ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್
ಕ್ರಾಂತಿಯೆಂದರೆ ರಕ್ತಪಾತದ ಸಂಘರ್ಷವೇ ಇರಬೇಕಿಲ್ಲ, ಅಲ್ಲಿ ವೈಯಕ್ತಿಕ ದ್ವೇಷಕ್ಕೆ ಯಾವುದೇ ಜಾಗವಿಲ್ಲ. ಅದು ಬಾಂಬು ಪಿಸ್ತೂಲುಗಳ ಪಂಥವಲ್ಲ, ಕ್ರಾಂತಿಯೆಂದರೆ ಪ್ರಸ್ತುತ ಅನ್ಯಾಯ ವ್ಯವಸ್ಥೆ ಬದಲಾಗಬೇಕು ಎಂದು ಕ್ರಾಂತಿಗೆ ಅರ್ಥ ಕೊಟ್ಟವರು ಭಗತ್‌ಸಿಂಗ್.
ಇವತ್ತು ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮರಾದ ದಿನ. 1931 ಮಾಚ್ 23 ರಂದು ಬ್ರಿಟಿಷರು ಈ ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದರು. ಅವರು ಬದುಕಿದ್ದು ಕೇವಲ 23 ವರ್ಷ. ಆದರೆ ಸಾಧನೆ ಮಹತ್ತರವಾದುದು. ಸ್ವಾತಂತ್ರ್ಯ ಪಡೆಯುವುದಷ್ಟೇ ಅವರ ಯೋಚನೆಯಾಗಿರಲಿಲ್ಲ. ಅಸಮಾನತೆ, ಶೋಷಣೆ, ಜಾತಿ, ಧರ್ಮ ಬಂಡವಾಳಶಾಹಿ ರಹಿತ ಸಮಸಮಾಜದ ನಿರ್ಮಾಣದ ಕನಸನ್ನು ಕಂಡಿದ್ದರು. ಮನುಷ್ಯರು ಮನುಷ್ಯರನ್ನೇ ಶೋಷಿಸುವ ಬಂಡವಾಳ ಶಾಹಿ ವ್ಯವಸ್ಥೆಯನ್ನು ಕಿತ್ತು ಹಾಕಿ ಶ್ರಮಜೀವಿ ವರ್ಗದ ಸಮಾಜವಾದಿ ವ್ಯವಸ್ಥೆಯನ್ನು ನಿರ್ಮಿಸುವುದರಿಂದ ಮಾತ್ರವೇ ಶೋಷಣೆಗೆ ಅಂತ್ಯ ಹಾಡಬಹುದು ಎಂದು ಬಲವಾಗಿ ಪ್ರತಿಪಾದಿಸಿದ್ದು, ಅದನ್ನು ನಂಬಿದ್ದರು.
1919, ಎಪ್ರಿಲ್ 13ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, 1922ರ ಚೌರಿಚೌರಾ ಘಟನೆಯಿಂದ ಹೋರಾಟಕ್ಕೆ ದುಮುಕಿದ ಭಗತ್ ಸೈಮನ್ ಕಮಿಷನ್ ವಿರೋಧಿ ಹೋರಾಟದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್ ಹತ್ಯೆ ಬಳಿಕ ಪ್ರತಿಕಾರವಾಗಿ ಬ್ರಿಟಿಷ್ ಅಧಿಕಾರಿ ಸೌಂಡರ್ಸ್‌ನ್ನು ಹತ್ಯೆ ಮಾಡಿದರು. ಬ್ರಿಟಿಷರ ಗಮನ ಸೆಳೆಯಲು 1927ರ ಎ 8ರಂದು ಬಟುಕೇಶ್ವರ ದತ್ತರೊಂದಿಗೆ ಸಂಸತ್ತಿನಲ್ಲಿ ‘‘ಇಂಕ್ವಿಲಾಬ್ ಜಿಂದಾಬಾದ್ ಸಾಮ್ರಾಜ್ಯವಾದ ಮುರ್ದಾಬಾದ್’’, ‘‘ಡೌನ್ ವಿತ್ ಇಂಪ್ರಿಲಿಸಮ್’’ ಎನ್ನುವ ಘೋಷಣೆಗಳನ್ನು ಕೂಗುತ್ತಾ ಬಾಂಬ್ ಎಸೆದಿದ್ದರು.
ಅದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೂ ಬ್ರಿಟಿಷರು ಇವರನ್ನು ಬಂಧಿಸಿದ್ದರು. ಕ್ರಾಂತಿಯೆಂದರೆ ರಕ್ತಪಾತದ ಸಂಘರ್ಷವೇ ಇರಬೇಕಿಲ್ಲ, ಅಲ್ಲಿ ವೈಯಕ್ತಿಕ ದ್ವೇಷಕ್ಕೆ ಯಾವುದೇ ಜಾಗವಿಲ್ಲ. ಅದು ಬಾಂಬು ಪಿಸ್ತೂಲುಗಳ ಪಂಥವಲ್ಲ, ಕ್ರಾಂತಿಯೆಂದರೆ ಪ್ರಸ್ತುತ ಅನ್ಯಾಯ ವ್ಯವಸ್ಥೆ ಬದಲಾಗಬೇಕು ಎಂದು ಕ್ರಾಂತಿಗೆ ಅರ್ಥ ಕೊಟ್ಟವರು ಭಗತ್‌ಸಿಂಗ್. ‘‘ನನ್ನ ಬದುಕು ಒಂದು ಉನ್ನತ ಧ್ಯೇಯಕ್ಕೆ, ದೇಶದ ಸ್ವಾತಂತ್ರ್ಯಕ್ಕೆ ಮೀಸಲು ಯಾವುದೇ ಲೌಕಿಕದ ಆಸೆಗಳೂ ನನ್ನನ್ನು ಆಮಿಷಗೊಳಿಸಲಾರವು’’ ಎಂದು ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಪತ್ರ ಬರೆದು ಮನೆ ಬಿಟ್ಟು ದೇಶಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಭಗತ್ ಸಿಂಗ್ ಬ್ರಿಟಿಷರಿಗೆ ಸಿಂಹಸ್ವಪ್ನರಾಗುವ ನಿಟ್ಟಿನಲ್ಲಿ ತಮ್ಮ ಹೋರಾಟದ ರೂಪರೇಷೆಗಳನ್ನು ಹಾಕಿಕೊಳ್ಳಲು ಮುಂದಾಗಿದ್ದರು.
ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ನೆಲೆಗಟ್ಟಿನಲ್ಲಿ ಇಂದಿಗೂ ಆದರ್ಶಪ್ರಾಯರಾದವರ ಸಾಲಿನಲ್ಲಿ ಭಗತ್‌ಸಿಂಗ್ ಕೂಡ ಒಬ್ಬರು. ಶಿಕ್ಷಣ, ವಸತಿ, ಆರೋಗ್ಯ ಎಲ್ಲರಿಗೂ ಸಿಗಬೇಕೆಂಬ ನಿಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಕ ಹೆಜ್ಜೆಗಳನ್ನು ಇಡುತ್ತಲೇ ಬೆಳೆದವರು. ಕ್ರಾಂತಿಕಾರಿ ಎಂದರೆ ಸದಾ ಕೈಯಲ್ಲಿ ಬಾಂಬು ಬಂದೂಕು ಹಿಡಿದು ಹೋರಾಟದ ಜೀವನ ಮಾಡಲಿಲ್ಲ. ಆದರೆ ವಿಚಾರ ಕ್ರಾಂತಿಕಾರಿಯುಳ್ಳವಾಗಿದ್ದವು. ತನ್ನ ಸಾವಿನ ಮೂಲಕ ದೇಶದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಲಿದೆ ಎಂದು ನಗುತ್ತಲೇ ಪ್ರಾಣಬಿಟ್ಟರು. ಗಾಂಧಿ ಭಗತ್‌ರನ್ನು ಅಪ್ರತಿಮ ದೇಶಭಕ್ತ ಎಂದಿದ್ದಾರೆ ಆದರೆ ಅವರನ್ನು ಉಳಿಸಿಕೊಳ್ಳಲು ಯಾವುದೇ ಹೋರಾಟ ಮಾಡಲಿಲ್ಲ, ಇದು ಯಾಕೆ ಎಂಬ ಪ್ರಶ್ನೆ ನಮ್ಮನ್ನು ಇನ್ನೂ ಕಾಡುತ್ತಿದೆ.
