ದೇಶದಲ್ಲಿ ಒಟ್ಟು ಎಷ್ಟು ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ ಗೊತ್ತೇ ?
ವಿದ್ಯಾರ್ಥಿಗಳೇ ಎಚ್ಚರ !
ಹೊಸದಿಲ್ಲಿ,ಮಾ.20 : ರಾಜಧಾನಿ ದಿಲ್ಲಿ ನಕಲಿ ಕಾಲೇಜುಗಳ ನಗರವಾಗುತ್ತಿದೆಯೇ ? ದಿಲ್ಲಿಯಲ್ಲಿ ಇಂಜಿನಿಯರಿಂಗ್ ಮತ್ತಿತರ ತಾಂತ್ರಿಕ ಶಿಕ್ಷಣ ನೀಡುವ 66 ನಕಲಿ ಕಾಲೇಜುಗಳಿದ್ದು ದೇಶದ ಯಾವುದೇ ರಾಜ್ಯದಲ್ಲಿರುವುದಕ್ಕಿಂತ ಹೆಚ್ಚಿನ ನಕಲಿ ಕಾಲೇಜುಗಳು ರಾಜಧಾನಿಯಲ್ಲಿವೆ. ದೇಶದ ಇತರೆಡೆಗಳಲ್ಲಿ 279 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ.
ದೇಶದಲ್ಲಿರುವ ಒಟ್ಟು 23 ನಕಲಿ ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು 7 ಸಂಸ್ಥೆಗಳು ದಿಲ್ಲಿಯಲ್ಲಿವೆ, ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ ಹೇಳಿದೆ. ಕಳೆದ ತಿಂಗಳು ಯುಜಿಸಿ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಇಂತಹ ನಕಲಿ ಶಿಕ್ಷಣ ಸಂಸ್ಥೆಗಳ ಬಗೆಗಿನ ಮಾಹಿತಿಯನ್ನು ತಮ್ಮ ವೆಬ್ ಸೈಟ್ ನಲ್ಲಿ ಹಾಕಿದ್ದು ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯದಂತೆ ವಿದ್ಯಾರ್ಥಿಗಳನ್ನು ಎಚ್ಚರಿಸಿವೆ.
ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ನಕಲಿ ಸಂಸ್ಥೆಗಳಿವೆ. ಇಂತಹ ಸಂಸ್ಥೆಗಳಿಗೆ ತಾಂತ್ರಿಕ ಶಿಕ್ಷಣ ಮಂಡಳಿಯು ಈಗಾಗಲೇ ನೊಟೀಸುಗಳನ್ನೂ ಜಾರಿಗೊಳಿಸಿದೆಯಲ್ಲದೆ ವೃತ್ತ ಪತ್ರಿಕೆಗಳಲ್ಲೂ ಸಾರ್ವಜನಿಕ ಸೂಚನೆ ನೀಡಿದೆ.
ಈ ನಕಲಿ ವಿಶ್ವವಿದ್ಯಾನಿಲಯಗಳ ವಿರುದ್ಧ ದಾಖಲಾಗಿರುವ ಪೊಲೀಸ್ ದೂರುಗಳನ್ನು ತನಿಖೆ ನಡೆಸುವಂತೆಯೂ ತಮ್ಮ ಸಚಿವಾಲಯ ರಾಜ್ಯ ಸರಕಾರಕ್ಕೆ ತಿಳಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಹಾಯಕ ಸಚಿವ ನಾಥ್ ಪಾಂಡೆ ಇತ್ತೀಚೆಗೆ ರಾಜ್ಯಸಭೆಗೆ ಮಾಹಿತಿ ನೀಡಿದ್ದರು.