ಚಾಲಕ ವೃತ್ತಿಯಿಂದ ಸಾವಯವ ಕೃಷಿಯತ್ತ!
ಕೃಷಿ ಜತೆ ಬದುಕು ಹಸನಾಗಿಸಿದ ಹೈನುಗಾರಿಕೆ
ಮಂಗಳೂರು, ಮಾ.26: ಜೀವನೋಪಾಯಕ್ಕಾಗಿ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕನಾಗಿದ್ದ ಮಂಗಳೂರು ತಾಲೂಕಿನ ಅನಂತ ಪದ್ಮನಾಭ ಭಟ್ ಸದ್ಯ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅವರೇ ಹೇಳುವಂತೆ ಇದಕ್ಕೆ ಕಾರಣ ಸಾವಯವ ಕೃಷಿ. ಮಂಗಳೂರು ತಾಲೂಕಿನ ಸೂರಿಂಜೆ ಗ್ರಾಮದ ಕುಲ್ಲಂಗಾಲು ಮನೆಯ ವೆಂಕಟರಾಜ ಭಟ್‌ರ ಪುತ್ರರಾಗಿರುವ ಅನಂತ ಪದ್ಮನಾಭ ಭಟ್ ಕಳೆದ ಆರು ವರ್ಷಗಳಿಂದ ಸಾವಯವ ಕೃಷಿಕರಾಗಿದ್ದಾರೆ. ಸುಮಾರು ಎಂಟು ಎಕರೆ ಜಾಗದಲ್ಲಿ ಸಾವಯವ ಕೃಷಿಯ ಜತೆ ಹೈನುಗಾರಿಕೆಗೂ ಒತ್ತು ನೀಡುವ ಮೂಲಕ ತಮ್ಮ ಬದುಕನ್ನು ಹಸನಾಗಿಸಿಕೊಂಡಿದ್ದಾರೆ. 10ನೆ ತರಗತಿವರೆಗೆ ಓದಿರುವ ಪದ್ಮನಾಭ ಭಟ್ ಆರಂಭದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಚಾಲಕ ವೃತ್ತಿಯನ್ನು ಆಯ್ದುಕೊಂಡರು. ಬೆಂಗಳೂರಿನಲ್ಲಿ ಕೆಲ ಸಮಯ ಚಾಲಕನಾಗಿದ್ದುಕೊಂಡು ಊರಿಗೆ ಮರಳಿದ ಅವರು ಕೃಷಿಯತ್ತ ಆಕರ್ಷಿತರಾದರು. ಆರೋಗ್ಯಕರ ಆಹಾರಕ್ಕಾಗಿ ಸಾವಯವ ಕೃಷಿ ಮಾಡುವ ನಿರ್ಧಾರದೊಂದಿಗೆ ತಮ್ಮ ಮನೆಯಲ್ಲಿದ್ದ ಮೂರು ಹಸುಗಳ ಜತೆ ಹೈನುಗಾರಿಕೆಗೆ ಮುಂದಾದರು. ಇದಕ್ಕಾಗಿ ಸುಸಜ್ಜಿತ ಹಟ್ಟಿಯೊಂದನ್ನು ಕೃಷಿ ಇಲಾಖೆಯ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ನಿರ್ಮಿಸಿದರು. ಪ್ರಸ್ತುತ ಇವರ ಸುಸಜ್ಜಿತ ಹಟ್ಟಿಯಲ್ಲಿ ಜರ್ಸಿ ಜಾತಿಗೆ ಸೇರಿದ 10 ಹಾಲು ನೀಡುವ ದನಗಳು, ಮೂರು ಕರುಗಳು ಸೇರಿ ಒಟ್ಟು 16 ಹಸುಗಳಿವೆ. ಪ್ರತಿನಿತ್ಯ ಸರಾಸರಿ 60 ಲೀ. ಹಾಲು ಮಾರಾಟ ಮಾಡುತ್ತಾರೆ. ಇವರ ಮಸಾಲಾ ಮಜ್ಜಿಗೆಗೆ ಊರಿನಲ್ಲಿ ಬಹು ಬೇಡಿಕೆಯೂ ಇದೆ. 