1ರೂ. ನೋಟು ಯಾರಿಗಾಗಿ?
‘ಮಾಹಿತಿ ಹಕ್ಕು ಕಾಯ್ದೆ-2005’ರಡಿಯಲ್ಲಿ ಆರ್‌ಟಿಐ ಕಾರ್ಯಕರ್ತ ಸುಭಾಶ್ಚಂದ್ರ ಅಗರ್ವಾಲ್ ಆರ್ಥಿಕ ವ್ಯವಹಾರ ಇಲಾಖೆಯ ಮುಂದೆ ಗುಜರಾಯಿಸಿದ ಅರ್ಜಿಗೆ ಇಲಾಖೆಯು ನೀಡಿದ ಮಾಹಿತಿಯಂತೆ ‘‘ದುಬಾರಿ ಮತ್ತು ಅನಗತ್ಯವಾದ ಒಂದು ರೂಪಾಯಿ ನೋಟುಗಳನ್ನು ಎರಡು ದಶಕಗಳ ನಂತರ ಮರುಮುದ್ರಣ ಮಾಡಲು ಮಾಡಿರುವ ನಿರ್ಧಾರವು ಅದರ ಮೇಲೆ ಸಹಿಹಾಕಬೇಕೆಂಬ ಹಂಬಲವಿರುವ ವಿತ್ತ ಸಚಿವಾಲಯದಲ್ಲಿರುವ ಕೆಲವು ಅಧಿಕಾರಿಗಳ ಆಸೆಯನ್ನು ಪೂರೈಸುವ ಕಸರತ್ತು ಅಷ್ಟೇ’’ ಎಂಬುವುದು ಸ್ಪಷ್ಟವಾಗುತ್ತದೆ. ಕಸರತ್ತಿಗೆ ಸಾರ್ವಜನಿಕರ ದುಡ್ಡನ್ನು ಪೋಲು ಮಾಡುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸುವ ಅಗರ್ವಾಲ್, ‘‘ನೋಟಿನ ಮೇಲೆ ಸಹಿಹಾಕಬೇಕೆಂಬ ಅಧಿಕಾರಿಗಳ ಚಪಲವನ್ನು ಕೇವಲ ಒಂದು ರೂಪಾಯಿ ನೋಟು ಮಾತ್ರ ನೀಗಿಸಲು ಸಾಧ್ಯ. ಯಾಕೆಂದರೆ ಇತರ ಎಲ್ಲಾ ಮೌಲ್ಯದ ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಹಿಯಿರುತ್ತದೆ’’ ಎಂದು ತಿಳಿಸುತ್ತಾರೆ.
ಆರ್ಥಿಕ ವ್ಯವಹಾರಗಳ ಇಲಾಖೆ ಫೆಬ್ರವರಿ 21ರಂದು ನೀಡಿರುವ ಮಾಹಿತಿಯ ಪ್ರಕಾರ ಫೆಬ್ರವರಿಯ ಅಂತ್ಯದಲ್ಲಿ ಆಗಿನ ಆರ್ಥಿಕ ಕಾರ್ಯದರ್ಶಿ ರಾಜೀವ್ ಮೆಹರಿಶಿಯವರು ವರ್ಗಾವಣೆಗೊಳ್ಳಬೇಕಿತ್ತು ಮತ್ತು ಸೆಕ್ಯೂರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಪಿಎಂಸಿಐಎಲ್)ಗೆ ಆ ಸಮಯಕ್ಕೆ ಕೇವಲ ಐದು ಮಿಲಿಯನ್ ಒಂದು ರೂಪಾಯಿ ನೋಟುಗಳನ್ನು ಮುದ್ರಿಸಲು ಮಾತ್ರ ಸಾಧ್ಯವಾಗಿತ್ತು. ಹಾಗಾಗಿ ಉಳಿದ 145 ಮಿಲಿಯನ್ ನೋಟುಗಳಿಗೆ ವಿತ್ತ ಸಚಿವಾಲಯದ ಆಗಿನ ಅತ್ಯುನ್ನತ ಕಾರ್ಯದರ್ಶಿ ರತನ್ ಪಿ. ವಾಟಾಲ್ ಅವರ ಸಹಿಯನ್ನು ಪಡೆಯಲು ಆತುರದ ಪ್ರಯತ್ನಗಳನ್ನು ಮಾಡಲಾಯಿತು.
