ಖಾಸಗಿ ಪ್ರಕಾಶಕರ ಪಠ್ಯಪುಸ್ತಕದ ಗುಣಮಟ್ಟದ ಖಾತರಿಗೆ ವ್ಯವಸ್ಥೆಯಿಲ್ಲ: ಸರಕಾರದ ಹೇಳಿಕೆ
ಹೊಸದಿಲ್ಲಿ, ಮಾ.27: ಖಾಸಗಿ ಪುಸ್ತಕ ಪ್ರಕಾಶಕರು ಸಿದ್ದಪಡಿಸುವ ಪಠ್ಯಪುಸ್ತಕದ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ)ಗೆ ಸಂಯೋಜನೆಗೊಂಡಿರುವ ಶಾಲೆಗಳಲ್ಲಿ ಬೋಧಿಸಲಾಗುವ ಪಠ್ಯಪುಸ್ತಕ ಯಾವ ರೀತಿ ಇರಬೇಕು ಅಥವಾ ಅದರಲ್ಲಿ ಇರಬೇಕಾದ ವಿಷಯಗಳು ಯಾವುವು ಎಂಬುದನ್ನು ಸೂಚಿಸಲು ಅಥವಾ ಶಿಫಾರಸು ಮಾಡುವ ಅಧಿಕಾರವನ್ನು ಸಿಬಿಎಸ್‌ಇ ಹೊಂದಿಲ್ಲ ಎಂದು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾನವ ಸಂಪನ್ಮೂಲ ಸಚಿವಾಲಯದ ಸಹಾಯಕ ಸಚಿವ ಉಪೇಂದ್ರ ಕುಶ್ವಾಲಾ ತಿಳಿಸಿದರು.
ಸಿಬಿಎಸ್‌ಇ ಶಾಲೆಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಅಳವಡಿಸುವ ಬಗ್ಗೆ ಸರಕಾರ ದೃಢನಿರ್ಧಾರ ಮಾಡಿದೆ ಎಂದವರು ಇದೇ ಸಂದರ್ಭ ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಬೋಧಿಸಲಾಗುವ ಪಠ್ಯಪುಸ್ತಕದ ವಿಷಯಗಳ ಬಗ್ಗೆ ಸೂಕ್ಷ್ಮ ಪರಿಶೀಲನೆಯ ಕೊರತೆಯ ಕುರಿತು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿರುವುದನ್ನು ಇಲ್ಲಿ ಉ್ಲಲೇಖಿಸಬಹುದು.
ನಾಲ್ಕನೇ ತರಗತಿಯ ಪರಿಸರ ವಿಜ್ಞಾನ ಪಠ್ಯಪುಸ್ತಕದಲ್ಲಿ ಒಂದೆಡೆ , ಪ್ರಯೋಗದ ಭಾಗವಾಗಿ ಬೆಕ್ಕಿನಮರಿಯನ್ನು ಕೊಲ್ಲಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಪುಸ್ತಕ ಪ್ರಕಾಶಕರು ಈ ಪುಸ್ತಕವನ್ನು ಕಳೆದ ತಿಂಗಳು ಮಾರುಕಟ್ಟೆಯಿಂದ ಹಿಂಪಡೆದಿದ್ದರು. ಇನ್ನೊಂದು ಪ್ರಕರಣದಲ್ಲಿ, 12ನೆ ತರಗತಿಯ ಸೋಷಿಯಾಲಜಿ ಪುಸ್ತಕದಲ್ಲಿ ಮಹಿಳೆ ಕುರೂಪಿಯಾಗಿದ್ದರೆ ವರದಕ್ಷಿಣೆಗೆ ಬೇಡಿಕೆ ಹೆಚ್ಚುತ್ತದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ, ಖಾಸಗಿ ಪ್ರಕಾಶಕರು ಸಿದ್ದಪಡಿಸುವ ಪಠ್ಯಪುಸ್ತಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.