60,000 ಲೀ. ಸಾಮರ್ಥ್ಯದ ಬಯೋ ಡೈಜೆಸ್ಟರ್: ಪದ್ಮನಾಭರ ಹಟ್ಟಿಯಲ್ಲಿ ದನ ಕರುಗಳಿಗೆ ಮೇವು, ನೀರು, ಅಕ್ಕಚ್ಚು ಕುಡಿಸಲು ಬೈಪಣೆಯಿದೆ. ಇದಕ್ಕೆ ಪೈಪ್ ಮೂಲಕವೇ ನೀರು ಪೂರೈಕೆಯಾಗುತ್ತದೆ. ಹಾಲು ಕರೆಯಲು ಯಂತ್ರಗಳನ್ನು ಬಳಸಲಾಗುತ್ತದೆ. ಹಟ್ಟಿಗೆ ಮ್ಯಾಟ್ ಅಳವಡಿಸಲಾಗಿದೆ. ಹಸುಗಳ ಗಂಜಲವು ಸೆಗಣಿಯೊಂದಿಗೆ ಸೇರಿ ಹಟ್ಟಿ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಯೋ ಡೈಜೆಸ್ಟರ್ ಗುಂಡಿಗೆ ಪೈಪ್ ಮೂಲಕ ಸೇರುತ್ತದೆ. ಕೃಷಿ ಇಲಾಖೆಯ 20 ಸಾವಿರ ರೂ. ಸಹಾಯಧನ ಪಡೆದು ಉಳಿದ ಖರ್ಚನ್ನು ತಾವೇ ಸಾಲದ ಮೂಲಕ ಭರಿಸಿಕೊಂಡು 60,000 ಲೀ. ಸಾಮರ್ಥ್ಯದ ಬಯೋಡೈಜೆಸ್ಟರ್ ಟ್ಯಾಂಕನ್ನು ನಿರ್ಮಿಸಿದ್ದಾರೆ. ಸುಮಾರು 7 ಮಂದಿಗೆ ಅಡುಗೆ ಸಾಮರ್ಥ್ಯದ ಗೋಬರ್ ಗ್ಯಾಸ್ ಕೂಡಾ ರಚಿಸಿಕೊಂಡಿದ್ದು, ದಿನದ 24 ಗಂಟೆಯೂ ಸಾವಯವ ಅಡುಗೆ ಅನಿಲವನ್ನು ಇವರು ಪಡೆಯುತ್ತಾರೆ. ಸುಮಾರು 25ರಿಂದ 30 ಟನ್ ಎರೆಹುಳು ಗೊಬ್ಬರ, ಸೆಗಣಿ ಗೊಬ್ಬರ ಮಾರಾಟ ಮಾಡುತ್ತಾರೆ. ಹಸುಗಳಿಗೆ ಅಗತ್ಯವಿರುವ ಮೇವಿನ ಹುಲ್ಲಾದ ಶುಗರ್ ಗ್ರಾಸ್, ರೋಟ್ಸ್, ಸಂಪೂರ್ಣ ಮೊದಲಾದವುಗಳನ್ನು ಸುಮಾರು ಎರಡು ಎಕರೆ ಜಾಗದಲ್ಲಿ ಬಹುವಾರ್ಷಿಕವಾಗಿ ತಮ್ಮ ಗದ್ದೆಯಲ್ಲೇ ಬೆಳೆಸುತ್ತಾರೆ. ಹೊಲದ ಪಕ್ಕದಲ್ಲಿ ಮಳೆ ನೀರು ಇಂಗು ಗುಂಡಿ ನಿರ್ಮಿಸಿ ಕೃಷಿಗೆ ಬಳಸುತ್ತಾರೆ. ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆ: ಸಾವಯವ ಕೃಷಿ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಉತ್ತಮಗೊಳಿಸಿದೆ. ಹಸುವಿನ ಗಂಜಲ, ಸೆಗಣಿ ಮತ್ತು ಮನೆಯ ತ್ಯಾಜ್ಯವನ್ನು ಬಳಿಸಿ ಗೊಬ್ಬರ ತಯಾರಿಸುತ್ತೇನೆ. ರಾಸಾಯನಿಕ ಗೊಬ್ಬರ ಬಳಸಿದರೆ ಪ್ರಾಣಿ, ಪಕ್ಷಿ, ಕೀಟಗಳಿಗೆ ಆಹಾರ ಸಿಗುವುದಿಲ್ಲ. ಅವು ಬೆಳೆಗಳನ್ನು ನಾಶ ಮಾಡುತ್ತವೆ. ಆದರೆ ಸಾವಯವ ಕೃಷಿಯಿಂದ ಅವುಗಳಿಗೂ ಬದುಕಲು ಅನುಕೂಲವಾಗುತ್ತವೆ. ಜತೆಗೆ ಉತ್ತಮ ಗಾಳಿ, ನೀರು, ಪರಿಸರ ಹಾಗೂ ಮನಸ್ಸಿಗೆ ನೆಮ್ಮದಿ, ಗದ್ದೆ ತೋಟದಲ್ಲಿ ದುಡಿಯುವುದರಿಂದ ದೇಹಕ್ಕೂ ಆರೋಗ್ಯ ಸಿಗುತ್ತದೆ ಎನ್ನುತ್ತಾರೆ ಪದ್ಮನಾಭ ಭಟ್. ‘‘ಅನಂತ ಪದ್ಮನಾಭ ಭಟ್ ಸಾವಯವ ಕೃಷಿಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಾವಯವ ಗೊಬ್ಬರ ಘಟಕದ ಮೂಲಕವೂ ಇವರು ತಮ್ಮ ಭೂಮಿಯನ್ನು ಫಲವತ್ತಾಗಿಸಿದ್ದಾರೆ. ಬಯೋಡೈಜೆಸ್ಟರ್‌ಗೆ ಹಸಿರೆಲೆ, ಕೃಷಿ ತ್ಯಾಜ್ಯ ಹಾಕಿದರೆ ಅದು 40 ದಿನಗಳಲ್ಲಿ ಗಂಜಲದ ಜತೆ ಬೆರೆತು ದ್ರಾವಣ ರೂಪದಲ್ಲಿ ಪಕ್ಕದ ಟ್ಯಾಂಕ್‌ಗೆ ಸೇರುತ್ತದೆ. ಇದು ಬೆಳೆಗಳ ಪೋಷಣೆಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳಿಂದ ಕೂಡಿರುತ್ತದೆ’’ ಎನ್ನುತ್ತಾರೆ ಸುರತ್ಕಲ್ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಬಶೀರ್.
ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಸಲು ಚಿಂತನೆ
ಹಿಂದೆ ಗದ್ದೆಯಲ್ಲಿ ಎರಡು ಬೆಳೆ ಭತ್ತ ಬೆಳೆಸಲಾಗುತ್ತಿತ್ತು. ಈಗ ಒಂದು ಬೆಳೆ ಮಾತ್ರ ಭತ್ತ ಬೆಳೆಯುತ್ತಿದ್ದು, ಉಳಿದಂತೆ ಮೇವು ಹುಲ್ಲನ್ನು ಬೆಳೆಸುತ್ತಿದ್ದೇನೆ. ಮುಂದೆ ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಸುವ ಚಿಂತನೆ ಇದೆ ಎನ್ನುತ್ತಾರೆ ಅನಂತ ಪದ್ಮನಾಭ ಹೇಳುತ್ತಾರೆ.