ಫೆಬ್ರವರಿ ತಿಂಗಳ ಕೊನೆಯಲ್ಲಿ ವಾಟಾಲ್ ನಿವೃತ್ತವಾಗಲಿದ್ದರಾದರೂ ಫೆಬ್ರವರಿ 2, 2016ರವರೆಗೂ ಅವರದ್ದೇ ಸಹಿಯಿರುವ ಒಂದು ರೂಪಾಯಿ ನೋಟುಗಳನ್ನು ಮುದ್ರಿಸಲಾಯಿತು ಎಂಬುದನ್ನೂ ಇಲಾಖೆಯ ಮಾಹಿತಿ ಬಹಿರಂಗಪಡಿಸುತ್ತದೆ’’ ಎನ್ನುತ್ತಾರೆ ಅಗರ್ವಾಲ್. ‘‘ನೋಟುಗಳನ್ನು ಕಾರ್ಯತಃ ಮುದ್ರಿಸಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ನೋಟುಗಳನ್ನು ಮುದ್ರಿಸಲು ಎಸ್‌ಪಿಎಂಸಿಐಎಲ್‌ಗೆ ನಾಲ್ಕು ತಿಂಗಳು ಬೇಕಿತ್ತು’’ ಎಂದು ಹೇಳುವ ಅಗರ್ವಾಲ್, ‘‘ಫೆಬ್ರವರಿ 16, 2016ರ ಶಾಸಕಾಂಗ ಇಲಾಖೆ ಪತ್ರದ ಪ್ರಕಾರ ಅಗತ್ಯ ಸೂಚನೆಗಳನ್ನು ನಿಗದಿಪಡಿಸಿದ ಸಮಯದಲ್ಲಿ ನೀಡಲಾಗಲಿಲ್ಲ. ಯಾಕೆಂದರೆ ಕಡತದಲ್ಲಿ ಸೂಚಿಸಲಾದ ತಿದ್ದುಪಡಿಗಳನ್ನು ಪೆನ್ಸಿಲ್‌ನಲ್ಲಿ ಬರೆಯಲಾಗಿತ್ತು, ಇದು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿರುವವರೇ ಈ ಪ್ರಕ್ರಿಯೆಯು ನಿಧಾನವಾಗುವಂತೆ ಉದ್ದೇಶಪೂರ್ವಕ ಪ್ರಯತ್ನ ಮಾಡಿರುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು’’ ಎಂದು ತಿಳಿಸುತ್ತಾರೆ. 2015ರಲ್ಲಿ ಅಗರ್ವಾಲ್ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯ ಪ್ರಕಾರ, 20 ವರ್ಷಗಳ ನಂತರ ಮತ್ತೆ ಮುದ್ರಿಸಲ್ಪಟ್ಟ ಒಂದು ರೂಪಾಯಿಯ ಒಂದು ನೋಟಿನ ಮುದ್ರಣದ ಬೆಲೆಯು ರೂ. 