ಅಡಿಗರು ಇದನ್ನು ಬಯಸಿರಲಿಲ್ಲ!
ಆಧುನಿಕ ವಿಮರ್ಶೆ ಇತರ ಸೃಜನಶೀಲ ವರ್ಗದೊಂದಿಗೆ ಪೈಪೋಟಿಗಿಳಿ ದಂತಿದೆ. ತಾನು ಜನಪ್ರಿಯನಾಗಬೇಕಾದರೆ ಯಾರ ಬಗ್ಗೆ, ಯಾವುದರ ಬಗ್ಗೆ ಬರೆಯಬೇಕು ಎಂಬುದನ್ನು ಗುಣಾಕಾರ-ಭಾಗಾಕಾರ ಹಾಕಿಯೇ ವಸ್ತುವನ್ನು, ವ್ಯಕ್ತಿಯನ್ನು ಆರಿಸಿಕೊಳ್ಳುವವರಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯಗಳು, ಅಕಾಡಮಿಗಳು ನಡೆಸುವ ಸಾಹಿತ್ಯ ಸಂಕಿರಣಗಳಲ್ಲಿ ಹೊಸ ಲೇಖಕರನ್ನು ಪರಿಚಯಿಸುವುದಕ್ಕಿಂತ ಹೆಚ್ಚಾಗಿ ಸ್ಥಾಪಿತ ಲೇಖಕರನ್ನೇ ಹೊಗಳುವ ಪರಿಪಾಠ ಬಂದಿದೆ.
1973ರಲ್ಲಿ ಗೋಪಾಲಕೃಷ್ಣ ಅಡಿಗರು ‘ಇದನ್ನು ಬಯಸಿರಲಿಲ್ಲ’ ಎಂಬ ಕವಿತೆಯನ್ನು ರಚಿಸಿದರು. ಅದೇ ಹೆಸರಿನ ಕವಿತಾ ಸಂಕಲನವನ್ನು 1975ರಲ್ಲಿ ಪ್ರಕಟಿಸಿದರು. ಈ ಕವಿತೆಯನ್ನು ಅವರು ಬರೆದ ಉದ್ದೇಶ, ಸಂದರ್ಭ ಏನೇ ಇರಲಿ, ಅಡಿಗರ ಬದುಕಿನ ಸ್ಥಾಯೀ ಭಾವವೇ ಪ್ರತಿಭಟನೆ. ಅವರೆಂದೂ ತೋರಿಕೆಯ, ಪ್ರತಿಷ್ಠೆಯ ಸ್ಥಾನಗಳಿಗಾಗಿ ಒದ್ದಾಡಿದವರಲ್ಲ. ಸುಳ್ಳು ಹೊಗಳಿಕೆಯನ್ನಂತೂ ಸಹಿಸರು. ಈ ವರ್ಷ ಅಡಿಗರ ಶತಮಾನದ ವರ್ಷ. ಬದುಕಿದ್ದರೆ ಅವರು ಮೊನ್ನೆ ಫೆಬ್ರವರಿ 18, 2017ಕ್ಕೆ ನೂರನೆ ವರ್ಷಕ್ಕೆ ಕಾಲಿಡುತ್ತಿದ್ದರು. ಅವರ ಕುರಿತಾಗಿ ಈಗ ನಮ್ಮ ಲೇಖಕರು ಪುಂಖಾನುಪುಂಖವಾಗಿ ಬರೆಯುತ್ತಿದ್ದಾರೆ. (ಸಿಟ್ಟಿಗೇಳುವುದಿಲ್ಲವಾದರೆ ‘ಕೊರೆಯುತ್ತಿದ್ದಾರೆ’ ಎಂದೂ ಹೇಳಬಹುದು!) ಇದರಲ್ಲಿ ಅಡಿಗರು ಇಷ್ಟಪಡದ ವ್ಯಕ್ತಿಪೂಜೆಯೇ ಬಹಳಷ್ಟಿದೆಯೆಂಬುದು ಅಚ್ಚರಿಯ ಸಂಗತಿಯೇನಲ್ಲ. ಅಡಿಗರು ಹಾಗಿದ್ದರು-ಹೀಗಿದ್ದರು, ಅವರು ಗುಣಗ್ರಾಹಿಗಳು- ನನ್ನ ಲೇಖನವನ್ನು ಮೆಚ್ಚಿಕೊಂಡು ನನಗೆ ಭೇಷ್ ಹೇಳಿದ್ದರು, ಎಂಬಂತಹ ಧಾಟಿಯೇ ಕಾಣುತ್ತಿವೆ.
ಇವೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ‘ಗುರಿಯಿಟ್ಟು ಬಿಟ್ಟ ಬಾಣ!’ ಅಡಿಗರ ‘ಗುರಿಯಿರದೆ ಬಿಟ್ಟ ಬಾಣ’ಕ್ಕೆ ವ್ಯತಿರಿಕ್ತವಾದದ್ದು; ವಿರೋಧಾಭಾಸದ್ದು. ಇದೇ ವರ್ಷ ಖ್ಯಾತ ಕಾದಂಬರಿಕಾರರಾದ ಎಂ.ಕೆ.ಇಂದಿರಾ ಅವರ ನೂರನೆ ವರ್ಷವೂ ಹೌದು. ಲೇಖಕಿಯರನ್ನು ಅಷ್ಟಾಗಿ ಕೊಂಡಾಡದ ನಮ್ಮ ವಿಮರ್ಶಾ ಪ್ರಪಂಚ ಲಿಂಗ ತಾರತಮ್ಯವನ್ನು ಹೋಗಲಾಡಿಸುವುದಕ್ಕಾದರೂ ಇದನ್ನು ನೆಪವಾಗಿ ಬಳಸಬಹುದಿತ್ತು. ಆದರೆ ‘ತುಂಗಭದ’್ರದಂತಹ ಒಳ್ಳೆಯ ಕೃತಿಯನ್ನು ಕೊಟ್ಟ, ’ಗೆಜ್ಜೆಪೂಜೆ’ ಮುಂತಾದ ಜನಪ್ರಿಯ ಕಾದಂಬರಿಗಳನ್ನು ಬರೆದು ಖ್ಯಾತರಾದ ಎಂ.ಕೆ. ಇಂದಿರಾ ಅವರನ್ನು-ಅರ್ಥಾತ್ ಅವರ ಕೃತಿಗಳನ್ನು -ಪರಿಚಯಮಾಡಿಕೊಳ್ಳುವುದು ಅಥವಾ ಸಾಹಿತ್ಯ ವೈಖರಿಯಲ್ಲಿ ಹೇಳುವುದಾದರೆ ’ಮರು ಓದುವುದು’ ಅಗತ್ಯ. ಇದು ಅವರಿಗೆ ಕೊಡುವ ಗೌರವ ಮಾತ್ರವಲ್ಲ, ಕನ್ನಡದಲ್ಲಿ ಲೇಖಕಿಯರ ತೂಕವನ್ನು ಅಳೆಯಲು ಒಂದು ಆರಂಭವಾಗಬಹುದು. ಹಾಗೆ ನೋಡಿದರೆ ಕನ್ನಡದಲ್ಲಿ ತ್ರಿವೇಣಿಯಂತಹ ಖ್ಯಾತ ಮತ್ತು ಉತ್ತಮ ಲೇಖಕಿಯರ ಬಗ್ಗೆಯೂ ಹೆಚ್ಚೇನೂ ವಿಮರ್ಶೆ ಬಂದಿಲ್ಲ.
