ಕಾಲೇಜುಗಳಲ್ಲಿ "ಸಹ್ಯಾದ್ರಿ ಪರಿಸರ ಸಂಘ"
ಪರಿಸರ ಜಾಗೃತಿಗಾಗಿ ಮತ್ತೊಂದು ಹೆಜ್ಜೆ
ಮಂಗಳೂರು, ಮಾ.26: ಪಶ್ಚಿಮ ಘಟ್ಟ ರಕ್ಷಣೆಗಾಗಿ ಈಗಾಗಲೇ ವಿನೂತನ ಕಾರ್ಯಕ್ರಮ ಗಳ ಮೂಲಕ ಹೋರಾಟ ನಡೆಸುತ್ತಿರುವ ಪರಿಸರಾಸಕ್ತ ಸಮಾನ ಮನಸ್ಕರ ತಂಡ ಸಹ್ಯಾದ್ರಿ ಸಂಚಯ ಮತ್ತೊಂದು ಹೊಸ ಹೆಜ್ಜೆಗೆ ಮುಂದಾಗಿದೆ. ನೇತ್ರಾವತಿ ನದಿ ಸಂರಕ್ಷಣೆಗಾಗಿ ಎತ್ತಿನ ಹೊಳೆ ವಿರುದ್ಧ ಹೋರಾಟ, ಪಶ್ಚಿಮ ಘಟ್ಟದ ಸ್ವಚ್ಛತಾ ಅಭಿಯಾನ, ಪರಿಸರಾಸಕ್ತ ವಿದ್ಯಾರ್ಥಿಗಳಿಗೆ ಚಾರಣದ ಮೂಲಕ ಸದ್ದಿಲ್ಲದೆ ಪಶ್ಚಿಮ ಘಟ್ಟ ಸಂರಕ್ಷಣೆಯಲ್ಲಿ ತೊಡಗಿರುವ ಸಹ್ಯಾದ್ರಿ ಸಂಚಯ ಮುಂದಿನ ಶೈಕ್ಷಣಿಕ ವರ್ಷದಿಂದ ನಗರದ ಕಾಲೇಜುಗಳಲ್ಲಿ ‘ಸಹ್ಯಾದ್ರಿ ಪರಿಸರ ಸಂಘ’ಗಳ ರಚನೆಗೆ ಮುಂದಾಗಿದೆ.
ಕಾಲೇಜುಗಳಲ್ಲಿ ಸದ್ಯ ಇರುವ ಪರಿಸರ ಕ್ಲಬ್‌ಗಳು ಕೇವಲ ವನಮಹೋತ್ಸವಕ್ಕೆ ಮಾತ್ರ ಸೀಮಿತಗೊಳ್ಳುವ ಬದಲು ಪರಿಸರದ ಬಗ್ಗೆ ಅಧ್ಯಯನ, ಪರಿಸರ ತಜ್ಞರಿಂದ ಕಾರ್ಯಾಗಾರ, ಪಶ್ಚಿಮ ಘಟ್ಟದ ಚಾರಣಕ್ಕೂ ಆಸಕ್ತ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರಿಗೆ ಈ ಪರಿಸರ ಸಂಘದ ಮೂಲಕ ಅವಕಾಶ ಕಲ್ಪಿಸಲು ಸಹ್ಯಾದ್ರಿ ಸಂಚಯ ತಂಡವು ರೂಪುರೇಷೆ ತಯಾರಿಸುತ್ತಿದೆ.
