22 ದಿನಕ್ಕೆ ಕಾಲಿಟ್ಟ ಗ್ರಾಪಂ ನೌಕರರ ಪ್ರತಿಭಟನೆ
ಕಳೆದ ಯುಗಾದಿಯಿಂದ ಇದುವರೆಗೂ ವೇತನ ಸಿಕ್ಕಿಲ್ಲ
ಬೆಂಗಳೂರು, ಮಾ.27: ಯುಗಾದಿ ಹಬ್ಬ ಎಂದರೆ ಹಿಂದೂಗಳ ಪ್ರಕಾರ ಹೊಸ ವರ್ಷಕ್ಕೆ ಆರಂಭದ ದಿನ, ಅಲ್ಲದೆ, ನಾಳೆಯ(ಬುಧವಾರ) ಯುಗಾದಿ ಹಬ್ಬದ ಸಿದ್ಧತೆಗೆ ಮುಖ್ಯವಾಗಿ ಬೇಕಾಗಿರುವುದು ಹಣ, ಹಣವಿದ್ದರೆ ಹಬ್ಬದ ಸಂಭ್ರಮ, ಸಡಗರ. ಆದರೆ, ರಾಜ್ಯದ ಗ್ರಾಮ ಪಂಚಾಯಿತಿ ನೌಕರರಿಗೆ ಒಂದು ವರ್ಷದಿಂದ ವೇತನವೇ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ರಾಜ್ಯದಲ್ಲಿರುವ 6,022 ಗ್ರಾಮ ಪಂಚಾಯಿತಿಗಳಲ್ಲಿ ಸರಿ ಸುಮಾರು 55ಸಾವಿರಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ. ಇದರಲ್ಲಿ 12 ಸಾವಿರ ಮಂದಿ ಕಸಗುಡಿಸುವ ಕೆಲಸ ಮಾಡಿದರೆ, 26 ಸಾವಿರ ಜನ ಪಂಪ್ ಆಪರೇಟರ್‌ಗಳಾಗಿದ್ದಾರೆ. ಇನ್ನು 6 ಸಾವಿರ ಜನ ಬಿಲ್‌ಕಲೆಕ್ಟರ್, 6 ಸಾವಿರ ಜವಾನರು ಹಾಗೂ 5 ಸಾವಿರ ಗಣಕಯಂತ್ರ ಆಪರೇಟರ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೂರನೆ ಹಣಕಾಸು ಆಯೋಗವು ಕನಿಷ್ಠ ವೇತನಕ್ಕೆ ಬೇಕಾಗುವ ಹಣವನ್ನು ಸರಕಾರವೇ ಭರಿಸಬೇಕೆಂದು ಶಿಫಾರಸ್ಸು ಮಾಡಿದೆ. ಅಲ್ಲದೆ, ಈಗಾಗಲೇ 2ನೆ ಹಣಕಾಸು ಆಯೋಗ ಶಿಫಾರಸ್ಸಿನಂತೆ ನಗರಾಭಿವೃದ್ಧಿ ಇಲಾಖೆಯಲ್ಲಿ ವೇತನಕ್ಕೆ ಬೇಕಾಗುವ ಅನುದಾನವನ್ನು ಸರಕಾರವೇ ಭರಿಸುತ್ತಿದೆ. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವೇತನಕ್ಕೆ ಬೇಕಾಗುವ ಅನುದಾನ ಪೂರ್ತಿ ನೀಡಲಾಗುತ್ತಿಲ್ಲ ಎಂದು ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಪತ್ರಿಕೆಗೆ ತಿಳಿಸಿದರು.
ತಕ್ಕ ವೇತನ ಇಲ್ಲ: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಬರುವ ಸುಮಾರು 12 ಲಕ್ಷ ರೂ.ಶಾಸನಬದ್ಧ ಅನುದಾನದಲ್ಲಿ ಶೇ.40ರಷ್ಟು ಎಂದುಕೊಂಡರು 5ರಿಂದ 7 ಲಕ್ಷ ರೂ.ನೌಕರರ ವೇತನಕ್ಕೆ ಬಳಸಿಕೊಳ್ಳಬೇಕು ಎನ್ನುವ ನಿಯಮ ಇದೆ. ಇದರಿಂದ ವೇತನ ನೀಡಬಹುದಾಗಿದೆ. ಆದರೆ ನೀಡುತ್ತಿಲ್ಲ. ಅಲ್ಲದೆ, ಒಂದು ವರ್ಷದಿಂದ ನೌಕರರನ್ನು ಅತಿ ಹೆಚ್ಚಾಗಿ ದುಡಿಸಿಕೊಳ್ಳಲಾಗುತ್ತಿದೆ. ದುಡಿಮೆಗೆ ತಕ್ಕ ವೇತನ ಮಾತ್ರ ಇಲ್ಲ ಎಂದು ಪಂಚಾಯಿತಿ ನೌಕರರೊಬ್ಬರು ತಮ್ಮ ಅಳಲು ತೋಡಿಕೊಂಡರು.
ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ಗ್ರಾಮ ಪಂಚಾಯಿತಿ ನೌಕರರಿಗೆ ವೇತನವನ್ನು ನೇರವಾಗಿ ಸರಕಾರದಿಂದಲೇ ನೀಡಬೇಕೆಂಬುದು ಎಲ್ಲರ ಬೇಡಿಕೆ. ಅದು ಅಲ್ಲದೆ, ಗ್ರಾಮ ಪಂಚಾಯಿತಿಗಳಿಗೆ ಸರಕಾರದಿಂದಲೇ ವೇತನ ಕೊಡಬೇಕೆಂದು 3ನೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿದೆ. ಈ ಬಗ್ಗೆ ಕನಿಷ್ಠ ವೇತನಕ್ಕೆ 2016ರ ಆಗಸ್ಟ್ 4ರಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯಿತಿ ನೌಕರರಲ್ಲಿ ಕಸ ಗುಡಿಸುವವರು, ಜವಾನರು ಸೇರಿದಂತೆ ಇನ್ನಿತರೆ ಕೆಲಸಗಳನ್ನು ತುಳಿತಕ್ಕೊಳಪಟ್ಟ ಜನಸಮುದಾಯದವರೇ ಹೆಚ್ಚಿದ್ದಾರೆ. ಉತ್ತಮ ಬದುಕು ನಿರ್ವಹಿಸಲು ವೇತನ ಭದ್ರತೆ ನೀಡಬೇಕೆಂಬುದು ಪ್ರತಿಭಟನಾಕಾರರ ಬೇಡಿಕೆಯಲ್ಲದೆ, ಸಾರ್ವಜನಿಕರ ಅಭಿಪ್ರಾಯವೂ ಆಗಿದೆ. ಸರಕಾರ ಇತ್ತ ಗಮನ ಹರಿಸಿದರೆ, ಆ ಬಡ ನೌಕರರ ಮನೆಯಲ್ಲೂ ಉಗಾದಿಯ ಸಂಭ್ರಮವನ್ನು ಕಾಣಬಹುದು.
22 ದಿನಕ್ಕೆ ಕಾಲಿಟ್ಟ ಪ್ರತಿಭಟನೆ!
ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕನಿಷ್ಠ ವೇತನಕ್ಕೆ ಜಾರಿಗಾಗಿ ಮುನ್ಸಿಪಲ್ ನೌಕರರಿಗೆ ನೀಡಿದಂತೆ ವೇತನ ಭದ್ರತೆ ನೀಡುವುದಕ್ಕೆ ಸರಕಾರವನ್ನು ಒತ್ತಾಯಿಸಿ ಮಾರ್ಚ್.6ರಿಂದ ಆರಂಭವಾದ ಪ್ರತಿಭಟನೆ ಇಂದಿಗೆ 22 ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ವಾಪಸ್ಸು ಪಡೆಯುವುದಿಲ್ಲ ಎಂದು ನೌಕರರು ಎಚ್ಚರಿಸಿದ್ದಾರೆ.
ಬಿರು ಬಿಸಿಲಿನಲ್ಲಿಯೇ ಪ್ರತಿಭಟನೆ
ಬೆಂಗಳೂರು ನಗರದ ಬಿಸಿ ತಾಪಮಾನದಲ್ಲಿ ದಾಖಲೆ ಬರೆದಿದ್ದರೂ, ಪ್ರತಿಭಟನೆ ಮಾತ್ರ ಬಿರು ಬಿಸಿಲಿನಲ್ಲಿಯೇ ಸಾಗುತ್ತಿದೆ. ಸಾವಿರಾರು ನೌಕರರು, ಫ್ರೀಡಂ ಪಾರ್ಕ್‌ನಲ್ಲಿಯೇ 22 ದಿನಗಳಿಂದ ಕುಳಿತು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದಾರೆ.
‘ದುಡಿಯುವ ವರ್ಗಕ್ಕೆ ವೇತನವೇ ಸಿಗದಿರುವುದು ಎಷ್ಟರ ಮಟ್ಟಿಗೆ ಸರಿ? 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಯಾಕೆ ಬೇಡಿಕೆ ಈಡೇರಿಸಿಲ್ಲ. ಇವರೆಲ್ಲಾ ಶ್ರೀಮಂತರಲ್ಲ, ಶೋಷಿತರು. ಕನಿಷ್ಠ ವೇತನ ನೀಡಲು ರಾಜ್ಯ ಸರಕಾರ ಮುಂದಾಗಲಿ’
-ಮಾರುತಿ ಮಾನಪಡೆ, ಅಧ್ಯಕ್ಷ, ಕ.ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