ಇವರ ಮನೆಯಲ್ಲಿವೆ ಬರೋಬ್ಬರಿ 46 ಪ್ರಾಣಿಗಳು!
ಇದೆಲ್ಲವೂ ನನ್ನ ತಂದೆಯ ಬಳುವಳಿ. ನನ್ನ ತಂದೆ ಎಲ್ಲಾದರೂ ಸುತ್ತಾಡಲು ಹೋದಾಗ ಅಥವಾ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾಗ ಬೀದಿಯಲ್ಲಿ ಯಾವುದಾದರೂ ಗಾಯಗೊಂಡು ಬಿದ್ದಿರುವ ಪ್ರಾಣಿಗಳನ್ನು ಮನೆಗೆ ತಂದು ಅಕ್ಕರೆಯಿಂದ ಆರೈಕೆ ಮಾಡುತ್ತಿದ್ದರು. ಅದನ್ನೇ ನೋಡುತ್ತಾ ಬೆಳೆದ ನನಗೆ ಅದು ಜೀವನದ ಭಾಗವೇ ಆಗಿಬಿಟ್ಟಿದೆ ಎನ್ನುತ್ತಾರೆ. ಶಾಲಿನಿ ಅಗರ್ವಾಲ್
ನೀವು ಸುಮ್ಮನೆ ಆ ಹೆಣ್ಣುಮಗಳಿಗೊಮ್ಮೆ ಕರೆ ಮಾಡಿ. ಈಗಿನ ಹತ್ತು ಹಲವು ಕಾಲರ್ ಟ್ಯೂನಿನಲ್ಲಿರುವಂತೆ ಹಕ್ಕಿಗಳ ಚಿಲಿಪಿಲಿ, ನಾಯಿಯ ಬೊಗಳುವಿಕೆ, ಬೆಕ್ಕಿನ ಮಿಯಾಂವ್ ಅಥವಾ ಇನ್ಯಾವುದೇ ಪ್ರಾಣಿಯ ವಿಶಿಷ್ಟ ಶಬ್ದ ನಿಮಗೆ ಕೇಳುತ್ತಿರಬಹುದು. ಆದರೆ ಅದು ಕಾಲರ್ ಟ್ಯೂನೇ ಅಂತ ನೀವಂದುಕೊಂಡರೆ ಅದು ನಿಮ್ಮ ತಪ್ಪಾಗುತ್ತದೆ. ಇದು ಆ ಹೆಣ್ಣುಮಗಳ ಸಹ-ವಾಸಿಗಳಾದ 46 ಜೀವಿಗಳ ಉಲಿತ. ಅಂದಹಾಗೆ, ಆಕೆಯ ಹೆಸರು ಶಾಲಿನಿ ಅಗರ್ವಾಲ್!
ಗಾಯಗೊಂಡ ಪ್ರಾಣಿಗಳ ಆರೈಕೆಯಲ್ಲಿ ತನ್ನ ಬದುಕಿನ ಸಾರ್ಥಕತೆ ಕಾಣುತ್ತಿರುವ ತಾಯಿ ಈಕೆ. ಉತ್ತರ ಪ್ರದೇಶದ ಬರೇಲಿಯಲ್ಲಿರುವ ಈಕೆಯ ಎರಡು ಬೆಡ್ ರೂಂ ಫ್ಲ್ಯಾಟ್ ಈಗ ಒಂದು ಮಿನಿ ಝೂ. ಈಕೆಯ ಮನೆಯೊಳಗೆ ಏನುಂಟು ಏನಿಲ್ಲ? ಮೂರು ತಿಂಗಳ ಫೋಲ್(ಒಂದು ಜಾತಿಯ ಕುದುರೆ), ನಾಯಿ, ಬೆಕ್ಕು ಜೊತೆಗೆ ಕೋತಿ ಎಲ್ಲವೂ ಇದೆ. ಇದೀಗ 36ರ ಹರೆಯದಲ್ಲಿದ್ದರೂ ಕಳೆದ ಇಪ್ಪತ್ತು ವರ್ಷಗಳಿಂದ ಶಾಲಿನಿ, ಬೀದಿಬದಿಯಲ್ಲಿ ಗಾಯಗೊಂಡು ಬಿದ್ದಿರುವ ಅನಾಥ ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ.