ತ್ರಿವೇಣಿ ಅಂತಲ್ಲ, ಅರ್ಯಾಂಬ ಪಟ್ಟಾಭಿ, ಗೀತಾ ಕುಲಕರ್ಣಿಯವರಂತಹ ಬರಹಗಾರರೂ ಹೆಚ್ಚು ವಿಮರ್ಶೆಗೊಳಗಾಗಲಿಲ್ಲ. ಪಿಎಚ್‌ಡಿ ಪದವಿಗೆ ಬರೆದಂತಹ ಪ್ರಬಂಧಗಳಿಗೆ ವಿಮರ್ಶೆಯ ತಾಜಾ ಸ್ವರೂಪವಿರುವುದಿಲ್ಲ. ಬಹುಪಾಲು ಅವು ಆಕರಗಳನ್ನು, ಮತ್ತು ಈಗಾಗಲೇ ಸಂದುಹೋದ ದೃಷ್ಟಿಕೋನಗಳನ್ನು ಮುಂದುವರಿಸುವ ಧ್ಯಾನದಲ್ಲೇ ಇರುತ್ತವೆ. ಜೊತೆಗೆ ತನ್ನ ವ್ಯಾಪ್ತಿಗೆ ಮಾರ್ಗದರ್ಶಿಯ ಇಷ್ಟಾನಿಷ್ಟಗಳನ್ನೂ ಜೊತೆಗೆ ಒಲವನ್ನೂ ಅವಲಂಬಿಸಿರುತ್ತದೆ. ಆದ್ದರಿಂದ ಯಾವೊಬ್ಬ ವಿಮರ್ಶಕನು ಈ ಲೇಖಕಿಯರ ಕುರಿತು ಇಂತಹವರು ಮಹಾ ಪ್ರಬಂಧವನ್ನು ಸಲ್ಲಿಸಿದ್ದಾರೆ ಎಂದರೆ ಅದು ಆ ಬರಹಗಾರರನ್ನು ವಿಮರ್ಶೆಗೆ ಒಳಪಡಿಸಿ ಗೌರವಿಸಿದಂತಾಗಲಿಲ್ಲ. ಅನಂತರ ಬಂದ ವೈದೇಹಿ, ಗೀತಾ ನಾಗಭೂಷಣ, ಮುಂತಾದ ಲೇಖಕಿಯರ ಕುರಿತಾದರೂ ಕೆಲವು ಮೌಲಿಕ ಲೇಖನಗಳು ಬಂದಿವೆ; ಪ್ರಾಯಃ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಮುಂತಾದವು ಬಂದದ್ದರಿಂದಲೇ ಇವರು ಹೆಚ್ಚು ಗಮನ ಸೆಳೆದರೋ ಎಂದು ನಂಬಬಹುದಾಗಿದೆ/ ಸಂಶಯಪಡಬಹುದಾಗಿದೆ. ನಮ್ಮ ಮಹಿಳಾ ವಿಮರ್ಶಕರೂ ಮಹಿಳೆಯರ ಕುರಿತು ನ್ಯಾಯವನ್ನು ನೀಡಿಲ್ಲವೇನೋ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಇವನ್ನು ಪ್ರತ್ಯೇಕಿಸಿ ಹೇಳುವ ಅಗತ್ಯವಿಲ್ಲ. ಇತ್ತೀಚೆಗೆ ಕುಂ. ವೀರಭದ್ರಪ್ಪನವರು ಕನ್ನಡ ವಿಮರ್ಶೆಯು ಕೆಲವೇ ಲೇಖಕರನ್ನು ಕೇಂದ್ರೀಕರಿಸಿ ಸಮಕಾಲೀನ ಮುಖ್ಯ ಲೇಖಕರನ್ನು ಸೃಷ್ಟಿಸುತ್ತಿದೆಯೆಂಬಂತೆ ಆರೋಪಿಸಿದ್ದರು. ಅವರು ಹೇಳಿದ ಸಂದರ್ಭದ ವಿವರಗಳು ಲಭ್ಯವಾಗದಿರುವುದರಿಂದ ಆ ಬಗ್ಗೆ ಹೆಚ್ಚೇನೂ ಹೇಳಲಾಗದು. ಹಳೆಗನ್ನಡ, ನಡುಗನ್ನಡ ಸಾಹಿತ್ಯದ ಕುರಿತು ವಿದ್ವತ್ಪೂರ್ಣ ಲೇಖನಗಳು ಬಂದಿವೆ. ಪಂಪನಿಂದ ಆರಂಭವಾಗಿ ಮುದ್ದಣನವರೆಗೂ ಓದುಗರ ಗಮನ ಸೆಳೆಯುವಂತಹ ಲೇಖನಗಳು, ಕೃತಿಗಳು ಇವೆ. ಆದರೆ ಇದೇ ಮಾತನ್ನು ಆಧುನಿಕ ಸಾಹಿತ್ಯದ ಕುರಿತು ಹೇಳಲಾಗದು. ಆಧುನಿಕ ಕನ್ನಡ ವಿಮರ್ಶೆಯು ಅನೇಕ ಬಾರಿ ಚದುರಿಹೋದ ವ್ಯಕ್ತಿ- ವಸ್ತು-ವಿಷಯ-ವಿಚಾರಗಳನ್ನು ಒಂದುಗೂಡಿಸಲು ಇಲ್ಲವೇ ಆರಿಸಿಕೊಳ್ಳಲು ಪ್ರಯತ್ನಿಸದಂತೆ ಕಾಣಿಸುತ್ತದೆ. ಇದು ಆಧುನಿಕ ಕನ್ನಡ ಸಾಹಿತ್ಯದರ್ಶನದಲ್ಲಿ ಹೆಚ್ಚು (ಅಭಿ)ವ್ಯಕ್ತವಾಗುತ್ತದೆ. ಅನೇಕ ಬಾರಿ ವಿಮರ್ಶಕರು ‘ನಡೆ ಸ್ವರ್ಗಕ್ಕೆ’ ಎಂದು ಎತ್ತಿಹಿಡಿದರೂ ಮೇಲೇರದೆ ತ್ರಿಶಂಕುವಿನಂತೆ ಅಲ್ಲೇ ಉಳಿದವರಿದ್ದಾರೆ. ನವ್ಯದ ಪ್ರಾದುರ್ಭಾವದಲ್ಲಿ ಅಡಿಗರ ಅನಂತರದ ಅನೇಕ ಲೇಖಕರು ಈ ರೀತಿಯ ನಿರ್ಲಕ್ಷದ ಬಾಳುವೆಗೆ ತುತ್ತಾದರು. ಅಂದರೆ ಅಡಿಗರ ಹಿಂದಿನ ಮತ್ತು ಸಮಕಾಲೀನ ಅನೇಕ ನವೋದಯದ ಮತ್ತು ಪ್ರಗತಿಶೀಲ ಪಂಥದ ಲೇಖಕರು ವಿಮರ್ಶೆಗೆ ಒಳಗಾಗಲೇ ಇಲ್ಲ.
ನಿರಂಜನ, ಬಸವರಾಜ ಕಟ್ಟೀಮನಿ, ಕೃಷ್ಣಮೂರ್ತಿ ಪುರಾಣಿಕ, ತರಾಸು, ಅನಕೃ, ಭಾರತೀಸುತ, ರಾವಬಹದ್ದೂರ, ಚದುರಂಗ, ಮಿರ್ಜಿ ಅಣ್ಣಾರಾಯ, ವ್ಯಾಸರಾಯ ಬಲ್ಲಾಳ, ಚಿತ್ತಾಲರಾಗಲಿ (ಪಟ್ಟಿ ಉದ್ದ ಬೆಳೆಸುವ ಉದ್ದೇಶ ನನಗಿಲ್ಲ; ಆದ್ದರಿಂದ ಕೆಲವು ಸೇರಲೇಬೇಕಾದ ಹೆಸರುಗಳನ್ನಾದರೂ ನಾನು ಬಿಟ್ಟಿರಬಹುದು!) ತಮ್ಮ ಸಾಹಿತ್ಯದ ಬೃಹತ್ತು- ಮಹತ್ತುಗಳಿಗನುಸಾರವಾಗಿ ಬರೆಸಿಕೊಳ್ಳಲಿಲ್ಲ. ಈ ಸಮಯದಲ್ಲಿ ಅವರಿಗೆ ಭಾರೀ ಓದುಗ ಬಳಗವಿತ್ತು. ಕನ್ನಡದ ಬಹುಪಾಲು ಹಿರಿಯ-ಕಿರಿಯರು ಇಂದಿಗೂ ತಮ್ಮ ಓದಿಗೆ, ಸಾಮಾಜಿಕ-ಚಾರಿತ್ರಿಕ ಕಲಾಪ್ರಕಾರದ ಅರಿವಿಗೆ ಈ ಲೇಖಕರನ್ನೇ ಉಲ್ಲೇಖಿಸುತ್ತಾರೆ. (ಈ ಪೈಕಿ ಆಧುನಿಕತೆಗೆ ತೆರೆದುಕೊಂಡ ಶಾಂತಿನಾಥ ದೇಸಾಯಿ, ಚಿತ್ತಾಲ ಮುಂತಾದವರ ಕುರಿತು ಇತರರಿಗಿಂತ ಹೆಚ್ಚು ಲೇಖನಗಳು ಬಂದಿವೆ!)
