ಕಂದಡ್ಕ ಹೊಳೆಗೆ ಸೇರುತ್ತಿದೆ ಚರಂಡಿ ನೀರು
ಸುಳ್ಯದ ಜೀವನದಿ ಪಯಸ್ವಿನಿಯೂ ಕಲುಷಿತಗೊಳ್ಳುತ್ತಿದೆ
ಸುಳ್ಯ, ಮಾ.27: ಸುಳ್ಯ ನಗರದ ವಿವಿಧ ಚರಂಡಿಗಳಲ್ಲಿನ ತ್ಯಾಜ್ಯ ನೀರು ನಗರ ಸಮೀಪದಲ್ಲಿ ಹರಿಯುತ್ತಿರುವ ಕಂದಡ್ಕ ಹೊಳೆಗೆ ಸೇರುತ್ತಿದೆ. ಇದರಿಂದ ಹೊಳೆ ಸಂಪೂರ್ಣ ಮಲಿನಗೊಂಡಿದೆ. ಈ ಹೊಳೆ ನೀರು ಸೇರುವ ಸುಳ್ಯದ ಜೀವನದಿ ಕೂಡಾ ಇದರಿಂದ ಮಲಿನಗೊಳ್ಳುತ್ತಿದೆ. ಸುಳ್ಯದ ಜೀವ ನದಿ ಪಯಸ್ವಿನಿಗೆ ಸೇರುತ್ತಿದೆ. ಲಕ್ಷಾಂತರ ಮಂದಿಯ ಕುಡಿಯುವ ನೀರಿನ ಮೂಲವಾದ ಪಯಸ್ವಿನಿ ಮಲಿನಗೊಳ್ಳುತ್ತಿರುವುದು ಸಾರ್ವಜನಿಕರನ್ನು ಆತಂಕ ಕ್ಕೀಡು ಮಾಡಿದೆ.
ಸುಳ್ಯ ನಗರ ವ್ಯಾಪ್ತಿಯಲ್ಲಿ ಹರಿದು ಪಯಸ್ವಿನಿ ಸೇರುತ್ತಿರುವ ಕಂದಡ್ಕ ಹೊಳೆ ಹಳೆಗೇಟು ಬಳಿಯ ಬ್ರಹ್ಮರಗಯ ಎಂಬಲ್ಲಿ ಸಂಪೂರ್ಣ ಹರಿವು ನಿಲ್ಲಿಸಿದ್ದು ಬತ್ತಿ ಬರಡಾಗಿದೆ. ಆದರೆ ಅದಕ್ಕಿಂತ ಕೆಳಗಿನ ಭಾಗದಲ್ಲಿ ಕಾನತ್ತಿಲ ಎಂಬಲ್ಲಿ ಚರಂಡಿಯಲ್ಲಿ ಭಾರೀ ಪ್ರಮಾಣದಲ್ಲಿ ಹರಿದು ಬರುವ ಕೊಳಚೆ ನೀರು ನೇರವಾಗಿ ಹೊಳೆಯನ್ನು ಸೇರುತ್ತಿದೆ. ಇದರಿಂದ ಹೊಳೆಯು ಭಾರೀ ಪ್ರಮಾಣದ ಪ್ಲಾಸ್ಟಿಕ್, ಬಾಟಲಿ, ಪ್ಲೇಟ್ ಮತ್ತಿತರ ತ್ಯಾಜ್ಯಗಳು ಸೇರಿ ಕೊಚ್ಚೆ ನೀರಾಗಿ ಹರಿಯುತ್ತಿದೆ.