‘‘ಸಹ್ಯಾದ್ರಿ ಸಂಚಯ ಪಶ್ಚಿಮ ರಕ್ಷಣೆಗಾಗಿಯೇ ಹುಟ್ಟಿಕೊಂಡ ತಂಡ. ಕಳೆದ ವರ್ಷ ತಂಡವು ಪಶ್ಚಿಮ ಘಟ್ಟ ಸ್ವಚ್ಛತಾ ಅಭಿಯಾನ ಮಾಡಿ ಪಶ್ಚಿಮ ಘಟ್ಟದ ವಿವಿಧ ಚಾರಣ ತಾಣಗಳಿಂದ ಲೋಡುಗಟ್ಟಲೆ ತ್ಯಾಜ್ಯಗಳನ್ನು ಸಂಗ್ರಹಿಸಿತ್ತು. ಈ ವರ್ಷ ಪಶ್ಚಿಮ ಘಟ್ಟ ಸುರಕ್ಷತಾ ಅಭಿಯಾನ ಕಾರ್ಯಕ್ರಮಡಿ 14 ಕಾಲೇಜುಗಳ ಪರಿಸರಾಸಕ್ತ ವಿದ್ಯಾರ್ಥಿಗಳನ್ನು ಪಶ್ಚಿಮ ಘಟ್ಟದ ವಿವಿಧ ತಾಣಗಳಿಗೆ ಚಾರಣ ಮಾಡಿಸಿ, ಗಿರಿ, ಶಿಖರ, ಮಳೆಕಾಡು, ನದಿಮೂಲ ಹಾಗೂ ವನ್ಯಜೀವಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ದಟ್ಟ ಅರಣ್ಯದಲ್ಲೇ ವಿದ್ಯಾರ್ಥಿಗಳಿಗೆ ಬೋಧನೆ, ಶೋಧನೆಯ ಜತೆಗೆ ಪ್ರಬಂಧಗಳನ್ನು ರಚಿಸಲು ಅವಕಾಶ ನೀಡುವ ಮೂಲಕ ಅವರಲ್ಲಿ ಸುಪ್ತವಾಗಿದ್ದ ಪರಿಸರದ ಆಸಕ್ತಿಯನ್ನು ಜಾಗೃತಗೊಳಿಸಲಾಗಿದೆ. ಇದೀಗ ಮುಂದಿನ ಶೈಕ್ಷಣಿಕ ವರ್ಷದಿಂದ ನಗರದ ಕಾಲೇಜುಗಳಲ್ಲಿ ಸಹ್ಯಾದ್ರಿ ಪರಿಸರ ಸಂಘಗಳನ್ನು ಕಾಲೇಜಿನ ಮುಖ್ಯಸ್ಥರು, ಆಡಳಿತ ಮಂಡಳಿಯ ಸಹಕಾರದೊಂದಿಗೆ ರಚಿಸಲಾಗುವುದು’’ ಎಂದು ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ತಿಳಿಸಿದ್ದಾರೆ. ‘‘ಈಗಾಗಲೇ ಈ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ಸೇರಿದಂತೆ ಕೆಲ ಕಾಲೇಜುಗಳ ಮುಖ್ಯಸ್ಥರ ಜತೆ ಮಾತನಾಡಲಾಗಿದೆ. ಪೂರಕ ಸ್ಪಂದನೆಯೂ ದೊರಕಿದೆ’’ ಎಂದು ಹೇಳಿದ್ದಾರೆ.
- ಪರಿಸರ ಕಾಳಜಿ ಮೂಡಿಸಿದ ‘ಪಶ್ಚಿಮ ಘಟ್ಟ ಸುರಕ್ಷಾ ಅಭಿಯಾನ’
ಜಿಲ್ಲೆಯ ಜೀವನದಿ ನೇತ್ರಾವತಿ ಸಂರಕ್ಷಣೆಗಾಗಿ ಎತ್ತಿನಹೊಳೆ ಯೋಜನೆ ವಿರೋಸಿ ಸಹ್ಯಾದ್ರಿ ಸಂಚಯ ಈಗಾಗಲೇ ಹಲವಾರು ರೀತಿಯ ಹೋರಾಟಗಳನ್ನು ನಡೆಸಿದೆ. ಆದರೆ ಹೋರಾಟ ದಲ್ಲಿ ಭಾಗವಹಿಸುವವರು ಮಾತ್ರ ಬೆರಳೆಣಿಕೆಯ ಮಂದಿ. ನಮ್ಮ ಜೀವಜಲದ ಬಗ್ಗೆ ಆಸಕ್ತಿ ಹಾಗೂ ಜಾಗೃತಿಯನ್ನು ಮಕ್ಕಳಿಂದಲೇ ಬೆಳೆಸುವ ನಿಟ್ಟಿನಲ್ಲಿ ಸಹ್ಯಾದ್ರಿ ಸಂಚಯ ಈ ವರ್ಷ ಪಶ್ಚಿಮ ಘಟ್ಟ ಸುರಕ್ಷಾ ಅಭಿಯಾನವನ್ನು ಆರಂಭಿಸಿತು. ಇಂದಿನ ಮಕ್ಕಳು ಮುಂದಾದರೂ ಪರಿಸರದ ಬಗ್ಗೆ ಕಾಳಜಿ ಹೊಂದಿ ಪರಿಸರ ರಕ್ಷಣೆಗೆ ಮುಂದಾಗಲಿ ಎನ್ನುವ ಆಶಯದೊಂದಿಗೆ ಆರಂಭಿಸಿದ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದೆ.
