‘ರೋಮಿಯೊ ನಿಗ್ರಹ ದಳ’ಕ್ಕೆ ಮಾರ್ಗದರ್ಶಿ ಸೂತ್ರ: ಉ.ಪ್ರ. ಮುಖ್ಯಮಂತ್ರಿ ಸೂಚನೆ
ಲಕ್ನೊ, ಮಾ.25: ಮಹಿಳೆಯರನ್ನು ಪೀಡಿಸುವವರ ಹೆಡೆಮುರಿ ಕಟ್ಟಲೆಂದು ಉ.ಪ್ರದೇಶ ಸರಕಾರ ರೂಪಿಸಿರುವ ‘ರೋಮಿಯೋ ನಿಗ್ರಹ ದಳ’ ಎಂಬ ಪರಿಕಲ್ಪನೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯದ ವಸ್ತುವಾಗಿ ಭಾರೀ ನಗೆಯ ಅಲೆಯುಕ್ಕಿಸಿದರೆ, ಇನ್ನೂ ಕೆಲವರಲ್ಲಿ ದಿಗ್ಭ್ರಮೆಗೆ ಕಾರಣವಾಗಿದೆ. ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಕೂಡಾ ಈ ವಿಶೇಷ ದಳದ ಪರಿಕಲ್ಪನೆ ಅಷ್ಟೊಂದು ಇಷ್ಟವಾಗಿಲ್ಲ ಎನ್ನಲಾಗುತ್ತಿದೆ.
ರೋಮಿಯೋ ನಿಗ್ರಹ ದಳಕ್ಕೆ ಸ್ಪಷ್ಟವಾದ ಮಾರ್ಗದರ್ಶಿ ಸೂತ್ರವನ್ನು ರೂಪಿಸುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಹುಡುಗ-ಹುಡುಗಿ ಜತೆಯಾಗಿ ಮಾತಾಡುತ್ತಾ ಕುಳಿತಿದ್ದರೆ ಅವರನ್ನು ತೇಜೋವಧೆ ಮಾಡುವುದು ಅಥವಾ ಪೀಡಿಸುವುದು ಸಲ್ಲದು . ಈ ವಿಷಯದಲ್ಲಿ ಪೊಲೀಸರು ಸ್ಪಷ್ಟ ನಿರ್ದೇಶನ ನೀಡಬೇಕು ಎಂದವರು ತಿಳಿಸಿದ್ದಾರೆ.
ರೋಮಿಯೋ ನಿಗ್ರಹ ದಳದ ಸ್ಥಾಪನೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿತ್ತು. ಇದೀಗ ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಜನಪ್ರಿಯವಾಗಿದೆ. ಓರ್ವ ಯುವಕನನ್ನು ಪೊಲೀಸ್ ಸಿಬ್ಬಂದಿ ಬೆನ್ನಟ್ಟಿಕೊಂಡು ಓಡುತ್ತಿರುವ ದೃಶ್ಯವಂತೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಬಿಟ್ಟಿದೆ.
ಇದೀಗ ಮುಖ್ಯಮಂತ್ರಿಯ ಸೂಚನೆಯ ಬಳಿಕ ಹೇಳಿಕೆ ನೀಡಿರುವ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಲ್ಜೀತ್ ಚೌಧರಿ, ಅಮಾಯಕ ಯುವಜೋಡಿಗಳಿಗೆ ತೊಂದರೆ ನೀಡಿದರೆ ತೀವ್ರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಪಾರ್ಕ್, ಸಿನೆಮಾ ಮಂದಿರ, ಮಾಲ್, ಕಾಫೀ ಹೌಸ್‌ಗಳಲ್ಲಿ ಸಾಮಾಜಿಕ ಮತ್ತು ಸಾಂಪ್ರದಾಯಿಕ ನಿಯಮ ಮೀರದ ಯುವಜೋಡಿ ಅಥವಾ ದಂಪತಿಯ ವಿರುದ್ದ ಯಾವುದೇ ಸಂದರ್ಭ ಕ್ರಮ ಕೈಗೊಳ್ಳಬಾರದು ಎಂದು ಅಧಿಕೃತವಾಗಿ ಪ್ರಕಟಣೆ ನೀಡಲಾಗಿದೆ.