ಯಾರಾದರೊಬ್ಬ ಲೇಖಕರನ್ನು ಉಲ್ಲೇಖಿಸಿದಾಕ್ಷಣ ಆತ ಶ್ರೇಷ್ಠ ಲೇಖಕರೆಂದು ಅರ್ಥವಲ್ಲ. ಆದರೆ ಅವರು ಸಾಹಿತ್ಯವಾಹಿನಿಯ ಒಬ್ಬ ಪ್ರಸ್ತುತರಾಗುವ, ಪ್ರಸ್ತುತರಾಗಬೇಕಾದ, ಮುಖ್ಯರಾಗುವ, ಮುಖ್ಯರಾಗಬೇಕಾದ ಬರಹಗಾರರೆನ್ನುವುದನ್ನು ನಿರಾಕರಿಸುವಂತಿಲ್ಲ. ಉದಾಹರಣೆಗೆ ತರಾಸು ಅವರ ‘ದುರ್ಗಾಸ್ತಮಾನ’ ಕಾದಂಬರಿಗೆ ಪ್ರಶಸ್ತಿ ಬಂದಿತು. ಆ ಬಗ್ಗೆ ಅನೇಕರು ಬರೆದರು. ಆದರೆ ಈ ಕೃತಿಗೆ ಬೇರಿನಂತಿದ್ದ ಚಿತ್ರದುರ್ಗದ ಇತಿಹಾಸವನ್ನು ತಿಳಿಸುವ ಮತ್ತು ಚರಿತ್ರೆಯ ತಲ್ಲಣಗಳನ್ನು ಕಲಕುವ ಅವರದೇ ಆರಂಭದ ಕೃತಿಗಳು (ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು, ವಿಜಯೋತ್ಸವ, ಹಂಸಗೀತೆ ಹೀಗೆ) ಅಷ್ಟಾಗಿ ವಿಮರ್ಶಾ ಪ್ರಸ್ತುತವಾಗಲೇ ಇಲ್ಲ. ಕನ್ನಡದಲ್ಲಿ ಎಸ್.ಎಲ್. ಭೈರಪ್ಪನವರ ಮಂದ್ರ ಕೃತಿಗೆ ಬಂದಂತಹ ವಿಮರ್ಶೆಗಳು ಅ.ನ.ಕೃಷ್ಣರಾಯರ (‘ಸಂಧ್ಯಾರಾಗ’ದಂತಹ) ಸಂಗೀತ ಮಾಧ್ಯಮ ಪ್ರಧಾನ ಕಾದಂಬರಿಗಳಿಗೆ ಬಂದಿಲ್ಲ. ಇವನ್ನೆಲ್ಲ ಹೊಗಳಲೇ ಬೇಕಿಲ್ಲ; ಆದರೆ ಇವುಗಳ ಮಹತ್ವ ಮತ್ತು ಪ್ರಸ್ತುತತೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡದಿದ್ದರೆ ಹೊಸ ಓದಿನವರು ಅವು ಕನ್ನಡ ಸಾಹಿತ್ಯದ ಭಾಗವೇ ಅಲ್ಲವೇನೋ ಎಂದು ತಿಳಿಯುವ ಸಾಧ್ಯತೆಯಿದೆ; ಮತ್ತು ಅಲಕ್ಷಿಸುವ ಅಥವಾ ಓದದೇ ದಾಟುವ ಸಾಧ್ಯತೆಗಳಿವೆ. ಇಂದಿನ ವಾತಾವರಣದಲ್ಲಂತೂ ಈ ರೀತಿಯ ಪರಿಚಯ ಬಹು ಮುಖ್ಯವಾಗಿದೆ. ಹೊಸ ತಲೆಮಾರಿನ ಮಂದಿ ಆರಿಸಿ ಓದುತ್ತಾರೆ.