‘‘ಈ ವರ್ಷ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಪಶ್ಚಿಮ ಘಟ್ಟ ಸುರಕ್ಷಾ ಅಭಿಯಾನ’ ನಿರೀಕ್ಷೆಗೂ ಮೀರಿ ಲಿತಾಂಶವನ್ನು ನೀಡಿದೆ. ಸುಮಾರು 14 ಕಾಲೇಜುಗಳಿಂದ ಆಸಕ್ತ ವಿದ್ಯಾರ್ಥಿಗಳು ಪಶ್ಚಿಮ ಘಟ್ಟದ ವಿವಿಧ ಕಡೆಗಳಿಗೆ ಚಾರಣ ಮಾಡಿದ್ದಾರೆ. ಶೋಲಾ ಕಾಡು, ನದಿಗಳ ಉಗಮ ಸ್ಥಾನ, ಅರಣ್ಯ ಗಳಲ್ಲಿ ಜೀವ ವೈವಿಧ್ಯತೆಯ ವೈಶಿಷ್ಟ, ದಟ್ಟ ಅರಣ್ಯದ ಮನೋಹರ ದೃಶ್ಯಗಳನ್ನು ಸ್ವತಹ ಅನುಭವಿಸಿ ದ್ದಾರೆ. ಚಾರಣದ ಜತೆ ಅವರಿಗೆ ಇದು ಅವರಲ್ಲಿ ಪರಿಸರದ ಬಗ್ಗೆ ನೈಜ ಕಾಳಜಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಈ ಚಾರಣದ ಸಂದರ್ಭ ಕೆಲ ವಿದ್ಯಾರ್ಥಿಗಳು ವನ್ಯಜೀವಿಗಳ ಕುರಿತು ಸಂಶೋಧನೆ ಮಾಡುವ, ಅರಣ್ಯ ಅಕಾರಿ ಗಳಾಗುವ ಆಸಕ್ತಿ ತೋರಿಸಿರುವುದು ತಂಡಕ್ಕೂ ಖುಷಿ ತಂದಿದೆ’’ ಎನ್ನುತ್ತಾರೆ ದಿನೇಶ್ ಹೊಳ್ಳ. ಚಾರ್ಮಾಡಿಯ ಜೇನುಕಲ್ಲುಗುಡ್ಡ, ಕೊಡೆಕಲ್ಲು, ಬಿದಿರುತಳ ಬುಡಕಟ್ಟು ಗ್ರಾಮ, ಎತ್ತಿನ ಭುಜ, ಸೊಪ್ಪಿನಗುಡ್ಡ, ಶಿರಾಡಿಯ ವೆಂಕಟಗಿರಿ, ಮುಗಿಲಗಿರಿ, ಕಳಸ ಸಮೀಪದ ಹೊರನಾಡುವಿನ ಗಾಳಿಗುಡ್ಡು, ಅಬ್ಬಿನೆತ್ತಿ, ಹಣತೆಬೆಟ್ಟ, ಬಲಿಗೆಖಾನ, ಎಳನೀರು ಘಾಟಿ, ಹಿರಿಮರಿಗುಪ್ಪೆ, ಕೃಷ್ಣಗಿರಿ, ಬಿಸಿಲೆ ಘಾಟ್ ಮುಂತಾದ ಪ್ರದೇಶಗಳಲ್ಲಿ ಚಾರಣ ನಡೆಸಿ ವಿದ್ಯಾರ್ಥಿಗಳು ಪರಿಸರದ ಬಗ್ಗೆ ತಿಳಿದುಕೊಂಡಿದ್ದಾರೆ.
- ಪರಿಸರ ತಜ್ಞರಿಂದ ಕಾರ್ಯಾಗಾರ
ಕಾಲೇಜುಗಳಲ್ಲಿ ಪರಿಸರ ಸಂಘ ರಚನೆಯ ಜತೆಗೆ ಮಾಧವ ಗಾಡ್ಗಿಳ್, ಶಿವಾನಂದ ಕಳವೆ, ಕೆ.ಎಂ.ಚಿನ್ನಪ್ಪ, ಯಲ್ಲಪ್ಪ ರೆಡ್ಡಿ ಮೊದಲಾದ ಪರಿಸರ ತಜ್ಞರಿಂದ ಕಾರ್ಯಾಗಾರವನ್ನು ನಡೆಸಲು ಕೂಡಾ ಸಹ್ಯಾದ್ರಿ ಸಂಚಯ ಸಿದ್ಧತೆ ನಡೆಸುತ್ತಿದೆ.