ಯಾವುದೇ ಪ್ರಾಣಿ ರಸ್ತೆ ಬದಿಯಲ್ಲಿ, ಸುತ್ತಮುತ್ತಲಿನ ಬೀದಿಗಳಲ್ಲಿ ಗಾಯಗೊಂಡು ಬಿದ್ದಿದ್ದರೆ ತಕ್ಷಣ ಶಾಲಿನಿಯವರಿಗೆ ಬುಲಾವ್! ತಕ್ಷಣ ಕಾರ್ಯಪ್ರವೃತ್ತರಾಗುವ ಅವರು ಅವುಗಳನ್ನು ಮನೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ, ಸಮೀಪದ ಪಶುಚಿಕಿತ್ಸಾಲಯಕ್ಕೆ ತೆರಳುತ್ತಾರೆ. ‘‘ಮೊದಲು ಈ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸೂಕ್ತ ಸ್ಥಳಾವಕಾಶ ಇರಲಿಲ್ಲ. ದೊಡ್ಡ ಪ್ರಾಣಿಗಳಿಗೆ ಸಮೀಪದಲ್ಲಿ ಎಲ್ಲಾದರೂ ಖಾಲಿ ಶೆಡ್ಡುಗಳ ತರ ಇದ್ದಲ್ಲಿ ಅಲ್ಲೇ ಆ ಪ್ರಾಣಿಗಳನ್ನು ಇರಿಸಿ ಅವುಗಳನ್ನು ಆಗಾಗ ನೋಡಿಕೊಂಡು ಬರುತ್ತಿದ್ದೆ. ಆದರೆ, ಕೆಲವು ಪುಟ್ಟ ಪುಟ್ಟ ಪ್ರಾಣಿಗಳನ್ನು ಬೇರೆ ಬೇರೆ ಶೆಡ್ಡುಗಳನ್ನು ಹುಡುಕುತ್ತಾ ಹೋಗಿ ಅಲ್ಲಿರಿಸಿ ಚಿಕಿತ್ಸೆ ನೀಡುವುದು ಅಸಾಧ್ಯ. ಹಾಗೆಯೇ ಒಂದೊಂದೇ ಪ್ರಾಣಿಗಳನ್ನು ಮನೆಯಲ್ಲೇ ಇರಿಸಿ, ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳಲಾರಂಭಿಸಿದೆ. ಒಂದೊಂದಾಗಿಯೇ ಇವತ್ತು ಇಷ್ಟೊಂದು ಪ್ರಾಣಿಗಳು ಸೇರಿಬಿಟ್ಟಿವೆ’’ ಎಂದು ಮುಗುಳ್ನಗುತ್ತಾರೆ.
ಗಂಡ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ 46 ಪ್ರಾಣಿಗಳನ್ನೂ ಸಲಹುತ್ತಿರುವ ಈಕೆ ಸಾಕುಪ್ರಾಣಿಗಳ ಕಾಳಜಿಗಾಗಿ ‘ಮರ್ಸಿ ಫಾರ್ ಆಲ್’ ಎಂಬ ಸರಕಾರೇತರ ಸಂಘವನ್ನೂ ಆರಂಭಿಸಿದ್ದಾರೆ. ‘‘ಪ್ರತಿಯೊಬ್ಬರ ಬದುಕೂ ಇನ್ನೊಬ್ಬರ ಏಳಿಗೆಗಾಗಿ. ನನ್ನ ಬದುಕು ಈ ಪ್ರಾಣಿಗಳ ಏಳಿಗೆಗಾಗಿ’’ ಎಂದು ಹೇಳುವಾಗ ಅವರ ಕಣ್ಣಿನಲ್ಲೇ ಸಾರ್ಥಕ ಭಾವನೆ ವ್ಯಕ್ತವಾಗುತ್ತದೆ.