ಕಾರಂತ, ಕುವೆಂಪು, ಬೇಂದ್ರೆ, ಮಾಸ್ತಿ ಇವರ ಕುರಿತು ದಿನಾ ಎಂಬಂತೆ ವಿಮರ್ಶೆ ಬರುತ್ತಲೇ ಇದೆ. ಇವರ ಆನಂತರದ ಅನಂತಮೂರ್ತಿ, ಲಂಕೇಶ, ಕಾರ್ನಾಡ, ಭೈರಪ್ಪಇವರ ಕುರಿತೂ ಲೇಖನಗಳು ಪ್ರಕಟವಾಗುತ್ತಿವೆ. ಈ ಲೇಖನಗಳ ಆಧಾರದಲ್ಲೇ ಅವರನ್ನು ಓದುವ ಆಸಕ್ತಿ ಮೂಡಬಹುದು. ಆದರೆ ಉಳಿದ ಲೇಖಕರ ಕುರಿತು ಅಂತಹ ಆಸಕ್ತಿಯನ್ನು ಯಾರು ಬೆಳೆಸಬೇಕು? ವಿಮರ್ಶಕರ ಜವಾಬ್ದಾರಿ ಈ ನಿಟ್ಟಿನಲ್ಲಿ ಬಹಳಷ್ಟಿದೆಯೆಂದು ಕಾಣುತ್ತದೆ. ಹೊಸ ಓದುಗರಲ್ಲಿ ಸಾಹಿತ್ಯದ ವಿದ್ಯಾರ್ಥಿಗಳಲ್ಲದೇ ಮಾಹಿತಿ ತಂತ್ರಜ್ಞಾನ ಮುಂತಾದ ಭಿನ್ನ ಕ್ಷೇತ್ರಗಳಲ್ಲಿರುವವರು ಬೇಕಷ್ಟಿದ್ದಾರೆ. ಅವರು ಪತ್ರಿಕೆ, ಟಿವಿ, ಅಂತರ್ಜಾಲ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲೂ ಒಳ್ಳೆಯ ಕೃತಿಗಳು ಯಾವುವು ಮತ್ತು ಒಳ್ಳೆಯ ಕೃತಿಕಾರರು ಯಾರು ಎಂಬ ಬಗ್ಗೆ ತಿಳಿಯಲು ತುಂಬ ಕಾಳಜಿ ವಹಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಎಲ್ಲ ಪ್ರಮುಖ ಲೇಖಕರುಗಳ ಕುರಿತು ಪರಿಚಯಾತ್ಮಕ ಮತ್ತು ವಿಮರ್ಶಾತ್ಮಕ ಕೈಗನ್ನಡಿಗಳು ಅವಶ್ಯವಾಗಿವೆ. ಹಿಂದೆ ಕೀರ್ತಿನಾಥ ಕುರ್ತಕೋಟಿಯವರು ಬರೆದ ‘ಯುಗಧರ್ಮ ಮತ್ತು ಸಾಹಿತ್ಯ’, ‘ಸಾಹಿತ್ಯ ಸಂಗಾತಿ’, ‘ನೂರು ಮರ ನೂರು ಸ್ವರ’ದಂತಹ ಸಮೀಕ್ಷಾಪೂರ್ಣ ಲೇಖನಗಳ ಸಂಚಯವು ಇಂದು ಬರುವುದು ಕಡಿಮೆ. ಒಂದು ವೇಳೆ ಬಂದರೂ ಅವುಗಳ ಪೈಕಿ ಒಂದೇ ಪಂಥ-ಸಿದ್ಧಾಂತ-ಒಲವಿನ ಕಡೆಗೆ ವಾಲಿದ ಕೃತಿಗಳೇ ಹೆಚ್ಚು. ಯಾವುದೇ ಸಾಹಿತ್ಯ ಮತ್ತು ಯಾವನೇ ಲೇಖಕ/ಕಿ ತನ್ನ ಕಾಲ ಇಲ್ಲವೇ ಮುಂದಿನ ಯಾವುದೊಂದು ಕಾಲದಲ್ಲಿ ಪ್ರಮುಖನಾಗುತ್ತಾನೆ; ಪ್ರಸ್ತುತನಾಗುತ್ತಾನೆ. ಒಂದೊಂದು ಕಾಲದ ರಾಜಕೀಯ, ಸಾಮಾಜಿಕ ಸಂದರ್ಭಗಳಲ್ಲಿ ಒಬ್ಬೊಬ್ಬ ಲೇಖಕನು ಆಸಕ್ತಿಪೂರ್ಣನಾಗಿ ಕಾಣುತ್ತಾನೆ. ಅವನ ಬರಹಗಳು ಆಸಕ್ತಿಪೂರ್ವಕವಾಗುತ್ತವೆ. ಇದೇ ಅಥವಾ ಇಂತಹ ಉದ್ದೇಶಕ್ಕಾದರೂ ಸಾಹಿತ್ಯದ ಜೊತೆಗೆ ಹೆಜ್ಜೆ ಹಾಕುವ ಬರಹಗಾರರು ಸಾಹಿತ್ಯದ ಒಲವು ನಿಲುವುಗಳನ್ನು ನಿರ್ಮಮವಾಗಿ ಹೇಳಬೇಕಾಗಿದೆ.