- ಬುಡಕಟ್ಟು ಸಮುದಾಯಗಳ ಜತೆ ನಿಕಟ ಸಂಪರ್ಕ
ಕಳೆದ ಸುಮಾರು ಎರಡೂವರೆ (23 ವರ್ಷಗಳಿಂದ ಸತತ ಚಾರಣ) ದಶಕಗಳಿಂದ ಪಶ್ಚಿಮ ಘಟ್ಟದ ಇಂಚು ಇಂಚುಗಳಿಗೂ ಚಾರಣ ನಡೆಸಿ ಅಧ್ಯಯನ ಮಾಡಿರುವ ದಿನೇಶ್ ಹೊಳ್ಳ ನೇತೃತ್ವದ ಸಹ್ಯಾದ್ರಿ ಸಂಚಯವು ಸುೀರ್, ಸ್ವಪ್ನಾ ನೊರೊನ್ಹ, ಸಚಿನ್, ಅವಿನಾಶ್, ರಮೇಶ್ ಕಾಮತ್ ಮೊದಲಾದ ಪರಿಸರಾಸಕ್ತ ಚಾರಣಿಗರಿಂದ ಕೂಡಿದ ತಂಡವಾಗಿದೆ. ಪಶ್ಚಿಮ ಘಟ್ಟದಲ್ಲಿ ಸಂಭವಿಸುವ ಅಕ್ರಮ ಚಟುವಟಿಕೆಗಳು, ಕಾಡ್ಗಿಚ್ಚು ಕುರಿತಂತೆ ಅಲ್ಲಿನ ಬುಡಕಟ್ಟು ಸಮುದಾಯಗಳ ಜತೆಗೂ ನಿರಂತರ ಸಂಪರ್ಕವಿರಿಸಿಕೊಂಡು ನೆರವು, ಅಧ್ಯಯನ ನಡೆಸುತ್ತಿರುವ ತಂಡವು, ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣದ ಜತೆಗೆ ಬಡ ಹೆಣ್ಣು ಮಕ್ಕಳ ವಿವಾಹಕ್ಕೂ ತಮ್ಮಿಂದಾದ ಸಹಕಾರವನ್ನು ನೀಡುತ್ತಿದೆ.
ಆಸಕ್ತರಿಗೆ ಪರಿಸರ ಅಧ್ಯಯನ ಚಾರಣಕ್ಕೆ ಸಿದ್ಧ
ನಗರದ ವಿದ್ಯಾರ್ಥಿಗಳಲ್ಲಿ ಈಗಾಗಲೇ ಪರಿಸರದ ಬಗ್ಗೆ ಬದಲಾವಣೆಯ ಗಾಳಿ ಬೀಸುತ್ತಿದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರಬಾರದು. ಕಾಲೇಜು ಉಪನ್ಯಾಸಕರು ಮಾತ್ರವಲ್ಲದೆ, ಸಂಘ, ಸಂಸ್ಥೆ, ರೋಟರಿ, ಲಯನ್ಸ್ ಸಂಸ್ಥೆಗಳೂ ಪರಿಸರ ಪ್ರಜ್ಞೆ ಬೆಳೆಸುವ ಅಗತ್ಯವಿದೆ. ಯಾವುದೇ ಸಂಘಟನೆಗಳು ತಮ್ಮ ಆಸಕ್ತ ಸದಸ್ಯರಿಗೆ ಪಶ್ಚಿಮ ಘಟ್ಟದಲ್ಲಿ ಚಾರಣ ಮಾಡಲು ಬಯಸುವುದಾದರೆ ಸಹ್ಯಾದ್ರಿ ಸಂಚಯದ ಮೂಲಕ ಪರಿಸರ ಅಧ್ಯಯನ ಚಾರಣಕ್ಕೆ ತಂಡ ಸಿದ್ಧ’’
*ದಿನೇಶ್ ಹೊಳ್ಳ.