‘‘ಯಜಮಾನರ ಬದಲಾವಣೆಯಿಂದ ಸ್ವಾತಂತ್ರ್ಯ ದೊರಕುವುದಿಲ್ಲ. ಇಂಗ್ಲಿಷರು ತೊಲಗಿ ಅದೇ ಕುರ್ಚಿಯಲ್ಲಿ ಭಾರತೀಯರು ಕುಳಿತುಕೊಳ್ಳುವುದು ಸ್ವಾತಂತ್ರ್ಯ ಅಲ್ಲ. ಶೋಷಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿ ಅದರ ಜಾಗದಲ್ಲಿ ಸಮಾನತೆ ತರುವುದೇ ಸ್ವಾತಂತ್ರ್ಯ’’ ಎಂದವರು ಭಗತ್ ಸಿಂಗ್. ಆದರೆ ಅವರು ಹೇಳಿದ ಸ್ವಾತಂತ್ರ್ಯ ನಮಗೆ ಇನ್ನೂ ಸಿಕ್ಕಿಲ್ಲ. ಇಂತಹ ಸ್ವಾತಂತ್ರಕ್ಕಾಗಿ ಸಾಕಷ್ಟು ಚಳವಳಿಗಳು ದೇಶದಲ್ಲಿ ನಡೆಯುತ್ತಿವೆ. ಅವರ ತ್ಯಾಗ ಬಲಿದಾನಗಳ ಬಗ್ಗೆ ತಿಳಿದರೆ ಸ್ವಾತಂತ್ರ್ಯದ ಅರ್ಥ ತಿಳಿಯಲು ಸಾಧ್ಯ. ಜೈಲಿನಲ್ಲಿದ್ದ ಅಧಿಕಾರಿಗಳ ಅಸಮಾನತೆ ಹಾಗೂ ಅವ್ಯವಸ್ಥೆಯನ್ನು ಖಂಡಿಸಿ ಭಗತ್ ಸಿಂಗ್ ಮತ್ತು ಸಂಗಡಿಗರು 116 ದಿನಗಳ ಕಾಲ ಉಪವಾಸ ಹೋರಾಟ ಮಾಡಿದ್ದರು.
23 ದಿನ ಉಪವಾಸ ಮಾಡಿದ್ದ ಗಾಂಧಿಯವರನ್ನು ಆದರ್ಶವಾಗಿಟ್ಟುಕೊಂಡ ನಾವು ಭಗತ್‌ಸಿಂಗ್‌ರನ್ನು ಮರೆತಿದ್ದೇವೆ. ಅದನ್ನು ಇತಿಹಾಸವೂ ಒತ್ತಿ ಹೇಳುವುದಿಲ್ಲ ಇದೇ ನಮ್ಮ ದುರಂತವಾಗಿದೆ. ‘‘ವ್ಯಕ್ತಿಯನ್ನು ಕೊಲ್ಲುವುದು ಸುಲಭ, ಆದರೆ ಚಿಂತನೆಗಳನ್ನಲ್ಲ’’ ಎಂಬುದನ್ನು ಭಗತ್‌ಸಿಂಗ್ ಒತ್ತಿ ಹೇಳಿದ್ದಾರೆ. ಆ ನುಡಿಯ ಅಣಕವನ್ನು ನಾವಿಂದು ಕಾಣುತ್ತಿದ್ದೇವೆ.