ಹೊಳೆಯ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು ಅಲ್ಲಲ್ಲಿ ಹೊಂಡಗಳಲ್ಲಿ ಕೊಳಚೆ ನೀರು ಮತ್ತು ತ್ಯಾಜ್ಯಗಳು ಶೇಖರಣೆಗೊಂಡು ದುರ್ನಾತ ಬೀರುತ್ತಿದೆ. ಇಡೀ ಹೊಳೆಯೇ ಚರಂಡಿಯಂತಾಗಿದೆ. ಸುಳ್ಯ ನಗರದಲ್ಲಿ ಕೊಳಚೆ ನೀರಿಗಾಗಿ ಒಳಚರಂಡಿ ವ್ಯವಸ್ಥೆ ಇದೆ. ಆದರೆ ಇದರ ಸಂಪರ್ಕ ಪಡೆಯದೆ ಕೊಳಚೆ ನೀರನ್ನು ಮಳೆ ನೀರು ಹರಿಯುವ ಚರಂಡಿಗಳಿಗೆ ಬಿಡಲಾಗುತ್ತಿದೆ. ಕಂದಡ್ಕ ಹೊಳೆ ಕೊಳಚೆಯಾಗಲು ಇದೇ ಕಾರಣ ಎನ್ನುತ್ತಾರೆ ಈ ಭಾಗದ ನಪಂ ಸದಸ್ಯ ಹಾಗೂ ನಪಂ ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆನೀರು ತುಂಬಿ ಹರಿಯುವ ಚರಂಡಿಗಳು ಬೇಸಿಗೆಯಲ್ಲಿ ಬರಡಾಗಿರುತ್ತವೆ. ಆದರೆ ಸುಳ್ಯ ನಗರದ ಹಲವು ಚರಂಡಿಗಳಲ್ಲಿ ಕೊಳಚೆ ನೀರು ಕಡು ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದೆ. ಇದು ಸಾಲದು ಎಂಬಂತೆ ಮಣ್ಣನ್ನು ತುಂಬಿ ಕಂದಡ್ಕ ಹೊಳೆಯ ಒಡಲನ್ನು ಅತಿಕ್ರಮಣ ಮಾಡಲಾಗಿದೆ. ನದಿಯ ಸಹಜ ಹರಿವಿಗೆ ತಡೆ ಒಡ್ಡುವ ಪ್ರಕ್ರಿಯೆಯೂ ಕಂದಡ್ಕ ಹೊಳೆಯಲ್ಲಿ ವ್ಯಾಪಕವಾಗಿ ಕಂಡು ಬಂದಿದೆ. ಹೊಳೆಯ ಬದಿಯ ತಡೆಗೋಡೆಯನ್ನು ದಾಟಿ ಕೆಳಗೆ ಮಣ್ಣು ತುಂಬಲಾಗುತ್ತಿದೆ.
ಅಲ್ಲಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದರಿಂದ ಹೊಳೆ ಸಂಪೂರ್ಣ ತ್ಯಾಜ್ಯಯುಕ್ತವಾಗಿದೆ. ಕಂದಡ್ಕ ಹೊಳೆ ಕೊಳಚೆ ಗುಂಡಿಯಾಗಿ ಪರಿವರ್ತಿತವಾಗಿದ್ದು, ಈ ನೀರು ನೇರವಾಗಿ ಪಯಸ್ವಿನಿ ನದಿಯನ್ನು ಸೇರುತ್ತಿದೆ. ಇದರಿಂದ ನದಿ ನೀರು ಮಲಿನಗೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಪ್ರದೇಶದಲ್ಲಿ ಸಾಧಾರಣವಾಗಿ ಪ್ರತೀವರ್ಷ ಜಾಂಡಿಸ್, ಚಿಕುನ್ ಗುನ್ಯಾ, ಇಲಿಜ್ವರ, ಡೆಂಗ್ ಸೇರಿ ದಂತೆ ಹತ್ತಾರು ಸಾಂಕ್ರಾಮಿಕ ರೋಗಗಳ ಹಾವಳಿ ಸಾಮಾನ್ಯವಾಗಿರುತ್ತದೆ. ನದಿಗೆ ತ್ಯಾಜ್ಯಯುಕ್ತ ನೀರು ಸೇರಿ ಮಲಿನಗೊಳ್ಳುತ್ತಿರುವುದು ಇದಕ್ಕೆ ಕಾರಣವಿರಬಹುದು ಎಂಬ ಆತಂಕ ಕೇಳಿಬರುತ್ತಿದೆ.
ಕೊಳಚೆ ನೀರು ಸೇರಿ ಹೊಳೆ ಮಲಿನಗೊಳ್ಳುವುದನ್ನು ತಡೆಗಟ್ಟಲು ಮತ್ತು ಮಣ್ಣು ತುಂಬಿ ಹೊಳೆಯನ್ನು ಆಕ್ರಮಿಸುವುದರ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮ ಜರಗಿಸಬೇಕು ಎಂದು ಪ್ರಕಾಶ್ ಹೆಗ್ಡೆ ಒತ್ತಾಯಿಸಿದ್ದಾರೆ.