ಆರ್‌ಟಿಐ ಆನ್‌ಲೆನ್ ಪೋರ್ಟಲ್
ಮಾಹಿತಿ ಹಕ್ಕು ಎಂಬುದು ಇವತ್ತು ಜನತೆ ಸರಕಾರದ ಹಾಗೂ ಇಲಾಖೆಗಳ ಕಾರ್ಯಗಳ ಬಗ್ಗೆ ಅರಿವುಳ್ಳವರೂ, ಜಾಗೃತರೂ ಆಗಿದ್ದೇವೆಂದು ನಮ್ಮನ್ನು ಆಳುವ ಜನರಿಗೂ, ಅಲ್ಲಿನ ಇಲಾಖೆಗೂ ಸೂಚಿಸಲು ಬಳಸುತ್ತಿರುವ ಒಂದು ಪ್ರಬಲ ಅಸ್ತ್ರ. ಈ ಹಿನ್ನೆಲೆಯಲ್ಲಿಯೇ, ಕೇಂದ್ರ ಮಾಹಿತಿ ಆಯೋಗ ಹಲವು ಜನಸ್ನೇಹಿ ಕಾರ್ಯಗಳನ್ನೂ ರೂಪಿಸುತ್ತಿದೆ. ಅದರಲ್ಲಿ ಒಂದು ಆರ್‌ಟಿಐ ಆನ್‌ಲೈನ್ ಪೋರ್ಟಲ್.
ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಈ ಆನ್‌ಲೈನ್ ಪೋರ್ಟಲ್‌ನಲ್ಲಿ ಸಾಧ್ಯ. ಅದರ ಅರ್ಥ, ಈಗಿರುವಂತೆ ಸಲ್ಲಿಸಬಾರದಂತಲ್ಲ. ಬದಲಾಗಿ, ಪೋಸ್ಟಲ್ ಆರ್ಡರ್‌ಗಾಗಿ ಅಂಚೆ ಕಚೇರಿಯಲ್ಲಿ ಕಾಯುವಿಕೆ, ಅರ್ಜಿಯನ್ನು ನೋಂದಾಯಿತ ಅಂಚೆಯಲ್ಲಿ ಕಳುಹಿಸುವುದು ಮೊದಲಾದ ಯಾವುದೇ ಕಿರಿಕಿರಿ ಇಲ್ಲ. ಇವಾಗ ಎಲ್ಲವೂ ಸರಳ.
ಇಲ್ಲಿ ಮಾಡಬೇಕಾಗಿರುವುದು ಇಷ್ಟೆ. www.rtionline.gov.in ಎಂಬ ವೆಬ್‌ಸೈಟ್ ತೆರೆಯಿರಿ. ಅಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೈಲ್ ವಿಳಾಸ, ನಿಮ್ಮ ವಿದ್ಯಾರ್ಹತೆ, ನೀವು ಬಯಸುವ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ನಮೂದಿಸಿ ಹೊಸ ಅಕೌಂಟ್ ತೆರೆಯಬೇಕು. ಬಳಿಕ ನಿಮ್ಮ ಮೊಬೈಲಿನಲ್ಲಿ ಬರುವ ಒಟಿಪಿಯನ್ನು ನಮೂದಿಸಿ ಅಕೌಂಟ್‌ನ್ನು ಆ್ಯಕ್ಟಿವೇಟ್ ಮಾಡಬೇಕು. ಇಲ್ಲಿಗೆ ನಿಮ್ಮ ಆರ್‌ಟಿಐ ಸದಸ್ಯತ್ವ ರೆಡಿ.
ಆ ನಂತರ ನಿಮ್ಮ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ಬೇಕಾದ ಇಲಾಖೆಯನ್ನು ಆಯ್ಕೆ ಮಾಡಿ. ಕೆಲವೊಂದು ಇಲಾಖೆಯಡಿ ಬರುವ ವಿಭಾಗವನ್ನೂ ಆಯ್ಕೆ ಮಾಡಬಹುದು. ಮಾಹಿತಿ ಹಕ್ಕಿನಡಿಯಲ್ಲಿ ಬೇಕಾದ ವಿಷಯದ ವಿವರಗಳನ್ನು ಬರೆಯಿರಿ. ಹಾಗೂ ಸಬ್‌ಮಿಟ್ ಕ್ಲಿಕ್ ಮಾಡಿ.
ಅಂದಹಾಗೆ, ಆರ್‌ಟಿಐ ಅರ್ಜಿ ಸಲ್ಲಿಸಲು ಪ್ರತಿ ಅರ್ಜಿಗೂ 10ರೂ ಶುಲ್ಕವನ್ನೂ ಪಾವತಿಸಬೇಕು. ಅದನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಸೂಕ್ತ ಸಮಯದಲ್ಲಿ ನಿಮ್ಮ ಅರ್ಜಿಗೆ ಉತ್ತರ ಬಾರದಿದ್ದರೆ, ನೀವು ಆನ್‌ಲೈನಿನಲ್ಲೇ ಮೇಲ್ಮನವಿಯನ್ನು ಸಲ್ಲಿಸಬಹುದು. ಮೊದಲ ಬಾರಿ ಮೇಲ್ಮನವಿ ಸಲ್ಲಿಸಲೂ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇನ್ನೊಂದು ವಿಶೇಷವೆಂದರೆ, ಬಿಪಿಎಲ್ ಕುಟುಂಬದ ಅರ್ಜಿದಾರರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ. ಆದರೆ, ಅದಕ್ಕೆ ನೀವು ಸೂಕ್ತ ದಾಖಲೆಯನ್ನು ಸಲ್ಲಿಸಬೇಕು. ರೇಷನ್ ಕಾರ್ಡ್/ಆದಾಯ ಪ್ರಮಾಣ ಪತ್ರದ ಪ್ರತಿಯನ್ನು ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸುವಾಗಲೇ ಲಗತ್ತಿಸಬೇಕು.
ಅಂದಹಾಗೆ, ರಾಜ್ಯ ಸರಕಾರ ಹಾಗೂ ದಿಲ್ಲಿ ಸರಕಾರಗಳ ಮಾಹಿತಿಯನ್ನು ಈ ವೆಬ್‌ಸೈಟಿನಲ್ಲಿ ನೀಡಲಾಗುವುದಿಲ್ಲ.