ಹಿಂದೆ ಕುವೆಂಪು, ಎಸ್.ವಿ. ರಂಗಣ್ಣ, ಮಾಸ್ತಿ, ಬೇಂದ್ರೆ ಮುಂತಾದವರು ಇತರರ ಕುರಿತು ಬರೆಯುವಾಗ ಅದರಲ್ಲಿ ತಾವು ಪ್ರತಿಫಲನಗೊಳ್ಳಬೇಕೆಂಬ ಇರಾದೆಯಿಂದ ಬರೆದರೆಂಬಂತೆ ಕಾಣುವುದಿಲ್ಲ. ಅವರು ವ್ಯಕ್ತಿಗತವಾಗಿ ತಮ್ಮ ಬರಹಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರ ಬರಹವು ಕೃತಿನಿಷ್ಠವಾಗಿದ್ದು, ಮುನ್ನುಡಿಯಂತಹ ಸಂದರ್ಭಗಳಲ್ಲಿ ಮಾತ್ರ ಕೃತಿಕಾರನ ವೈಶಿಷ್ಟ್ಯ ಮತ್ತು ಹೆಚ್ಚುಗಾರಿಕೆಯನ್ನು ಉಲ್ಲೇಖಿಸುತ್ತಿದ್ದರು. ಮಾಸ್ತಿಯವರು ಬೇಂದ್ರೆಯವರ ಕವಿತೆಗಳ ಕುರಿತು ಬರೆದರೆ ಮೊದಲಿಗೆ ಬೇಂದ್ರೆಯವರ ಶ್ರೇಷ್ಠತೆಯೇ ಕಾಣುತ್ತಿತ್ತು. ಆನಂತರ ಬರೆದವರ ಯೋಗ್ಯತೆಯೂ ಕಾಣುತ್ತಿತ್ತು. ವಿಮರ್ಶೆಯ ಒಟ್ಟಾರೆ ಆಸಕ್ತಿಯನ್ನು ಕಂಡರೆ ಕೃತಿಕಾರನ ಮೇಲೆ ವಿಮ ರ್ಶಕನೇ ಸವಾರಿ ಮಾಡುವಂತಿದೆ. ವಿಮರ್ಶೆ ಎಂದಿಗೂ ಜನಪ್ರಿಯತೆಯ ಕ್ಷೇತ್ರವಲ್ಲ. ಆತ ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ ಇವರೊಂದಿಗೆ ಜನಪ್ರಿಯತೆಯಲ್ಲಾಗಲಿ, ಶ್ರೇಷ್ಠತೆಯಲ್ಲಾಗಲಿ ಹೋಲಿಸಿಕೊಳ್ಳಲಾಗದು. ಮಾತ್ರವಲ್ಲ, ವಿಮರ್ಶೆಯನ್ನು ಆರಿಸಿಕೊಳ್ಳುವವನು ತಾನು ಸದಾ ಪೋಷಕ ಪಾತ್ರವೆಂಬುದನ್ನು ಅರಿತಿರಬೇಕು. ‘ನಾನೇರುವೆತ್ತರಕೆ ನೀನೇರಬಲ್ಲೆಯಾ?’ ಎಂದು ಕವಿ ಹೇಳಿದ್ದು ಪರೋಕ್ಷವಾಗಿ ಇಂತಹ ವಿಮರ್ಶಕರಿಗೇ ಇರಬೇಕು.