ಕಾಲೇಜು , ಶಾಲೆಯ ಬಳಿ ಅಥವಾ ಪಾರ್ಕ್‌ಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವರಿಗೆ ಎಚ್ಚರಿಕೆ ನೀಡುವುದು ಈ ದಳದ ಸ್ಥಾಪನೆಯ ಹಿಂದಿರುವ ಉದ್ದೇಶವಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ದಿಲ್ಲಿ ಪೊಲೀಸರು ಹಮ್ಮಿಕೊಂಡಿರುವ ‘ಆಪರೇಷನ್ ಮಂಜು’ ಕಾರ್ಯಾಚರಣೆಯ ರೀತಿಯಲ್ಲೇ ‘ರೋಮಿಯೋ ನಿಗ್ರಹ ದಳ’ ಕಾರ್ಯಾಚರಿಸಲಿದೆ ಎಂದವರು ಹೇಳಿದ್ದಾರೆ. ಪಾರ್ಕ್ ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಜೋಡಿಗಳಿಗೆ ತೊಂದರೆ ನೀಡುವ ಹುಡುಗರ ಮೇಲೆ ‘ಆಪರೇಷನ್ ಮಂಜು’ ಎಂಬ ಹೆಸರಿನ ಕಾರ್ಯಾಚರಣೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ನೈತಿಕ ಪೊಲೀಸ್‌ಗಿರಿಯ ಇನ್ನೊಂದು ರೂಪ ಎಂಬ ಟೀಕೆ ಕೇಳಿ ಬಂದರೂ, ತಮ್ಮ ಕ್ರಮವನ್ನು ಪೊಲೀಸರು ಸಮರ್ಥಿಸಿಕೊಳ್ಳುತ್ತಿದ್ದಾರೆ.
‘ರೋಮಿಯೋ ನಿಗ್ರಹ ದಳ’ವನ್ನು ಸಮರ್ಥಿಸಿಕೊಂಡಿರುವ ಉ.ಪ್ರದೇಶ ರಾಜ್ಯಪಾಲ ರಾಮ ನಾಕ್, ಕಾರ್ಯಾಚರಣೆ ಆರಂಭಕ್ಕೆ ಮುನ್ನವೇ ಟೀಕಿಸುವುದು ಸರಿಯಲ್ಲ. ಹೊಸ ಸರಕಾರ ತನ್ನ ಚುನಾವಣಾ ಭರವಸೆ ಈಡೇರಿಸಲು ಅವಕಾಶ ನೀಡಬೇಕು ಎಂದಿದ್ದಾರೆ. ಆದರೆ ಇತರ ಪಕ್ಷಗಳು ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಈ ರೀತಿಯ ದಳವನ್ನು ಸ್ಥಾಪಿಸುವ ಮೂಲಕ ನೈತಿಕ ಪೊಲೀಸ್‌ಗಿರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟೀಕಿಸಿದ್ದಾರೆ. ಯುವಜನರು ಅಸಭ್ಯವಾಗಿ ವರ್ತಿಸುವುದಕ್ಕೆ ನನ್ನ ವಿರೋಧವಿದೆ. ಆದರೆ ಹುಡುಗ-ಹುಡುಗಿ ಜೊತೆಯಾಗಿ ತಿರುಗುವುದನ್ನು ತಡೆಯಲು ಅವರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಕಾಂಗ್ರೆಸ್ ಸಂಸದ ರಣಜೀತ್ ರಂಜನ್ ಪ್ರಶ್ನಿಸಿದ್ದಾರೆ.