1.14 ಆಗಿತ್ತು. ಇದು ಅದರ ಮುಖಬೆಲೆಗಿಂತಲೂ ಅಧಿಕ ಎಂಬುದನ್ನೂ ಕಂಡುಕೊಂಡಿದ್ದರು. ಎಸ್‌ಪಿಎಂಸಿಐಎಲ್‌ನಿಂದ ಅವರು ಆರ್‌ಟಿಐ ಮೂಲಕ ಪಡೆದ ಮಾಹಿತಿಯು 2014-15ರ ಸಾಲಿನಲ್ಲಿ ಮುದ್ರಿಸಲ್ಪಟ್ಟ ಒಂದು ರೂಪಾಯಿ ನೋಟಿನ ಮುದ್ರಣ ಮೌಲ್ಯವಾಗಿತ್ತು. ‘‘ಪ್ರಿನ್ಸಿಪಲ್ ಆಫ್ ಕೋಸ್ಟಿಂಗ್ ಮತ್ತು ಕೋಸ್ಟಿಂಗ್ ಮೊಡ್ಯೂಲ್‌ನ ಪ್ರಕಾರ ಒಂದು ರೂಪಾಯಿ ನೋಟಿನ ಮುದ್ರಣದ ವೆಚ್ಚ ರೂ 1.14 ಆಗಿರುತ್ತದೆ’’ ಎಂದು ಅಗರ್ವಾಲ್ ಹಾಕಿದ್ದ ಅರ್ಜಿಗೆ ಪ್ರತಿಯಾಗಿ ಎಸ್‌ಪಿಎಂಸಿಐಎಲ್ ಮಾಹಿತಿ ನೀಡಿತ್ತು. 1994ರಲ್ಲಿ ಅತಿಯಾದ ಮುದ್ರಣ ವೆಚ್ಚ ಮತ್ತು ಕಡಿಮೆ ಬಾಳುವಿಕೆಯ ಕಾರಣದಿಂದಾಗಿ ಒಂದು ರೂಪಾಯಿ ನೋಟುಗಳ ಮುದ್ರಣವನ್ನು ಹೇಗೆ ಸ್ಥಗಿತಗೊಳಿಸಲಾಯಿತೋ ಹಾಗೆಯೇ ರೂ. 2 ಮತ್ತು ರೂ. 5ರ ನೋಟುಗಳ ಮುದ್ರಣವನ್ನೂ ಅದೇ ಕಾರಣಕ್ಕೆ ನಿಲ್ಲಿಸಲಾಗಿ ಅವುಗಳ ಜಾಗದಲ್ಲಿ ನಾಣ್ಯಗಳನ್ನು ಪರಿಚಯಿಸಲಾಯಿತು ಎಂಬುದರತ್ತ ಅಗರ್ವಾಲ್ ಬೊಟ್ಟು ಮಾಡುತ್ತಾರೆ. ಸೆಪ್ಟಂಬರ್ 16, 2014ರಂದು ರಾಜಸ್ಥಾನದ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಮಾರ್ಚ್ 6, 2015ರಿಂದ ಒಂದು ರೂಪಾಯಿ ನೋಟುಗಳನ್ನು ಮರುಮುದ್ರಿಸುವ ಗೆಜೆಟ್ ಅಧಿಸೂಚನೆಯನ್ನು ಜಾರಿ ಮಾಡಿತ್ತು ಎಂಬುದರತ್ತಲೂ ಬೊಟ್ಟು ಮಾಡುತ್ತಾರೆ. ಇದನ್ನು ಒಂದು ತಿರೋಗಾಮಿ ಕ್ರಮ ಎಂದು ಟೀಕಿಸಿರುವ ಅಗರ್ವಾಲ್, ಈ ಕ್ರಮವು ಭವಿಷ್ಯದಲ್ಲಿ ಐತಿಹಾಸಿಕ ಅಂಶವಾಗಿ ಉಳಿಯಬೇಕೆಂಬ ಕಾರಣಕ್ಕೆ ಈ ನೋಟುಗಳ ಮೇಲೆ ವಿತ್ತ ಸಚಿವಾಲಯದ ಅಧಿಕಾರಿಗಳ ಸಹಿಯಿರಬೇಕೆಂಬ ಕೇವಲ ಒಂದೇ ಕಾರಣಕ್ಕೆ ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಕೃಪೆ: thewire