ಆಧುನಿಕ ವಿಮರ್ಶೆ ಇತರ ಸೃಜನಶೀಲ ವರ್ಗದೊಂದಿಗೆ ಪೈಪೋಟಿಗಿಳಿ ದಂತಿದೆ. ತಾನು ಜನಪ್ರಿಯನಾಗಬೇಕಾದರೆ ಯಾರ ಬಗ್ಗೆ, ಯಾವುದರ ಬಗ್ಗೆ ಬರೆಯಬೇಕು ಎಂಬುದನ್ನು ಗುಣಾಕಾರ-ಭಾಗಾಕಾರ ಹಾಕಿಯೇ ವಸ್ತುವನ್ನು, ವ್ಯಕ್ತಿಯನ್ನು ಆರಿಸಿಕೊಳ್ಳುವವರಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯಗಳು, ಅಕಾಡಮಿಗಳು, ನಡೆಸುವ ಸಾಹಿತ್ಯ ಸಂಕಿರಣಗಳಲ್ಲಿ ಹೊಸ ಲೇಖಕರನ್ನು ಪರಿಚಯಿಸುವುದಕ್ಕಿಂತ ಹೆಚ್ಚಾಗಿ ಸ್ಥಾಪಿತ ಲೇಖಕರನ್ನೇ ಹೊಗಳುವ ಪರಿಪಾಠ ಬಂದಿದೆ. ‘ಸಾಹಿತ್ಯ ದರ್ಶನ’ ಮುಂತಾದ ಕ್ಲೀಶೆಗಳು ಎಲ್ಲರ ಕುರಿತು ಪ್ರಕಟವಾಗತೊಡಗಿವೆ. ಬಹುತೇಕ ಸಂಕಿರಣಗಳು ಈಗಾಗಲೇ ಅರೆದು ಕುಡಿದ ವಿಚಾರಗಳ ಬಗ್ಗೆ- ಅಂದರೆ ಮಾಸ್ತಿ, ಬೇಂದ್ರೆ, ಕುವೆಂಪು, ಕಾರಂತ- ನಿಸರ್ಗ, ಪ್ರಕೃತಿ, ಸಾಮಾಜಿಕತೆ, ಒಳನೋಟಗಳು- ಹೀಗೆ ಮರುಕ್ರಮಣಿಕೆಗೆ ಒಪ್ಪಿಸಿಕೊಂಡಂತಹವುಗಳು. ಓದುವುದು ಮತ್ತು ಓದಿ ತನ್ನ ಒಲವನ್ನು ಅಥವಾ ಯಾಕೆ ಇಷ್ಟವಾಗಿಲ್ಲವೆನ್ನುವುದನ್ನು ವಿವರಿಸುವುದು ವಿಮರ್ಶೆಯ ತಳಹದಿ. ಅನೇಕ ವಿಮರ್ಶಕರು ಕೆಲವು ಜನಪ್ರಿಯ ಮತ್ತು ಮುಖ್ಯ ಲೇಖಕರನ್ನು ಓದುವುದೇ ಇಲ್ಲ. ಇಷ್ಟೇ ಅಲ್ಲ, ‘ಕವಿಗೆ ಕವಿ ಮುನಿವಂ’ ಎಂಬ ಮಾತು ವಿಮರ್ಶಕರಿಗೆ ಇತರರಿಗಿಂತ ಹೆಚ್ಚು ಅನ್ವಯಿಸತೊಡಗಿದೆ.
ಅಡಿಗರನ್ನು ನೆಪವಾಗಿಸಿ ವಿಮರ್ಶೆಯ ಕುರಿತು ಇಷ್ಟೊಂದು ನಂಬಿಕೆಗಳು ಬೆಳೆದವು. ಹೊಗಳಿಕೆ ಭಟ್ಟಂಗಿತನವನ್ನು ತಲುಪಿದ ಆತಂಕದೊಂದಿಗೆ ಓದುಗರು ‘ಇದನ್ನು ಬಯಸಿರಲಿಲ್ಲ’ ಎಂದು ಕನ್ನಡ ವಿಮರ್ಶೆಗೆ ಹೇಳುವ ಅಗತ್ಯವಿದೆ.