕ ಮತ್ತು ವೇತನದಂತಹ ಮಾನವ ಹಕ್ಕುಗಳನ್ನು ಪಡೆದರೆ ಕೆಲವರಿಗೆ ಅದನ್ನು ವಿರೋಧಿಸುವ ಹೃದಯವಾದರೂ ಹೇಗೆ ಬರುತ್ತದೆ? ಮತ್ತು ಅಂತಹ ಒಂದು ಶ್ರೇಷ್ಠ ವ್ಯವಸ್ಥೆ (ಮೀಸಲಾತಿ)ಯಲ್ಲಿ ತಪ್ಪಾದರೂ ಏನಿದೆ? ಈ ಸಂದರ್ಭದಲ್ಲಿ ನಾವು ಬಾಬಾಸಾಹೇಬ್ ಅಂಬೇಡ್ಕರ್‌ರವರ ಎಚ್ಚರಿಕೆಯ ನುಡಿಗಳನ್ನು ಗಮನಿಸಬೇಕಾಗುತ್ತದೆ. ಅವರು ಹೇಳುತ್ತಾರೆ ಚರ್ಚಾರ್ಹ ವಿಷಯವೇನೆಂದರೆ ಯಥಾಸ್ಥಿತಿಯನ್ನು ಕಾಪಾಡಲು ಉದ್ದೇಶಿಸಿರುವ ಒಬ್ಬ ಹಳೆಯ ವಿದೇಶಿ ಆಡಳಿತಶಾಹಿ(ಬ್ರಿಟಿಷರು) ಅಥವಾ ಅದೇ ಯಥಾಸ್ಥಿತಿ ಕಾಪಾಡಲು ಉದ್ದೇಶಿಸಿರುವ ಜಾತೀಯತೆಯ ಸಣ್ಣ ಮನಸ್ಥಿತಿಯ ಸ್ಥಳೀಯ ಯಜಮಾನ, ಇವರಿಬ್ಬರಲ್ಲಿ ಅಂತಹ ವ್ಯತ್ಯಾಸವೇನಿದೆ ಮತ್ತು ಇವರಿಬ್ಬರಲ್ಲಿ ಯಾರು ನಿಜವಾದ ಆಶ್ರಯದಾತನಾಗುತ್ತಾನೆ?. ಆದ್ದರಿಂದ ನ್ಯಾಯ ಮತ್ತು ನ್ಯಾಯಮಾರ್ಗದ ವರ್ತನೆ ಈ ದೇಶದಲ್ಲಿ ವ್ಯಕ್ತಿ ಉದ್ದೇಶಿತದ್ದು ಅದರಲ್ಲೂ ಜಾತಿ ಉದ್ದೇಶಿತದ್ದಾಗಿದೆ...’’ ಕಾನ್ಶೀರಾಮ್‌ರವರು ಹೇಳುತ್ತಾ ಹೋಗುತ್ತಾರೆ.
ಮುಂದುವರಿದು ಕೆಲವರಿಂದ ಮೀಸಲಾತಿ ಬಗ್ಗೆ ‘‘ಮೀಸಲಾತಿ ಈ ದೇಶವನ್ನು ಕಳ್ಳ ವ್ಯಾಪಾರಿಗಳ ದೇಶವನ್ನಾಗಿ ಮಾಡಿಟ್ಟಿದೆ ಎಂಬ ತೀಕ್ಷ್ಣ ಟೀಕೆ ವ್ಯಕ್ತವಾದಾಗ ಕಾನ್ಶೀರಾಮ್‌ರವರು ಹೇಳುತ್ತಾರೆ ಈ ದೇಶದ ಈಗಿನ ವಾಸ್ತವ ಏನೆಂದರೆ ನಿರ್ಧಾರ ತೆಗೆದುಕೊಳ್ಳುವ, ಯೋಜನೆ ರೂಪಿಸುವ, ನಿರ್ಣಾಯಕ ಸ್ಥಾನದಲ್ಲಿರುವ ಎಲ್ಲ ಉನ್ನತ ಹುದ್ದೆಗಳಲ್ಲಿರುವರೆಲ್ಲರೂ ಪ್ರತಿಭಾವಂತರೇಅಥವಾ ಅರ್ಹತೆಯುಳ್ಳವರೇ! ಆದರೆ ಜನತೆ ಕಿರಿಕಿರಿಮಾಡದೆ, ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕೈ ಬೆಚ್ಚಗೆಮಾಡದೆ ಆಡಳಿತದಲ್ಲಿ ಕಾಗದದ ಒಂದು ಸಣ್ಣ ಚೂರೂ ಸಹ ಅಲುಗಾಡುವುದಿಲ್ಲ ಅಥವಾ ಕಚೇರಿಯ ಕಿಟಕಿಯಾಚೆಗಿನ ಹುಲ್ಲಿನ ಒಂದು ಸಣ್ಣ ಎಳೆಯೂ ಅಲುಗಾಡುವುದಿಲ್ಲ! ನ್ಯಾಯ ಮತ್ತು ಸದಾಚಾರಗಳ ಜಾಗದಲ್ಲಿ ಇಂದು ಕ್ರೂರತೆ, ಭಟ್ಟಂಗಿತನ, ಉಪೇಕ್ಷೆ, ದರ್ಪ, ಸ್ವಜನಪಕ್ಷಪಾತ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಬಂದು ಕುಳಿತಿವೆ. ಇದರಿಂದ ಅರ್ಥಮಾಡಿಕೊಳ್ಳಬೇಕಾದದ್ದೇನೆಂದರೆ ವ್ಯಕ್ತಿಯೊಬ್ಬನ ಶೈಕ್ಷಣಿಕ ಅರ್ಹತೆಗೂ ಆತನ ಗುಣಕ್ಕೂ ಸಂಬಂಧವಿಲ್ಲ ಎಂಬುದನ್ನು. ಅದರಲ್ಲೂ ವ್ಯಕ್ತಿಯ ಗುಣ ಅದು ನಿಧಾನಕ್ಕೆ ಬೆಳೆಸಿಕೊಳ್ಳುವಂತಹದ್ದು, ಕೆಲ ಸಂದರ್ಭದಲ್ಲಿ ಆತನ ಹುದ್ದೆಗೆ ಸಂಚಕಾರ ತಂದುಕೊಂಡು ಕೂಡ ಆತ ಅದನ್ನು ಗಳಿಸುವ ಸಾಧ್ಯತೆ ಇದೆ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಬೇಕಾಗಿರುವುದೇ ಇದು. ಅಂದಹಾಗೆ ಮೇಲ್ಜಾತಿ ಮತ್ತು ಕೆಳಜಾತಿಯವರಿಬ್ಬರೂ ಹೀಗೆ ನಿಧಾನಕ್ಕೆ ಗಳಿಸಿಕೊಳ್ಳಬಹುದಾದಂಥ ಒಂದೇ ತೆರನಾದ ಗುಣವನ್ನು ಹೊಂದಿರುವಾಗ ತಾಂತ್ರಿಕೇತರ ಹುದ್ದೆಗಳಲ್ಲಿ ಮೀಸಲಾತಿ ನೀಡಿದರೆ ಅಂತಹ ಅನಾಹುತ ಏನಾಗುತ್ತದೆ? ತನ್ನ ಪ್ರಕ್ರಿಯೆಯಲ್ಲಿ ಅದು(ಮೀಸಲಾತಿ) ಕಡೇ ಪಕ್ಷ ಒಂದಷ್ಟಾದರೂ ಸಾಮಾಜಿಕ ನ್ಯಾಯವನ್ನು ನೀಡಲಿದೆ. ಒಟ್ಟಾರೆ ಮೀಸಲಾತಿಯ ಈ ಉಪಯೋಗ ಮತ್ತು ಉಪಯುಕ್ತತೆಯು ವರ್ಗಸಮಾಜದ ಆದರ್ಶವಾಗುತ್ತದೆ, ಹೊಂದಿಕೊಳ್ಳುತ್ತದೆ ಅಂತಿಮವಾಗಿ ಅದೇ ನಿಜವಾದ ಅರ್ಹತೆಯಾಗಲಿದೆ, ಮೆರಿಟ್ ಆಗಲಿದೆ. ”.(Views & Interviews of Kanshiram by N.Manohar Prasad, Pp.140)
ಹೀಗೆ ಮೆರಿಟ್ ವಾದಿಗಳಿಗೆ ಅಥವಾ ವ್ಯಾಧಿಗಳಿಗೆ ಕಾನ್ಶೀರಾಮ್ ರವರು ತಕ್ಕ ಉತ್ತರ ನೀಡುತ್ತಾರೆ. ಅಂತಿಮವಾಗಿ ಈ ಮೀಸಲಾತಿಯೇ ಅರ್ಹತೆಯಾಗಲಿದೆ ಅಥವಾ ಮೆರಿಟ್ ಉಳ್ಳವರನ್ನು ಸೃಷ್ಟಿಸುತ್ತದೆ ಎಂಬ ನೇರ ಸತ್ಯವನ್ನು ಹೇಳುತ್ತ ಮೀಸಲು ವಿರೋಧಿಗಳ ಬಾಯಿ ಮುಚ್ಚಿಸುತ್ತಾರೆ.